ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚನಾಭಿರುಚಿ ಬೆಳೆಸಲು ಕುಂವೀ ಸಲಹೆ

Last Updated 2 ಅಕ್ಟೋಬರ್ 2011, 14:25 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ದೃಷ್ಟಿಯಿಂದ ಶಾಲಾ-ಕಾಲೇಜು ಹಂತದಲ್ಲಿ ವಾಚನಾಭಿರುಚಿ ಕಮ್ಮಟಗಳನ್ನು ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಸಲಹೆ ನೀಡಿದರು.


ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ, 2011-12ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ ಹಾಗೂ `ದವನ ಸಿರಿ~ ಕಾಲೇಜು ವಾರ್ಷಿಕ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ವಿಸ್ಮಯ ಮೂಡಿಸುವ, ಕುತೂಹಲ ಕೆರಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಕಮ್ಮಟಗಳಲ್ಲಿ ಭಾಷೆಯ ಬಗ್ಗೆ, ಕೃತಿಗಳ ವಾಸ್ತು-ವಿನ್ಯಾಸದ ಕುರಿತು ಚರ್ಚೆಗಳಾಗಬೇಕು. ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ ಮುಂತಾದ ಸಾಹಿತಿಗಳ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರ ಪ್ರತಿ ಸರ್ಕಾರಿ ಕಾಲೇಜುಗಳಲ್ಲಿ ರಂಗಮಂದಿರ ನಿರ್ಮಿಸಬೇಕು. ಅಲ್ಲಿ ಮಕ್ಕಳಿಗೆ ನಾಟಕ ಕಲಿಸುವ ಕೆಲಸ ನಡೆಯಬೇಕು. ಕಾಲೇಜು ಹಂತದಲ್ಲಿ ಕನ್ನಡ ವಿಭಾಗಗಳನ್ನು ಸಶಕ್ತಗೊಳಿಸಬೇಕು. ಕನ್ನಡ ಬಲ್ಲವರೇ ಪ್ರಾಂಶುಪಾಲರಾಗಬೇಕು. ವಿವಿ ಕುಲಪತಿಗಳು ವಿಜ್ಞಾನ ಮತ್ತಿತರ ವಿಷಯದ ಹಿನ್ನೆಲೆಯಿಂದ ಬಂದವರೇ ಬಹಳಷ್ಟಿದ್ದಾರೆ. ಭಾಷೆಯಿಂದ ವಿಮುಖವಾಗುವ ವಾತಾವರಣವೇ ಕಂಡುಬರುತ್ತಿದ್ದು ಇದು ಒಳ್ಳೆಯ ಲಕ್ಷಣವಲ್ಲ ಎಂದು ಪ್ರತಿಪಾದಿಸಿದರು.

ಆಧುನಿಕ ಶಿಕ್ಷಣ ವ್ಯವಸ್ಥೆ ದೋಷಪೂರಿತವಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಹಾಡುವ, ಕುಣಿಯುವ ವಾತಾವರಣ ಇಲ್ಲ. ಅವರಿಗೆ ನಗುವ ಸ್ವಾತಂತ್ರ್ಯವೂ ಇಲ್ಲ. ಆಡುವ ವಯಸ್ಸಿನಲ್ಲಿ ಪುಟ್ಟ ಮಕ್ಕಳಿಗೆ ಭಾರವಾದ ಪುಸ್ತಕ ಚೀಲಗಳನ್ನು ಹೊರೆಸಲಾಗುತ್ತಿದ್ದು, ಅವರಿಗೂ ಬಸ್‌ನಿಲ್ದಾಣದ ಹಮಾಲಿಗಳಿಗೂ ವ್ಯತ್ಯಾಸವಿಲ್ಲದಂತಹ ವಾತಾವರಣವಿದೆ ಎಂದು ವಿಷಾದಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ.ಡಿ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಹರಿಹರದ ಎಸ್‌ಜೆವಿಪಿ ಕಾಲೇಜು ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಸಿ.ವಿ. ಪಾಟೀಲ್ ಅವರು `ದವನ ಸಿರಿ~ ಸಂಚಿಕೆ ಬಿಡುಗಡೆ ಮಾಡಿದರು. ಕನ್ನಡ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಸಂಪಾದಕರ ನುಡಿಗಳನ್ನಾಡಿದರು.

ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕ ಪ್ರೊ.ಎಚ್. ವಿರೂಪಾಕ್ಷಪ್ಪ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಬಿ.ಬಿ. ಸುಣಗಾರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಟಿ. ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.

ಕುಂವೀ ಹುಟ್ಟುಹಬ್ಬ: ಸಾಹಿತಿ ಕುಂವೀ ಅವರು ಶನಿವಾರ ವಿದ್ಯಾರ್ಥಿಗಳ ಮಧ್ಯೆಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ, 2011-12ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ ಹಾಗೂ `ದವನ ಸಿರಿ~ ಕಾಲೇಜು ವಾರ್ಷಿಕ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿಯೇ ಅವರು ಜನ್ಮದಿನ ಆಚರಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಎದ್ದುನಿಂತು ಕರತಾಡನದ ಮೂಲಕ ಕುಂವೀ ಅವರಿಗೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT