ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ಸಮಸ್ಯೆಯೇ ಭವಿಷ್ಯದ ಸವಾಲು

Last Updated 5 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ಬೆಂಗಳೂರು: ವರ್ತಮಾನದ ಸಮಸ್ಯೆಗಳೇ ಭವಿಷ್ಯದ ಸವಾಲುಗಳೂ ಹೌದು ಎಂಬ ವಿಷಯ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ನಡೆದ ‘ಬೆಂಗಳೂರು- ಅಂದು ಇಂದು ಮುಂದು’ ಕುರಿತ ಗೋಷ್ಠಿಯಲ್ಲಿ ವ್ಯಕ್ತವಾಯಿತು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಮ್ಮ ಆಶಯ ಭಾಷಣದಲ್ಲಿ, ವೃತ್ತಿ ನೆಚ್ಚಿಕೊಂಡು ಬೆಂಗಳೂರಿನಲ್ಲಿ ಹುಟ್ಟಿದ ಪೇಟೆಗಳ, ಅಲ್ಲಿ ಕೆಲಸ ಮಾಡಿದ ದೊಡ್ಡಣ್ಣನವರಂಥ ದಾನಶೂರರ ಕಥೆಗಳನ್ನು ನೆನಪಿಸಿಕೊಂಡರು. ಆಮೇಲಿನ ಕೈಗಾರೀಕರಣ, ಜಾಗತೀಕರಣದಿಂದಾದ ಬದಲಾವಣೆಗಳನ್ನು ಸ್ಪಷ್ಟಪಡಿಸಲೂ ಅವರು ಬಳಸಿದ್ದು ಉಪಕಥೆಗಳನ್ನೇ.‘ತೋಟಗಳ ನಗರದಲ್ಲಿ ನಾವೀಗ ಮೂಗು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ’ ಎಂಬ ಆತಂಕ ಹೇಳಿಕೊಂಡ ಅವರು, ಬೆಂಗಳೂರು ಸರ್ವೋದಯ ನಗರವಾಗಲಿ ಎಂದು ಆಶಿಸಿದರು.

‘ನಗರದ ನಾಯಕ ಮೇಯರ್‌ಗೆ ಅಧಿಕಾರವೇ ಇಲ್ಲ. ಆಡಳಿತಾತ್ಮಕವಾಗಿ ಬೆಂಗಳೂರು ಸುಧಾರಣೆ ಆಗಬೇಕಾದರೆ ಜನರಿಂದ ನೇರವಾಗಿ ಮೇಯರ್ ಆಯ್ಕೆಯಾಗುವಂಥ ಸಾಧ್ಯತೆ ಸೃಷ್ಟಿಯಾಗಿ, ಅವರು ಕನಿಷ್ಠ ಐದು ವರ್ಷ ಅಧಿಕಾರ ನಡೆಸಬೇಕು. ಎಂಟು ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಮೆಟ್ರೋ ವ್ಯಾಪ್ತಿಯ ಅಭಿವೃದ್ಧಿ ವ್ಯವಸ್ಥಿತವಾಗಿ ಆಗಬೇಕಾದರೆ ಪೂರ್ವ ಯೋಜನಾ ಸ್ಪಷ್ಟತೆ ತರುವ ಸಾಂಘಿಕ ಯತ್ನ ಅಗತ್ಯ’- ಇದು ‘ನಾಳಿನ ಬೆಂಗಳೂರು’ ಎಂಬ ವಿಷಯವಾಗಿ ಮಾತನಾಡಿದ ಮುಖ್ಯಮಂತ್ರಿಗಳ ಸಲಹೆಗಾರ ಎ.ರವೀಂದ್ರ ಅವರ ದೂರದೃಷ್ಟಿಯ ಚಿಂತನೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಮಂಡಿಸಿದ ‘ವರ್ತಮಾನದ ಸವಾಲುಗಳು’ ಎಂಬ ವಿಷಯ ಕುರಿತ ಭಾಷಣಕ್ಕೂ ರವೀಂದ್ರ ಮಂಡಿಸಿದ ವಿಚಾರಗಳಿಗೂ ಸಾಕಷ್ಟು ಸಾಮ್ಯತೆ ಇತ್ತು. ಇಬ್ಬರೂ ಸಮಸ್ಯೆಗಳೇ ಸವಾಲುಗಳೂ ಹೌದು ಎಂಬುದನ್ನು ಕೇಂದ್ರವಾಗಿಸಿಕೊಂಡೇ ಮಾತನಾಡಿದ್ದು.

‘ಬೆಂಗಳೂರಿನಲ್ಲಿ 700 ಬಹುರಾಷ್ಟ್ರೀಯ ಕಂಪೆನಿಗಳಿವೆ. 40 ಲಕ್ಷ ವಾಹನಗಳು ರಸ್ತೆ ಮೇಲಿವೆ. ನಿತ್ಯ 1000ಕ್ಕೂ ಹೆಚ್ಚು ಹೊಸ ವಾಹನಗಳು ಹೊಸದಾಗಿ ಸೇರುತ್ತಿವೆ. ಆದರೆ, ಮೂಲ ಸೌಕರ್ಯ ತಕ್ಕಂತೆ ಇಲ್ಲ. 278ರಲ್ಲಿ ಉಳಿದಿರುವುದು 127 ಕೆರೆಗಳು ಮಾತ್ರ. ನೀರಿನ ಕೊರತೆ ನೀಗಿಸಲು ಬಳಸಿದ ನೀರನ್ನೇ ಸಂಸ್ಕರಿಸುವ ಪದ್ಧತಿ ಈಗಿರುವ ಶೇ 50ರಷ್ಟಕ್ಕಿಂತ ಹೆಚ್ಚಬೇಕು.ನಾಲ್ಕು ಲಕ್ಷ ಜನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ನಗರಿಯಲ್ಲಿ ವಸತಿ ಸಮಸ್ಯೆಯೂ ಎದ್ದುಕಾಣುತ್ತಿದೆ.ಸಂಚಾರದ ಮಟ್ಟಿಗೆ ಮೆಟ್ರೋ ಒಂದೇ ಆಶಾಕಿರಣ’ ಎಂದು ಬಳಿಗಾರ್ ಅಂಕಿಅಂಶಗಳಿಂದ ವರ್ತಮಾನದ ಸಮಸ್ಯೆಗಳನ್ನು ಬಣ್ಣಿಸಲೆತ್ನಿಸಿದರು.

ರವೀಂದ್ರ ಅವರು ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಸಿಂಗಪುರದಲ್ಲಿ ಬಳಕೆಯ ಅರ್ಧದಷ್ಟು ಕುಡಿಯುವ ನೀರು ಚರಂಡಿ ನೀರಿನ ಸಂಸ್ಕರಣೆಯಿಂದ ಬರುತ್ತಿದೆ ಎಂಬ ಅಂಶವನ್ನು ಅವರು ಉದಾಹರಣೆಯಾಗಿ ಕೊಟ್ಟರು. ‘ಬೇರೆ ಸಂಸ್ಕೃತಿಯ ಗಾಳಿಗೆ ಹಾರಿಹೋಗದಿರಲಿ ನಮ್ಮ ಮನೆಯ ಮಾಳಿಗೆ’ ಎಂಬ ಸಾಲು ಹೇಳುವ ಮೂಲಕ ಬಹುಸಂಸ್ಕೃತಿಯಿಂದ ಕನ್ನಡಕ್ಕೆ ಇರುವ ಆತಂಕದ ಎಳೆಯನ್ನು ಬಿಚ್ಚಿಟ್ಟ ಬಳಿಗಾರ್, ‘ನನ್ನ ಕನಸಿನ ಬೆಂಗಳೂರು’ ಎಂಬ ಕವನ ಓದುವ ಮೂಲಕ ಭಾಷಣಕ್ಕೆ ಭಾವುಕ ಚೌಕಟ್ಟು ಹಾಕಿದರು.

‘2030ರ ಹೊತ್ತಿಗೆ ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಮೀರುವ ಅಂದಾಜಿದೆ. ಜನ ಸಾರ್ವಜನಿಕ ವಾಹನಗಳನ್ನು ಮಾತ್ರ ಬಳಸಬೇಕು. ನಿವೇಶನಗಳ ಹಂಚಿಕೆ ನಿಲ್ಲಿಸಿ, ಸಮೂಹ ಗೃಹ ವ್ಯವಸ್ಥೆಯನ್ನು ವ್ಯಾಪಕವಾಗಿ ಜಾರಿಗೆ ತರುವಂತೆ ಬಿಡಿಎಗೆ ಈಗಾಗಲೇ ಸಲಹೆ ಕೊಟ್ಟಿದ್ದೇನೆ. 60-70 ಸಾವಿರ ಕೋಟಿ ರೂಪಾಯಿಯಷ್ಟು ಹಣ ನಗರದ ಅಭಿವೃದ್ಧಿ ಯೋಜನೆಗಳಿಗೆ ಬೇಕು. ಮುಂದೆ ಹೊಸ ಉದ್ಯೋಗ, ಹೊಸ ಅವಕಾಶಗಳು ಸೃಷ್ಟಿಯಾದರೂ ಬೇರೆ ದೇಶಗಳ ಪ್ರಮುಖ ನಗರಗಳ ಜೊತೆ ನಮ್ಮ ನಗರ ಸ್ಪರ್ಧೆಯನ್ನೂ ಎದುರಿಸಬೇಕಾದೀತು’ ಎಂದು ನಾಳಿನ ಬೆಂಗಳೂರನ್ನು ರವೀಂದ್ರ ಚಿತ್ರಿಸಿದರು.

‘ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್’ನ ಉಪ ನಿರ್ದೇಶಕ ಡಾ.ಎಸ್.ಕೆ.ಅರುಣಿ ಬೆಂಗಳೂರು ಸಂಸ್ಕೃತಿಯ ಬದಲಾವಣೆಗೆ ಕಾರಣವಾದ ಕಾಳಗ, ಯುದ್ಧಗಳ ಮಾಹಿತಿ ಕೊಟ್ಟರು. ಕ್ರಿ.ಶ.898ರ ಗಂಗರು-ನೊಳಂಬರ ನಡುವಿನ ಕಾಳಗದಿಂದ ಶೈವ, ವೈಷ್ಣವ ಧರ್ಮ ನಗರದಲ್ಲಿ ವ್ಯಾಪಕವಾದದ್ದು, 1638ರಲ್ಲ ಬಿಜಾಪುರ ಸುಲ್ತಾನರು ಇಟ್ಟ ದಾಳಿಯಿಂದ ಮುಸ್ಲಿಂ ಧರ್ಮ ಸೂಫಿ ಸಂಸ್ಕೃತಿಯ ಪ್ರಚಾರಕ್ಕೆ ಇಂಬು ಸಿಕ್ಕಿದ್ದು, 1791ರಲ್ಲಿ ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಬ್ರಿಟಿಷರು ಬೆಂಗಳೂರಿನ ಆಕ್ರಮಣಕ್ಕೆ ಯತ್ನಿಸಿದ್ದನ್ನು ಅವರು ಬಣ್ಣಿಸಿದರು. ಎರಡು ಸಾವಿರಕ್ಕೂ ಹೆಚ್ಚು ಜನ ಪ್ರಾಣತ್ಯಾಗ ಮಾಡಿದ್ದನ್ನೂ ಸ್ಮರಿಸಿದರು.

ಅಧ್ಯಕ್ಷ ಭಾಷಣ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ‘ಕನ್ನಡ ಭಾಷೆಯಲ್ಲಿ ಕೆಲಸ ಸಿಗುತ್ತದೆ ಎಂಬ ವಿಶ್ವಾಸ ಮೂಡಿಸಬೇಕು. ಕನ್ನಡ ಶಾಲೆಗಳನ್ನು ಸರ್ಕಾರ ಸುಧಾರಿಸಬೇಕು. ಭ್ರಷ್ಟಾಚಾರದ ಹೊಣೆಯನ್ನು ನಾವು ನಾಗರಿಕರೇ ಹೊರಬೇಕು’ ಎಂಬ ಕಿವಿಮಾತುಗಳನ್ನು ಹೇಳಿದರು. ಪ್ರಾಥಮಿಕ ಶಿಕ್ಷಣದ ಖಾಸಗೀಕರಣ ಮಾಡುವ ಮನೋಭಾವ ಕಾಣುತ್ತಿದೆ ಎಂಬ ಆತಂಕವೂ ಅವರ ಮಾತಿನಲ್ಲಿ ಸೇರಿತ್ತು. ‘ಬೆಂಗಳೂರನ್ನು ಜನ ಅಮರಾವತಿ ಅಂದುಕೊಂಡಿದ್ದಾರೆ. ಆದರೆ, ಇದು ಮಾಯಾನಗರಿ’ ಎಂಬುದು ನಗರ ಕುರಿತು ಅವರು ಮಾಡಿದ ಒಂದು ಸಾಲಿನ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT