ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ ದೆಹಲಿಯಲ್ಲಿ ಸಂಶೋಧನಾ ಸಂಸ್ಥೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ~ಉಡುಪಿ ಪೇಜಾವರ ಮಠದಿಂದ ದೆಹಲಿಯಲ್ಲಿ ಹಿಂದೂ ಧರ್ಮ, ವೇದಾಂತ ಮತ್ತು ಗೀತೆಯ ಸಂಶೋಧನಾ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ~ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿರುವ ಶ್ರೀಕೃಷ್ಣ ಮಂದಿರದಲ್ಲಿ ಕೃಷ್ಣನ ಮೂರ್ತಿಗೆ ರಜತ ಕವಚ ಸಮರ್ಪಿಸಿ ಹಾಗೂ ಉಚಿತ ಪ್ರಸಾದ ನಿಲಯದ ಆವರಣದಲ್ಲಿ ನಿರ್ಮಿಸಿರುವ ವಾದಿರಾಜ ಸಭಾಭವನ ಉದ್ಘಾಟಿಸಿ ಮಾತನಾಡಿದರು.

`ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಂಶೋಧನಾ ಸಂಸ್ಥೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿ ಸಂಶೋಧನೆಯ ಜೊತೆಗೆ ಹಿಂದೂ ಧರ್ಮ ಪ್ರಚಾರ ಕಾರ್ಯವೂ ನಡೆಯಲಿದೆ~ ಎಂದರು.

`ಅನಾಥ, ದಲಿತ ಮತ್ತು ಬಡ ಮಕ್ಕಳಿಗಾಗಿ ರಾಜ್ಯದ 4 ಕಡೆಗಳಲ್ಲಿ ವಸತಿ ನಿಲಯ ಆರಂಭಿಸಲಾಗುತ್ತಿದೆ. ಮೈಸೂರಿನಲ್ಲಿ ಬಾಲಕರ ಹಾಗೂ ಉಡುಪಿಯಲ್ಲಿ  ಬಾಲಕಿಯರ ವಸತಿ ನಿಲಯ ಆರಂಭಿಸಲಾಗಿದೆ. ಉಡುಪಿಯಲ್ಲಿ 250 ಬಾಲಕಿಯರು ಪ್ರವೇಶ ಪಡೆದಿದ್ದಾರೆ. ಮುಂದಿನ ವರ್ಷ ಧಾರವಾಡದಲ್ಲಿಯೂ ಬಾಲಕರ ವಸತಿ ನಿಲಯ ಆರಂಭಿಸಲಾಗುವುದು~ ಎಂದರು.

`ಹುಬ್ಬಳ್ಳಿಯಲ್ಲಿ ವಸತಿ ಸಹಿತ ಪದವಿ ಪೂರ್ವ ಕಾಲೇಜು ಆರಂಭಿಸ ಲಾಗುತ್ತಿದ್ದು, ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಿಸಲಾಗಿದೆ. ಈ ವರ್ಷ ಒಂದು ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುವುದು~ ಎಂದು ಹೇಳಿದರು.

~ಬೆಂಗಳೂರಿನಲ್ಲಿ ಈಗಾಗಲೇ ಒಂದು ಆಸ್ಪತ್ರೆ ಇದ್ದು, 200 ಹಾಸಿಗೆಗಳ ಮತ್ತೊಂದು ಸುಸಜ್ಜಿತ ಆಸ್ಪತ್ರೆ ಆರಂಭಿಸಲು ಉದ್ದೇಶಿಸಲಾಗಿದೆ. ವೈದ್ಯಕೀಯ ಕಾಲೇಜು ಆರಂಭಿಸಿದರೂ ಬಡ ಮಕ್ಕಳಿಗೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ನಾವು ವೈದ್ಯಕೀಯ ಕಾಲೇಜು ಆರಂಭಿಸುವುದಿಲ್ಲ~ ಎಂದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ಅಪ್ಪು ಪಟ್ಟಣಶೆಟ್ಟಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಶ್ರೀಕೃಷ್ಣ ಅರ್ಚಕ ವಾಸುದೇವ, ಪ್ರಮುಖರಾದ ಗೋಪಾಲ ನಾಯಕ, ಡಾ.ಉಪೇಂದ್ರ ನರಸಾಪುರ, ಆರ್.ಬಿ. ಕುಲಕರ್ಣಿ, ಶ್ರೀನಿವಾಸ ಬೆಟಗೇರಿ, ಶ್ರೀಹರಿ ಗೊಳಸಂಗಿ, ಪ್ರಕಾಶ ಅಕ್ಕಲಕೋಟೆ, ಶ್ರೀಕೃಷ್ಣ ಪಡಗಾನೂರ ಇತರಿದ್ದರು.

ದಾನಿ ಮಹಿಳೆ ನೀರಾ ರಾಡಿಯಾ

ಬೆಂಗಳೂರು ವರದಿ: `ಗುಲ್ಬರ್ಗ ಜಿಲ್ಲೆಯ ಕೂಡಿ- ಕೋಬಾಳ ಗ್ರಾಮದಲ್ಲಿ ಪೇಜಾವರ ಮಠದ ವತಿಯಿಂದ ನೆರೆ ಸಂತ್ರಸ್ತರಿಗೆ ಆಸರೆ ಮನೆ ಹಸ್ತಾಂತರ ಸಂದರ್ಭದಲ್ಲಿ ಸನ್ಮಾನಿಸಲಾದ ಮಹಿಳಾ ಉದ್ಯಮಿಯ ಹೆಸರು ನೀರಾ ರಾಡಿಯಾ~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, `ಇದರಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ~ ಎಂದು ಹೇಳಿದ್ದಾರೆ.

`ರಾಡಿಯಾ ಅವರು ನಮ್ಮ ವಿಶೇಷ ಅಭಿಮಾನಿಗಳೂ ಉದಾರ ದಾನಿಗಳೂ ಆಗಿದ್ದಾರೆ. ಈ ಯೋಜನೆಗೂ ಅವರು ಸಹಾಯ ಮಾಡಿರುತ್ತಾರೆ~ ಎಂದು ಅವರು ತಿಳಿಸಿದ್ದಾರೆ.

`ಯಾವುದೇ ಹಗರಣದಲ್ಲಿ ರಾಡಿಯಾ ಆರೋಪಿ ಆಗಿಲ್ಲ. ನಮ್ಮ ಆಹ್ವಾನದಂತೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಪಡೆದಿದ್ದಾರೆ~ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT