ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಸಲ್ಲಿಸಲು ರಾಜ್ಯಪಾಲರ ಸೂಚನೆ

ಅಮಾನವೀಯತೆಗೆ ಕನ್ನಡಿಯಾದ ಸುರಂಗ ರಸ್ತೆ ಅಪಘಾತ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಭಾನುವಾರ ಸುರಂಗ ಮಾರ್ಗದಲ್ಲಿ ಇಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣ ಸಮಾಜದಲ್ಲಿನ ಅಮಾನವೀಯತೆಗೆ ಕನ್ನಡಿ ಹಿಡಿದಿರುವ ಬೆನ್ನಲ್ಲೇ, ಈ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

`ಈ ಅಪಘಾತದಲ್ಲಿ ಗಾಯಗೊಂಡಿದ್ದವರ ನೋವನ್ನು ಅದೇ ಹಾದಿಯಲ್ಲಿ ಹಾದು ಹೋಗುತ್ತಿದ್ದವರು ಲೆಕ್ಕಿಸದೇ ಹೋಗುತ್ತಿದ್ದುದನ್ನು ನೋಡಿ ತೀವ್ರ ದುಃಖವಾಗಿದೆ. ಒಂದು ಸಮಾಜ ಈ ರೀತಿ ನಡೆದುಕೊಂಡಿದ್ದನ್ನು ನೋಡಿ ಬೇಸರವೂ ಆಗಿದೆ' ಎಂದು ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದುರದೃಷ್ಟವಶಾತ್, ಇಂತಹ ಬಹುತೇಕ ಸಂದರ್ಭಗಳಲ್ಲಿ ಸರ್ಕಾರದ ಮೇಲೆ ಬೆಟ್ಟು ಮಾಡಲಾಗುತ್ತದೆ. ಈ ಸುರಂಗ ಮಾರ್ಗದ ಮೂಲಕ ವಾಹನ ಚಾಲನೆ ಸುರಕ್ಷಿತವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಸಮಾಜದಲ್ಲಿ ಮೂಲಭೂತ ಮೌಲ್ಯಗಳಾದ ಕಾಳಜಿ ಮತ್ತು ಅನುಕಂಪಗಳ ಬೇರೂರುವಂತೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೆ ಓಡಾಟಕ್ಕೆ ಮುಕ್ತವಾದ ಸುರಂಗ ರಸ್ತೆಯಲ್ಲಿ ಭಾನುವಾರ ಟ್ರಕ್ ಒಂದು ಬೈಕ್‌ಗೆ ಡಿಕ್ಕಿ ಹೊಡೆದು 26 ವರ್ಷದ ಗುಡ್ಡಿ ಮತ್ತು ಆಕೆಯ ಎಂಟು ತಿಂಗಳ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇದೇ ಅಪಘಾತದಲ್ಲಿ ಗಾಯಗೊಂಡ ಪತಿ 40 ನಿಮಿಷ ಕಾಲ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಆ ರಸ್ತೆಯಲ್ಲಿ ಹಾದುಹೋದ ಯಾವ ವಾಹನದವರೂ ನಿಲ್ಲಿಸಿರಲಿಲ್ಲ. ಇದರಿಂದಾಗಿ ಗಾಯಗೊಂಡವರಿಗೆ ಚಿಕಿತ್ಸೆ ಅಲಭ್ಯವಾಗಿತ್ತು.

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲೂ ಹೀಗೆಯೇ ಆಗಿತ್ತು. ಅತ್ಯಾಚಾರಕ್ಕೀಡಾದ ಯುವತಿ ಸಹಾಯಕ್ಕಾಗಿ ಕೂಗುತ್ತಿದ್ದರೂ ದಾರಿ ಹೋಕರು ಯಾರೂ ಮುಂದೆ ಹೋಗಿರಲಿಲ್ಲ ಎಂಬುದನ್ನು ಮಾರ್ಗರೇಶ್ ಆಳ್ವ ನೆನಪಿಸಿದ್ದಾರೆ.

`ನಮ್ಮ  ಸಮಾಜ ಏಕೆ ಇಷ್ಟೊಂದು ಸಂವೇದನಾ ರಹಿತವಾಗುತ್ತಿದೆ ಎಂಬ ಬಗ್ಗೆ ಪ್ರಜೆಗಳು, ನೀತಿ ನಿರೂಪಕರು, ಮಾಧ್ಯಮಗಳು, ಬುದ್ಧಿಜೀವಿಗಳು ಎಲ್ಲರೂ ಚಿಂತಿಸುವ ತುರ್ತು ಎದುರಾಗಿದೆ' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT