ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಬಲೆಗೆ 10 ಅಧಿಕಾರಿಗಳು

ರೂ 15.5 ಕೋಟಿ ಅಕ್ರಮ ಆಸ್ತಿ ಪತ್ತೆ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹತ್ತು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ₨ 15.5 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.

ರಾಜ್ಯದ ಬೆಂಗಳೂರು ನಗರ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಉತ್ತರ ಕನ್ನಡ, ಕೊಪ್ಪಳ, ಮಂಡ್ಯ, ತುಮಕೂರು ಮತ್ತು ಉಡುಪಿ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ 32 ಸ್ಥಳಗಳಲ್ಲಿ ಶೋಧ ನಡೆದಿದೆ.

ಮನೆಯಲ್ಲೇ ರೂ43 ಲಕ್ಷ
ಗುಬ್ಬಿ ತಾಲ್ಲೂಕಿನ ಕೊಡ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಎಂ.ಉಮೇಶ್‌ ಮನೆಯಲ್ಲಿ ಬರೋಬ್ಬರಿ ರೂ 43 ಲಕ್ಷ ನಗದು ಪತ್ತೆಯಾಗಿದೆ. ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಆರಂಭವಾದಾಗ ಮನೆಯೊಳಗಿದ್ದ ಆರೋಪಿ, ನಗದು ಪತ್ತೆಯಾಗುತ್ತಿದ್ದಂತೆಯೇ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.

ಗುಬ್ಬಿಯಲ್ಲೇ ಉಮೇಶ್‌ ಎರಡು ಮನೆಗಳನ್ನು ಹೊಂದಿ ದ್ದಾರೆ. ಸ್ವಂತ ಹಾಗೂ ಸಹೋದರನ ಪುತ್ರ ನವೀನ್‌ಕುಮಾರ್‌ ಹೆಸರಿನಲ್ಲಿರುವ ಐದು ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ತನಿಖೆ ಮುಂದುವರಿಸಿದೆ.

ದೋಣಿ, ಬಲೆ ಪತ್ತೆ!: ನಾರಾಯಣ ಖಾರ್ವಿ ಅವರು ಉಡುಪಿಯ ಬಂದರು ಮತ್ತು ಮೀನುಗಾರಿಕೆ ಉಪ ವಿಭಾಗ­ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯಲ್ಲಿದ್ದಾರೆ. ಅವರೇ ಸ್ವತಃ ಯಾಂತ್ರೀಕೃತ ದೋಣಿ­ಗಳನ್ನು ಇರಿಸಿಕೊಂಡು ಮೀನುಗಾರಿಕೆ ನಡೆಸುತ್ತಿದ್ದರು ಎಂಬುದು ಲೋಕಾಯುಕ್ತ ದಾಳಿ ವೇಳೆ ಬಯಲಿಗೆ ಬಂದಿದೆ.

ಆರೋಪಿ ಅಧಿಕಾರಿಯ ಪುತ್ರ ರತನರಾಜ್‌ ಹೆಸರಿನ ಲ್ಲಿರುವ ಒಂದು ದೋಣಿ ಮತ್ತು ಬಲೆಗಳು ಕುಂದಾಪುರ ಸಮೀಪದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಪತ್ತೆ ಯಾಗಿವೆ. ಮತ್ತೊಬ್ಬ ಪುತ್ರ ರವಿರಾಜ್‌ ಹೆಸರಿನಲ್ಲಿರುವ ದೋಣಿ ಮತ್ತು ಬಲೆಗಳು ಕಾರವಾರ ಮೀನುಗಾರಿಕಾ ಬಂದ­ರಿನಲ್ಲಿ ಸಿಕ್ಕಿವೆ ಎಂದು ಸತ್ಯನಾರಾಯಣ ರಾವ್‌ ವಿವರ ನೀಡಿದರು.

ಖಾಸಗಿ ಕೆಲಸ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿರುವ ಡಾ.ವಿ.ಎಲ್‌.­ನಂದೀಶ್‌ ಖಾಸಗಿ ಡಯಾಗ್ನೋಸ್ಟಿಕ್‌ ಕೇಂದ್ರದಲ್ಲೂ ಕೆಲಸ ಮಾಡುತ್ತಿದ್ದುದು ಶೋಧದ ವೇಳೆ ಬಹಿರಂಗವಾಗಿದೆ. ಮಂಡ್ಯ ಡಯಾಗ್ನೋಸ್ಟಿಕ್‌ ಕೇಂದ್ರದಲ್ಲಿ ಹೂಡಿಕೆ ಮಾಡಿರುವ ಅವರ ಬಳಿ, ಸ್ವಂತ ಎಂಡೋಸ್ಕೋಪಿ ಯಂತ್ರವನ್ನೂ ಇದೆ.

ಒಂದು ಬೆಂಜ್‌ ಕಾರು ಸೇರಿದಂತೆ ಐದು ಕಾರುಗಳು ನಂದೀಶ್‌ ಬಳಿ ಇವೆ. ಮೂರು ಮೋಟಾರು ಬೈಕ್‌ಗಳೂ ದೊರೆತಿವೆ. 4.39 ಎಕರೆ ಜಮೀನು, ನಾಲ್ಕು ಮನೆ, ಆರು ನಿವೇಶನಗಳನ್ನೂ ಖರೀದಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಅಂಥೋಣಿ ಕುಂಜನಾಥ್‌ ಅಧಿಕೃತ ಆದಾಯಕ್ಕೆ ಹೋಲಿಸಿದರೆ ಅಕ್ರಮ ಆಸ್ತಿಯ ಪ್ರಮಾಣ ಶೇಕಡ 538ರಷ್ಟಿದೆ. ಇವರ ಬಳಿ ಮೂರು ಕಾರು, ಎರಡು ಪಿಕ್‌ಅಪ್‌ ವಾಹನ, ಒಂದು ಜೆಸಿಬಿ ದೊರೆತಿವೆ.

ಕಾರಿನೊಳಗೆ ಕಡತ

ಬಿಡಿಎ ಭೂಮಾಪಕ ನರೇಂದ್ರಕುಮಾರ್‌ ಮನೆಗೆ ಲೋಕಾಯುಕ್ತ ತಂಡ ಪ್ರವೇಶಿಸುತ್ತಿದ್ದಂತೆ ಅವರು ದಿಗಿಲು ಬಿದ್ದಿದ್ದಾರೆ. ಕಿಟಕಿಯ ಮೂಲಕ ಕೆಲವು ಕೀಗಳನ್ನು ಎಸೆಯಲು ಯತ್ನಿಸಿದ್ದರು. ಅವುಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಕಾರಿನ ಕೀಗಳು ಎಂಬುದು ತನಿಖಾ ತಂಡಕ್ಕೆ ಪತ್ತೆಯಾಗಿದೆ.

‘ಕಾರಿನ ಕೀಗಳನ್ನು ಆರೋಪಿ ಹೊರಗೆ ಎಸೆಯಲು ಪ್ರಯತ್ನಿಸಿದ್ದರಿಂದ ನಮ್ಮ ಪೊಲೀಸರಿಗೆ ಸಂಶಯ ಮೂಡಿತು. ತಕ್ಷಣವೇ ಅವರ ಫೋಕ್ಸ್‌ವ್ಯಾಗನ್‌, ರೆನಾಲ್ಟ್‌ ಮತ್ತು ಮಾರುತಿ ಸ್ವಿಫ್ಟ್‌ ಕಾರುಗಳನ್ನು ತಪಾಸಣೆ ಮಾಡ ಲಾಯಿತು. ಅಲ್ಲಿ ಒಟ್ಟು 75 ಕಡತಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದಿದ್ದು, ಕಡತಗಳ ಬಗ್ಗೆ ತನಿಖೆ ಮುಂದುವರಿಸಿದ್ದೇವೆ’ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ತಿಳಿಸಿದರು.

ನರೇಂದ್ರಕುಮಾರ್‌ ಸಹಕಾರ ನಗರದಲ್ಲಿ ಸ್ವಂತ ಅತಿಥಿ ಗೃಹ ಮತ್ತು ಈಜುಕೊಳ ನಿರ್ಮಿಸಿಕೊಂಡಿರುವುದು ಶೋಧದ ವೇಳೆ ಪತ್ತೆಯಾಗಿದೆ. ಬೆಂಗಳೂರಿನ ಸಹಕಾರ ನಗರ, ತಿರುಮಲನಗರ, ಥಣಿಸಂದ್ರ ಮತ್ತಿತರ ಕಡೆಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿರುವ ಬಗ್ಗೆಯೂ ದಾಖಲೆಗಳು ಲಭ್ಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT