ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರ ನೇಮಕ: ಗೊಂದಲ ಇಲ್ಲ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕದಲ್ಲಿ ಲೋಕಾಯುಕ್ತರ ನೇಮಕ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಸರ್ಕಾರದೊಂದಿಗೆ ಸಂಘರ್ಷ ಕೂಡ ಇಲ್ಲ. ಮುಖ್ಯಮಂತ್ರಿಗಳ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಲೋಕಾಯುಕ್ತರ ನೇಮಕಕ್ಕೆ ಅರ್ಹರ ಹೆಸರನ್ನು ಶಿಫಾರಸು ಮಾಡಿದಲ್ಲಿ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬುಧವಾರ ಇಲ್ಲಿ ಪ್ರತಿಕ್ರಿಯಿಸಿದರು.

ಗುಜರಾತ್‌ನಲ್ಲಿ ರಾಜ್ಯಪಾಲರೇ ಲೋಕಾಯುಕ್ತರ ನೇಮಕ ಮಾಡಿರುವುದನ್ನು ಅಲ್ಲಿನ ಹೈಕೋರ್ಟ್ ಸಂವಿಧಾನ ಬದ್ಧವಾದುದು ಎಂದು ಎತ್ತಿ ಹಿಡಿದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ಲೋಕಾಯುಕ್ತರ ನೇಮಕ ವಿಚಾರದಲ್ಲಿ ಗುಜರಾತ್‌ನ ಪರಿಸ್ಥಿತಿ ವಿಭಿನ್ನ. ಕರ್ನಾಟಕದಲ್ಲಿ ಅಂತಹ ಯಾವುದೇ ಗೊಂದಲವಿಲ್ಲ. ಹೀಗಾಗಿ, ಅಲ್ಲಿಗೆ ಸೀಮಿತವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ಇಲ್ಲಿಗೆ ಅನ್ವಯಿಸಲು ಸಾಧ್ಯವಾಗದು~ ಎಂದು   ಅವರು ಹೇಳಿದರು.

ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರಿಗೆ ವಿಶ್ವ ಮಾನವ ಪ್ರಶಸ್ತಿ ಪ್ರದಾನ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಾಯುಕ್ತರ ನೇಮಕ ವಿಳಂಬದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಜನಪ್ರತಿನಿಧಿಗಳು ಆರೋಪಮುಕ್ತರಾಗುತ್ತಿದ್ದಾರೆ ಹಾಗೂ ಲೋಕಾಯುಕ್ತ ಸಂಸ್ಥೆ ಪರವಾಗಿ ಸಮರ್ಥವಾಗಿ ವಾದ ಮಂಡನೆಯಾಗುತ್ತಿಲ್ಲ ಎಂಬ ಆರೋಪದ ಬಗ್ಗೆ, `ಇದು ನನಗೆ ಸಂಬಂಧಿಸಿದ ವಿಚಾರವಲ್ಲ. ಬೇಕಾದಲ್ಲಿ ಸರ್ಕಾರ ಉತ್ತಮ ವಕೀಲರನ್ನು ನಿಯೋಜಿಸಿಕೊಳ್ಳಲಿ~ ಎಂದು ಸಲಹೆ ಮಾಡಿದರು.

`ಲೋಕಾಯುಕ್ತರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ನಾನು ಈಗಾಗಲೇ ಚರ್ಚೆ ನಡೆಸಿದ್ದೇನೆ. ಅರ್ಹರ ಹೆಸರನ್ನು ಶಿಫಾರಸು ಮಾಡಲು ಸ್ವಲ್ಪ ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಬಗ್ಗೆ ನನಗೆ ನಂಬಿಕೆಯಿದೆ. ಅವರಿಂದ ಮೊದಲು ಶಿಫಾರಸು ಬರಲಿ. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ~ ಎಂದು ಅವರು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT