ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಗಡಿ ಸಮೀಪ ಬಂದಿಳಿದ ಅಮೆರಿಕದ ಯುದ್ಧ ವಿಮಾನಗಳು....

Last Updated 5 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಲಿಬಿಯಾದ ಮುಅಮ್ಮರ್ ಗಡಾಫಿ ಆಡಳಿತವು ತನ್ನ ಕೈತಪ್ಪಿರುವ ದೇಶದ ಪೂರ್ವ ಭಾಗವನ್ನು ಮರುಸ್ವಾಧೀನ ಮಾಡಿಕೊಳ್ಳಲು ಭಾರಿ ಹೋರಾಟ ನಡೆಸಿರುವಂತೆಯೇ ಟ್ರಿಪೋಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಹ ಹರಸಾಹಸ ಮಾಡುತ್ತಿದೆ. ಘರ್ಷಣೆಗಳು ಮತ್ತು ಸೇನಾ ದಾಸ್ತಾನು ಮಳಿಗೆಯೊಂದರಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಿಕ್ಕಿ 49 ಮಂದಿ ಸತ್ತಿದ್ದಾರೆ.

ಟ್ರಿಪೋಲಿಗೆ ಕೇವಲ 50 ಕಿ.ಮೀ. ದೂರದ ಅಜ್ ಜವೈಯಾ ಮತ್ತು ಪೂರ್ವ ಭಾಗದ ರಾಸ್ ಲನೂಫ್ ನಗರಗಳಲ್ಲಿ ತೀವ್ರ ಹೋರಾಟ ನಡೆಯುತ್ತಿದೆ. ಅಜ್ ಜವೈಯಾದಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 30  ಮಂದಿ ಸತ್ತಿದ್ದಾರೆ ಎಂದು ಅಲ್ ಜಜೀರಾ ಟಿವಿ ವರದಿ ಮಾಡಿದೆ.

ದೇಶದ ಪಶ್ಚಿಮ ಭಾಗವಾದರೂ ತನ್ನ ಕೈಯಲ್ಲಿ ಇದೆ ಎಂದು ಗಡಾಫಿ ಆಡಳಿತ ಹೇಳಬೇಕಾದರೆ ಅದಕ್ಕೆ ಅಜ್ ಜವೈಯಾ ನಗರವಾದರೂ ಕೈವಶವಾಗಬೇಕು. ಇಲ್ಲಿ ತೈಲ ಶುದ್ಧೀಕರಣ ಘಟಕವೊಂದು ಇದೆ. ಈಗಾಗಲೇ ಪೂರ್ವ ಭಾಗದ ಬೆಂಗಾಜಿ ನಗರ ಗಡಾಫಿ ವಿರೋಧಿಗಳ ಕೈವಶವಾಗಿದೆ. ಎರಡು ದಿನಗಳ ಹಿಂದೆ ಗಡಾಫಿ ಬೆಂಬಲಿಗರು ಕೈಬಿಟ್ಟ ರಾಸ್ ಲನೂಫ್ ನಗರದಲ್ಲಿ ಇದೀಗ ಮತ್ತೆ ಬಿರುಸಿನ ಕಾಳಗ ನಡೆಯುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಮತ್ತೊಂದು ಪ್ರಮುಖ ನಗರ ಬ್ರೆಗಾ ಯಾರ ಹಿಡಿತದಲ್ಲಿ ಇದೆ ಎಂಬುದು ಇದೀಗ ಸ್ಪಷ್ಟವಾಗಿಲ್ಲ.

ಈ ಮಧ್ಯೆ, ಬೆಂಗಾಜಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ಎರಡು ಸ್ಫೋಟಗಳು ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 19 ಮಂದಿ ಸತ್ತಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.ತನ್ನ ವಾಯುದಾಳಿಯಿಂದ ಈ ಸ್ಫೋಟ ಸಂಭವಿಸಿಲ್ಲ ಎಂದು ಗಡಾಫಿ ಆಡಳಿತ ಸ್ಪಷ್ಟಪಡಿಸಿದೆ. ಆದರೆ ಸ್ಫೋಟಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದ ಹಲವೆಡೆ ಗಡಾಫಿ ವಿರುದ್ಧ ಜನ ತೀವ್ರ ಪ್ರತಿಭಟನೆ ನಡೆಸಿದರು. ‘ಗಡಾಫಿ ದೇವರ ಶತ್ರು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದರು.

ಇಂಟರ್‌ಪೋಲ್ ಎಚ್ಚರಿಕೆ: ಫೆಬ್ರುವರಿ 15ರಂದು ಗಡಾಫಿ ವಿರುದ್ಧ ಪ್ರತಿಭಟನೆಗಳು ಆರಂಭವಾದ ಬಳಿಕ ಇದೇ ಪ್ರಥಮ ಬಾರಿಗೆ  ಇಂಟರ್‌ಪೋಲ್ ಗಡಾಫಿ ಮತ್ತು ಇತರ 15 ಮಂದಿಯ ವಿರುದ್ಧ ಎಚ್ಚರಿಕೆ ನೋಟಿಸ್ (ಹಳದಿ ನೋಟಿಸ್) ನೀಡಿದೆ. ಅದರಲ್ಲಿ ಅವರ ಕುಟುಂಬದ ಸದಸ್ಯರು ಮತ್ತು ಆಪ್ತರು ಸೇರಿದ್ದಾರೆ.

ಗಡಾಫಿ ಮತ್ತು ಇತರರರಿಗೆ ಜಗತ್ತಿನ ಎಲ್ಲಾ 188 ದೇಶಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ ಹೇರುವುದೇ ಈ ನೋಟಿಸ್‌ನ ಉದ್ದೇಶವಾಗಿದೆ.ಅಮೆರಿಕದ ಯುದ್ಧವಿಮಾನಗಳ ಆಗಮನ: ಅಮೆರಿಕವು ತನ್ನ ಎರಡು ಸಿ-130 ಯುದ್ಧವಿಮಾನಗಳನ್ನು ಲಿಬಿಯಾದ ಗಡಿ ಭಾಗದಲ್ಲಿರುವ ಟ್ಯುನೀಶಿಯಾದ ಡಿಜೆರ್ಬಾಗೆ ಕಳುಹಿಸಿಕೊಟ್ಟಿದೆ.

‘ಆಪರೇಷನ್ ಓಡಿಸ್ಸಿ ಡಾನ್’ ಎಂಬ ಸಾಂಕೇತಿಕ ಹೆಸರಿನೊಂದಿಗೆ ಒಬಾಮ ಆಡಳಿತ ಈ ಸೇನಾ ಕಾರ್ಯಾಚರಣೆಯ ಸಿದ್ಧತೆ ನಡೆಸಿದ್ದು, ಸದ್ಯ ಮಾನವೀಯ ನೆರವಷ್ಟೇ ತನ್ನ ಉದ್ದೇಶ ಎಂದು ಹೇಳಿದೆ. ಅಮೆರಿಕದ 400ಕ್ಕೂ ಅಧಿಕ ನೌಕಾಪಡೆ ಸಿಬ್ಬಂದಿ ಸಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ.

ಗಡಾಫಿ ಶೀಘ್ರ ಪದತ್ಯಾಗ ಮಾಡುವಂತೆ ನೋಡಿಕೊಳ್ಳಬೇಕು, ಇಲ್ಲವಾದರೆ ಅಲ್ಲಿ ಎದ್ದಿರುವ ಅಶಾಂತಿ ಪರಿಸ್ಥಿತಿಯನ್ನು ಅಲ್-ಖೈದಾ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕದ ಇಬ್ಬರು ಹಿರಿಯ ಸೆನೆಟ್ ಸದಸ್ಯರಾದ ಜಾನ್ ಮೆಕೈನ್ ಮತ್ತು ಜೋ ಲೈಬರ್‌ಮನ್ ಎಚ್ಚರಿಸಿದ್ದಾರೆ.

ಲಿಬಿಯಾದಲ್ಲಿ ಅಶಾಂತಿ ಆರಂಭವಾದಾಗಿನಿಂದ ಕಳೆದ 20 ದಿನಗಳಲ್ಲಿ 2 ಲಕ್ಷ ಮಂದಿ ದೇಶ ಬಿಟ್ಟು ತೆರಳಿದ್ದು, ಹಲವರು ಸದ್ಯ ಟ್ಯುನೇಶಿಯಾ ಮತ್ತು ಈಜಿಪ್ಟ್‌ಗಳಲ್ಲಿ ತಂಗಿದ್ದಾರೆ. ತನ್ನ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಲಿಬಿಯಾವು ವಿಶ್ವಸಂಸ್ಥೆಯನ್ನು ಕೇಳಿಕೊಂಡಿದ್ದು, ಗಡಾಫಿ ಆಡಳಿತವನ್ನು ವಿರೋಧಿಸಿದ ತನ್ನ ಇಬ್ಬರು ಪ್ರತಿನಿಧಿಗಳನ್ನು ವಜಾಗೊಳಿಸಿದೆ ಹಾಗೂ ಮಾಜಿ ವಿದೇಶಾಂಗ ಸಚಿವ ಅಲಿ ಅಬ್ದುಸಲಾಂ ಟ್ರೆಕಿ ಅವರನ್ನು ತನ್ನ ನೂತನ ರಾಯಭಾರಿ ಎಂದು ಹೆಸರಿಸಿದೆ.

ಲಿಬಿಯಾ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ವೆನಿಜುವೆಲಾದ ಸಂಧಾನ ಪ್ರಸ್ತಾವವನ್ನು ಅಮೆರಿಕ ಮತ್ತು ಫ್ರಾನ್ಸ್ ಈಗಾಗಲೇ ತಳ್ಳಿಹಾಕಿದ್ದರೂ, ತನ್ನ ಪ್ರಯತ್ನವನ್ನು ಮುಂದುವರಿಸಲು ವೆನಿಜುವೆಲಾ ನಿರ್ಧರಿಸಿದೆ. ಇಂತಹ ಸಂಧಾನ ಪ್ರಯತ್ನ ಮುಂದುವರಿಸುವಂತೆ ಲಿಬಿಯಾದ ವಿದೇಶಾಂಗ ಸಚಿವರು ತಮಗೆ ಸಂದೇಶ ನೀಡಿದ್ದಾರೆ ಎಂದು ವೆನಿಜುವೆಲಾದ ವಿದೇಶಾಂಗ ಸಚಿವ ನಿಕೊಲಸ್ ಮಡುರೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT