ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ : ಸಂಕ್ಷಿಪ್ತ ಸುದ್ದಿ

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಪೋಲೆಂಡ್‌ನಲ್ಲಿ ಮುಂದಿನ ಸಭೆ
ದೋಹಾ (ಪಿಟಿಐ):
ಜಾಗತಿಕ ತಾಪಮಾನ ವೈಪರೀತ್ಯ ಕುರಿತು ವಿಶ್ವಸಂಸ್ಥೆ ನೇತೃತ್ವದಲ್ಲಿ ಆಯೋಜಿಸಲಾಗುವ ಮುಂದಿನ ಹಂತದ ಸಮಾವೇಶವು ಕಲ್ಲಿದ್ದಲು ಸಂಪದ್ಭರಿತ ರಾಷ್ಟ್ರವಾದ  ಪೋಲೆಂಡ್‌ನಲ್ಲಿ ನಡೆಯಲಿದೆ. ಇಲ್ಲಿ ನಡೆದ ಜಾಗತಿಕ ತಾಪಮಾನ ಬದಲಾವಣೆ ಕುರಿತ 18ನೇ ಸಮಾವೇಶದ ವೇಳೆ ಸದಸ್ಯ ರಾಷ್ಟ್ರಗಳು ಈ ನಿರ್ಧಾರ ಕೈಗೊಂಡಿವೆ.

ರೊಬೋಟ್ ಟ್ರಾಫಿಕ್ ಪೊಲೀಸ್!
ವಾಷಿಂಗ್ಟನ್ (ಪಿಟಿಐ):
ಭವಿಷ್ಯದ  ಚಾಲಕರಹಿತ ಸ್ವಯಂಚಾಲಿತ ಕಾರುಗಳ ಸಂಚಾರ ನಿಯಂತ್ರಣಕ್ಕಾಗಿ ಹೊಸ ರೊಬೋಟಿಕ್ `ಟ್ರಾಫಿಕ್ ಪೋಲಿಸ್'ನ್ನು ಎಂಜಿನಿಯರ್‌ಗಳು ಅಭಿವೃದ್ಧಿ ಪಡಿಸಿದ್ದಾರೆ.ಈ ಯಾಂತ್ರಿಕ `ಟ್ರಾಫಿಕ್ ಪೊಲೀಸ್', ಸಂಚಾರ ವೃತ್ತಗಳಲ್ಲಿ ಕಾರುಗಳ ಸುರಕ್ಷಿತಸಂಚಾರಕ್ಕೆ ನೆರವಾಗಲಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ವರ್ಜೀನಿಯಾ ಟೆಕ್ ಎಂಜಿನಿಯರಿಂಗ್ ಪ್ರೊಫೆಸರ್ ಹೇಶಮ್ ರಾಖಾ ಮತ್ತು ಅವರ ಬಳಿ ಅಧ್ಯಯನ ಕೈಗೊಳ್ಳುತ್ತಿರುವ ವಿದ್ಯಾರ್ಥಿ ಇಸ್ಲಾಯಿಲ್ ಝೋಡಿ ಅವರು ಈ ಯಾಂತ್ರಿಕ ಸಿಗ್ನಲ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಚಾಕೊಲೇಟ್‌ನಿಂದ ಕೆಮ್ಮು ದೂರ
ಲಂಡನ್ (ಪಿಟಿಐ):
  ನೀವು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದೀರೆ?  ಹಾಗಿದ್ದರೆ ದಿನಕ್ಕೆ ಎರಡು ಬಾರಿ ಚಾಕೊಲೇಟ್ ತಿನ್ನಿ, ಕೆಮ್ಮನ್ನು ದೂರ ಮಾಡಿ ಎನ್ನುತ್ತಿದೆ ನೂತನ ಸಂಶೋದನೆಯೊಂದು.ಹೌದು, ಚಾಕೊಲೇಟ್‌ನಲ್ಲಿರುವ ಕೋಕೋ ಅಂಶ ತೀವ್ರವಾದ ಕೆಮ್ಮು ಹಾಗೂ ಮರುಕಳಿಸುವ ಕೆಮ್ಮನ್ನು ಉಪಶಮನ ಮಾಡುತ್ತದೆ.

ಲಂಡನ್‌ನ 13 ರಾಷ್ಟ್ರೀಯ ಆರೋಗ್ಯ ಸೇವಾ ಆಸ್ಪತ್ರೆಗಳಿಗೆ ಬರುವ ರೋಗಿಗಳ ಮೇಲೆ ಈ ಅಧ್ಯಯನ ಕೈಗೊಳ್ಳಲಾಗಿದ್ದು, ಚಾಕೊಲೇಟ್‌ನಲ್ಲಿ ಬಳಸುವ ಥಿಯೊಬ್ರೊಮೀನ್ ರಸಾಯನಿಕವು (ಕೋಕೋ ಬೀಜಗಳಲ್ಲಿ ದೊರೆಯುವ ಅಂಶ) ಸಹಜ ರೀತಿಯಲ್ಲೇ ಕೆಮ್ಮನ್ನು ನಿಗ್ರಹಿಸುತ್ತದೆ. ದಿನಕ್ಕೆ 2 ಬಾರಿಯಂತೆ 14 ದಿನ ಚಾಕೊಲೇಟ್ ತಿಂದರೆ ಸಾಕು ಕೆಮ್ಮು ಗಣನೀಯವಾಗಿ ಕಡಿಮೆಯಾಗುತ್ತದಂತೆ.

ಸಂದೇಶ ಸ್ವೀಕರಿಸಲಿರುವ ಲೆನ್ಸ್!
ಲಂಡನ್ (ಪಿಟಿಐ):
ಮೊಬೈಲ್‌ನಿಂದ ಕಳುಹಿಸಿದ ಕಿರು ಸಂದೇಶಗಳನ್ನು ಕಣ್ಣು ಗುಡ್ಡೆಗಳಿಗೆ ಜೋಡಿಸಿದ ಚಿಕ್ಕ ಮಸೂರ (ಕಾಂಟ್ಯಾಕ್ಟ್ ಲೆನ್ಸ್) ಸ್ವೀಕರಿಸುವ ನೂತನ ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ವಿನೂತನ ತಂತ್ರಜ್ಞಾನವನ್ನು ಬೆಲ್ಜಿಯನ್ ವಿಜ್ಞಾನಿ ಪ್ರೊಫೆಸರ್ ಹರ್ಬರ್ಟ್ ಡೆ ಸ್ಮೆಟ್ ಅಭಿವೃದ್ಧಿಪಡಿಸಿದ್ದಾರೆ.

ಘೆಂಟ್ ವಿಶ್ವವಿದ್ಯಾಲಯದ ಸೂಕ್ಷ್ಮ ತಂತ್ರಜ್ಞಾನ ವಿಭಾಗವು ಗೋಲಾಕಾರದ ಚಿಕ್ಕ ಎಲ್‌ಸಿಡಿ ಅಭಿವೃದ್ಧಿಪಡಿಸಿದೆ. ಇದನ್ನು ಲೆನ್ಸ್‌ನಲ್ಲಿ ಅಳವಡಿಸಲಾಗುವುದು. ವೈರ್‌ಲೈಸ್ ತಂತ್ರಜ್ಞಾನ ಬಳಸಿ ಈ ಲೆನ್ಸ್‌ಗೆ ಮೊಬೈಲ್ ಕಿರು ಸಂದೇಶಗಳನ್ನು ರವಾನಿಸಬಹುದು.

ಪ್ರೀತಿ ನಿರಾಕರಿಸಿದ ಯುವತಿಗೆ ಬೆಂಕಿ
ಕಠ್ಮಂಡು (ಪಿಟಿಐ)
: ಭಾರತದ ಯುವಕನೊಬ್ಬ ಪ್ರೀತಿಸಲು ನಿರಾಕರಿಸಿದ ನೇಪಾಳಿ ಯುವತಿಗೆ ಬೆಂಕಿ ಹಚ್ಚಿದ್ದರಿಂದ ಆಕೆಗೆ ತೀವ್ರ ಸುಟ್ಟ ಗಾಯಗಳಾಗಿವೆ.ಉತ್ತರಪ್ರದೇಶ ಮೂಲದ ಬಾಬು ಖಾನ್ (23) ಭಾರತದ ಗಡಿಯಲ್ಲಿರುವ ಪಶ್ಚಿಮ ನೇಪಾಳದ ಬರದಿಯಾ ಜಿಲ್ಲೆಯ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಎಂದು ಡಿಐಜಿ ಕೇಶವ್ ಅಧಿಕಾರಿ ತಿಳಿಸಿದ್ದಾರೆ.ನಂತರ ಬಾಬು ಖಾನ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಜ್ವಾಲಾಮುಖಿಯಿಂದ ಅಳಿವು?
ನ್ಯೂಯಾರ್ಕ್ (ಪಿಟಿಐ):
ದಕ್ಷಿಣ ಪ್ರಸ್ಥಭೂಮಿಯಲ್ಲಿ ಆಧುನಿಕ ಮುಂಬೈ ಸಮೀಪ ಇರುವ ಪ್ರದೇಶದಲ್ಲಿ 6.5 ಕೋಟಿ ವರ್ಷಗಳ ಹಿಂದೆ ಡೈನೋಸಾರ್‌ಗಳು ಸಂಪೂರ್ಣವಾಗಿ ಅಳಿದು ಹೋಗಲು ಜ್ವಾಲಾಮುಖಿ ಚಟುವಟಿಕೆ ಕಾರಣವಿರಬಹುದು ಎಂದು ಹೊಸ ಅಧ್ಯಯನ ಹೇಳಿದೆ.
ಕ್ಷುದ್ರಗ್ರಹ ಅಪ್ಪಳಿಸಿದ್ದರಿಂದ ಡೈನೋಸಾರ್ ಸಂತತಿ ನಾಶವಾಗಿದ್ದಿರಬಹುದು ಎಂದು ಈ ಹಿಂದೆ ಊಹಿಸಲಾಗಿತ್ತು.

ಉಗ್ರರು ಅಪಹರಿಸಿದ್ದ ವೈದ್ಯನ ರಕ್ಷಣೆ
ಕಾಬೂಲ್ (ಎಪಿ):
ಐದು ದಿನಗಳ ಹಿಂದೆ ತಾಲಿಬಾನಿಗಳು ಅಪಹರಿಸಿದ್ದ ವೈದ್ಯರೊಬ್ಬನ್ನು ಅಮೆರಿಕ ನೇತೃತ್ವದ ಮಿತ್ರ ಪಡೆ ಭಾನುವಾರ ರಕ್ಷಿಸಿದೆ. ಅಮೆರಿಕದ ದಿಲೀಪ್ ಜೋಸೆಫ್ ಅವರನ್ನು ತಾಲಿಬಾನಿಗಳು ಸರೋಬಿ ಜಿಲ್ಲೆಯ ಹೊರವಲಯದಲ್ಲಿ ಬುಧವಾರ ಅಪಹರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT