ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟ್ಲ: ಜಲದುರ್ಗೆ ದೇವಾಲಯದ ಕುರುಹು ಪತ್ತೆ

Last Updated 21 ಡಿಸೆಂಬರ್ 2013, 5:02 IST
ಅಕ್ಷರ ಗಾತ್ರ

ವಿಟ್ಲ: ಕರೋಪಾಡಿ ಗ್ರಾಮದಲ್ಲಿ ಜಲದುರ್ಗೆಯ ದೇವಾಲಯದ ಕುರುಹು ಪತ್ತೆಯಾಗಿದೆ. ವಿಟ್ಲ ಪರಿಸರದ ನೂರಾರು ಭಕ್ತರು ಭೇಟಿ ನೀಡಿ ಇದನ್ನು ವೀಕ್ಷಿಸುತ್ತಿದ್ದಾರೆ. ಆನೆಕಲ್ಲು ನದಿಯ ಸಮೀಪದ ಕೃಷಿ ಭೂಮಿಯಲ್ಲಿ ಭಕ್ತರು ಮಣ್ಣನ್ನು ಅಗೆದಾಗ ಇದು ಪತ್ತೆಯಾಗಿದೆ.

ಆನೆಕಲ್ಲು ಪರಿಸರದ ಸೊಡಂಕೂರು, ಮಲಾರು ಮಧ್ಯೆ, ಆನೆಕಲ್ಲು ಹೊಳೆಯ ಪಕ್ಕದಲ್ಲಿ ಕೃಷ್ಣ ನಾಯ್ಕ ಅವರಿಗೆ ಸೇರಿದ ತೋಟದಲ್ಲಿ ಈ ದೇಗುಲದ ಕುರುಹುಗಳು ಕಾಣಸಿಕ್ಕಿವೆ.  ದೇಗುಲದ ಪಂಚಾಂಗದ ಕಲ್ಲು, ಸೋಪಾನಗಳು ಮೇಲ್ಭಾಗದಲ್ಲಿ ಕಂಡುಬಂದಿವೆೆ. ಪಶ್ಚಿಮಾಭಿಮುಖ ದೇವಸ್ಥಾನ ಇದ್ದಿರಬಹುದೆಂದು ಹೇಳಲಾಗುತ್ತಿದೆ. ಕೃಷ್ಣ ನಾಯ್ಕ ಅವರಿಗೆ 1.10 ಎಕ್ರೆ ಜಮೀನಿದ್ದು, ಇವರು ಈ ಮೊದಲು ಅಡಿಕೆ ತೋಟದಲ್ಲಿ ಕೃಷಿ ಕಾರ್ಯ ನಡೆಸುತ್ತಿದ್ದಾಗ ಗಮನಕ್ಕೆ ಬಂದಿರಲಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟ ಪ್ರಶ್ನಾ ಚಿಂತನೆಯಲ್ಲಿ ಖಚಿತವಾದಂತೆ ಭಕ್ತರು ಮಣ್ಣನ್ನು ಅಗೆದಾಗ ಈ ಕುರುಹುಗಳು ಸ್ಪಷ್ಟವಾಗಿ ಗೋಚರಿಸಿವೆ.

ಒಡಿಯೂರು ನಿವಾಸಿ ಮೈಸೂರಿನ ಹಿರಿಯ ವಕೀಲ ಒ.ಶ್ಯಾಮ ಭಟ್ ಮತ್ತು ದೇಗುಲವಿದ್ದ ಜಮೀನಿನ ಮಾಲಕ ಕೃಷ್ಣ ನಾಯ್ಕ ಅವರ ಕುಟುಂಬಕ್ಕೆ ಸಮಸ್ಯೆಗಳು ಉಂಟಾದುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಒ.ಶ್ಯಾಮ ಭಟ್ ಪತ್ರಕರ್ತರೊಂದಿಗೆ ಮಾತ­ನಾಡಿ ‘ಮಾತಾ ಅಮೃತಾನಂದಮಯಿ ಅವರ ಭಕ್ತನಾದ ನನಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅವರು ಅನೇಕ ವರ್ಷಗಳ ಹಿಂದೆಯೇ ನನ್ನ ಪೂರ್ವಜರು ಪೂಜಿಸುತ್ತಿದ್ದ ದೇಗುಲದ ಕುರುಹನ್ನು ನೀಡಿದ್ದರು. ದುರ್ಗಾ ದೇವಿಯ ದೇವಸ್ಥಾನದ ಪುನರ್‌ ನಿರ್ಮಾಣದ ಬಗ್ಗೆ ಸೂಚನೆಯನ್ನೂ ನೀಡಿದ್ದರು’ ಎಂದು ತಿಳಿಸಿದ್ದಾರೆ.

ಗುರುದೇವಾನಂದ ಸ್ವಾಮೀಜಿ ಮತ್ತು ಮಹಾಬಲ ಸ್ವಾಮೀಜಿ ಅವರು ಗುರುವಾರ ಭೇಟಿ ನೀಡಿ, ಮಂತ್ರಾಕ್ಷತೆ ಪ್ರೋಕ್ಷಿಸಿದರು. ಸ್ಥಳದ ಮಹತ್ವದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಗುರುವಾರ ಸಂಜೆ ಧಾರ್ಮಿಕ ಸಭೆಯಲ್ಲಿ ಗುರುದೇವಾನಂದ ಸ್ವಾಮೀಜಿ, ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿದರು.

ಒ.ಶ್ಯಾಮ ಭಟ್, ಜ್ಯೋತಿಷಿ ಚೇಕೋಟು ಸುಬ್ರಹ್ಮಣ್ಯ ಭಟ್, ಕೇಕಣಾಜೆ ಕೃಷ್ಣ ಜೋಯಿಷ, ಕಿಳಿಂಗಾರು ನಡುಮನೆ ಸುಬ್ರಹ್ಮಣ್ಯ ಕುಮಾರ, ವಗೆನಾಡು ಸುಬ್ರಾಯ ದೇಗುಲದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಕನ್ಯಾನ ಬನಾರಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಗಡಿ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಪಾಲಿಗೆ ರಾಮಣ್ಣ ಶೆಟ್ಟಿ, ಕರೋಪಾಡಿ ಗ್ರಾ.ಪಂ.ಅಧ್ಯಕ್ಷ ಎ.ಅಬ್ದುಲ್‍ಜಲೀಲ್ ಕರೋಪಾಡಿ, ಆನೆಕಲ್ಲು ರಾಮಕೃಷ್ಣ ಭಟ್, ಬೇತ ಗೋಪಾಲಕೃಷ್ಣ ಭಟ್, ಆನೆಕಲ್ಲು ಕೃಷ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT