ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಮೇಲೆ ಹೆಚ್ಚಿದ ಜಾಗತಿಕ ಒತ್ತಡ

Last Updated 30 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಟ್ರಿಪೋಲಿ/ ಲಂಡನ್ (ಪಿಟಿಐ): ಮುಅಮ್ಮರ್ ಗಡಾಫಿ ಸರ್ಕಾರ ಅಲ್ಲಿನ ನಾಗರಿಕರ ಮೇಲೆ ನಡೆಸುತ್ತಿರುವ ದಾಳಿಗಳನ್ನು ನಿಲ್ಲಿಸುವವರೆಗೂ ನಾವು ಪ್ರತಿಯಾಗಿ ವಾಯುದಾಳಿ ಮುಂದುವರಿಸುತ್ತೇವೆ, ಗಡಾಫಿ ತಮ್ಮ ಸ್ಥಾನದಿಂದ ಕೆಳಗಿಳಿಯುವವರೆಗೂ ನಮ್ಮ ಒತ್ತಡ ಹೀಗೆಯೇ ಮುಂದುವರಿಯುತ್ತದೆ ಎಂದು ಅಮೆರಿಕ ನೇತೃತ್ವದ ಪಶ್ಚಿಮ ರಾಷ್ಟ್ರಗಳು ಗುಡುಗಿವೆ.

ಲಿಬಿಯಾದಲ್ಲಿನ ಬೆಳವಣಿಗೆಗಳ ಬಗ್ಗೆ ವಿಶ್ವದ 40 ರಾಷ್ಟ್ರಗಳು ಲಂಡನ್‌ನಲ್ಲಿ ಬುಧವಾರ ಮಹತ್ವದ ಸಭೆಯೊಂದನ್ನು ನಡೆಸಿ ಚರ್ಚಿಸಿದ ಸಂದರ್ಭದಲ್ಲಿ ಈ ನಿಲುವು ಹೊರಬಿದ್ದಿದೆ.ಗಡಾಫಿ ಸರ್ಕಾರ ತನ್ನ ಕಾನೂನುಬದ್ಧ ಆಳ್ವಿಕೆಯ ಯೋಗ್ಯತೆಯನ್ನು ಕಳೆದುಕೊಂಡಿದೆ ಹಾಗೂ ಅಲ್ಲಿನ ಬೆಳವಣಿಗೆಗಳಿಗೆ ಅದೇ ಸಂಪೂರ್ಣ ಹೊಣೆ ಎಂದೇ ಭಾವಿಸಲು ಸಭೆ ತೀರ್ಮಾನಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಗಡಾಫಿ ಸರ್ಕಾರ ವಿಶ್ವಸಂಸ್ಥೆಯ ಬೇಡಿಕೆಗಳನ್ನು ಒಪ್ಪಿಕೊಳ್ಳುವವರೆಗೂ ಮತ್ತು ಅಲ್ಲಿನ ನಾಗರಿಕರ ಮೇಲಿನ ದೌರ್ಜನ್ಯ, ಹಿಂಸಾಚಾರಗಳನ್ನು ನಿಲ್ಲಿಸುವವರೆಗೂ ನಮ್ಮ ಸೇನಾ ದಾಳಿ ಮುಂದುವರಿಯುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾಗಿ ಬಿಬಿಸಿ ತಿಳಿಸಿದೆ.

ಬ್ರಿಟನ್‌ನ ವಿದೇಶಾಂಗ ಸಚಿವಾಲಯ ಆಯೋಜಿಸಿದ್ದ ಈ ಸಭೆಯಲ್ಲಿ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಸೇರಿದಂತೆ ಐರೋಪ್ಯ ಒಕ್ಕೂಟದ ಎಲ್ಲ ರಾಷ್ಟ್ರಗಳ ಮುಖಂಡರು, ಅರಬ್ ಒಕ್ಕೂಟದ ದೇಶಗಳು, ಆಫ್ರಿಕಾ ಒಕ್ಕೂಟದ ಮುಖ್ಯಸ್ಥ ಜೀನ್ ಪಿಂಗ್, ಖತಾರ್‌ನ ಪ್ರಧಾನಿ, ಇರಾಕ್‌ನ ವಿದೇಶಾಂಗ ಸಚಿವರು, ಜೋರ್ಡಾನ್, ಸಂಯುಕ್ತ ಅರಬ್ ಒಳಗೊಂಡಂತೆ ಒಟ್ಟು 40 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಗಡಾಫಿ  ಅಧಿಕಾರದಿಂದ ಕೆಳಗಿಳಿಯಬೇಕು ಮತ್ತು ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕು ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಮ್ ಹೇಗ್ ಅಭಿಪ್ರಾಯಪಟ್ಟಿದ್ದಾರೆ. ಗಡಾಫಿ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಅಲ್ಲಿ ಉತ್ತಮ ವ್ಯವಸ್ಥೆ ರೂಪಿಸುವಲ್ಲಿ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಈ ಮುಖಂಡರು ಗಂಭೀರವಾಗಿ ಚರ್ಚಿಸಿದರು ಎಂದು ವರದಿ ತಿಳಿಸಿದೆ.ಇಟಲಿಯ ವಿದೇಶಾಂಗ ಮಂತ್ರಿ ಫ್ರಾಂಕೊ ಫ್ರ್ಯಾಟ್ಟಿನಿ ಹಾಗೂ ಇತರ ಕೆಲವು ದೇಶಗಳ ಪ್ರಮುಖರು, ಲಿಬಿಯಾದಲ್ಲಿ ಕದನ ವಿರಾಮ ಘೋಷಿಸುವಂತಹ ಪ್ರಯತ್ನ ಅಗತ್ಯವಿದೆ ಎಂದು ಹೇಳಿದ್ದಾರೆ.

ಗಡಾಫಿ ಪತ್ರ
ಲಂಡನ್‌ನಲ್ಲಿ ನಡೆಯುತ್ತಿರುವ ಜಾಗತಿಕ ಸಮಾವೇಶದ ಮುಖ್ಯಸ್ಥರನ್ನು ಉದ್ದೇಶಿಸಿ ಗಡಾಫಿ ಪತ್ರವೊಂದನ್ನು ಬರೆದಿದ್ದು, ಲಿಬಿಯಾ ಮೇಲಿನ ದಾಳಿಗಳನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.ಈ ದಾಳಿಯು ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಹಿಟ್ಲರ್‌ನ ನಡೆಯನ್ನು ನೆನಪಿಗೆ ತರುವಂತಿದೆ. ಲಿಬಿಯಾವನ್ನು ಲಿಬಿಯಾ ಜನರ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಕ್ರೂರ ದಾಳಿಯನ್ನು ಕೂಡಲೇ ನಿಲ್ಲಿಸಿ ಎಂದು ಅವರು ಸಭೆಗೆ ಕರೆ ಕೊಟ್ಟಿದ್ದಾರೆ. ಆಫ್ರಿಕಾ ಒಕ್ಕೂಟ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬಂಡುಕೋರರಿಗೆ ಹಿನ್ನಡೆ
ಭಾರಿ ಬಂದೋಬಸ್ತ್‌ನಿಂದ ರಕ್ಷಣೆ ಪಡೆದಿರುವ ಟ್ರಿಪೋಲಿಯಲ್ಲಿನ ಗಡಾಫಿ ಅವರ ಮನೆಯ ಬಳಿ ಬುಧವಾರ ಎರಡು ಶಕ್ತಿಶಾಲಿ ಬಾಂಬ್‌ಗಳು ಸ್ಫೋಟಿಸಿದ ಸದ್ದು ಕೇಳಿಬಂತು ಎಂದು ಮಾಧ್ಯಮ ವರದಿ ತಿಳಿಸಿದೆ. ಏತನ್ಮಧ್ಯೆ ಸಿರ್ಟೆ ನಗರ ಸಮೀಪಿಸಿದ್ದ ಬಂಡುಕೋರರನ್ನು ಬುಧವಾರ ಗಡಾಫಿ ಬೆಂಬಲಿಗ ಪಡೆ ಹಿಮ್ಮೆಟ್ಟಿಸಿದೆ. ಕರಾವಳಿ ಹೆದ್ದಾರಿಯಲ್ಲಿರುವ ಬಿನ್ ಜವಾದ್‌ನಲ್ಲಿ ಜಮಾವಣೆಗೊಂಡಿದ್ದ ಬಂಡುಕೋರರ ಮೇಲೆ ಗಡಾಫಿ ಬೆಂಬಲಿತ ಪಡೆಗಳು ಭಾರಿ ದಾಳಿ ನಡೆಸಿದವು. ಈ ಪ್ರದೇಶವು ಸಿರ್ಟೆ ನಗರದಿಂದ 150 ಕಿ.ಮೀ. ದೂರದಲ್ಲಿದೆ. ಸಿರ್ಟೆ ನಗರದಿಂದ 60 ಕಿ.ಮೀ. ದೂರದಲ್ಲಿರುವ ಹರಾವಾ ಎಂಬಲ್ಲಿ ಬಂಡುಕೋರರು ಮತ್ತೆ ಒಂದುಗೂಡಿದ್ದಾರೆ ಎಂದು ಹೇಳಲಾಗಿದೆ.

ಇದೇ ರೀತಿ ಟ್ರಿಪೋಲಿ ನಗರದಿಂದ 214 ಕಿ.ಮೀ. ದೂರದಲ್ಲಿರುವ ಮಿಸುರಾತಾ ನಗರದಲ್ಲೂ ಬಂಡುಕೋರರಿಗೆ ಹಿನ್ನಡೆಯಾಗಿದೆ. ಮಿಸುರಾತಾ ನಗರವನ್ನು ಬಂಡುಕೋರರ ಹಿಡಿತದಿಂದ ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಗಡಾಫಿ ಸರ್ಕಾರದ ಸೇನಾ ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ ಈ ನಗರದಲ್ಲಿ ಉಭಯ ಬಣಗಳ ನಡುವೆ ಬೀದಿ ಕಾಳಗ ಮುಂದುವರಿದಿದೆ.ಬಂಡುಕೋರರು ಈಗ ಕ್ಷಿಪಣಿ ಮತ್ತು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಕಾಳಗ ನಡೆಸುತ್ತಿದ್ದಾರೆ.ಇದೇ ಮೊದಲ ಬಾರಿಗೆ ಬುಧವಾರ ಗಡಾಫಿ ನೆಲೆ ಮತ್ತು ಸರ್ಕಾರಿ ಪಡೆಗಳ ಮೇಲೆ ನ್ಯಾಟೊ ಹಾಗೂ ಅಮೆರಿಕ ಪಡೆಗಳು ಭಾರಿ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿದ್ದಾಗಿ ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT