ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚಸ್ಸು ಹೆಚ್ಚಿಸುವ ಕಸರತ್ತು

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ಸರ್ಕಾರದ ನಿಯಂತ್ರಣಕ್ಕೆ ಬಾರದ ಅವಶ್ಯ ವಸ್ತುಗಳ ಬೆಲೆ ಏರಿಕೆ, 2ಜಿ ತರಂಗಾಂತರ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಗಳಿಂದ ಕಳೆಗುಂದಿರುವ ಯುಪಿಎ ಸರ್ಕಾರಕ್ಕೆ ಹೊಸ ಹುರುಪು ನೀಡಲು ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಚಿವ ಸಂಪುಟದ ಪುನರ್‌ರಚನೆ ಮಾಡಿದ್ದಾರಾದರೂ, ನಿರೀಕ್ಷಿಸಿದ ಭಾರಿ ಬದಲಾವಣೆ ಏನೂ ಆಗಿಲ್ಲ. ಕಾಂಗ್ರೆಸ್ಸಿನ ಸಲ್ಮಾನ್ ಖುರ್ಷಿದ್, ಶ್ರೀಪ್ರಕಾಶ್ ಜೈಸ್ವಾಲ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಿದ್ದು, ಹಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಿರುವುದು ಈ ಬಾರಿಯ ಸಂಪುಟ ಪುನರ್‌ರಚನೆಯಲ್ಲಾಗಿರುವ ವಿಶೇಷ.

ಆದರೆ ಪ್ರಧಾನಿ ಅವರು ಯಾವ ಸಚಿವರನ್ನೂ ಕೈಬಿಡುವ ಧೈರ್ಯವನ್ನು ತೋರಿಲ್ಲ. 2ಜಿ ತರಂಗಾಂತರ ಹಂಚಿಕೆಯ ಹಗರಣದಿಂದ ರಾಜೀನಾಮೆ ಕೊಡಬೇಕಾಗಿ ಬಂದ ಎ.ರಾಜಾ ಸ್ಥಾನಕ್ಕೆ ಡಿಎಂಕೆಯು ಬೇರೊಬ್ಬರನ್ನು ನೇಮಿಸಲು ಮುಂದಾಗಿಲ್ಲ. ಇಡೀ ದೇಶದಲ್ಲಿ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿರುವ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲಗೊಂಡಿದ್ದಾರೆಂಬ ಟೀಕೆಗೆ ಗುರಿಯಾಗಿರುವ ಶರದ್ ಪವಾರ್ ಅವರಿಗೆ ಕೃಷಿ, ಆಹಾರ ಮತ್ತು ಆಹಾರ ಸಂಸ್ಕರಣ ಖಾತೆಗಳನ್ನು ಉಳಿಸಿ, ಗ್ರಾಹಕ ಹಿತರಕ್ಷಣೆ ಮತ್ತು ಪಡಿತರ ವ್ಯವಹಾರಗಳನ್ನು ಕಿತ್ತುಕೊಳ್ಳಲಾಗಿದೆ. ಇದರಿಂದ ಪ್ರಧಾನಿ ಅವರು ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವ ಯಾವ ಮಂತ್ರದಂಡವನ್ನು ಪ್ರಯೋಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

ಹಾಗೆಯೇ ಕಾಮನ್‌ವೆಲ್ತ್ ಕ್ರೀಡೆಯಲ್ಲಾಗಿರುವ ಭಾರಿ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಯುವಜನ ಮತ್ತು ಕ್ರೀಡಾ ಖಾತೆಯನ್ನು ಹೊಂದಿದ್ದ ಎಂ.ಎಸ್. ಗಿಲ್ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಅಂತೆಯೇ ಜೈಪಾಲ್ ರೆಡ್ಡಿ, ಮುರಳಿ ದೇವ್ರಾ, ಕಮಲ್‌ನಾಥ್, ವಿಲಾಸ್ ರಾವ್ ದೇಶ್‌ಮುಖ್ ಅವರ ಖಾತೆಗಳು ಬದಲಾಗಿವೆ. ಖಾತೆಗಳ ಬದಲಾವಣೆಯಲ್ಲಿ ಹೆಚ್ಚು ಸುದ್ದಿಯಾಗಿದ್ದ ಕಪಿಲ್ ಸಿಬಲ್ ಮತ್ತು ವೀರಪ್ಪ ಮೊಯಿಲಿ ಅವರನ್ನು ಕದಲಿಸಿಲ್ಲ.

ಮಂತ್ರಿಮಂಡಲದಲ್ಲಿ ಪ್ರಮುಖ ಖಾತೆಗಳಾದ ಹಣಕಾಸು, ಗೃಹ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾರನ್ನೂ ಪ್ರಧಾನಿ ಬದಲಿಸುವ ಸಾಹಸಕ್ಕೆ ಕೈಹಾಕಿಲ್ಲದಿರುವುದನ್ನು ಗಮನಿಸಿದರೆ ಈ ಹಿರಿಯ ಸಚಿವರ ಕಾರ್ಯದಕ್ಷತೆ ಅವರಿಗೆ ತೃಪ್ತಿ ತಂದಿದೆ ಎಂದೇ ಹೇಳಬೇಕಿದೆ. ಇದೇನೇ ಇದ್ದರೂ, ಸಚಿವ ಸಂಪುಟದ ಈ ಪುನರ್‌ರಚನೆ ತೇಪೆ ಹಾಕುವ ಕೆಲಸದಂತಿದೆ.

ಪ್ರಾಮಾಣಿಕತೆಗೆ ಹೆಸರಾಗಿರುವ ಮತ್ತು ಎರಡು ದಶಕಗಳ ಹಿಂದೆ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತಂದು ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ಪ್ರಧಾನಿ ಅವರ ಈಗಿನ ಸಂಪುಟದಲ್ಲಿ ಅಲ್ಪಸ್ವಲ್ಪ ಮಾಡಿರುವ ಬದಲಾವಣೆಯ ಕಸರತ್ತು ಎಷ್ಟರ ಮಟ್ಟಿಗೆ ಫಲನೀಡುತ್ತದೆ ಎನ್ನುವುದನ್ನು ಈಗಲೇ ಹೇಳಲು ಆಗದು. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಿಂದ ಮುಕ್ಕಾಗಿರುವ ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಲು ಈ ಪುನರ್‌ರಚನೆ  ಉತ್ತರವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT