ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ವಿಠ್ಠಲನಿಗೆ ರಜತ ಮಹೋತ್ಸವ

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ಬೈಪಾಸ್ ಬಳಿ (ಬೆಂಗಳೂರಿನಿಂದ 24ಕಿ.ಮೀ) ಇರುವ ವಿಶ್ವಶಾಂತಿ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾಗಿರುವ 36 ಅಡಿ ಎತ್ತರದ ಏಕಶಿಲಾ ವಿಶ್ವರೂಪ ವಿಜಯ ವಿಠ್ಠಲ ದೇವರ ಪ್ರತಿಮೆಗೀಗ 25ರ ಸಂಭ್ರಮ. ಇದರ ಪ್ರಯುಕ್ತ ಆಶ್ರಮದಲ್ಲಿ ಪ್ರತಿಷ್ಠಾಪನಾ ರಜತ ಮಹೋತ್ಸವ ಆಯೋಜಿಸಲಾಗಿದೆ.

ಹದಿನಾಲ್ಕು ಎಕರೆ ವಿಸ್ತೀರ್ಣದ ಪ್ರಶಾಂತ ಪರಿಸರದ ಪ್ರಕೃತಿ ಮಡಿಲಲ್ಲಿರುವ ವಿಶ್ವಶಾಂತಿ ಆಶ್ರಮದ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ವಿಜಯ ವಿಠ್ಠಲನ ಬೃಹತ್ ಪ್ರತಿಮೆಯ ದರ್ಶನವಾಗುತ್ತದೆ. ಯಾವ ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ವಿಗ್ರಹವನ್ನು ಸ್ಪರ್ಶಿಸಿ ಪೂಜಿಸುವ ಅವಕಾಶ ಇಲ್ಲಿದೆ. ವಿಠ್ಠಲನ ಇಕ್ಕೆಲಗಳಲ್ಲಿ 13 ಕೋಟಿ ರಾಮನಾಮ ಬರೆದ ಜಪದ ಸ್ತಂಭ, ಅಷ್ಟಲಕ್ಷ್ಮಿಯರ ವಿಗ್ರಹ, ಪಕ್ಕದಲ್ಲಿ ಅಮೃತ ಶಿಲೆಯ ದುರ್ಗಾಮಂದಿರ, ಪ್ರವೇಶ ದ್ವಾರದ ಎಡಬಲದಲ್ಲಿ ಆಂಜನೇಯ, ಮಾರ್ಕಂಡೇಯ ಮಂದಿರಗಳಿವೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಭಗವದ್ಗೀತಾ ಮಂದಿರವಿದೆ. ಮಂದಿರದಲ್ಲಿ ಶ್ರೀಕೃಷ್ಣನ ಬೃಹತ್ ವಿಶ್ವರೂಪ ದರ್ಶನವಾಗುತ್ತದೆ. ಶ್ರೀಕೃಷ್ಣನ ಪ್ರತಿಮೆಯ ಸುತ್ತ ಸಪ್ತ ಋಷಿಗಳ ವಿಗ್ರಹ, ಮಂದಿರದ ಒಳಗೋಡೆಯ ಸುತ್ತ ಸಂಸ್ಕೃತ, ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಭಗವದ್ಗೀತೆಯ ಸಂಪೂರ್ಣ ಕೆತ್ತನೆ ಇದೆ. ಕೆಳಗೆ ಶ್ವೇತ ವರ್ಣದ ಗಾಯತ್ರಿ ದೇವಿಯ ಮೂರ್ತಿ, ಶ್ವೇತಾಶ್ವಗಳ ರಥ, ಗೀತಾಬೋಧನೆಯ ದೃಶ್ಯ, ಗೀತಾ ಮಂದಿರ ವಿಶೇಷವಾಗಿದೆ. ಸ್ವಲ್ಪ ದೂರದಲ್ಲಿಯೇ ಆಶ್ರಮದ ಸ್ಥಾಪಕ ಸಂತ ಭದ್ರಗಿರಿ ಕೇಶವದಾಸರ ಸ್ಮಾರಕವಿದೆ. ಸಪ್ತ ನದಿಗಳಿಂದ ನೀರು ಬರುತ್ತಿರುವ ಶಿಲೆಗಳು, ಸುಂದರ ಉದ್ಯಾನವನ ಎಲ್ಲವೂ ಭಕ್ತರನ್ನು ಸೆಳೆಯುತ್ತವೆ.

ರಜತ ಮಹೋತ್ಸವದ ಪ್ರಯುಕ್ತ ಮಸ್ತಕಾಭಿಷೇಕ: ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಸಂತ ಭದ್ರಗಿರಿ ಕೇಶವದಾಸರ 79ನೇ ಜನ್ಮದಿನೋತ್ಸವ ಮತ್ತು ವಿಜಯ ವಿಠ್ಠಲನ ಪ್ರತಿಷ್ಠಾಪನೆಯ 25ನೇ ವರ್ಷಾಚರಣೆಯ ಪ್ರಯುಕ್ತ ಸ್ವಸ್ತಿಶ್ರೀ ವಿಜಯ ನಾಮ ಆಷಾಢ ಶುಕ್ಲ ಏಕಾದಶಿ ಜುಲೈ 19ರಂದು ಶುಕ್ರವಾರದಿಂದ ಸೋಮವಾರ (ಜುಲೈ 22) ಗುರುಪೂರ್ಣಿಮೆಯವರೆಗೆ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಿಗ್ಗೆ 5.30ಕ್ಕೆ ಅಧ್ಯಕ್ಷೆ ರಮಾ ಕೇಶವದಾಸ್ ಅವರಿಂದ `ಅಖಂಡ ಜ್ಯೋತಿ ಪ್ರಜ್ವಲನ', ಅಂಕುರಾರ್ಪಣೆ, ಭಜನೆ. 11ಕ್ಕೆ ಶ್ರೀವಿಶ್ವರೂಪ ವಿಜಯ ವಿಠ್ಠಲ ದೇವರಿಗೆ ಮಹಾಮಸ್ತಕಾಭಿಷೇಕ. 1.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ ಕೀರ್ತನೆಗಳು ಮತ್ತು ಭಜನೆಗಳಿಂದ ಜಾಗರಣೆ.

ಶನಿವಾರ ಬೆಳಗ್ಗೆ 7.30ಕ್ಕೆ ವಿಶ್ವ ವಿಜಯ ವಿಠ್ಠಲ ರುಕ್ಮಿಣಿ ದೇವರಿಗೆ ಪಂಚಾಮೃತಾಭಿಷೇಕ, 9.30ಕ್ಕೆ ಹರಿದ್ವಾರದ ಗಾಯತ್ರಿ ತೀರ್ಥರಿಂದ ಮಹಾಗಾಯತ್ರಿ ಯಾಗ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ. ಸಂಜೆ 3ಕ್ಕೆ ನಾಟ್ಯ ಸಂಕುಲ ತಂಡದಿಂದ ಭರತನಾಟ್ಯ, 4.30ಕ್ಕೆ `ಗದಾಯುದ್ಧ' ಯಕ್ಷಗಾನ ಪ್ರದರ್ಶನ.

ಭಾನುವಾರ ಬೆಳಿಗ್ಗೆ 7.30ಕ್ಕೆ ವಿಜಯವಿಠ್ಠಲ ರುಕ್ಮಿಣಿ ದೇವರಿಗೆ ಪಂಚಾಮೃತಾಭಿಷೇಕ, 9ಕ್ಕೆ ಪಾಂಡುರಂಗ ರುಕ್ಮಿಣಿ ದೇವರ ಕಲ್ಯಾಣೋತ್ಸವ. 10.30ಕ್ಕೆ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನೆ, ಮಹಾಮಂಗಳಾರತಿ, ಅನ್ನ ಸಂತರ್ಪಣೆ. ಸಂಜೆ 4ಕ್ಕೆ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಧ್ಯಕ್ಷತೆ ಮತ್ತು ಬೇಲಿಮಠ ಮಹಾಸಂಸ್ಥಾನದ ಶಿವಾನುಭವ ಶಿವಾಚಾರ್ಯ ಶಿವರುದ್ರ ಸ್ವಾಮೀಜಿ ಅವರಿಂದ ಧರ್ಮ ಸಭೆ. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಚಿನ್ಮಯಿ ಮಿಷನ್‌ನ ಬ್ರಹ್ಮಾನಂದ ಸರಸ್ವತಿ ಮಹಾರಾಜ್, ಪಾವಗಡ ರಾಮಕೃಷ್ಣ ಸೇವಾಕೇಂದ್ರದ ಜಪಾನಂದಜೀ ಮಹಾರಾಜ್, ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್, ಸಂತ ಭದ್ರಗಿರಿ ಕೇಶವದಾಸರು, ಸಂತ ಭದ್ರಗಿರಿ ಸರ್ವೋತ್ತಮದಾಸರು, ನ್ಯೂಯಾರ್ಕ್‌ನ ಡಾ. ದಿನಕರ್ ಅವರು ಧರ್ಮಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಸಂಜೆ 5.30ಕ್ಕೆ ಸಂತ ಭದ್ರಗಿರಿ ಕೇಶವದಾಸರ `ಪುರಂದರೋಪನಿಷತ್', `ಕೀರ್ತನರೂಪಿ ಭಗವದ್ಗೀತೆ' ಮತ್ತು `ಗಾಯತ್ರಿ ಮಹಾಧ್ಯಾನ' ಪುಸ್ತಕ ಮತ್ತು ಕೇಶವದಾಸರ ಕೀರ್ತನೆಗಳ ಎರಡು ಧ್ವನಿಮುದ್ರಿಕೆಗಳ ಬಿಡುಗಡೆ, ಆಶ್ರಮದ ಅಧ್ಯಕ್ಷೆ ರಮಾ ಕೇಶವದಾಸರಿಂದ ಆಶೀರ್ವಚನ, ಅಚ್ಯುತದಾಸರು ಮತ್ತು ಸರ್ವೋತ್ತಮದಾಸರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೋಮವಾರ ಬೆಳಗ್ಗೆ 11ಕ್ಕೆ ಶ್ರೀ ಗುರು ಪಾದುಕಾ ಪೂಜೆ, ಭಕ್ತಿಗೀತೆಗಳು, ಭಜನೆ. ಸಂಜೆ 5ಕ್ಕೆ ಲತಾ ಕಾಮತ್ ಮತ್ತು ಗುರುದತ್ ವೃಂದದಿಂದ ಅಭಂಗಗಾನ, 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT