ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಹೆಣ್ಣು ಭ್ರೂಣ ಹತ್ಯೆಗೆ ಕಾರಣ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಹೆಣ್ಣು ಭ್ರೂಣ ಹತ್ಯೆಯನ್ನು ಮಾಡಬಾರದೆಂದು ಕಾನೂನಿದ್ದರೂ ಸಹ ಅದರ ಪಾಲನೆಯಾಗುತ್ತಿಲ್ಲ. ಇದು ನೋವಿನ ಸಂಗತಿಯಾಗಿದೆ~ ಎಂದು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಹೇಳಿದರು.

ಮಹಿಳೆಯರಿಗಾಗಿ ಮಹಿಳಾ ವೇದಿಕೆಯು `ಸ್ತ್ರೀ ಭ್ರೂಣ ಹತ್ಯೆಯಲ್ಲಿ ಮಹಿಳೆಯರ ಪಾತ್ರ~ ಎಂಬ ವಿಷಯದ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಹೆಣ್ಣುಮಗು ಹುಟ್ಟಿದರೆ, ವರದಕ್ಷಿಣೆ ನೀಡಬೇಕು, ಮದುವೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕು. ನಾವು ಪೋಷಣೆ ಮಾಡಿ ಬೇರೆಯವರ ಮನೆಗೆ ಕಳುಹಿಸಬೇಕೇ, ಎಂಬ ಧೋರಣೆಯಿಂದ ಇಂದು ಹೆಣ್ಣುಭ್ರೂಣ ಹತ್ಯೆಯನ್ನು ಮಾಡಲಾಗುತ್ತಿದೆ~ ಎಂದರು.

`ಈ ರೀತಿ ಭ್ರೂಣ ಹತ್ಯೆಯಿಂದ ಸಮಾಜದಲ್ಲಿ ಮತ್ತು ಪ್ರಕೃತಿಯಲ್ಲಿ ಅಸಮತೋಲನ ಕಂಡುಬರುತ್ತದೆ. ಆಗಲೂ ಅನುಭವಿಸುವುದು ಹೆಣ್ಣುಮಕ್ಕಳೇ ಆಗಿದ್ದಾರೆ. ಈ ರೀತಿ ಉಂಟಾಗುವ ಪರಿಸ್ಥಿತಿಗೆ ಸಮಾಜವೇ ಹೊಣೆಯಾಗುತ್ತದೆ~ ಎಂದು ಹೇಳಿದರು.

`ವೈದ್ಯರು ಮತ್ತು ಆಸ್ಪತ್ರೆಗಳಲ್ಲಿ ಹೆಣ್ಣು ಅಥವಾ ಗಂಡು ಎಂಬುದನ್ನು ಪರೀಕ್ಷಿಸಿ ಹೇಳುವುದನ್ನು ಬಿಡಬೇಕು. ಹೆಣ್ಣು ಭ್ರೂಣ ಹತ್ಯೆಗೆ ಅಪ್ಪ-ಅಮ್ಮ, ವೈದ್ಯರು, ನರ್ಸ್‌ಗಳು, ಸಮಾಜ ಎಲ್ಲರೂ ಹೊಣೆಯಾಗುತ್ತಾರೆ~ ಎಂದರು.
ಸಾಹಿತಿ ಬಿ.ಟಿ.ಲಲಿತಾನಾಯಕ್ ಮಾತನಾಡಿ, `ಹೆಣ್ಣಿನ ಬಗ್ಗೆ ತಿರಸ್ಕಾರ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಈ ಶೋಷಣೆ, ತಿರಸ್ಕಾರ ನಡೆದುಕೊಂಡು ಬಂದಿದೆ. ಸಮಾಜದ ಬೆಳವಣಿಗೆಗೆ ಹೆಣ್ಣು-ಗಂಡು ಇಬ್ಬರೂ ಬೇಕು. ಆಗಲೇ ಸಮತೋಲನವಾಗಲು ಸಾಧ್ಯವಾಗುತ್ತದೆ~ ಎಂದರು.

`ಹೆಣ್ಣುಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆಗಿಂತ ಜ್ಞಾನ ಮತ್ತು ಅರಿವು ಹೆಚ್ಚಾಗಬೇಕು. ಆಗಲೇ ಅವರು, ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬಹುದು. ಅವರು ಶಿಕ್ಷಿತರಾಗಬೇಕು. ಆಗಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ~ ಎಂದರು.

ಕಾರ್ಯಕ್ರಮದಲ್ಲಿ ಅಂಕಣಕಾರರಾದ ಪ್ರೊ.ಬಿ.ನಾರಾಯಣಮ್ಮ, ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನಿವೃತ್ತ ನ್ಯಾಯಾಂಗ ಸದಸ್ಯೆ ಟಿ.ಎನ್. ಮಂಜುಳಾದೇವಿ, ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ಡಾ.ವಿ. ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT