ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕದಿಂದ ಲೋಕದೃಷ್ಟಿ ಪಡೆವ ಯತ್ನ

ಸಾಹಿತ್ಯ ಜೀವನ ಕಥನ
Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಮೂರು, ಮೂರುವೆರೆ ದಶಕಗಳ ಹಿಂದೆ ನಮ್ಮೂರಲ್ಲಿ ಎಲ್ಲ ಹುಡುಗರಂತೆ ನಾನು ಶಾಲೆಗೆ ಹೋಗಿ, ಬರುವುದು, ಹೊಲ ಮನೆಕೆಲಸ ಮಾಡಿಕೊಂಡು ಬೆಳೆಯುತ್ತಿದ್ದೆ. ನಮ್ಮೂರು ನುಗಡೋಣಿ ಚಿಕ್ಕದು. ಎಲ್ಲರೂ ರೈತರೇ. ಕಸುಬುದಾರರಿದ್ದರೂ ಅವರೂ ರೈತಾಪಿಗಳೇ ಆಗಿದ್ದರು. ಉಳ್ಳವರು ಕೂಡ ತಮ್ಮ ತಮ್ಮ ಹೊಲಗಳಲ್ಲಿ ದುಡಿಯುತ್ತಿದ್ದರು. ಊರು ಅಂದ ಮೇಲೆ ಜಗಳ, ಪೈಪೋಟಿ, ಗುಂಪುಗಾರಿಕೆ, ಜಾತಿ ರಾಜಕಾರಣ ಇದ್ದೇ ಇರುತ್ತಿತ್ತು. ನಮ್ಮೂರಲ್ಲಿ, ಅಕ್ಕಪಕ್ಕದ ಊರುಗಳಲ್ಲಿ ಜಗಳ ನಡೆದ, ಕೊಲೆಯಾದ ಸುದ್ದಿಗಳನ್ನು ಕೇಳುತ್ತಿದ್ದೆವು.

ನಾನು ಹೈಸ್ಕೂಲು ಸೇರುವ ಹೊತ್ತಿಗೆ ಊರಲ್ಲಿ ತೀವ್ರವಾದ ಜಗಳಗಳು ನಡೆದವು. ನಮ್ಮೂರಿನಿಂದ ಹತ್ತು ಮೈಲು ದೂರದಲ್ಲಿ ಸಿರಿವಾರ ಎಂಬ ಊರಿತ್ತು. ಆ ಊರಲ್ಲಿ ಹೈಸ್ಕೂಲಿತ್ತು. ಅಲ್ಲಿ ಸೇರಿದ್ದೆ. ದಿನವೂ ಸೈಕಲ್ ಮೇಲೆ ಹೋಗಿ, ಶಾಲೆ ಮುಗಿದ ಮೇಲೆ ಮರಳಿ ಬರುತ್ತಿದ್ದೆ. ಹೊತ್ತು ಮುಳುಗಿ ತಾಸು ಹೊತ್ತಾದ ಮೇಲೆಯೇ ಮನೆ ಸೇರುತ್ತಿದ್ದೆ. ಇದೇ ದಿನಗಳಲ್ಲಿ ನಮ್ಮೂರಲ್ಲಿ ಕೊಲೆಯಾಯ್ತು.

ಒಂದು ದಿನ ಶಾಲೆಯಲ್ಲಿ ಕನ್ನಡ ಕಲಿಸುತ್ತಿದ್ದ ಶ್ರೀ ಹರಿನಾಯಕ ಮಾಸ್ತರರು ನನ್ನನ್ನು ಉದ್ದೇಶಿಸಿ ಏನೋ ತಮ್ಮ, ನಿಮ್ಮೂರಲ್ಲಿ ಕೂನಿ ಯಾಗಿದೆ ಅಂತಲ್ಲ? ಕೊಲೆಗಡುಕರ ಊರಿನಿಂದ ನಮ್ಮ ಶಾಲೆಗೆ ಬಂದಿದ್ದಿಯಲ್ಲೋ ಮಾರಾಯ! ಇರಲಿ ಚೆನ್ನಾಗಿ ಓದು ಎಂದು ಹೇಳಿದರು. ವಿದ್ಯಾರ್ಥಿಯಾಗಿದ್ದ ನಾನು ದಿನಕ್ಕೆ ಇಪ್ಪತ್ತು ಮೈಲು ದಾರಿಯನ್ನು ಸೈಕಲ್ಲು ಮೇಲೆ ಹೋಗಿ ಬರುವುದೇ ಕಷ್ಟವಾಗಿತ್ತು.

ಸೈಕಲ್ಲು ತುಳಿದು ಸುಸ್ತಾಗುತ್ತಿತ್ತು. ಓದುವುದಕ್ಕೆ, ಮನೆಯಲ್ಲಿ ಹೋಮ್ ವರ್ಕ ಮಾಡುವುದಕ್ಕೆ ಸಮಯವೇ ಇರುತ್ತಿರಲಿಲ್ಲ. ಮೇಲಾಗಿ ಹೈಸ್ಕೂಲಿಗೆ ಹೋಗಿ-ಬರುತ್ತಿದ್ದ ನನ್ನ ಜೊತೆಗೆ ಬೇರೆ ಯಾವ ಹುಡುಗರೂ ಇರಲಿಲ್ಲ. ಮಳೆ, ಗಾಳಿ ಬಿಸಿಲಿನ ಹೊಡೆತಕ್ಕೆ ತಲ್ಲಣಿಸಿ ಹೋಗುತ್ತಿದ್ದೆ. ಕಷ್ಟ-ಸುಖ ಹೇಳಿಕೊಳ್ಳಲು ಜೊತೆಗೆ ಹುಡುಗರೇ ಇರುತ್ತಿದ್ದಿಲ್ಲ. ಒಮ್ಮೆ ಶ್ರೀ ಹರಿನಾಯಕ ಕನ್ನಡ ಮಾಸ್ತರರು ಯಾವುದೋ ಕೆಲಸದ ನಿಮಿತ್ತ ಕವಿತಾಳ, ಮಲ್ಲಟ (ಪಕ್ಕವೇ ನುಗಡೋಣಿ)ದ ಮೂಲಕ ಸಿರಿವಾರಕ್ಕೆ ಲಾರಿಯಲ್ಲಿ ಬರುವಾಗ ಕೈಗಡಿಯಾರ ಕಳೆದು ಹೋಯಿತಂತೆ. ನನ್ನ ಕೈಗಡಿಯಾರವನ್ನು ನಿಮ್ಮೂರ ಜನ ಹೊಡಕೊಂಡರಲ್ಲೋ, ತಮ್ಮ. ನಿಮ್ಮೂರು ಸಾಮಾನ್ಯವಲ್ಲ ಬಿಡು ಎಂದು ಎದ್ದು ನಿಲ್ಲಿಸಿ ಅಂದರು. ಸರಿಕ ಹುಡುಗರು ತರಗತಿಯಲ್ಲಿ ನಕ್ಕರು.

ಆದರೆ, ಹೊರಗೆ ಬಂದು ಹಂಗಿಸಲಿಲ್ಲ. ಅದೇ ನನ್ನ ಪುಣ್ಯ. ೧೯೯೧ರಲ್ಲಿ ನನ್ನ ಕಥಾ ಸಂಕಲನ ‘ಮಣ್ಣು ಸೇರಿತು ಬೀಜ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸುದ್ದಿಕೇಳಿದ ಶ್ರೀ ಹರಿನಾಯಕರು ನನ್ನನ್ನು ಹುಡುಕಿಸಿದರಂತೆ. ಅವರು ನಿವೃತ್ತಿಯಾಗಿ ಮಸ್ಕಿ ಊರಲ್ಲಿ ಇದ್ದರು. ನಾನು ಕನ್ನಡ ವಿಶ್ವವಿದ್ಯಾಲಯ ಸೇರಿದ್ದೆ. ನಾನೇ ಮಸ್ಕಿಗೆ ಹೋಗಿ ಮಾಸ್ತರರನ್ನು ಕಂಡೆ. ಅವರು ಅಪ್ಪಿಕೊಂಡು ಕೆಸರಿನಲ್ಲಿ ಕಮಲ ಹುಟ್ಟಿದಂತೆ ಹುಟ್ಟಿದ್ದಿಲ್ಲೋ ತಮ್ಮ ಎಂದು ನನ್ನ ಮೇಲೆ ತಮ್ಮ ಪ್ರೀತಿಯನ್ನು ಸುರಿದರು. ಇದು ಮಾಸದ ನೆನಪುಗಳಲ್ಲಿ ಒಂದಾಗಿ ಉಳಿದಿದೆ.

ಚರಿತ್ರೆಯಿಂದ ಕತೆಗಾರ ಮುಕ್ತನಾಗಲು ಸಾದ್ಯವಿಲ್ಲೋ ಎನೋ! ನಮ್ಮೂರಲ್ಲಿ ನಡೆದ ಕೊಲೆಯಿಂದ ಊರು, ಊರ ಮಂದಿಯ ಬಾಂಧವ್ಯಗಳು ಹದಗೆಟ್ಟವು. ಕೆಲವು ಕುಟುಂಬಗಳ ಪಾಡು ಚಿಂತಾಜನಕವಾಯ್ತು. ಇದರಲ್ಲಿ ನಮ್ಮ ಮನೆತನವೂ ಒಂದು. ನಾನು ಹೈಸ್ಕೂಲು ಹೆಂಗೋ ಮುಗಿಸಿದೆ. ಆದರೆ ಕಾಲೇಜಿಗೆ ಹೋಗುವುದು ಆಗಲಿಲ್ಲ. ಊರಲ್ಲಿದ್ದು ಹೊಲ-ಮನೆ ಕೆಲಸ ಮಾಡಿಕೊಂಡಿರಬೇಕಾಯ್ತು. ಈ ದಿನಗಳಲ್ಲಿ ನಾನು ದೊಡ್ಡ ಕುಟುಂಬದಲ್ಲಿದ್ದೂ ಏಕಾಂಗಿಯಾದೆ. ಊರಲ್ಲಿದ್ದೂ ಒಂಟಿಯಾದೆ.

ಮನೆಮಂದಿಯ ಒಳಗಿದ್ದು, ಊರಲ್ಲಿದ್ದೂ ಹೊರಗಿನವನಂತಾದೆ. ಎಲ್ಲರನ್ನೂ, ಎಲ್ಲವನ್ನು ದೂರನಿಂತು ನೋಡುವಂತಾಯ್ತು. ಯಾವುದರಲ್ಲೂ ಭಾಗಿಯಾಗುವ ಮನೋಬಲವನ್ನು ಕಳೆದುಕೊಂಡೆ. ನನ್ನ ಒಂಟಿತನವನ್ನು ಗುರುತಿಸುವ ಗೋಜಿಗೆ ಯಾರೂ ಇರಲಿಲ್ಲ. ಊರಲ್ಲಿ ನಮ್ಮ ಮನೆತನದಲ್ಲೇ ಭೀಮನಗೌಡ ಎಂಬುವವರು ಇದ್ದರು. ನಾನು ಭೀಮಣ್ಣ ಅಣ್ಣ ಎಂದು ಕರೆಯುತ್ತಿದ್ದೆ. ಅವರು ನನ್ನ ಒಂಟಿತನ ಕಂಡು ಕೆಲವು ಪುಸ್ತಕ ಕೊಡತಿನಿ, ಕಷ್ಟವಾದರೂ ಬುಡಬ್ಯಾಡ. ಓದುತ್ತಾ ರೂಢಿ ಮಾಡಿಕೊ ಎಂದು ಹೇಳಿ, ಕೆಲವು ಪುಸ್ತಕಗಳನ್ನು ಕೊಟ್ಟರು.

ಅವುಗಳಲ್ಲಿ ಜಿ.ಹನುಮಂತರಾವ್ ಅವರ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕ, ರಾಮಕೃಷ್ಣ ಪರಮಹಂಸ ಅವರ ಪುಸ್ತಕ, ಕೆಲವು ಶರಣರನ್ನು ಕುರಿತ ಕಾದಂಬರಿಗಳು, ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’, ಅರವಿಂದರ ‘ದಿವ್ಯ ಜೀವನ’, ‘ಸಾವಿತ್ರಿ’ ಇದ್ದವು. ಊರಲ್ಲಿ ಅವುಗಳನ್ನು ಯಾರೂ ಓದಿರಲಿಲ್ಲ. ಸ್ವತಃ ಭೀಮಣ್ಣ ಎಲ್ಲಿಂದಲೋ ತಂದಿದ್ದರೂ ಓದಲು ಪ್ರಯತ್ನಿಸಿದರೇ ಹೊರತು ಎಲ್ಲವುಗಳನ್ನೂ ಓದಿರಲಿಲ್ಲ.

ಶಾಲೆ ಬಿಟ್ಟು ಶಾಲೆಯಲ್ಲಿ ಕಲಿತಿದ್ದನ್ನು ಮರೆಯುತ್ತಿದ್ದ ನನಗೆ ಈ ಪುಸ್ತಕಗಳನ್ನು ಓದಲು ಸಾಧ್ಯವಾಗಲಿಲ್ಲ. ಓದಲು ಕುಳಿತರೆ ರಾತ್ರಿಯಲ್ಲಿ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತಾಯಿತು. ಅನ್ಯ ಮಾರ್ಗವಿಲ್ಲದೇ ಓದಲು ಪ್ರಯತ್ನಿಸಿದೆ. ಕಾನೂರು ಸುಬ್ಬಮ್ಮ ಹೆಗ್ಗಡಿತಿಯನ್ನು ಕಷ್ಟಪಟ್ಟು ಒಂದು ಸಲ ಓದಿದೆ. ಕುವೆಂಪು ಅಂದರೇನು ಎಂದು ಗೊತ್ತಾಗುತ್ತಿರಲಿಲ್ಲ. ಪುಸ್ತಕದ ಮೇಲಿದ್ದ ಉದ್ದ ಬಾಲದ ಎರಡು ಹಕ್ಕಿಗಳು ಮಾತ್ರ ಚಂದ ಕಂಡವು. ಅವುಗಳನ್ನು ನಮ್ಮೂರ ಪರಿಸರದಲ್ಲಿ ಹುಡುಕಿದರೂ ಸಿಗಲಿಲ್ಲ. ಕಾದಂಬರಿಯನ್ನೂ ಮೂರೋ ನಾಲ್ಕನೇ ಸಲವೋ ಓದಿದಾಗ ಮಾತ್ರ ಚೂರು ಸಲೀಸಾಯಿತು. ಆದ್ರೂ ಕುವೆಂಪು ನುಡಿ ಓದಿಗೆ ಸರಳವಲ್ಲ ಅನ್ನಿಸಿತ್ತು. ರಾಮಕೃಷ್ಣ ಪರಮಹಂಸರ ವಚನವೇದವನ್ನು ಓದಿದೆ.

ಹೊಲ-ಮನೆ ಕೆಲಸ ಮಾಡುತ್ತ ಈ ಪುಸ್ತಕಗಳನ್ನು ಓದಿದೆನು. ತಿಳಿಯುತ್ತಿರಲಿಲ್ಲ. ಅದ್ಯಾವ ಮಾಯದಲ್ಲೋ ಮಲೆಗಳಲ್ಲಿ ಮದುಮಗಳು ಪುಸ್ತಕ ಸಿಕ್ಕಿತು. ದನಕಾಯುತ್ತಲೇ ಓದಿದೆ. ಕುವೆಂಪು ಕಾದಂಬರಿಗಳಲ್ಲಿರುವ ಮನುಷ್ಯರು, ಗಿಡ ಮರ ಕಾಡು, ಪಕ್ಷಿ ಪ್ರಾಣಿ, ಬೇಟೆಗಳ ಜೊತೆ ಇದ್ದಂತಾಯಿತು. ಏಕಾಂತ, ಒಂಟಿತನ ಮಾಯವಾಯಿತು. ನಮ್ಮೂರ ಪರಿಸರದಲ್ಲಿ ಕಾಡು ಇಲ್ಲ. ಪ್ರಾಣಿ ಪಕ್ಷಿ ಕಡಿಮೆ. ಬೇಟೆಯಿಲ್ಲ. ಮಳೆಯಿಲ್ಲ. ಗಾಳಿ, ಬಿಸಿಲು ಮಾತ್ರ ನಮ್ಮ ಕಡೆಯಿತ್ತು. ವ್ಯತ್ಯಾಸ ಏನೇ ಇರಲಿ, ಕುವೆಂಪು ಕಾದಂಬರಿಗಳನ್ನು ಓದುತ್ತ, ನಮ್ಮೂರ ಲೋಕವನ್ನು ಕುರಿತು ಬರೆಯಬೇಕೆಂಬ ಹಂಬಲ ಮೂಡಿತು. ಆದರೆ ಬರೆಯುವುದೆಂದರೆ ಸುಮ್ಮನೆಯೇ? ಕನ್ನಡ ಸಾಹಿತ್ಯದ ಗಂಧಗಾಳಿಯ ಪರಿಚಯವಿಲ್ಲ. ಯಾವ ಲೇಖಕನ ಮುಖ ನೋಡಿಲ್ಲ. ಕನ್ನಡದಲ್ಲಿ ಯಾವ ಸಾಹಿತ್ಯವಿದೆ ಎಂದು ಕಿಂಚಿತ್ ಅರಿವಿಲ್ಲ. ಓದಿದ್ದು ಎಂಟತ್ತು ಪುಸ್ತಕಗಳು ಮಾತ್ರ. ಮನೆಯಲ್ಲಿ ಓದುವ ಕೊಂಚ ಬರೆಯುವ ಸಂಗತಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ನನ್ನ ಬಳಿಯಿದ್ದ ಬಂಡವಾಳ ಎಂದರೆ ಕುವೆಂಪು ಕಾದಂಬರಿಗಳ ಅರೆಬರೆ ಓದು. ನಮ್ಮೂರ ಲೋಕವನ್ನು ಒಳಗಿದ್ದೂ ದೂರನಿಂತು ಮೈ-ಮನಸ್ಸಿನಲ್ಲಿ ತುಂಬಿಕೊಂಡದ್ದು ಮಾತ್ರ. ಈ ಸಂದರ್ಭದಲ್ಲಿ ನನ್ನ ವಯಸ್ಸು ಇಪ್ಪತ್ತೂ ದಾಟಿರಲಿಲ್ಲ. ಆದರೆ ಮನೆಯಲ್ಲಿದ್ದ ಪೆನ್ನು ನೋಟ್‌ಬುಕ್ಸಿನ ಹಾಳೆಗಳನ್ನು ಹಿಡಿದು ಯಾರಿಗೂ ಕಾಣದಂತೆ ಕತೆ ಬರೆಯಲು ಪ್ರಯತ್ನಿಸಿದೆ. ಬರೆದದ್ದು ಅದು ಹೇಗೋ ನನ್ನ ಅಣ್ಣಂದಿರ ಕೈಗೆ ಸಿಕ್ಕಿಬಿಟ್ಟಿತ್ತು. ಅವರು ಓದಿ ಬಿದ್ದು ಬಿದ್ದು ನಗುತ್ತಿದ್ದರು.

ಯಾಕೆಂದರೆ ಬರೆದ ಕತೆಯಲ್ಲಿದ್ದ ಪದಗಳು ತಪ್ಪಾಗಿದ್ದವು. ದುಕ್ಕ, ರುಸಿ, ಆಲು, ದೈರಿಯಾ, ಯಪ್ಪ, ಯಮ್ಮ, ಸಾಲಿ, ಪುಸ್ತುಕ ಈ ರೂಪದ ಪದಗಳನ್ನು ಕತೆಯಲ್ಲಿ ಓದಿ ವರ್ಷಾನು ವರ್ಷ ನಕ್ಕಿದ್ದರು. ನಮ್ಮ ಊರ ಪರಿಸರದಲ್ಲಿ ಜನರು ಆಡುವ ಮಾತಿನ ಉಚ್ಚಾರಗಳೇ ಬರೆಯಲು ಕುಂತರೆ ಬರುತ್ತಿದ್ದವು. ಪದಕೋಶ ನೋಡಿ ಬರೆಯಲು ಕಲಿ ಎಂದು ಹೇಳಿದರು.

ಅದನ್ನು ನೋಡಿ ಕಲಿಯಲು ಪ್ರಯತ್ನಿಸಿದೆ ಅನ್ನಿ. ಆದರೂ ಈ ಹೊತ್ತಿಗೂ ಗ್ರಂಥಸ್ಥ ಪದಗಳು ನನ್ನ ಮೈ-ಮನಸ್ಸು ತುಂಬಿದ್ದು ಕಮ್ಮಿ. ಆಡು ಮಾತಿನ ರೂಪಗಳೇ ನನ್ನ ಬರವಣಿಗೆಯಲ್ಲಿ ಮೂಡಿಬಿಡುತ್ತವೆ. ಕಷ್ಟಪಟ್ಟು ಪದಕೋಶದ ಪದಗಳನ್ನು ಮನಸ್ಸಿಗೆ ತುಂಬಿಕೊಳ್ಳುತ್ತೇನೆ. ಆದರೂ ಬರೆಹದಲ್ಲಿ ಶುದ್ಧ ಪದಗಳು, ಆಡುಮಾತಿನ ರೂಪಗಳು ಕಲಬೆರಿಕೆಯಾಗಿಯೇ ಮೂಡಿನಿಲ್ಲುತ್ತವೆ. ಸಮಸ್ಯೆ ಬಗೆಹರಿದಿಲ್ಲ. ಇನ್ನೂ ಆರಂಭದ ಗತಿ ಹೇಗಿರಬೇಡ? ಮಣ್ಣು ಸೇರಿತು ಬೀಜ ಎಂಬ ಕತೆಯನ್ನು ೧೯೮೪ರಲ್ಲಿ ಸತತ ಆರು ತಿಂಗಳ ಕಾಲ ಬರೆದಿದ್ದೇನೆ.

ಯಾಕೆಂದರೆ ಕಥೆ, ಪಾತ್ರಗಳು, ಸನ್ನಿವೇಶಗಳು, ಘಟನೆಗಳು, ಮಾತುಗಳು ಎಲ್ಲವೂ ಮೈ-ಮನಸ್ಸಿನಲ್ಲಿ ತುಂಬಿ ಕುಣಿಯುತ್ತಿವೆ. ಒಳಗೆ ಕಥೆ ಆಗಿಬಿಟ್ಟಿದೆ. ನುಡಿಯಿಂದ ನಿರೂಪಿಸಲು ಸಾಧ್ಯವಾಗುತ್ತಿರಲಿಲ್ಲ. ಜನರ ಆಡುನುಡಿಯ ರೂಪಗಳೇ ಮುಂದೆ ಬಂದುಬಿಡುತ್ತಿದ್ದವು. ಪದಕೋಶದ ಪದಗಳಿಂದ ನಿರೂಪಿಸಲು ತೊಡಗಿದರೆ ಕತೆಗೆ ಹೊಂದಿಕೆಯಾಗುತ್ತಿರಲಿಲ್ಲ. ನನ್ನೂರ ಕತೆಯಾದ್ದರಿಂದ ಅದರಲ್ಲಿ ಬರುವ ಪಾತ್ರಗಳ ನಿಜ ಹೆಸರನ್ನು ಬರೆದರೆ ಮಾತ್ರ ಕತೆ ಬರೆಯಲು ಬರುತ್ತಿತ್ತೇ ಹೊರತು ಪಾತ್ರಗಳ ಹೆಸರನ್ನು ಬೇರೆ ಹೆಸರಿನಿಂದ ಬರೆಯಲು ಕುಳಿತರೆ ಕತೆ ಮುಂದೋಡುತ್ತಿರಲಿಲ್ಲ. ಮೊದ ಮೊದಲು ಬರೆದ ಎರಡು ಮೂರು ಕತೆಗಳಲ್ಲಿ ಬರುವ ಪಾತ್ರಗಳ ನಿಜ ಹೆಸರನ್ನಿಟ್ಟು ಕತೆಬರೆದು ಮುಗಿಸಿದ ಮೇಲೆ, ನಿಜ ಹೆಸರಿನ ಜಾಗದಲ್ಲಿ ಹೊಂದುವ ಕಲ್ಪಿತ ಹೆಸರುಗಳನ್ನು ಸೇರಿಸಿದೆ. ನಿಜ ಹೆಸರು ಇರುವ ಕತೆಗಳಿಂದ ನನಗೆ ತೊಂದರೆ ಆಯ್ತು. ಆ ಕತೆ ಬೇರೆ.

ರಾಯಚೂರಿನ ಕಾಲೇಜಿಗೆ ಸೇರಿದೆ. ಸಾಹಿತ್ಯದ ವಾತಾವರಣ ಇರಲಿಲ್ಲ. ಚರ್ಚೆ, ಸಂವಾದ ಕಡಿಮೆ. ನಾಕಾರು ಕವನ ಬರೆದು ಖುಷಿಪಟ್ಟೆ. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದೆ. ಅಲ್ಲಿಯೂ ಸಾಧಾರಣ ವಿದ್ಯಾರ್ಥಿಯಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಪಠ್ಯಪುಸ್ತಕಗಳನ್ನು ಓದಿಕೊಂಡಿದ್ದೆ. ಕನ್ನಡ ವಿಭಾಗದಲ್ಲಿ ಸಾಹಿತ್ಯಿಕ ವಾತಾವರಣ ಇರಲಿಲ್ಲ. ಎಂ.ಎ ಪದವಿ ಪಡೆದುಕೊಂಡು ಹೊರಬಂದುದ್ದೇ ನನ್ನ  ಸುದೈವ. ಗುಲಬರ್ಗಾದಿಂದ ಬಂದ ಮೇಲೆ ನಿರುದ್ಯೋಗ. ಹೈದರಾಬಾದು ಕರ್ನಾಟಕ ಪ್ರಾಂತ್ಯದಲ್ಲಿ ಗಾಳಿ, ಬಿಸಿಲಿಗೆ ಅಲೆದಾಡಿದೆ. ಇದೇ ಸಂದರ್ಭದಲ್ಲಿ ಕತೆಗಳನ್ನು ಬರೆಯಲು ಪ್ರಯತ್ನಿಸಿದೆ. ಆದರೇ ಸಮಕಾಲೀನ ಸಾಹಿತ್ಯದ ವಾತಾವರಣದ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ನನ್ನ ಸರಿಕರು ಯಾರು ಏನು ಹೇಗೆ ಬರೆಯುತ್ತಿದ್ದಾರೆ ಎಂಬ ಪ್ರಜ್ಞೆ ಇರಲಿಲ್ಲ. ಪಠ್ಯಪುಸ್ತಕಗಳ ಸಾಹಿತ್ಯ ಮಾತ್ರ ತಕ್ಕ ಮಟ್ಟಿಗೆ ಪರಿಚಯವಾಗಿತ್ತು. ಬಂಡಾಯ-ದಲಿತ ಸಾಹಿತ್ಯ ಚಳವಳಿಗೆ ದಣಿವಾದಬಗ್ಗೆ ಯಾರೋ ಮಾತಾಡುವುದನ್ನು ಕೇಳುತ್ತಿದ್ದೆ. ನಾನು ಕತೆಬರೆಯಲು ತೊಡಗಿಕೊಂಡದ್ದೇ ಪವಾಡ!

೧೯೮೭ರಲ್ಲಿ ನನ್ನ ಮೊದಲ ಕತೆ ಪ್ರಕಟವಾಯಿತು. ಈ ವರ್ಷ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಹಾನಿಗೊಂಡವರು ಎಂಬ ಕತೆ ಬರೆದಿದ್ದೇನೆ. ೨೫ ವರ್ಷಗಳಲ್ಲಿ ೩೮ ಕತೆಗಳನ್ನು ಬರೆದಿರುವೆ. (೩೧ ಕತೆಗಳು ಪ್ರಕಟಿತ ಸಂಕಲನಗಳಲ್ಲಿ ಸೇರಿವೆ. ಉಳಿದ ೭ ಕತೆಗಳು ಬಿಡಿ ಬಡಿಯಾಗಿ ನನ್ನ ಬಳಿಯಿವೆ) ಆದರೂ ಈ ಹೊತ್ತಿನಲ್ಲಿಯೂ ಕತೆ ಬರೆಯಲು ಕುಳಿತರೆ, ಕತೆಗಳನ್ನು ಬರೆದ ಅನುಭವದ ಬಲದಿಂದ ಈ ಕತೆಯನ್ನು ಬರೆಯುವುದು ಏನುಮಹಾ ಅನ್ನಿಸುವುದೇ ಇಲ್ಲ. ಈಗ ಬರೆಯುತ್ತಿರುವ ಕತೆಯೇ ಮೊದಲ ಕತೆ ಎಂಬಂತೆ ಕಷ್ಟಪಡುತ್ತೇನೆ. ಇದೇ ಈಗ ಬರೆದು ಮುಗಿಸಿದ ಹಾನಿಗೊಂಡವರು ಕತೆಯನ್ನು ಎರಡು ತಿಂಗಳ ಕಾಲ ಸತತ ಬರೆದು ಹೈರಾಣಗೊಂಡಿರುವೆ. ನನ್ನ ಸರಿಕರ ಪಾಡು ಹೇಗೆಂದು ನನಗೆ ತಿಳಿಯದು.

ನನ್ನ ಪಾಲಿಗೆ ಕತೆ ಬರೆಯುವುದು ಕಷ್ಟವೇ ಆಗಿದೆ. ಯಾಕೆಂದರೆ, ಕಂಡು ಉಂಡ, ಕೇಳಿ ನೋಡಿದ, ಕೆಲವು ಮೂಲಗಳಿಂದ (ಮಾಧ್ಯಮ) ಮಾಹಿತಿ ರೂಪದಲ್ಲಿ ಪಡೆದ ಸುದ್ದಿಸಂಗತಿಗಳನ್ನು, ಘಟನೆಗಳನ್ನು ಅನುಭವ ರೂಪದಲ್ಲಿ ಮೈ-ಮನಸ್ಸನ್ನು ತುಂಬಿಕೊಳ್ಳುತ್ತೇನೆ. ಈ ಲೋಕಾನುಭವಗಳು ಮಾಹಿತಿ ರೂಪದಲ್ಲಿ ಇರುತ್ತವಷ್ಟೆ. ಮನಸ್ಸಿಗೆ ತೀವ್ರವಾಗಿ ತಟ್ಟಿ ಒಂದು ಘಟನೆಯನ್ನು ಅಥವಾ ಒಂದು ಲೋಕಾನುಭವವನ್ನು ಕತೆಯ ಚೌಕಟ್ಟಿಗೆ ಹೊಂದಿಸುವಾಗ ತಾತ್ವಿಕತೆಯ ಸಮಸ್ಯೆ ಎದುರಾಗುತ್ತದೆ. ನನ್ನಲ್ಲಿ ನಾನೇ ರೂಪಿಸಿಕೊಂಡ ತಾತ್ವಿಕತೆಗೆ ಲೋಕಾನುಭವಗಳನ್ನು ಒಗ್ಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಅನ್ನಿ. ಅದು ಸರಿಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಕತೆಗಾರನಲ್ಲಿ ಈ ತಾತ್ವಿಕತೆ. ಲೊಕದೃಷ್ಟಿ ಅಥವಾ ದರ್ಶನ ಹೇಗೆ ರೂಪುಗೊಳ್ಳುತ್ತದೆ? ಬೇಕಾದಷ್ಟು ಲೋಕಾನುಭವಗಳಿದ್ದರೆ ಅವುಗಳನ್ನು ಬಳಸಿ ಕತೆ ಬರೆಯಬಹುದೆ? ಲೋಕಾನುಭವಗಳನ್ನು ಗ್ರಹಿಸುವುದಕ್ಕೆ ಕತೆಗಾರನಲ್ಲಿಯೇ ಒಂದು ದೃಷ್ಟಿಕೋನವಿರಬೇಕು. ಇದನ್ನು ಎಲ್ಲಿಂದ ಪಡೆಯುವುದು? ಬದುಕಿನ ಅನುಭವಗಳಿಂದ ಪಡೆಯಬಹುದೆ? ಓದಿನಿಂದ ಪಡೆಯಬಹುದೆ? ಅಥವಾ ನಮಗೆ ಇರುವ ಪರಂಪರೆಯಿಂದ ದತ್ತವಾಗುತ್ತದೆಯೇ? ಮನೋವಿಜ್ಞಾನಿಗಳು ಹೇಳುವಂತೆ ಪೂರ್ವಜನ್ಮಗಳ ಚರಿತ್ರೆಯಿಂದ ಈ ಜನ್ಮದಲ್ಲಿ ಅದು ಸಹಜವಾಗಿ ದತ್ತವಾಗುತ್ತದೋ? ಈ ಪ್ರಶ್ನೆಗಳು ಎದುರಾಗುತ್ತವೆ. ಓದಿನಿಂದ ಲೋಕದೃಷ್ಟಿ ಪಡೆಯುವುದು ನನ್ನಿಂದ ಕಷ್ಟವೇ. ನನ್ನ ಓದು ಕನ್ನಡಕ್ಕೆ ಮಾತ್ರ ಸೀಮಿತ.

ಅದರಲ್ಲೂ ಇರುವ ಕನ್ನಡ ಸಾಹಿತ್ಯವನ್ನು ಪೂರ್ಣ ಪ್ರಮಾಣದಲ್ಲಿ ಓದುವುದು ನನ್ನಿಂದ ಸಾಧ್ಯವಾಗಿಲ್ಲ. ಪಂಪ, ಬಸವ, ಅಲ್ಲಮ, ಅಕ್ಕ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಲಂಕೇಶ, ದೇವನೂರ ಇವರ ಸಾಹಿತ್ಯದ ಓದಿನಿಂದ ತಕ್ಕಮಟ್ಟಿಗೆ ನನ್ನಲ್ಲಿ ಒಂದು ತಾತ್ವಿಕತೆಯೋ, ಲೋಕದೃಷ್ಟಿಯೋ ರೂಪಗೊಂಡಿದೆ ಅನ್ನಿ. ಹೆಚ್ಚೆಂದರೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ನನಗೆ ಬೇಕಾದಷ್ಟು ಓದಿದ್ದೇನೆ. ಲೋಕದೊಳಗಿದ್ದು, ಲೋಕದ ಜನರ ನಡುವಿದ್ದು ಬದುಕಿನ ಪ್ರಯೋಗದಿಂದ, ಅನುಭವ ಪ್ರಾಮಣ್ಯದಿಂದ ಬರೆದ ವಚನಕಾರರು, ತತ್ವಪದಕಾರರು, ಜನಪದ ಗಾಯಕರು ನನ್ನಲ್ಲಿ ಲೋಕಗ್ರಹಿಕೆಯ ದಾರಿಗಳನ್ನು ತೋರಿಸಿದ್ದಾರೆ. ಲೋಕದಿಂದಲೇ ಲೋಕಗ್ರಹಿಕೆ ಪಡೆಯುವ ಯತ್ನ ನನ್ನದು. ಇದು ಸರಿಯೋ ತಪ್ಪೊ ದೇವರೇ ಬಲ್ಲ.

ಲೋಕಾನುಭವಗಳಿದ್ದು, ಅದನ್ನು ಗ್ರಹಿಸುವ ಲೋಕದೃಷ್ಟಿ ಅಥವಾ ತಾತ್ವಿಕತೆಯಿದ್ದು ಕತೆ ಬರೆಯುವುದು ಕಷ್ಟ. ಕತೆಗಾರನಲ್ಲಿ ಕತೆ, ಕಥಾವಸ್ತು, ಸನ್ನಿವೇಶ-ಘಟನೆಗಳು ಎಲ್ಲವು ಇದ್ದರೂ ಅವುಗಳನ್ನು ನುಡಿಯಿಂದ ಮರುಸೃಷ್ಟಿಸಿಯೇ ನಿರೂಪಿಸಬೇಕು. ಇರುವ ವಾಸ್ತವವನ್ನು ಮರುಸೃಷ್ಟಿಯಿಂದ ಹೊಸ ವಾಸ್ತವವೊಂದನ್ನು ಕಟ್ಟಬೇಕು. ಲೋಕ ಕಟ್ಟುವ ಕೆಲಸ ಕತೆಯಿಂದ ನಡೆಯಬೇಕು. ಕತೆಗಾರನ ನುಡಿಯೂ ಕತೆಯಲ್ಲಿ ಮರುಸೃಷ್ಟಿಯಾಗಬೇಕು. ನನಗೆ ಕತೆ ಗೊತ್ತು, ಪಾತ್ರಗಳು ಗೊತ್ತು. ಘಟನೆ-ಸನ್ನವೇಶಗಳೂ ಗೊತ್ತು. ನುಡಿಯೂ ನನ್ನ ಬಳಿಯಿದೆ ಎಂದು ಕತೆ ಕಟ್ಟಲು ಸಾಧ್ಯವೇ? ಇವೆಲ್ಲವೂ ಕತೆಯ ಮೂಲಕ ಜನ್ಮ ಪಡೆಯಬೇಕು.

ಇದರಿಂದಲೇ ನನಗೆ ಕತೆ ಬರೆಯುವುದು ಸರಳ ಕೆಲಸವಲ್ಲ. ಹೇಗೋ ಹತ್ತಾರು ಕತೆಗಳನ್ನು ಬರೆದೆ. ಮಣ್ಣು ಸೇರಿತು ಬೀಜ ಮತ್ತು ತಮಂಧದ ಕೇಡು ಸಂಕಲನದಲ್ಲಿ ಈ ಕತೆಗಳು ಸೇರಿದವು. ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರುವ ಮುನ್ನವೇ ಕೆಲವನ್ನು ಬರೆದಿದ್ದೆ. ಕೆಲವನ್ನು ಸೇರಿದ ಬೆನ್ನಲ್ಲೇ ಬರೆದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ-ಸಂಸ್ಕೃತಿಯ ಚರ್ಚೆ, ಸಂವಾದ ತೀವ್ರವಾಗಿ ನಡೆಯುತ್ತಿತ್ತು. ಸಾಹಿತ್ಯ ಎಂದರೇನು? ಯಾವುದನ್ನು ಸಾಹಿತ್ಯವೆಂದು ಗುರುತಿಸಬೇಕು? ಹೇಗೆ ಓದಬೇಕು? ಸಾಹಿತ್ಯವನ್ನು ಗ್ರಹಿಸುವ ದಾರಿಗಳು ಯಾವುವು ಎಂಬ ಚರ್ಚೆ ದಿನಮಾತು ಎಂಬ ಸಂವಾದದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದ್ದವು. ನಿತ್ಯವೂ ಕೇಳುತ್ತ, ಭಾಗಿಯಾಗುತ್ತಾ ಕಾಲಕಳೆಯತೊಡಗಿದೆ. ಸಾಹಿತ್ಯಕ ವಾತಾವರಣ ಸಿಕ್ಕಿದ್ದು ಮೊದಲಸಲ ಕನ್ನಡ ವಿಶ್ವವಿದ್ಯಾಲಯದಲ್ಲಿ.

ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಆರು ಕತೆಗಳನ್ನು ಬರೆದಿರುವೆ. ಈ ಕತೆಗಳನ್ನು ಬರೆಯುವ ಸಂದರ್ಭದಲ್ಲಿ ಎದುರಿಸಿದ ಕೆಲವು ಸಮಸ್ಯೆಗಳಿವೆ. ಅನುಭಾವದ ಲೋಕವನ್ನು ಕತೆಯಲ್ಲಿ ತರುವ ಸಮಸ್ಯೆ; ಚರಿತ್ರೆಯ ಭಾರವನ್ನು ಕಮ್ಮಿ ಮಾಡಿಕೊಳ್ಳಬೇಕೆ? ವರ್ತಮಾನದ ದುರಂತಗಳನ್ನು ಕತೆಮಾಡುವುದು ಸಮಸ್ಯೆ. ತಾತ್ವಿಕತೆ ಅಥವಾ ಸಿದ್ಧಾಂತದ ಮೂಲಕವೇ ಕತೆ ಕಟ್ಟುವುದಾದರೆ ಪ್ರಾದೇಶಿಕತೆಯನ್ನು ಹೇಗೆ-ಎಷ್ಟು ಉಳಿಸಿಕೊಳ್ಳಬೇಕು? ನನ್ನೊಳಗಿನ ತಾತ್ವಿಕತೆ ಚಲನಶೀಲವಾಗಿರಲು ದುಡಿಯಬೇಕು. ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT