ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ ಮಷಿನ್ ರಿಪೇರಿ ಮಾಡಲು ವಿಫಲ- ದಂಡ

Last Updated 12 ಜೂನ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ಮೇಲಿಂದ ಮೇಲೆ ಕೈಕೊಡುತ್ತಿದ್ದ ವಾಷಿಂಗ್ ಮಷಿನ್  ಅನ್ನು ರಿಪೇರಿ ಮಾಡುವಂತೆ ಗ್ರಾಹಕರೊಬ್ಬರು ಹಲವು ಬಾರಿ ಮಾಡಿಕೊಂಡ ಮನವಿಗಳಿಗೆ ಸ್ಪಂದಿಸದ ಮಲ್ಲೇಶ್ವರದ ಬಳಿಯ ಬಿಪಿಎಲ್  ಗ್ರಾಹಕರ  ಸೇವಾ ಕೇಂದ್ರಕ್ಕೆ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಇದರ ವಿರುದ್ಧ ಬೆನ್ಸನ್‌ಟೌನ್ ನಿವಾಸಿ ವಿ.ಶಕೀರಾ ಎನ್ನುವವರು ದೂರು ದಾಖಲಿಸಿದ್ದರು. ಶಕೀರಾ ಅವರು 2010ರ ಡಿಸೆಂಬರ್ ತಿಂಗಳಿನಲ್ಲಿ ಬಿಪಿಎಲ್ ಮಳಿಗೆಯಿಂದ ಮಷಿನ್ ಒಂದನ್ನು ಖರೀದಿ ಮಾಡಿದ್ದರು.
ಮಷಿನ್‌ನಲ್ಲಿ ಬಟ್ಟೆ ಒಣಗಿಸುವ ವೇಳೆ ಶಬ್ದ ಬರಲು ಆರಂಭಿಸಿದ ಹಿನ್ನೆಲೆಯಲ್ಲಿ ಮೊದಲ ಬಾರಿ ಸೇವಾ ಕೇಂದ್ರದ ಸಿಬ್ಬಂದಿ ಅದನ್ನು ರಿಪೇರಿ ಮಾಡಿದರು.

ಆದರೆ ಪುನಃ ಅದೇ ರೀತಿ ತೊಂದರೆ ಉಂಟಾಯಿತು. ಆದರೆ ಕೇಂದ್ರಕ್ಕೆ ಎಷ್ಟೇ ಕರೆ ಮಾಡಿದರೂ ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ಅರ್ಜಿದಾರರು ವೇದಿಕೆ ಮೊರೆ ಹೋದರು.

ಕೇಂದ್ರವು ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಧ್ಯಕ್ಷ ಟಿ.ಚಂದ್ರಶೇಖರಯ್ಯ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿದೆ.

ಈ ಹಿನ್ನೆಲೆಯಲ್ಲಿ ವಾಷಿಂಗ್ ಮಷಿನ್ ಅನ್ನು ಉಚಿತವಾಗಿ ರಿಪೇರಿ ಮಾಡಿಕೊಡುವಂತೆ, ಇಲ್ಲದೇ ಹೋದರೆ ಅರ್ಜಿದಾರರು ನೀಡಿರುವ ರಿಪೇರಿ ಹಣವನ್ನು ಅವರಿಗೆ ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ.
ಇದರ ಜೊತೆಗೆ ಅರ್ಜಿದಾರರಿಗೆ 2 ಸಾವಿರ ರೂಪಾಯಿಗಳ ನ್ಯಾಯಾಲಯದ ವೆಚ್ಚ ನೀಡುವಂತೆ ಆದೇಶಿಸಲಾಗಿದೆ.

ನಿವೇಶನ ನೀಡದೆ ವಂಚನೆ
ನಿವೇಶನಕ್ಕಾಗಿ ಕಾದು ಮೋಸ ಹೋದ ಅರ್ಜಿದಾರರೊಬ್ಬ ರು ನೀಡಿರುವ ಸಂಪೂರ್ಣ ಹಣವನ್ನು ಅವರಿಗೆ ವಾಪಸು ಮಾಡುವಂತೆ ವೈಯಾಲಿಕಾವಲ್ ಗೃಹ ನಿರ್ಮಾಣ ಸಂಘಕ್ಕೆ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಸಂಘದ ವಿರುದ್ಧ ಬಸವನಗುಡಿಯ ಕಲಾ ನರಸಿಂಹನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವೇದಿಕೆ ಅಧ್ಯಕ್ಷ ಎಸ್.ಎಸ್.ನಾಗರಾಳೆ ನೇತೃತ್ವದ ಪೀಠ ನಡೆಸಿತು.

ನಿವೇಶನ ನೀಡುವುದಾಗಿ ಕಲಾ ಅವರಿಂದ ಸಂಘವು 1983ರಿಂದ 1993ರ ಅವಧಿಯವರೆಗೆ 1.10 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿತ್ತು. ಹಣ ಸಂದಾಯವಾದ ಕೂಡಲೆ ನಿವೇಶನ ನೀಡುವುದಾಗಿ ವಾಗ್ದಾನ ಮಾಡಲಾಗಿತ್ತು. ಆದರೆ ಸಂಘಕ್ಕೆ ಎಷ್ಟೇ ಕೋರಿಕೊಂಡರೂ ಅರ್ಜಿದಾರರಿಗೆ ನಿವೇಶನ ದೊರಕಲಿಲ್ಲ.

ಇದರಿಂದ ಬೇಸತ್ತ ಅರ್ಜಿದಾರರು ವೇದಿಕೆ ಮೊರೆ ಹೋದರು. ಅರ್ಜಿದಾರರು ಹಣ ನೀಡಿರುವ ದಿನದಿಂದ ಅನ್ವಯ ಆಗುವಂತೆ ಶೇ 9ರ ಬಡ್ಡಿದರದಲ್ಲಿ ಸಂಪೂರ್ಣ ಹಣವನ್ನು ನ್ಯಾಯಾಲಯದ ವೆಚ್ಚ 1ಸಾವಿರ ರೂಪಾಯಿಗಳ ಜೊತೆಗೆ 60 ದಿನಗಳಲ್ಲಿ ನೀಡುವಂತೆ ವೇದಿಕೆ ಆದೇಶಿಸಿದೆ.

`ಕ್ಲಬ್~ ವಿರುದ್ಧ ಹೆಚ್ಚುತ್ತಿರುವ ಅರ್ಜಿ
ನಿವೇಶನ ನೀಡುವುದಾಗಿ ವಂಚಿಸಿರುವ ನಗರದ ಕಂಟ್ರಿ ಕ್ಲಬ್ ವಿರುದ್ಧ ಗ್ರಾಹಕರ ವೇದಿಕೆ ಮೊರೆ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ನಿವೇಶನ ನೀಡುವ ಹೆಸರಿನಲ್ಲಿ ವಿವಿಧ ಹೆಸರುಗಳ ಯೋಜನೆಗಳನ್ನು ರೂಪಿಸುವ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಈ ಕ್ಲಬ್ ವಿರುದ್ಧ 2,3 ಹಾಗೂ 4ನೇ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಕಳೆದ ಒಂದು ವಾರದಲ್ಲಿ 25ಕ್ಕೂ ಅಧಿಕ ಪ್ರಕರಣಗಳು ದಾಖಲುಗೊಂಡಿವೆ. ಈ ಪೈಕಿ ಕ್ಲಬ್‌ಗೆ ಐದು ಲಕ್ಷಕ್ಕೂ ಅಧಿಕ ದಂಡ ವಿಧಿಸಿ ಆಯಾ ವೇದಿಕೆಗಳು ಆದೇಶಿಸಿವೆ.

ಸೋಫಾದಲ್ಲಿ ಮೋಸ
ಒಳ್ಳೆಯ ಗುಣಮಟ್ಟದ ಸೋಫಾ ಸೆಟ್ ಎಂದು ಹೇಳಿ ಕಳಪೆ ಗುಣಮಟ್ಟದ ಸೆಟ್ ನೀಡಿದ ಜೆ.ಸಿ.ನಗರದ ಜಿ.ವಿ.ಕೆ. ಮಾರ್ಕೆಟಿಂಗ್ ಕರ್ತವ್ಯಲೋಪ ಎಸಗಿದೆ ಎಂದು 3ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಅಭಿಪ್ರಾಯ ಪಟ್ಟಿದೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಪ್ರದರ್ಶನದ ವೇಳೆ ಬಸವೇಶ್ವರ ನಗರದ ನಿವಾಸಿ ವೈ. ವಿಶ್ವನಾಥ ರೈ ಅವರು 25ಸಾವಿರ ರೂಪಾಯಿ ನೀಡಿ ಈ ಸೋಫಾಸೆಟ್ ಖರೀದಿ ಮಾಡಿದ್ದರು. ಈ ಸೆಟ್‌ಗೆ ಐದು ವರ್ಷಗಳ ವಾರೆಂಟಿ ಅವಧಿ ಕೂಡ ಇತ್ತು.

ಆದರೆ ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಕಳಪೆ ಗುಣಮಟ್ಟದ ಬಟ್ಟೆಯಿಂದ ಸೋಫಾ ಹೊಲಿದಿರುವುದು ರೈ ಅವರ ಗಮನಕ್ಕೆ ಬಂತು. ಈ ಕುರಿತು ಮಳಿಗೆ ಗಮನ ಸೆಳೆದರೂ ಪ್ರಯೋಜನ ಆಗಲಿಲ್ಲ.

ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋದರು. ಒಳ್ಳೆಯ ಸೋಫಾ ಸೆಟ್ ನೀಡುವಂತೆ, ಇಲ್ಲದೇ ಹೋದರೆ ಅರ್ಜಿದಾರರು ನೀಡಿರುವ 25ಸಾವಿರ ರೂಪಾಯಿಗಳನ್ನು ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT