ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತಕ್ಕೂ ಮುನ್ನ ಕೂಪಮಂಡೂಕನಾಗಿದ್ದೆ-ನ್ಯಾ.ಎನ್.ಸಂತೋಷ್ ಹೆಗ್ಡೆ

Last Updated 21 ಜೂನ್ 2011, 10:10 IST
ಅಕ್ಷರ ಗಾತ್ರ

ಉಡುಪಿ: `ಲೋಕಾಯುಕ್ತನಾಗುವುದಕ್ಕಿಂತ ಮುನ್ನ ನಾನು ಕೂಪಮಂಡೂಕನಾಗಿದ್ದೆ, ಜನಸಾಮಾನ್ಯರಿಂದ ದೂರವಿದ್ದೆ. ಆದರೆ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸರ್ಕಾರದಿಂದ ಯಾವ ರೀತಿ ದುರಾಡಳಿತ ನಡೆಯುತ್ತಿದೆ, ಭ್ರಷ್ಟ ವ್ಯವಸ್ಥೆಯಿಂದ ಜನಸಾಮಾನ್ಯರು ಎಷ್ಟು ತೊಂದರೆ ಪಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿತು~ ಎಂದು ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಇಲ್ಲಿ ಹೇಳಿದರು.

ಬಳಕೆದಾರರ ವೇದಿಕೆ ವತಿಯಿಂದ ಅಂಬಲಪಾಡಿ ದೇವಳದಲ್ಲಿ ಸೋಮವಾರ ಆಯೋಜಿಸಿದ್ದ `ವಿದ್ಯಾರ್ಥಿಗಳೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಜನರಿಂದ, ಜನರಿಗಾಗಿ, ಜನರ ಸರ್ಕಾರ ಎನ್ನುವ ಆಶಯದ ಮೇಲೆ ಸ್ವಾತಂತ್ರ್ಯ ಬಳಿಕ ಸರ್ಕಾರದ ನಿರ್ಮಾಣ ಆಗಿತ್ತು. ಆದರೆ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಚನೆಗೊಂಡ ನಮ್ಮ ಸರ್ಕಾರಗಳು ಜನಸಾಮಾನ್ಯರಿಗೆ, ಕೆಳವರ್ಗಕ್ಕೆ ಯಾವ ಪ್ರಯೋಜನವೂ ಇಲ್ಲ. ಕೆಲವರಿಂದ, ಕೆಲವರಿಗಾಗಿ, ಕೆಲವರ ಸರ್ಕಾರವಾಗಿ ಬದಲಾಗಿವೆ, ರಾಜಕೀಯ ಮುಖಂಡರಿಗೆ, ಅವರ ಬೆಂಬಲಿಗರಿಗಷ್ಟೇ ಪ್ರಯೋಜನವಾಗುತ್ತಿವೆ~ ಎಂದು ಟೀಕಿಸಿದರು.

ರಾಜಕೀಯ ಮತ್ತು ನ್ಯಾಯಾಂಗ ಜನರ ಸೇವೆಗೆ ಮುಡುಪಾಗಬೇಕಾಗಿತ್ತು. ಆದರೆ ಈಗ ಅದು ಇವೆಲ್ಲ ದಂದೆಯಾಗಿವೆ. ರಾಜಕೀಯದಿಂದ ಜನರ ಕಡೆಗೆ ಸ್ಪಂದನೆ ಕಡಿಮೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯ ನೋಡುತ್ತಿದ್ದರೆ ಇದು ಜನರಿಂದ ರಚನೆಯಾಗಿರುವ ಸರ್ಕಾರವೇ ಎಂಬ ಅನು ಮಾನ ಮೂಡುತ್ತದೆ ಎಂದರು ಅವರು ವಿಷಾದಿಸಿದರು.

ಲೋಕಾಯುಕ್ತ ಅಥವಾ ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾಗುವುದಿಲ್ಲ, ಆದರೆ ಒಂದಿಷ್ಟು ಕಡಿಮೆಯಂತೂ ಆಗುತ್ತದೆ. ನಮ್ಮ ದೇಶವೊಂದೇ ವಿದೇಶಬ್ಯಾಂಕ್‌ನಲ್ಲಿ ಇಟ್ಟಿರುವ ಹಣ 1,654 ಬಿಲಿ ಯನ್ ಅಮೆರಿಕನ್ ಡಾಲರ್ (ರೂ.90 ಲಕ್ಷ ಕೋಟಿ) ಎನ್ನಲಾಗುತ್ತಿದೆ. ಇಷ್ಟೊಂದು ಹಣ ಅಲ್ಲಿನ ಬ್ಯಾಂಕ್‌ನಲ್ಲಿ ಕೊಳೆಯುವ ಬದಲು ನಮ್ಮಲ್ಲಿ ಬಳಕೆಯಾದರೆ ಆರ್ಥಿಕ ತಜ್ಞರು ಹೇಳುವಂತೆ ಯಾವುದೇ ತೆರಿಗೆ ಹೊರೆ ಇಲ್ಲದೇ ಹಲವು ದಶಕಗಳಕಾಲ ನಮ್ಮ ದೇಶದ ಬಜೆಟ್ ಮಂಡಿಸಬಹುದು.

ಭ್ರಷ್ಟಾಚಾರ ಹೆಚ್ಚಲು ನಾವು ಹಿರಿಯರೇ ಕಾರಣ. `ಎಲ್ಲರೂ ಭ್ರಷ್ಟರೆ, ನಾವು ಸ್ವಲ್ಪ ಹೊಂದಿಕೊಂಡು ಹೋಗಬೇಕು~ ಎನ್ನುವ ಧೋರಣೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಆದರೆ ಇದಕ್ಕೆಲ್ಲ ಅಂತ್ಯ ಕಾಣಿಸಿ ಬದಲಾವಣೆ ತರಬೇಕು. ಆ ನಿಟ್ಟಿನಲ್ಲಿ ಯುವಜನರಲ್ಲಿ ಈ ಬದಲಾವಣೆ ಗಾಳಿ ಬೀಸಲು ತಾವು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ನಂತರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ನಗರದ ಸುಮಾರು 20 ಕಾಲೇ ಜುಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್, ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್, ಉದ್ಯಮಿ ಬಿ.ರಬೀಂದ್ರ ನಾಯಕ್  ಇದ್ದರು.
 
ವಿದ್ಯಾರ್ಥಿಗಳೊಂದಿಗೆ ಲೋಕಾಯುಕ್ತರ ಸಂವಾದ...
ಈಗ ನಮ್ಮ ರಾಜ್ಯದಲ್ಲಿ ಒಬ್ಬರು ಮಾಜಿ ಮತ್ತು ಒಬ್ಬರು ಹಾಲಿ ಮುಖ್ಯಮಂತ್ರಿಗಳು ಮಂಜುನಾಥಸ್ವಾಮಿ ಎದುರು ಆಣೆ ಮಾಡಿದ್ದಾರೆ. ಈ ಬಗ್ಗೆ ಏನಂತೀರಿ?
-ಮಂಜುನಾಥನಿಗೆ ನಮಸ್ಕಾರ ಮಾಡಿ ಹೇಳುತ್ತಿದ್ದೇನೆ. ದೇವರೇ ಶಿಕ್ಷೆ ಕೊಡುವುದಾದರೆ ಇಬ್ಬರಿಗೂ ಕೊಡು ಎಂದು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸರ್ಕಾರ ಪದೇ ಪದೇ ದೇವರ ಮೊರೆ ಹೋಗುತ್ತಿರುವುದು ಏಕೆ? ಜನರ ಬಳಿಗೆ ಹೋಗಬಹುದಲ್ಲ?
-ದೇವರೊಂದಿಗೆ ಯಡಿಯೂರಪ್ಪನವರಿಗೆ ಹೆಚ್ಚಿನ ಆತ್ಮೀಯತೆ ಇರಬಹುದು... 

ನಿಮ್ಮ ಲೋಕಾಯುಕ್ತ ಕಚೇರಿಯಲ್ಲಿ ಭ್ರಷ್ಟಾಚಾರ ಇಲ್ಲವೇ?
-ಇಲ್ಲ ಅಂತಲ್ಲ. `ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ~ ಎನ್ನುವಷ್ಟು ಕಠಿಣ ಭ್ರಷ್ಟಾಚಾರವಿಲ್ಲದ ಕಚೇರಿ ಹುಡುಕುವುದು. ಆದರೆ ನಾವು ನಮ್ಮಲ್ಲಿನ ಅಧಿಕಾರಿಗಳನ್ನು ಸಾಕಷ್ಟು ಎಚ್ಚರಿಕೆಯಿಂದಲೇ ಆಯ್ಕೆ ಮಾಡಿಕೊಂಡಿರುತ್ತೇವೆ.  

ನೀವು ಲೋಕಾಯುಕ್ತರಾಗುವ ಮೋದಲು ನಿಮಗೆ ಲಂಚದ ಪ್ರಕರಣ ಗಮನಕ್ಕೆ ಬಂದಿರಲಿಲ್ಲವೇ?
-ಇಲ್ಲ. ಲೋಕಾಯುಕ್ತನಾದ ಮೇಲೆಯೇ ನನಗೆ ಲಂಚದ ಕರಾಳ ಮುಖಗಳು ಗಮನಕ್ಕೆ ಬಂದಿದ್ದು.

 ಭ್ರಷ್ಟಾಚಾರಿಗಳಿಂದ ವಶಪಡಿಸಿಕೊಂಡ ಸಂಪತ್ತುಗಳನ್ನು ಏನು ಮಾಡ್ತೀರಿ?
-ನಾನಂತೂ ಬಳಕೆ ಮಾಡಲ್ಲ... ವಿಚಾರಣೆ ನಡೆಯುವಾಗ ಅದನ್ನು ಲೋಕಾಯುಕ್ತದ `ಸ್ಟ್ರಾಂಗ್‌–ರೂಂ~ನಲ್ಲಿ ಭದ್ರಪಡಿಸಿ ಇಡಲಾಗುತ್ತದೆ. ವಿಚಾರಣೆ ಮುಗಿದು ಆರೋಪ ಸಾಬೀತಾದರೆ ಆ ಹಣವನ್ನು ಸರ್ಕಾರ ಬಳಸಿಕೊಳ್ಳುತ್ತದೆ. ಆರೋಪ ಸಾಬೀತಾಗದೇ ಇದ್ದರೆ ಆ ಸಂಪತ್ತು ಮರಳಿ ಅವರಿಗೇ ನೀಡಲಾಗುತ್ತದೆ.

ನೀವು ಲೋಕಾಯುಕ್ತಕ್ಕೆ ರಾಜೀನಾಮೆ ಕೊಟ್ಟಿದ್ದು ಯಾಕೆ? ನಿಮಗೇನಾದರೂ ಲಂಚದ ಆಮಿಷವೊಡ್ಡಲಾಗಿತ್ತೇ?
-ನನಗೆ ಲೋಕಾಯುಕ್ತದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅನ್ನಿಸಿದಾಗ ರಾಜೀನಾಮೆ ನೀಡಿದ್ದೇ. ಆಗ ಸರ್ಕಾರ ನನ್ನ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಅದರಲ್ಲಿ ಶೇ. 10ರಷ್ಟು ಬೇಡಿಕೆಯನ್ನೂ ಸರ್ಕಾರ ಪೂರೈಸಿಲ್ಲ. ನನಗೆ  ಇದುವರೆಗೆ ಯಾರೂ ಲಂಚದ ಆಮಿಷವೊಡ್ಡುವ ಧೈರ್ಯ ಮಾಡಿಲ್ಲ.

 ನೀವು ಈ ರಾಜ್ಯದ ಮುಖ್ಯಮಂತ್ರಿ ಯಾಕೆ ಆಗಬಾರದು?
-ನನ್ನಲ್ಲಿ ಇನ್ನೂ ಸ್ವಲ್ಪ ಪ್ರಾಮಾಣಿಕತೆ ಉಳಿದುಕೊಂಡಿದೆ. ಹೀಗಾಗಿ ನಾನು ಆಗಲ್ಲ. ಅಷ್ಟಕ್ಕೂ ನಾನು ಯಾವ ರಾಜಕೀಯ ಪಕ್ಷವನ್ನೂ ನಂಬುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT