ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ನಾಯಕರು ಜನನಾಯಕ

Last Updated 4 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಯಾದಗಿರಿ: ಸದ್ಯದ ರಾಜಕೀಯದಲ್ಲಿ ಸ್ವಯಂ ಘೋಷಿತ ನಾಯಕರು ಹೆಚ್ಚುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಬವಣೆಗೆ ಸ್ಪಂದಿಸುವ ಜನ ನಾಯಕರು ಅತ್ಯವಶ್ಯವಾಗಿದೆ. ಈ ಸಾಲಿನಲ್ಲಿ ದಿ. ಲಕ್ಷ್ಮಣ ನಾಯಕರು ನಿಲ್ಲುತ್ತಾರೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸಮೀಪದ ಖಾನಾಪುರ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ದಿ. ಲಕ್ಷ್ಮಣ ನಾಯಕರ ಪುಣ್ಯಸ್ಮರಣೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 1146 ಅರಿಷಿಣ-ಕುಂಕುಮ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ ದಿ. ಲಕ್ಷ್ಮಣ ನಾಯಕರು ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಡವರು, ದೀನ ದಲಿತರ  ನೇತಾರರಾಗಿ ಹೊರಹೊಮ್ಮಿದ್ದಾರೆ. 25 ವರ್ಷಗಳ ಹಿಂದೆ ಅವರು ಅಗಲಿದ್ದರೂ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬಹುತೇಕ ಜನರು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾಯಕರು ಜನರಿಗಾಗಿಯೇ ನಿಸ್ವಾರ್ಥ ಸೇವೆ ಸಲ್ಲಿಸಿದ ಅಪರೂಪದ ರಾಜಕಾರಣಿ. ಇಂತಹ ನಾಯಕರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ತಂದೆಯ ಮಾರ್ಗದಲ್ಲಿಯೇ ಪುತ್ರ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಮುನ್ನಡೆಯುತ್ತಿದ್ದಾರೆ ಎಂದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹಗರಲಿರುಳು ಶ್ರಮಿಸುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನದ ಮೂಲಕ ಜಿಲ್ಲೆಗೆ ಕೋಟ್ಯಂತರ ಅನುದಾನದ ತಂದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ತಂದೆ-ತಾಯಿಯನ್ನು ದೇವರಂತೆ ಪೂಜಿಸುವವರು ಉನ್ನತ ಸ್ಥಾನ ಪಡೆಯುತ್ತಾರೆ. ದಿ. ಲಕ್ಷ್ಮಣ ನಾಯಕ ಮಹಾನ್ ವ್ಯಕ್ತಿಯಾಗಿದ್ದರು. ಅವರ ಪುತ್ರ ದೇವರಾಜ ನಾಯಕ ಕೂಡ ತಂದೆಗೆ ತಕ್ಕ ಮಗನಾಗಿ ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಯುವ ಪೀಳಿಗೆ ಪಾಲಕರನ್ನೂ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಆದರೆ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ತಮ್ಮ ತಂದೆ ಲಕ್ಷ್ಮಣ ನಾಯಕರು ಅಗಲಿಕೆಯ 25 ವರ್ಷಗಳನ್ನು ಅವರ ನೆನಪಿಗಾಗಿ ಸ್ಮರಣೀಯ ಕಾರ್ಯಕ್ರಮ ಮಾಡುವ ಮೂಲಕ ಮಾದರಿಯಾಗಿದ್ದಾರೆ. ದೇವರಾಜ ನಾಯಕ ಒಳ್ಳೆಯ ಕೆಲಸ ಮಾಡಿದರೆ ಅಣ್ಣನ ಸ್ಥಾನದಲ್ಲಿ ನಿಂತು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸಂಸದ ಸಣ್ಣ ಫಕೀರಪ್ಪ ಮಾತನಾಡಿ, ದಿ. ಲಕ್ಷ್ಮಣ ನಾಯಕರು ಕೆಚ್ಚೆದೆಯ ಹೋರಾಟಗಾರರು. ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಇಂದಿನ ಯುವ ಜನತೆಗೆ ದಾರಿ ದೀಪವಾಗಿದ್ದಾರೆ ಎಂದರು.

ಶಾಸಕರಾದ ಡಾ. ಎ.ಬಿ. ಮಾಲಕರಡ್ಡಿ, ವಾಲ್ಮೀಕಿ ನಾಯಕ ಮತ್ತು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ, ದಿ. ಲಕ್ಷ್ಮಣ ನಾಯಕರು ಜಿಲ್ಲಾ ಪರಿಷತ್ ಸದಸ್ಯರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ, ತಂದೆಯನ್ನು ಕಳೆದುಕೊಂಡ ನಂತರದ 25 ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಅನೇಕ ಹಿರಿಯರೂ, ಮಾರ್ಗದರ್ಶಕರು, ಕ್ಷೇತ್ರದ ಜನರು ಕೈಹಿಡಿದು ಮುನ್ನಡೆಸಿದ್ದಾರೆ.

ತಂದೆ ಹಾಕಿಕೊಟ್ಟಿರುವ ದಾರಿಯಲ್ಲಿಯೇ ಬಡವರ ಏಳ್ಗೆಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ 1146 ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು. ಇದಕ್ಕೂ ಮುನ್ನ ಖಾನಾಪುರದ ಹನುಮಾನ್ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನದ ಆವರಣದವರೆಗೆ ಸಚಿವ ರೇಣುಕಾಚಾರ್ಯ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. 

ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರಡ್ಡಿ ಪಾಟೀಲ್ ತುನ್ನೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವೀಂದ್ರನಾಥ ನಾದ್, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಲಕ್ಷ್ಮಣ ನಾಯಕರ ಪತ್ನಿ ರತ್ನಾಬಾಯಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ್, ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಸದಸ್ಯರಾದ ಹನುಮೇಗೌಡ ಮರಕಲ್, ಸಿದ್ಧನಗೌಡ ಪೊಲೀಸ್‌ಪಾಟೀಲ, ಶಂಕರಗೌಡ ಶಿರವಾಳ, ಬಸವರಾಜ ಖಂಡ್ರೆ, ಸಿದ್ರಾಮರಡ್ಡಿ ಪಾಟೀಲ್ ಚನ್ನೂರ, ಸಿದ್ರಾರಡ್ಡಿ ಬಲಕಲ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶರಣಭೂಪಾಲರಡ್ಡಿ, ಲಕ್ಷ್ಮಣ ನಾಟೇಕರ್, ಯಂಕಮ್ಮ ಚಂದ್ರಶೇಖರ, ಸವಿತಾ ವಸಂತಕುಮಾರ, ಉಮಾರೆಡ್ಡಿ ನಾಯ್ಕಲ್ ಮುಂತಾದವರು ವೇದಿಕೆಯಲ್ಲಿದ್ದರು. 

ನೀಲಕಂಠರಾಯ ಯಲ್ಹೇರಿ ನಿರೂಪಿಸಿದರು. ಆಕಾಶವಾಣಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT