ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡೆನ್‌ನಿಂದಲೂ ಲಂಚ ಪೀಕಿಸಿದ್ದ ಗ್ರಾಮ ಲೆಕ್ಕಾಧಿಕಾರಿ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬಿನ್ ಲಾಡೆನ್ ತನ್ನ ಕ್ರೂರತ್ವದಿಂದಾಗಿ ಸೂಪರ್ ಪವರ್ ರಾಷ್ಟ್ರ ಅಮೆರಿಕವನ್ನೇ ನಡುಗಿಸಿದ್ದಿರಬಹುದು; ಆದರೆ, ಪಾಕಿಸ್ತಾನದ ಸರ್ಕಾರಿ ಸಿಬ್ಬಂದಿ ಆತನಿಂದಲೂ ಲಂಚ ಪೀಕಿಸಿದ್ದರು ಎಂಬುದು ಬಹಿರಂಗವಾಗಿದೆ.

ಲಾಡೆನ್ ಅಬೋಟಾಬಾದ್‌ನ ಸೇನಾ ಅಕಾಡೆಮಿ ಸಮೀಪ ಸುತ್ತಲೂ 14 ಅಡಿ ಎತ್ತರದ ಕಾಂಪೌಂಡ್ ಇರುವ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿಕೊಂಡು, ಅದರಲ್ಲಿ ಅಡಗಿದ್ದ. ಈ ಮನೆಯ ಸುತ್ತ ಕಬ್ಬಿಣದ ಬೇಲಿ ಕೂಡ ಇತ್ತು. ಈ ಕಾಂಪೌಂಡ್ ನಿರ್ಮಿಸಲು ಅನುಮತಿ ಪಡೆಯುವ ಸಲುವಾಗಿ ಅಲ್ಲಿನ `ಪಟ್ವಾರಿ'ಗೆ (ಗ್ರಾಮ ಲೆಕ್ಕಾಧಿಕಾರಿಗೆ) ಆತ 50,000 ಸಾವಿರ ರೂಪಾಯಿ ಲಂಚ ಕೊಟ್ಟಿದ್ದ.

ಲಾಡೆನ್ ಹತ್ಯೆಯ ನಂತರ ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದ್ದ ಡೈರಿಯಿಂದ ಇದು ಪತ್ತೆಯಾಗಿದೆ. ಆಯಾ ದಿನದ ಸಂಗತಿಗಳನ್ನು ಡೈರಿಯಲ್ಲಿ ಬರೆದಿಡುವ ಹವ್ಯಾಸ ಲಾಡೆನ್‌ಗೆ ಇತ್ತು. ತಾನು ಕಾಂಪೌಂಡ್ ನಿರ್ಮಿಸಲು ಲಂಚ ಕೊಡಬೇಕಾಗಿ ಬಂದ ಸನ್ನಿವೇಶವನ್ನು ಅಲ್ ಖೈದಾ ಮುಖ್ಯಸ್ಥನಾಗಿದ್ದ ಲಾಡೆನ್ ಡೈರಿಯಲ್ಲಿ ವಿವರಿಸಿದ್ದಾನೆ. ಈ ವಿಷಯ ಗೊತ್ತಾದ ನಂತರ ಪಾಕಿಸ್ತಾನದ ಭದ್ರತಾ ಪಡೆಗಳು ಪಟ್ವಾರಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದವು. ಆದರೆ ಪಟ್ವಾರಿಗೆ ಲಂಚ ತೆಗೆದುಕೊಳ್ಳುವಾಗ, ತನಗೆ ಲಂಚ ಕೊಡುತ್ತಿರುವವನು ಲಾಡೆನ್ ಎಂಬ ಬಗ್ಗೆ ಒಂದಿಷ್ಟೂ ಸುಳಿವು ಇರಲಿಲ್ಲ ಎಂದು ಉರ್ದು ದೈನಿಕವೊಂದು ವರದಿ ಮಾಡಿದೆ.

ಕಂದಾಯ ಇಲಾಖೆಯಲ್ಲಿನ ಲಂಚದ ಹಾವಳಿ ಬಗ್ಗೆ ಲಾಡೆನ್‌ಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ, ಆತ ತನ್ನ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಲಂಚ ನೀಡಲು ಅನುಮತಿಯನ್ನೂ ನೀಡಿದ್ದ ಎಂಬುದು ಡೈರಿಯಿಂದ ಹೊರಬಿದ್ದಿದೆ.

ಪಾಕಿಸ್ತಾನದಲ್ಲಿ ಲಾಡೆನ್ ಇದ್ದಿದ್ದು ಹಾಗೂ ಆತನ ವಿರುದ್ಧ ಅಮೆರಿಕ ದಾಳಿಯ ಕುರಿತು ತನಿಖೆ ನಡೆಸಿರುವ ನ್ಯಾಯಾಂಗ ಆಯೋಗವು ಸರ್ಕಾರಿ ಸಂಸ್ಥೆಗಳಲ್ಲಿನ ದೌರ್ಬಲ್ಯಗಳ ಕುರಿತ ವಿವರಗಳನ್ನು ಸೇರಿಸಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಆಯೋಗವು ಇನ್ನೂ ಸರ್ಕಾರಕ್ಕೆ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT