ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕುಂಬ್ಳೆ ಪರಿಸರ ಪಾಠ

Last Updated 18 ಅಕ್ಟೋಬರ್ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು:  `ನೀವು ಎಂದಾದರೂ ಜೀವಂತ ಹುಲಿಯನ್ನು ನೋಡಿದ್ದೀರಾ?~ - ರಾಜ್ಯ ವನ್ಯಜೀವಿ ಮಂಡಳಿಯ ಸಹ ಉಪಾಧ್ಯಕ್ಷರೂ ಆಗಿರುವ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಈ ಪ್ರಶ್ನೆ ಹಾಕಿದಾಗ ನೂರಾರು ಮಕ್ಕಳು ಕೈ ಎತ್ತಿದರು. `ತಾಳಿ, ನನ್ನ ಪ್ರಶ್ನೆ ಇನ್ನೂ ಮುಗಿದಿಲ್ಲ. ನಾನು ಕೇಳುತ್ತಿರುವುದು ಮೃಗಾಲಯದ ಹುಲಿಯಲ್ಲ; ಕಾಡಿನಲ್ಲಿ ನೋಡಿದ ಹುಲಿಯ ಬಗ್ಗೆ~ ಎಂದು ಹೇಳಿದಾಕ್ಷಣ ಮೂರು ಕೈಗಳಷ್ಟೇ ಮೇಲುಳಿದು ಮಿಕ್ಕವೆಲ್ಲ ಕೆಳಗಿಳಿದವು.

 ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕಂಡ ನೋಟ ಇದು. ಸ್ಪಿನ್ ಮಾಂತ್ರಿಕನ `ಗೂಗ್ಲಿ~ ಎಸೆತಕ್ಕೆ ಬಹುತೇಕರ ಬಳಿ ಉತ್ತರವೇ ಇರಲಿಲ್ಲ. `ಮನೆ, ಶಾಲೆಗಳ ಹತ್ತಿರದ ಕಾಡು- ಕೆರೆಗಳಿಗೆ ಹೋಗುವುದನ್ನು ನೀವೆಲ್ಲ ರೂಢಿಸಿಕೊಳ್ಳಬೇಕು. ಪಕ್ಷಿಗಳ ಚಿಂವ್ ಚಿಂವ್ ಮಾತು, ಪ್ರಾಣಿಗಳ ಹಾವಭಾವವನ್ನು ಅರ್ಥ ಮಾಡಿಕೊಳ್ಳಬೇಕು~ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

`ಕೇವಲ ಪ್ರಾಣಿಗಳ ಚಿತ್ರ ಬಿಡಿಸಿದರೆ ಸಾಕಾಗಲ್ಲ; ಅವುಗಳ ರಕ್ಷಣೆಗೆ ನಮ್ಮಿಂದಾದ ಪ್ರಯತ್ನವನ್ನೂ ಮಾಡಬೇಕು~ ಎಂದ ಅವರು, `ಪರಿಸರ ಉಳಿದರಷ್ಟೇ ನಮ್ಮ ಉಳಿವು ಎನ್ನುವುದನ್ನು ಮರೆಯಬಾರದು~ ಎಂದರು.

`ನಿಮಗೆ ಗೊತ್ತೆ, ಹುಲಿ ಮತ್ತು ಆನೆಗಳ ಸಂಖ್ಯೆಯಲ್ಲಿ ನಾವೇ ದೇಶಕ್ಕೆ ನಂ. 1. ಇದು ನಮಗೆಲ್ಲ ಹೆಮ್ಮೆಯ ವಿಷಯವೇ. ಅದರಲ್ಲೇ ಮೈಮರೆಯದೆ ವನ್ಯಜೀವಿ ಸಂತತಿ ಹೆಚ್ಚಿಸುವತ್ತ ನಾವು ಕಾರ್ಯ ಪ್ರವೃತ್ತರಾಗಬೇಕಿದೆ~ ಎಂದು ಹೇಳಿದರು. `ಮಲಬಾರ್ ಟ್ರೋಗನ್ ಹೆಸರು ಕೇಳಿದ್ದೀರಾ? ಅದು ಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಪಕ್ಷಿ. ಪರಿಸರ ಲೆಕ್ಕವಿಲ್ಲದಷ್ಟು ಕೌತುಕಗಳಿಂದ ತುಂಬಿದೆ.
 
ದೇಶದ ಅತ್ಯಂತ ಉತ್ಕೃಷ್ಟ ಜೀವ ವೈವಿಧ್ಯದ ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದಾಗಿದೆ. ಅದರ ಶೇ 60ರಷ್ಟು ಪ್ರದೇಶ ನಮ್ಮ ರಾಜ್ಯದಲ್ಲೇ ಇದೆ~ ಎಂದು ಕುಂಬ್ಳೆ ಪಾಠ ಮಾಡಿದರು.   ಶಾಸಕ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ವಹಿಸಿದ್ದರು. ವನ್ಯಜೀವಿ ಸಂರಕ್ಷಣೆ ಕುರಿತ ಸಿ.ಡಿ ಹಾಗೂ ಕಿರು ಹೊತ್ತಿಗೆಗಳನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT