ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕಾಯಕ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆಯಲ್ಲ.  ದಿನನಿತ್ಯ ಬಳಸುವ ವಸ್ತುಗಳನ್ನು ಬಳಸಿಕೊಂಡೇ,  ವಿಜ್ಞಾನ ಪ್ರಾತ್ಯಕ್ಷಿಕೆಗಳ ಮೂಲಕ  ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ ಅಪ್ಪಟ ಗ್ರಾಮೀಣ ಪ್ರತಿಭೆ ಶಿವಪ್ಪ ಕಾಟವಾಳು.

ಮೂರು ವರ್ಷಗಳಿಂದ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಶಿವಪ್ಪ ಇದುವರೆಗೆ 323 ಪ್ರಾಥಮಿಕ ಶಾಲೆಗಳು, 253 ಪ್ರೌಢಶಾಲೆಗಳು, 150 ಡಿ.ಇಡಿ ಕಾಲೇಜುಗಳು ಸೇರಿ ಒಟ್ಟು 726ಕ್ಕೂ ಹೆಚ್ಚಿನ ಕಾರ್ಯಕ್ರಮ ನೀಡಿದ್ದಾರೆ.
 
ಮೈಸೂರು, ಕೊಡಗು, ಹಾಸನ, ಬಿಜಾಪುರ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಚಾಮರಾಜನಗರ - ಹೀಗೆ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ವಿಜ್ಞಾನ ಅರಿವನ್ನು ಮಕ್ಕಳ್ಲ್ಲಲಿ ಬೆಳೆಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸರಳ ಸುಂದರ...
ರಾಕೆಟ್ ಉಡಾವಣೆ ಹೇಗೆ ಆಗುತ್ತದೆ ಎನ್ನುವುದನ್ನು ದಾರದ ಮೇಲೆ ಬಲೂನು ಚಲಿಸುವ ಸರಳ ಪ್ರಯೋಗದ ಮೂಲಕ ತೋರಿಸಿ ನ್ಯೂಟನ್ ಚಲನೆಯ 3ನೇ ನಿಯಮ ತಿಳಿಸುತ್ತಾರೆ.  ಶಬ್ದ ಹೇಗೆ ಉಂಟಾಗುತ್ತದೆ? ಎಂಬುದನ್ನು ನಿರುಪಯುಕ್ತ ಸ್ಟ್ರಾ ಅನ್ನು `ವಿ~ ಆಕಾರದಲ್ಲಿ ಕತ್ತರಿಸಿ ಶಬ್ದ ಉಂಟಾಗುವ ಬಗೆಯನ್ನು ತೋರಿಸುತ್ತಾರೆ.

ತೆಳುವಾದ ಹಾಳೆ ಮೇಲೆ ಗಾಜಿನ ಲೋಟ ನಿಲ್ಲಿಸಿ ಮತ್ತು ವೃತ್ತಾಕಾರದ ಸಣ್ಣ ಕೊಳವೆಯ ಮೇಲೆ ಇಟ್ಟಿಗೆ ನಿಲ್ಲಿಸಿ ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸುವ ಜತೆಗೆ ವೃತ್ತದ ಒಳಕೋನಗಳ ಮೊತ್ತ 360 ಡಿಗ್ರಿ ಇರುವುದರಿಂದ ಹೆಚ್ಚು ಸ್ಥಿರತೆ ಹೊಂದಿರುತ್ತದೆ ಎಂಬುದನ್ನು ತಿಳಿಸುತ್ತಾರೆ.

 ಚಂದ್ರ, ಮರ-ಗಿಡಗಳು ಚಲಿಸಿದಂತೆ ಭಾಸವಾಗುವುದಕ್ಕೆ, ಶೀಟುಗಳು ಸಮತಟ್ಟಾಗಿರದೆ ಉಬ್ಬು-ತಗ್ಗಿನಿಂದ ಕೂಡಿರುವುದಕ್ಕೆ, ಪತ್ರಹರಿತ್ತು ಇರುವುದರಿಂದ ಎಲೆಗಳು ಹಸಿರಾಗಿರುತ್ತವೆ ಎಂಬುದನ್ನು ತಿಳಿದ ವಿದ್ಯಾರ್ಥಿಗಳಿಗೆ  ಹಳದಿ, ಕೆಂಪು ಎಲೆಗಳೂ ಇರುವುದಕ್ಕೆ ಏನು ಕಾರಣ ಎಂಬುದು ಸೇರಿದಂತೆ ದಿನನಿತ್ಯ ಕಾಣುವ ಹಲವು ಸಂಗತಿಗಳಿಗೆ ವೈಜ್ಞಾನಿಕ ಕಾರಣ ಕೊಡುತ್ತಾರೆ. ಇದೆಲ್ಲವೂ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಅರ್ಥವಾಗುವ ಹಾಗೆ ಪ್ರಸ್ತುತ ಪಡಿಸುವುದೇ ಶಿವಪ್ಪ ಅವರ ವೈಶಿಷ್ಟ್ಯ.

ಆಸಕ್ತಿ ಮೂಡಿದ್ದು...
ಶಿವಪ್ಪ ಕಲಾ ವಿದ್ಯಾರ್ಥಿಯಾದರೂ ಮೊದಲಿನಿಂದಲೂ ವಿಜ್ಞಾನದ ಬಗ್ಗೆ ತೀವ್ರ ಕುತೂಹಲ ಹೊಂದಿದ್ದರು. ವಿಜ್ಞಾನ ಮತ್ತು ಗಣಿತ ಕಲಿಯುವುದು ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟ ಎಂದು ಶಿಕ್ಷಕರು ಸದಾ ಹೇಳುತ್ತಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಶಿವಪ್ಪ ವಿಜ್ಞಾನದ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಿ ನಂತರ ವಿಜ್ಞಾನ ನಿಯಮ ಆಧರಿಸಿ ಸರಳ ಪ್ರಯೋಗಗಳನ್ನು ಕೈಗೊಂಡು ಯಶಸ್ವಿಯಾದರು.

ಇದು ನನ್ನಂತಹ ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬೇಕು ಎಂದು ತೀರ್ಮಾನಿಸಿ, ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ನೀಡತೊಡಗಿದರು. ಇವರ ಪ್ರಯೋಗಗಳನ್ನು ನೋಡಿ ಅನೇಕ ವಿಜ್ಞಾನ ಶಿಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ತಮ್ಮ ಪ್ರಾತ್ಯಕ್ಷಿಕೆಗೆ ಕಡ್ಡಾಯವಾಗಿ ಇಷ್ಟೇ ಹಣ ನೀಡಬೇಕು ಎಂದು ಒತ್ತಾಯಿಸದೆ ಪ್ರೀತಿಯಿಂದ ಕೊಟ್ಟಿದ್ದನ್ನು ಸ್ವೀಕರಿಸಿ ತಮ್ಮ ಕಾಯಕವನ್ನು ಮುಂದುವರಿಸುತ್ತಿದ್ದಾರೆ. ಅನೇಕ ಬಾರಿ ಉಚಿತವಾಗಿಯೂ ಪ್ರಾತ್ಯಕ್ಷಿಕೆ ನೀಡಿದ್ದಾರೆ. 

2008ರಲ್ಲಿ `ಚಿಗುರು~ ವಿಜ್ಞಾನ ಸಂಸ್ಥೆಯನ್ನು ತಮ್ಮ ಹುಟ್ಟೂರು ಕಾಟವಾಳು ಗ್ರಾಮದಲ್ಲಿ ಸ್ಥಾಪಿಸಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶ ಹೊಂದಿದ್ದಾರೆ. ಜತೆಗೆ `ವಿಜ್ಞಾನ ಪ್ರಯೋಗಮಾಲೆ~ ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ. ಶಿವಪ್ಪ ಅವರ ಮೊಬೈಲ್: 89717 97901.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT