ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಫಿನ ಅನಾವರಣ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತಾವು ಬರೆದ ಹಾಡಿನ ಕೊನೆಯ ಭಾಗದ ಮೂವತ್ತು ಸೆಕೆಂಡಿನಲ್ಲಿ ಬರುವ ಅಧರಚುಂಬನದ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಆದೇಶಿಸಿದ್ದು ಸಾಹಿತಿ ಜಯಂತ ಕಾಯ್ಕಿಣಿಯವರ ಬೇಸರಕ್ಕೆ ಕಾರಣವಾಗಿತ್ತು. `ಜಿಂದಗಿ ನಾ ಮಿಲೇ ದುಬಾರಾ~ ಹಿಂದಿ ಚಿತ್ರದಲ್ಲಿ ನಿಮಿಷಗಟ್ಟಲೆ ತುಟಿಮುತ್ತು ಇರುವುದಕ್ಕೇ ಕತ್ತರಿ ಹಾಕಿಲ್ಲವಲ್ಲ ಎಂಬುದು ಜಯಂತ್ ಜಿಜ್ಞಾಸೆಗೆ ಕುಮ್ಮಕ್ಕು ಕೊಟ್ಟಿತ್ತು.

ಈ ವಾರ ತೆರೆಕಾಣುತ್ತಿರುವ `ಲೈಫು ಇಷ್ಟೇನೆ~ ಚಿತ್ರಕ್ಕೆ ಸೆನ್ಸಾರ್ ಮಂಡಳಿ `ಯು/ಎ~ ಪ್ರಮಾಣಪತ್ರ ನೀಡಿದೆ. ತುಟಿಮುತ್ತಿನ ಸನ್ನಿವೇಶ, ಕಾಂಡೋಮ್ ಪ್ರಸ್ತಾಪವಿರುವ ದೃಶ್ಯಗಳಿಗೂ ಕತ್ತರಿ ಹಾಕುವಂತೆ ಅದು ಆದೇಶಿಸಿದೆ. ಮೊದಲ ಚಿತ್ರ ನಿರ್ದೇಶಿಸಿರುವ ಪವನ್ ಕುಮಾರ್ ಅವರಿಗೂ ಈ ಕುರಿತು ಬೇಸರವಿದೆ. ಆದರೆ ಸರ್ಟಿಫಿಕೇಟ್ ನೋಡಿಕೊಂಡು ಮಂದಿ ಸಿನಿಮಾ ನೋಡುವ ಕಾಲ ಇದಲ್ಲ ಎಂದು ಅವರು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವಂತೆ ಮಾತನಾಡಿದರು.

ಚಿತ್ರತಂಡದ ಎಲ್ಲರೂ ಸಿನಿಮಾ ನೋಡಿದಾಗ ಹೊಮ್ಮಿದ ಭಾವ ಕಂಡು ಪವನ್‌ಗೆ ತಾವು ಮುಂದೆಯೂ ಸಿನಿಮಾ ನಿರ್ದೇಶಿಸಬಹುದೆಂಬ ವಿಶ್ವಾಸ ಮೂಡಿದೆ. ನಿರ್ಮಾಪಕ ಜಾಕ್ ಮಂಜು ಕೂಡ `ಸೆನ್ಸಾರ್ ಮಂಡಳಿ ಎಲ್ಲದಕ್ಕೂ ಪ್ರಾಬ್ಲಂ ಕೊಡುತ್ತದೆ~ ಎಂದು ಹೇಳಿದರು. ಅವರಿಗೂ ಚಿತ್ರ ಚೆನ್ನಾಗಿ ಮೂಡಿಬಂದಿರುವ ಕುರಿತು ತೃಪ್ತಿ ಇದೆ.

`ನಮ್ಮ ತಂಡದ ಎಲ್ಲರೂ ಸಿನಿಮಾ ನೋಡಿದೆವು. ಆಗ ಅವರ ಅಭಿಪ್ರಾಯ ಹೇಗಿದೆ ಎನ್ನುವುದಕ್ಕಿಂತ ಮುಖ್ಯವಾಗಿ ಎಲ್ಲರ ಮುಖದ ಭಾವನೆಗಳು ಹೇಗಿವೆ ಎಂಬುದನ್ನು ನೋಡಿದೆ. ಅದನ್ನು ನೋಡಿದ ಮೇಲೆ ನಾನು ಮುಂದಿನ ಚಿತ್ರದ ಬಗ್ಗೆ ಯೋಚಿಸಬಹುದು ಎನ್ನಿಸಿತು~ ಎಂದು ಪವನ್ ಮಾತು ನಿಲ್ಲಿಸಿ, ವೇದಿಕೆ ಮೇಲೆ ಇದ್ದ ಎಲ್ಲರನ್ನೂ ನೋಡುತ್ತಾ ಕೆಲವು ಕ್ಷಣ ಮೌನವಾದರು. ಅವರೆಲ್ಲರ ಮುಖಭಾವದ ಸಮ್ಮತಿಗಾಗಿ ಅವರು ಎದುರುನೋಡಿದಂತಿತ್ತು.

ಚಿತ್ರಕ್ಕೆ ಒಂದು ಹಾಡು ಬರೆದಿರುವ ಜಯಂತ ಕಾಯ್ಕಿಣಿಯವರ ಮಾತು ಸೆನ್ಸಾರ್ ಮಂಡಳಿ ಆದೇಶಿಸಿರುವ `ಕಟ್ಸ್~ ಕುರಿತ ತಕರಾರಿಗೇ ಮೀಸಲಾಯಿತು. ಪವನ್ ಕುಮಾರ್ ಪ್ರತಿಭೆಯ ಬಗ್ಗೆ ಶ್ಲಾಘನೆಯೂ ಬೆರೆತಿತ್ತು.

ನಾಯಕ ದಿಗಂತ್, ನಾಯಕಿಯರಾದ ಸಂಯುಕ್ತ ಹೊರನಾಡು ಹಾಗೂ ಸಿಂಧು ಪ್ರೇಕ್ಷಕರು ಆಶೀರ್ವಾದ ಮಾಡಬೇಕು ಎಂದಷ್ಟೇ ಕೇಳಿಕೊಂಡರು.

`ಮನಸಾರೆ~ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರವನ್ನೂ ನಿರ್ವಹಿಸಿದ ಪವನ್, ಆ ಸಿನಿಮಾಗೆ ಕಥೆಯನ್ನೂ ರೂಪಿಸಿದ್ದರು. `ಪಂಚರಂಗಿ~ಯಲ್ಲಿಯೂ ಒಂದು ಪಾತ್ರಕ್ಕೆ ಬಣ್ಣ ಹಚ್ಚಿ ಯೋಗರಾಜ್ ಭಟ್ ಗರಡಿಯ ಕಾಯಂ ಸದಸ್ಯರಾಗಿ ಗುರುತಾಗಿದ್ದರು. ಹಾಗಾಗಿ ಅವರ `ಲೈಫು ಇಷ್ಟೇನೆ~ ಚಿತ್ರದ ಕುರಿತು ನಿರೀಕ್ಷೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT