ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನ ಪತ್ರ ಕಡ್ಡಾಯಕ್ಕೆ ಸರ್ಕಾರ ಆದೇಶ

Last Updated 22 ಜುಲೈ 2012, 19:40 IST
ಅಕ್ಷರ ಗಾತ್ರ

ಯಲಹಂಕ: ನಕಲಿ ಪಡಿತರ ಚೀಟಿ ತಡೆಗಟ್ಟುವ ನೆಪದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಡವರ ಪಾಲಿಗೆ `ಪಡಿತರ ಚೀಟಿ~ ಪಡೆಯುವ ಹಾದಿಯನ್ನು ಗಗನಕುಸುಮವನ್ನಾಗಿಸಿದೆ.

ಪಡಿತರ ಚೀಟಿಗಾಗಿ ಈಗಾಗಲೇ ಎರಡು ಬಾರಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿ, ಸರತಿ ಸಾಲಿನಲ್ಲಿ ನಿಂತು ಕುಟುಂಬದ ಸಮಗ್ರ ಮಾಹಿತಿ ನೀಡಿದವರು ಈಗ  ಮತ್ತೊಮ್ಮೆ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಕಾಯಂ ಪಡಿತರ ಚೀಟಿಗಾಗಿ ಶಬರಿಯಂತೆ ಕಾಯುವಂತಾಗಿದೆ.

ಸುಮಾರು 10 ವರ್ಷಗಳಿಂದ ಇಲಾಖೆಯು ನಕಲಿ ಪಡಿತರ ಚೀಟಿ ಪತ್ತೆ ಹಾಗೂ ಬಿಪಿಎಲ್ ಕುಟುಂಬಗಳಿಗೆ ಕಾಯಂ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ನಡೆಸಿದ್ದರೂ ಇದುವರೆಗೂ ತಾತ್ಕಾಲಿಕ ಪಡಿತರ ಚೀಟಿ ವಿತರಿಸಿರುವುದನ್ನು ಬಿಟ್ಟರೆ ಕಾಯಂ ಪಡಿತರ ಚೀಟಿ ನೀಡಲು ಸಾಧ್ಯವಾಗಿಲ್ಲ.

ಪಡಿತರ ಚೀಟಿ ವಿತರಣೆ ಸಂಬಂಧ ಹೊರಗುತ್ತಿಗೆ ನೀಡಿ, `ಕೊಮ್ಯಾಟ್~ ಎಂಬ ಖಾಸಗಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದ ಇಲಾಖೆಯು, ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ತಾತ್ಕಾಲಿಕ ಪಡಿತರ ಚೀಟಿಗಳನ್ನು ಕಾಯಂ ಪಡಿತರ ಚೀಟಿಗಳನ್ನಾಗಿ ಮಾರ್ಪಡಿಸುವ ಸಂಬಂಧ ನಾಲ್ಕು ವರ್ಷಗಳ ಹಿಂದೆ 10 ರೂಪಾಯಿ ಪಡೆದು, ಕುಟುಂಬ ಸದಸ್ಯರನ್ನು ಸ್ಲೇಟ್ ಹಿಡಿಸಿ ಭಾವಚಿತ್ರ ತೆಗೆಸಲಾಯಿತು. ಅದಕ್ಕೆ ಇದುವರೆಗೂ ಯಾವುದೇ ರಸೀದಿ ಅಥವಾ ಆಧಾರವಿಲ್ಲ.

ಎರಡು ವರ್ಷದ ಹಿಂದೆ 45 ರೂಪಾಯಿ ಪಡೆದು ಮತ್ತೆ ಒಟ್ಟು ಕುಟುಂಬ ಸದಸ್ಯರ ಭಾವಚಿತ್ರ ತೆಗೆಸಿ, ರಸೀದಿ ನೀಡಲಾಯಿತು. ಅಲ್ಲದೆ, ಕೆಲವು ತಿಂಗಳ ಹಿಂದೆ ಮನೆಯ ವಿದ್ಯುಚ್ಛಕ್ತಿ ಬಿಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದರೂ ಯಾರಿಗೂ ಕಾಯಂ ಪಡಿತರ ಚೀಟಿ ವಿತರಣೆ ಮಾಡಿಲ್ಲ. `ಹಾಗಾದರೆ ಜನರು ಪಾವತಿಸಿದ ಹಣ ಏನಾಯಿತು?~ ಎಂಬುದು ಸಾರ್ವಜನಿಕರ ಪ್ರಶ್ನೆ.

ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯಲ್ಲಿ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಚೀಟಿ ಸೇರಿದಂತೆ ಒಟ್ಟು 1,55,280 ಪಡಿತರ ಚೀಟಿಗಳಿದ್ದು, 63,002 ಕಾರ್ಡುಗಳನ್ನು ವಜಾ ಮಾಡಲಾಗಿದೆ. ಈಗ ಹೊಸದಾಗಿ ಪಡಿತರ ಚೀಟಿ ಪಡೆಯಲು 1,70,810 ಅರ್ಜಿಗಳನ್ನು ನೋಂದಾಯಿಸಲಾಗಿದೆ.

`ನೆಮ್ಮದಿ~ ಕೇಂದ್ರಕ್ಕೆ ಮುಗಿಬೀಳುತ್ತಿರುವ ಸಾರ್ವಜನಿಕರು: `ನೆಮ್ಮದಿ~ ಕೇಂದ್ರದಲ್ಲಿ ಜಾತಿ ಪ್ರಮಾಣ ಪತ್ರ, ವರಮಾನ ಪತ್ರ ಮತ್ತಿತರ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿ, ಅಂತಿಮವಾಗಿ ಇಲ್ಲಿಯೇ ಆ ಪತ್ರಗಳನ್ನು ಪಡೆಯಲು ಅವಕಾಶವಿದೆ. ಅರ್ಜಿ ಸಲ್ಲಿಸಲು ದಿನಕ್ಕೆ 150 ಟೋಕನ್ ನೀಡಲಾಗುತ್ತಿದ್ದು, ಜನರು ಇದಕ್ಕಾಗಿ ಬೆಳಗಿನ ಜಾವ 4 ಗಂಟೆಯಿಂದಲೇ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಜಯನಗರ, ಬನಶಂಕರಿ, ಶಿವಾಜಿನಗರ, ಟ್ಯಾನರಿ ರಸ್ತೆ, ನಾಗವಾರ ಮತ್ತಿತರ ಪ್ರದೇಶಗಳಿಂದ ಸಾರ್ವಜನಿಕರು ಇಲ್ಲಿನ ನೆಮ್ಮದಿ ಕೇಂದ್ರಕ್ಕೆ ಆಗಮಿಸುತ್ತಿರುವುದರಿಂದ ಹೆಚ್ಚಿನ ಒತ್ತಡ ಉಂಟಾಗಿ ದಿನವೆಲ್ಲಾ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಹಾಲಿ ಇರುವ ಎರಡು ಕಂಪ್ಯೂಟರ್‌ಗಳಲ್ಲಿ ಕೆಲವೊಮ್ಮೆ ಒಂದು ಕಂಪ್ಯೂಟರ್ ಕೈಕೊಡುತ್ತಿದ್ದು, ಆಗ ಜನರ ಕಷ್ಟ ಹೇಳತೀರದು.

ಮಧ್ಯವರ್ತಿಗಳ ಕಾಟ: `ಆದಾಯ ಪ್ರಮಾಣ ಪತ್ರ ಪಡೆಯಲು ಬಡವ ಅರ್ಜಿ ಸಲ್ಲಿಸಲು ಹೋದರೆ ಮಧ್ಯವರ್ತಿಗಳು ಇದನ್ನೇ ದಂಧೆ ಮಾಡಿಕೊಂಡು ಆದಾಯ ಪ್ರಮಾಣ ಪತ್ರ ನೀಡುತ್ತಿರುವುದರಿಂದ ನಿಜವಾದ ಬಡವರಿಗೆ ತುಂಬಾ ಅನ್ಯಾಯವಾಗುತ್ತಿದೆ.

ಈ ಪತ್ರವನ್ನು ಪಡೆಯಲು 500 ರೂಪಾಯಿ ಖರ್ಚು ಬರುವುದರ ಜೊತೆಗೆ ವಾರಗಟ್ಟಲೆ ತಮ್ಮ ಕೆಲಸಗಳನ್ನು ಬಿಟ್ಟು ತಹಸೀಲ್ದಾರ್ ಕಚೇರಿ ಹಾಗೂ ನೆಮ್ಮದಿ ಕೇಂದ್ರಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ~  ಎಂದು ಜಕ್ಕೂರು ನಿವಾಸಿ ಸೀನಪ್ಪ ದೂರಿದರು.

`ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು ಆದಾಯ ಪ್ರಮಾಣ ಪತ್ರ ಪಡೆಯಲು ಬಾಡಿಗೆ ಕರಾರುಪತ್ರ ನೀಡಬೇಕಾಗಿದ್ದು, ಅದರಲ್ಲಿ ರೂ 2000 ಬಾಡಿಗೆ ನೀಡುತ್ತಿದ್ದರೆ, ವಾರ್ಷಿಕ 25 ಸಾವಿರ ಆದಾಯ ಎಂದು ಬರೆಯುತ್ತಾರೆ. ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ರೂ 17 ಸಾವಿರದೊಳಗೆ ಆದಾಯವಿರಬೇಕೆಂದು ಸರ್ಕಾರದ ಆದೇಶವಿದ್ದು, ಆ ಪ್ರಕಾರ ಯಾರಿಗೂ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಸರ್ಕಾರದ ಈ ಅವೈಜ್ಞಾನಿಕ ಕ್ರಮದಿಂದ ಸಾಕಷ್ಟು ಬಡ ಜನರಿಗೆ ತೊಂದರೆಯಾಗಲಿದೆ~ ಎಂದು ಜಿ.ಪಂ. ಮಾಜಿ ಅಧ್ಯಕ್ಷ ರವಿಕುಮಾರ್ ಹೇಳುತ್ತಾರೆ.

`ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಯ ಸಮನ್ವಯದ ಕೊರತೆಯಿಂದ ಉದ್ಭವಿಸಿರುವ ಸಮಸ್ಯೆಯಿಂದ ಬಡಜನರು ಗೊಂದಲದಲ್ಲಿ ಮುಳುಗಿ ದಿಕ್ಕು ತೋಚದಂತಾಗಿದ್ದಾರೆ. ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸು ಪಡೆದು, ಹೊಸದಾಗಿ ಪಡಿತರ ಚೀಟಿ ಪಡೆಯುವವರಿಗೆ ಮಾತ್ರ ಈ ಆದೇಶವನ್ನು ಜಾರಿಗೊಳಿಸಬೇಕು.
 
ಈ ಹಿಂದೆ ಭಾವಚಿತ್ರ ತೆಗೆಸಿ, ಹಳೆಯ ಕಾರ್ಡುಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಕಾಯಂ ಪಡಿತರಚೀಟಿ ವಿತರಿಸಬೇಕು. ತಪ್ಪಿದಲ್ಲಿ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು~ ಎಂದು ಎಚ್ಚರಿಕೆ ನೀಡಿದರು.

ಆಹಾರ ಶಿರಸ್ತೇದಾರ್ ಸ್ಪಷ್ಟನೆ..

ಈ ಬಗ್ಗೆ ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಆಹಾರ ಶಿರಸ್ತೇದಾರ್ ನಾಗಣ್ಣ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಈ ಹಿಂದೆ ನೆಮ್ಮದಿ ಕೇಂದ್ರದ ಮೂಲಕ ಹಲವು ಅನರ್ಹರು ತಾತ್ಕಾಲಿಕ ಪಡಿತರ ಚೀಟಿ ಪಡೆದಿದ್ದಾರೆ. ಇಂತಹ ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅರ್ಹ ಫಲಾನುಭವಿಗಳಿಗೆ ಕಾಯಂ ಬಿಪಿಲ್ ಕಾರ್ಡ್ ವಿತರಿಸುವ ಸಲುವಾಗಿ ಆದಾಯ ಪ್ರಮಾಣ ಪತ್ರ ನೀಡಲು ಸರ್ಕಾರ ಈ ಆದೇಶ ಹೊರಡಿಸಿದೆ~ ಎಂದು ಸ್ಪಷ್ಟಪಡಿಸಿದರು.
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT