ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಹಾಕುವ ಕಾರ್ಯ ಚುರುಕು

ಬನ್ನೇರುಘಟ್ಟ ಜೈವಿಕ ಉದ್ಯಾನವನ: ಕಾಲುಬಾಯಿ ರೋಗಕ್ಕೆ ಮೂರು ಬಲಿ
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರ ವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿ ಪ್ರದೇಶದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಕಾಲುಬಾಯಿ ರೋಗಕ್ಕೆ ಎರಡು ಚುಕ್ಕೆ ಜಿಂಕೆ ಹಾಗೂ ಒಂದು ನೀಲಘಾಯ್‌ ಬಲಿಯಾಗಿದೆ. ಈ ಪ್ರದೇಶದಲ್ಲಿ ಇರುವ ಗೊರಸು ಪ್ರಾಣಿಗಳಲ್ಲಿ ರೋಗ ಹರಡದಂತೆ ಅರಣ್ಯ ಇಲಾಖೆಯು ಲಸಿಕೆ ಹಾಕುವ ಕಾರ್ಯವನ್ನು ಚುರುಕುಗೊಳಿಸಿದೆ.

ಕಾಲುಬಾಯಿ ರೋಗಾಣು ವೈರಸ್‌ ಗಾಳಿಯ ಮೂಲಕ ಐದಾರು ಕಿ.ಮೀ ಸಂಚರಿಸುವ ಸಾಮರ್ಥ್ಯವಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲ ಹಳ್ಳಿಗಳಲ್ಲಿರುವ ರಾಸುಗಳಿಂದಲೇ ಹರಡಿದೆ ಎನ್ನುವ ಅನುಮಾನ ವ್ಯಾಪಕವಾಗಿದೆ. ಇದಕ್ಕೆ ಪೂರಕವೆನ್ನುವಂತೆ ರೋಗ ಹರಡಿದ ನಂತರವೂ ಪಶುಸಂಗೋಪನಾ ಇಲಾಖೆಯು ರಾಸುಗಳಿಗೆ ಲಸಿಕೆಯನ್ನು ಹಾಕುತ್ತಿದೆ.

‘ಕಾಲುಬಾಯಿ ರೋಗವು ಗೊರಸಿರುವ ಕುರಿ, ಮೇಕೆ, ಹಂದಿ, ಜಿಂಕೆ, ಕಾಡೆಮ್ಮೆ, ಜಾನುವಾರುಗಳ ಜೊತೆಯಲ್ಲಿ ಆನೆಗೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸೆಪ್ಟೆಂಬರ್‌ 22ರಂದು ಮೂರು ಪ್ರಾಣಿಗಳು ಸತ್ತ ನಂತರ ಮೇಲೆ ತಿಳಿಸಿದ ಎಲ್ಲಾ ಜಾತಿಯ ಪ್ರಾಣಿಗಳಿಗೂ ಲಸಿಕೆ ಹಾಕಲಾಗಿದೆ. ಉದ್ಯಾನದಲ್ಲಿ ಇರುವ 14 ಆನೆಗಳಿಗೂ ಲಸಿಕೆ ಹಾಕಲಾಗಿದೆ. ರೋಗ ಕಾಣಿಸಿಕೊಂಡಿರುವ ಏಳು ಕಾಡೆಮ್ಮೆಗಳಿಗೂ ಲಸಿಕೆ ಹಾಕಿದ್ದೇವೆ’ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ರಂಗೇಗೌಡ ತಿಳಿಸಿದರು.

ಸಫಾರಿ ಪ್ರದೇಶದಲ್ಲಿ ಇರುವ ಗೊರಸು ಪ್ರಾಣಿಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕುವ ಕಾರ್ಯ ಬುಧವಾರವೂ ಮುಂದುವರೆದಿತ್ತು. ಆದರೆ ಯಾವ ಪ್ರಾಣಿಗೆ ಲಸಿಕೆ ಹಾಕಿದೆ, ಯಾವುದಕ್ಕೆ ಇಲ್ಲ ಎನ್ನುವ ಮಾಹಿತಿಯ ಕೊರತೆಯು ಉದ್ಯಾನದ ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಅವರನ್ನು ಚಿಂತೆಗೀಡು ಮಾಡಿದೆ. ಆದರೂ ಬೆಳಿಗ್ಗೆಯಿಂದ ಸಂಜೆಯವರೆಗೆ ಲಸಿಕೆಯನ್ನು ಬಂದೂಕಿನ ಮೂಲಕ ನೀಡುವ ಕೆಲಸ ನಡೆಯುತ್ತಲೇ ಇದೆ.

ರೋಗ ತಗುಲಿದ ಕೆಲ ದಿನಗಳಲ್ಲಿ ಪ್ರಾಣಿಯ ಬಾಯಲ್ಲಿ ಹುಣ್ಣು ಕಾಣಿಸಿಕೊಂಡು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಇದರ ಜೊತೆಯಲ್ಲಿ ಗೊರಸಿಗೂ ರೋಗತಗುಲಿ, ಹುಳು ಬಂದು ಗೊರಸು ಬಿದ್ದುಹೋಗುತ್ತದೆ. ಆಹಾರವಿಲ್ಲದೆ ಪ್ರಾಣಿಯು ಬಡಕಲಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ಹಸಿವು ಹಾಗೂ ಬೇರೆ ಬೇರೆ ರೋಗಕ್ಕೆ ತುತ್ತಾಗಿ ಬೇಗ ಸಾಯುತ್ತದೆ ಎಂದು ಚೆಟ್ಟಿಯಪ್ಪ ತಿಳಿಸಿದರು.

ಲಸಿಕೆಯನ್ನು ಹಾಕಿದರೂ ರೋಗ ನಿರೋಧಕ ಶಕ್ತಿಯು ಹೆಚ್ಚಾಗಲು ಸುಮಾರು ಎರಡು ವಾರಗಳು ಬೇಕಾಗುತ್ತದೆ. 120 ಎಕರೆ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪ್ರಾಣಿಗಳಿವೆ. ಒಂದು ಗುಂಪಿನ ಒಂದೆರಡು ಪ್ರಾಣಿಗಳತ್ತ ಗನ್‌ ಗುರಿಯನ್ನು ಇರಿಸಿದರೆ ಬೇರೆ ಪ್ರಾಣಿಗಳು ಹಾರಿ ಓಡುತ್ತಿವೆ. ಇದು ಅರಣ್ಯ ಇಲಾಖೆಗೆ ತಲೆನೋವು ತಂದಿದೆ.

ಇದು ಸಫಾರಿ ಪ್ರದೇಶದ ಕಥೆಯಾದರೆ, ಇದರ ಪಕ್ಕದಲ್ಲೇ ಇರುವ ಪ್ರಾಣಿ ಸಂಗ್ರಹಾಲಯದಲ್ಲೂ ಜಿಂಕೆ, ಕಾಡೆಮ್ಮೆ, ಪಟ್ಟೆ ಕುದುರೆ ಮತ್ತು ಆನೆಗಳಿವೆ. ಇವುಗಳಿಗೆ ಲಸಿಕೆ ಹಾಕುವ ಕೆಲಸ ನಡೆದಿದೆ. ಒಟ್ಟಾರೆ ಗೊರಸಿರುವ ಪ್ರಾಣಿಗಳ ಪೈಕಿ ಶೇ 75ಕ್ಕೆ ಲಸಿಕೆ ಹಾಕಲಾಗಿದೆ.

ಲಸಿಕೆ ಹಾಕುವುದು ನಿಪುಣರ ಕೆಲಸ

ಲಸಿಕೆ ಹಾಕುವುದು ಸುಲಭದ ಕೆಲಸವಲ್ಲ. ಬಂದೂಕಿನಲ್ಲಿ ಅರಿವಳಿಕೆ ನೀಡುವ ರೀತಿಯಲ್ಲೇ ನಳಿಕೆಯಲ್ಲಿ ಲಸಿಕೆ ತುಂಬಿಸಿ ಬಂದೂಕಿಗೆ ಲೋಡ್‌ ಮಾಡಿ ಗಾಳಿಯ ವೇಗ, ಬೀಸುವ ದಿಕ್ಕನ್ನು ಲೆಕ್ಕಾಚಾರ ಮಾಡಿ ಬಂದೂಕಿನ ಕುದುರೆಯನ್ನು ಎಳೆಯಬೇಕು. ನಳಿಕೆಯ ಸೂಜಿಯ ಮುಂಭಾಗದಲ್ಲಿ ಇರುವ ರಂದ್ರವನ್ನು ಪ್ಲಾಸ್ಟಿಕ್‌ ರಿಂಗ್‌ನಿಂದ ಮುಚ್ಚಲಾಗಿರುತ್ತದೆ. ನಳಿಕೆ ಪ್ರಾಣಿಗೆ ತಗುಲಿದ ತಕ್ಷಣ ಸೂಜಿ ಪ್ರಾಣಿಯ ದೇಹವನ್ನು ಪ್ರವೇಶಿಸುತ್ತದೆ. ಆಗ ರಿಂಗ್‌ ಹಿಂದಕ್ಕೆ ಸರಿದು ಲಸಿಕೆಯು ದೇಹವನ್ನು ಪ್ರವೇಶಿಸುತ್ತದೆ.

ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿ ಆರು ತಿಂಗಳಿಗೆ ಒಮ್ಮೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ನೀಡುತ್ತಿದ್ದೇವೆ. ಆದರೆ ಹಾಲು ಕರೆಯುವ ಹಸುವಿಗೆ ಲಸಿಕೆ ಹಾಕಿದರೆ ಇಳುವರಿ ಕಡಿಮೆಯಾಗುತ್ತದೆ ಮತ್ತು ಗಬ್ಬದ ಹಸುವಿಗೆ ಲಸಿಕೆ ಹಾಕಿದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಕೆಲ ಗೋಪಾಲಕರು ಸಹಕಾರ ನೀಡುತ್ತಿಲ್ಲ. ಲಸಿಕೆ ಹಾಕಿದ ಒಂದೆರಡು ದಿನ ಹಾಲು ಕಡಿಮೆಯಾಗುತ್ತದೆ. ಸಾವಿರದಲ್ಲಿ ಒಂದೆರಡು ಪ್ರಕರಣಗಳಲ್ಲಿ ಗರ್ಭಪಾತವಾಗುವ ಸಾಧ್ಯತೆಯಿದೆ. ಒಟ್ಟಾರೆ ಶೇ 90ರಷ್ಟು ರಾಸುಗಳಿಗೆ ರೋಗ ನಿರೋಧಕ ಲಸಿಕೆ ಹಾಕಲಾಗಿತ್ತು. ಉಳಿದ ರಾಸುಗಳಿಗೆ ಲಸಿಕೆ ಹಾಕುವ ಕೆಲಸ ಬುಧವಾರ ಪೂರ್ಣವಾಗಿದೆ.

ಪ್ರಕಾಶ್‌ ರೆಡ್ಡಿ, ಸಹಾಯಕ ನಿರ್ದೇಶಕ, ಪಶುಸಂಗೋಪನಾ ಇಲಾಖೆ

ತಲೆ ನೋವು ತರುವ ಕಾಡುಹಂದಿ
ಕಾಲುಬಾಯಿ ರೋಗ ದೊಡ್ಡಪ್ರಮಾಣದಲ್ಲಿ ಹರಡಲು ಕಾಡುಹಂದಿಯೂ ಕಾರಣ. ಕಾಡಿನಿಂದ ಉದ್ಯಾನದ ಸಸ್ಯಾಹಾರಿ ಸಫಾರಿ ಪ್ರದೇಶಕ್ಕೆ ನೂರಾರು ಸಂಖ್ಯೆಯಲ್ಲಿ ನುಗ್ಗಿರುವ ಇವು, ಜಿಂಕೆಗಳಿಗೆ ಹಾಕುವ ಬೂಸಾ ಮತ್ತು ಹುಲ್ಲಿನ ಮೇಲೆ ಉರುಳಾಡಿ ರೋಗಾಣು ಬೇಗ ಹರಡುವಂತೆ ಮಾಡುತ್ತಿವೆ. ಇವನ್ನು ಬೋನಿನ ಮೂಲಕ ಹಿಡಿದು ಕಾಡಿಗೆ ಬಿಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರ ಅನುಮತಿ ಕೇಳುತ್ತಿದ್ದೇವೆ.
–ರಂಗೇಗೌಡ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ

ರೋಗ ಹರಡುವ ಬಗೆ

ಮುಖ್ಯವಾಗಿ ಗಾಳಿ, ನೀರು, ಆಹಾರದ ಮೂಲಕ ಹರಡುವ ‘ಅಪಥೆ ಎಪಿಜುಟಿಸಿ’ ವೈರಸ್‌  ಮನುಷ್ಯನ ಬಟ್ಟೆಯ ಮೂಲಕವೂ ಹರಡುವ ಸಾಧ್ಯತೆಯಿದೆ. ವೈರಸ್‌ನ ‘ಎ, ಒ, ಸಿ ಮತ್ತು ಏಷ್ಯಾ– 1’ ವಿಧಗಳು ಭಾರತದಲ್ಲಿ ಪತ್ತೆಯಾಗಿವೆ. ಇದೇ ರೋಗದಿಂದ ಕೆಲ ದಶಕಗಳ ಹಿಂದೆ ಭದ್ರಾ ಅಭಯಾರಣ್ಯದ ಮುತ್ತೋಡಿ ಮತ್ತು ಬಂಡೀಪುರದಲ್ಲೂ ಕಾಡೆಮ್ಮೆಗಳು ಸಾಕಷ್ಟು ಸಂಖೆ್ಯಯಲ್ಲಿ ಸತ್ತಿದ್ದವು ಎನ್ನುವುದನ್ನು ಸ್ಮರಿಸಬಹುದು.

ಸಸ್ಯಾಹಾರಿ ಸಫಾರಿ ಪ್ರದೇಶದ ಗೊರಸು ಪ್ರಾಣಿಗಳು
ಕಾಡೆಮ್ಮೆ                         7
ಚುಕ್ಕೆ ಜಿಂಕೆ                      215
ಸಾಂಬಾರ ಜಿಂಕೆ               178
ನೀಲಘಾಯ್‌                    8
ಕೃಷ್ಣಮೃಗ                       7
ಬೊಗಳುವ ಜಿಂಕೆ               5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT