ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಯರ ಸೆಳೆದ ಖಂಜೀರ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

“ನಮ್ಮ ಕರ್ನಾಟಕ ಸಂಗೀತ ವಾದ್ಯಗಳ ಮೇಲೆ ವಿದೇಶಿಯರಿಗೂ ಅದೇನೋ ವಿಶೇಷ ಮೋಹ. ಎರಡು ಮೂರು ವರ್ಷಗಳ ಹಿಂದೆ ಇಟಲಿಯಿಂದ ಒಬ್ಬ ಮಹಿಳೆ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಕರ್ನಾಟಕ ಸಂಗೀತದಲ್ಲಿ ಅದಮ್ಯ ಆಸಕ್ತಿ. ಒಂದು ಸಂಗೀತ ಕಛೇರಿಗೂ ಬಂದಿದ್ದರು. ಅಲ್ಲಿ ನಾನು ಖಂಜೀರ ನುಡಿಸುವುದನ್ನು ನೋಡಿ, ಕಛೇರಿ ಮುಗಿದ ಮೇಲೆ `ನನಗೂ ಖಂಜೀರ ಕಲಿಸಿ ಕೊಡುವಿರಾ..?~ ಎಂದು ಕೇಳಿದರು. ಆಯ್ತು ಎಂದು ಒಪ್ಪಿಕೊಂಡೆ. ಅಲ್ಲಿಂದ ಸುಮಾರು ಆರು ತಿಂಗಳು ಖಂಜೀರ ಕಲಿತರು. ಇದೇ ರೀತಿ ಫ್ರಾನ್ಸ್ ಮತ್ತು ಇಸ್ರೇಲ್‌ನಿಂದ ಬಂದ ಇಬ್ಬರು ಮಹಿಳೆಯರು ಈ ವಾದ್ಯ ಕಲಿತರು. ಕಲಿತದ್ದು ಬರೀ ಆರು ತಿಂಗಳೇ ಆದರೂ ಅವರ ಕುತೂಹಲ, ಆಸಕ್ತಿ, ಶ್ರದ್ಧೆ ಮೆಚ್ಚುವಂಥದ್ದು. ಪ್ರತಿದಿನ ಕ್ಲಾಸ್‌ಗೆ ಚೆನ್ನಾಗಿ ತಯಾರಾಗಿ ಬರ‌್ತಿದ್ರು, ಹಿಂದಿನ ದಿನದ ಪಾಠವನ್ನು ಯಥಾವತ್ ಒಪ್ಪಿಸಿದ ನಂತರವೇ ಮುಂದಿನ ಪಾಠ. ಖಂಜೀರದಲ್ಲಿ ಅವರ ಆಸಕ್ತಿ ಕಂಡು ನಿಜವಾಗಿಯೂ ಅಚ್ಚರಿಯಾಯ್ತು..” ಎಂದು ವಿದೇಶಿಯರನ್ನು ಸೆಳೆದ ಖಂಜೀರದ ಕಥೆಯನ್ನು ವಿವರಿಸುತ್ತಾರೆ ಖ್ಯಾತ ಖಂಜೀರ ವಾದಕ ವಿದ್ವಾನ್ ಬಿ.ಎನ್. ಚಂದ್ರಮೌಳಿ.

`ಯೂ ಟ್ಯೂಬ್‌ನಲ್ಲಿ ಖಂಜೀರ ಸೋಲೊ ಕಛೇರಿಯ ಎರಡು ವಿಡಿಯೊ ತುಣುಕುಗಳನ್ನು ಹಾಕಿದ್ದೆ. ಇದನ್ನು ನೋಡಿದ ಜರ್ಮನಿಯ ಒಬ್ಬರು ಇ-ಮೇಲ್‌ನಲ್ಲಿ ಸಂಪರ್ಕಿಸಿ ಖಂಜೀರವನ್ನು ಆನ್‌ಲೈನ್‌ನಲ್ಲಿ ಕಲಿಸುವಂತೆ ಕೇಳಿಕೊಂಡರು. ಈಗಾಗಲೇ ಅವರು ಖಂಜೀರವನ್ನು ಸ್ವಲ್ಪ ಕಲಿತಿರುವುದರಿಂದ ಆನ್‌ಲೈನ್‌ನಲ್ಲಿ ಪಾಠ ಮಾಡಲು ಒಪ್ಪಿಕೊಂಡೆ. ಅವರಿಗೀಗ ನಿತ್ಯವೂ ಆನ್‌ಲೈನ್‌ನಲ್ಲಿ ಖಂಜೀರ ಪಾಠ..~ ಎಂದೂ ಅವರು ಮಾತು ಸೇರಿಸುತ್ತಾರೆ.

ಇದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉಪ ಪಕ್ಕವಾದ್ಯವಾಗಿ ಬಳಸುವ ಪುಟಾಣಿ ವಾದ್ಯ ಖಂಜೀರದಲ್ಲಿ ವಿದೇಶಿಯರಿಗೆ ಇರುವ ಆಸಕ್ತಿಯನ್ನು ಎತ್ತಿತೋರಿಸುತ್ತದೆ. 
ದಕ್ಷಿಣ ಭಾರತದ ಪ್ರಮುಖ ಲಯವಾದ್ಯಗಳಲ್ಲಿ ಖಂಜೀರ ಕೂಡ ಒಂದು. ಇದು ಕರ್ನಾಟಕ ಸಂಗೀತಕ್ಕೆ ಉಪ ಪಕ್ಕವಾದ್ಯವಾಗಿ ಬಳಸುವ ವಾದ್ಯ ಪ್ರಕಾರ.

ಮೃದಂಗದಲ್ಲಿ ನುಡಿಸುವ ಸುಳಾದಿ ಸಪ್ತತಾಳ ಸೇರಿದಂತೆ ಎಲ್ಲ ಪ್ರಕಾರಗಳನ್ನು ಖಂಜೀರದಲ್ಲಿ ಕಾಣಬಹುದು. ಮೃದಂಗವನ್ನು ಎರಡು ಕೈಗಳಲ್ಲಿ ನುಡಿಸುವುದಾದರೆ ಖಂಜೀರವನ್ನು ಒಂದೇ ಕೈಯಲ್ಲಿ ಬೆರಳುಗಳ ತಂತ್ರಗಾರಿಕೆ ಬಳಸಿ ನುಡಿಸಲಾಗುವುದು. ಬೆರಳುಗಳಲ್ಲಿ ವಾದ್ಯದ ನಾದ ತರಂಗ ಹೊಮ್ಮಿಸುವ ವಿಶಿಷ್ಟ ವಾದ್ಯ ಪ್ರಕಾರವಿದು.

ಭಜನಾ ಮಂಡಳಿಗಳಲ್ಲಿ ಖಂಜೀರವನ್ನು 18ನೇ ಶತಮಾನದಿಂದ ಈಚೆಗೆ ಬಳಸಲಾಗುತ್ತಿದೆ. ಆದರೆ ಶಾಸ್ತ್ರೀಯ ಸಂಗೀತಕ್ಕೆ ಪಕ್ಕವಾದ್ಯವಾಗಿ ಬಳಸಲು ಆರಂಭಿಸಿದ್ದು 1930ರ ನಂತರವೇ. ಮೊದಮೊದಲು ಇದನ್ನು ಹಳ್ಳಿಗಳ ಭಜನಾ ಮಂಡಳಿಗಳಲ್ಲಿ ಭಜನೆಗೆ ಬಳಸುತ್ತಿದ್ದರು. ಇದನ್ನು ಆಗ `ತಮಡಿ~ ಎಂದು ಕರೆಯಲಾಗುತ್ತಿತ್ತು. ಇದರ ಸುತ್ತ ಗೆಜ್ಜೆ ಕಟ್ಟಲಾಗುತ್ತಿತ್ತು. ಈಗ ಇದರ ಸ್ವರೂಪ ಕೊಂಚ ಬದಲಾಗಿದ್ದು, ಗೆಜ್ಜೆಯ ಬದಲು ಬಿಲ್ಲೆಗಳನ್ನು ಬಳಸಲಾಗುತ್ತದೆ. ಖಂಜೀರದ ಫ್ರೇಮನ್ನು ಹಲಸಿನ ಮರದಿಂದ ಮಾಡಲಾಗುತ್ತದೆ. ಏಳರಿಂದ ಒಂಬತ್ತು ಇಂಚು ಅಗಲ ಮತ್ತು ನಾಲ್ಕು ಇಂಚು ದಪ್ಪವಿರುತ್ತದೆ ಈ ಪುಟಾಣಿ ವಾದ್ಯ. ಕೈಯಲ್ಲಿ ಹಿಡಿದು ತಾಳಕ್ಕೆ ಅನುಗುಣವಾಗಿ ಲಯ ಕೊಡುವ ಈ ವಾದ್ಯದ ನಾದ ಸರಿಯಾಗಿ ಕೇಳುವುದು `ತನಿಯಾವರ್ತನ~ದಲ್ಲಿಯೇ. ಇದರ ಹೊರ ಮೇಲ್ಮೈಯನ್ನು ಚರ್ಮದ ಹೊದಿಕೆಯಿಂದ ತಯಾರಿಸಲಾಗುತ್ತದೆ. ಇದಕ್ಕೆ ಹಲ್ಲಿಯ ಚರ್ಮ, ಆಡಿನ ಚರ್ಮವನ್ನು ಬಳಸಲಾಗುತ್ತದೆ. 
ಖಂಜೀರವನ್ನು ಶಾಸ್ತ್ರೀಯ ಸಂಗೀತದ ವೇದಿಕೆಗೆ ಮೊದಲ ಬಾರಿಗೆ ತಂದವರು ವಿದ್ವಾನ್ ಪುದುಕೋಟೆ ದಕ್ಷಿಣಾಮೂರ್ತಿ ಪಿಳ್ಳೈ. ಆಮೇಲೆ ವಿದ್ವಾನ್ ಪಳನಿ ಸುಬ್ರಹ್ಮಣ್ಯ ಪಿಳ್ಳೈ ಖಂಜೀರವನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದರು. ರಾಮಾಚಾರ್, ಶೇಷಗಿರಿದಾಸ್ ಖಂಜೀರದಲ್ಲಿ ಖ್ಯಾತಿವೆತ್ತವರು.

ಜಿ. ಹರಿಶಂಕರ್, ಗಣೇಶ್ ಕುಮಾರ್, ಕೆ.ವಿ. ಗೋಪಾಲಕೃಷ್ಣನ್ ಟಿ.ಕೆ. ದಕ್ಷಿಣಾಮೂರ್ತಿ, ಕೆ.ವಿ.ಆರ್.ಎಸ್. ಮಣಿ, ಅಭಿಷೇಕ್ ರಘುರಾಮ್, ಎನ್.ಶಾಂತಾರಾಮ್, ತ್ರಿಚ್ಚಿ ವಿ.ವಿ.ಎಸ್. ಮಣಿಯನ್ ಉತ್ತಮ ಖಂಜೀರ ವಾದಕರು. ಸದ್ಯ ವಿದ್ವಾನ್ ಬಿ.ಎನ್. ಚಂದ್ರಮೌಳಿ ಹೆಚ್ಚಿನ ಸಂಗೀತ ಕಛೇರಿಗಳಲ್ಲಿ ಖಂಜೀರ ಸಹಕಾರ ನೀಡುವ ಹಿರಿಯ ಕಲಾವಿದರು. ಇವರ ಸೋಲೊ ಕಛೇರಿ ಕೂಡ ಜನಪ್ರಿಯವಾಗಿದೆ.

ಮೊದಲು ಮೃದಂಗ ಕಲಿಯಿರಿ
ಖಂಜೀರವನ್ನು ನೇರವಾಗಿ ಕಲಿಯುವ ಬದಲಿಗೆ ಮೊದಲು ಮೃದಂಗ ಕಲಿಯಿರಿ. ಮೃದಂಗದ ಎಲ್ಲ ಮೂಲ ಪಾಠ, ತಂತ್ರಗಾರಿಕೆ ಕಲಿತ ಮೇಲೆ ಖಂಜೀರ ಕಲಿಯಲು ಸುಲಭ ಎಂದು ಸಲಹೆ ಕೊಡುತ್ತಾರೆ ವಿದ್ವಾನ್ ಚಂದ್ರಮೌಳಿ. ಇವರ ಬಳಿ ಖಂಜೀರ ಕಲಿತ 3-4 ಶಿಷ್ಯರು ಈಗಾಗಲೇ ಆಕಾಶವಾಣಿಯ ಗ್ರೇಡೆಡ್‌ಆರ್ಟಿಸ್ಟ್‌ಗಳಾಗಿ ರೂಪುಗೊಂಡಿದ್ದು, ಸಂಗೀತ ಕಛೇರಿಗಳಲ್ಲಿ ಮಿಂಚುತ್ತಿದ್ದಾರೆ.

ಉತ್ತಮ ಗುಣಮಟ್ಟದ ಖಂಜೀರ 500-600 ರೂಪಾಯಿಗಳಿಗೆ ಸಿಗುತ್ತದೆ. ಬಸವನಗುಡಿಯಲ್ಲಿರುವ ಗಣೇಶ್ ಮ್ಯೂಸಿಕಲ್ಸ್ (080- 22201402), ಜೆಸಿ ರಸ್ತೆಯಲ್ಲಿರುವ ರಾಜೀವ್ ಡಿಸ್ಟ್ರಿಬ್ಯೂಟರ್ಸ್‌ (080- 22918021), ಚಿಕ್ಕಪೇಟೆಯ ಭಾರತ್ ಹಾರ್ಮೋನಿಯಂ ವರ್ಕ್ಸ್ (080- 22872627) ಕೋರಮಂಗಲದ ಅರುಣಾ ಮ್ಯೂಸಿಕಲ್ಸ್ ನ್ಯೂ (9341214105) ಗಳಲ್ಲಿ ಕೊಳ್ಳಲು ಸಿಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT