ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

Last Updated 2 ಏಪ್ರಿಲ್ 2013, 6:22 IST
ಅಕ್ಷರ ಗಾತ್ರ

ಶನಿವಾರಸಂತೆ: ಅನಿಯಮಿತ ವಿದ್ಯುತ್ ಕಡಿತ ಖಂಡಿಸಿ ಇಲ್ಲಿನ ಮೋಟಾರ್ ಕೆಲಸಗಾರರ ಸಂಘ ಹಾಗೂ ವರ್ತಕರ ಸಂಘದ ಸದಸ್ಯರು ಸೆಸ್ಕ್ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿ ಪ್ರತಿಭಟಿಸಿದರು.

ಗುಡುಗಳಲೆ ವೃತ್ತದಿಂದ ಶನಿವಾರ ಸಂತೆಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಸದಸ್ಯರು, ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಅರ್ಧ ಗಂಟೆ ಕಾಲ ಬಸ್‌ಗಳನ್ನು ತಡೆದು ಸಾರ್ವಜನಿಕರ ಗಮನ ಸೆಳೆದರು. ಬಳಿಕ ಸೆಸ್ಕ್ ಕಚೇರಿಗೆ ತೆರಳಿ ಧರಣಿ ಕುಳಿತರು.

ಅನಿಯಮಿತ ಲೋಡ್‌ಶೆಡ್ಡಿಂಗ್ ವಿರೋಧಿಸಿ ಈ ಮೊದಲು ಎರಡುಬಾರಿ ಸೆಸ್ಕ್ ಕಿರಿಯ ಸಂಪರ್ಕ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಲಿಲ್ಲ. ಗೇರ್ ಕೆಲಸಗಾರರು, ವರ್ತಕರು ಹಾಗೂ ಕೂಲಿಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿ ಇರುವ ಶನಿವಾರಸಂತೆಯಲ್ಲಿ ವಿದ್ಯುತ್ ಬಳಕೆ ಕಡಿಮೆ.

ಆದರೂ ಸೆಸ್ಕ್ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಪರೀಕ್ಷೆಯನ್ನೂ ಗಮನದಲ್ಲಿಡಲಿಲ್ಲ. ಮುನ್ಸೂಚನೆ ಕೊಡದೇ ಅನಿಯ ಮಿತವಾಗಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ ತೊಂದರೆ ಕೊಡುವುದೇ ಸೆಸ್ಕ್‌ನ ಪರಿಪಾಠವಾಗಿದೆ. ಇದನ್ನು ವಿರೋಧಿಸಿ ಮುಷ್ಕರ ಮಾಡಲಾಗುತ್ತಿದೆ. ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಇದೇ ವೇಳೆ ಸೆಸ್ಕ್ ಕಿರಿಯ ಸಂಪರ್ಕ ಅಧಿಕಾರಿಗೆ ಸಲ್ಲಿಸಲಾಯಿತು. ತಾಲ್ಲೂಕಿನ ಹಿರಿಯ ಸಂಪರ್ಕ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಕಿರಿಯ ಸಂಪರ್ಕಾಧಿಕಾರಿ ಸಲಹೆ ನೀಡಿದರು.

ನಂತರ ಸೋಮವಾರಪೇಟೆ ತಾಲ್ಲೂಕು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎ.ಕೆ. ವೇಣು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಪ್ರತಿಭಟನೆಕಾರರು, ಕೂಡಲೇ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಬರಬೇಕು. ಇಲ್ಲವಾದಲ್ಲಿ ಸೆಸ್ಕ್ ಕಚೇರಿಗೆ ಬೀಗ ಜಡಿಯುವುದಾಗಿ ಎಚ್ಚರಿಸಿದರು.

ಕೆಲ ಸಮಯದ ನಂತರ ಸ್ಥಳಕ್ಕೆ ಬಂದ ಅಧಿಕಾರಿ ವೇಣು, ವಿದ್ಯುತ್ ಉತ್ಪಾದನೆಯೇ ಕಡಿಮೆಯಾಗಿರುವಾಗ ನಿಯಮಿತವಾಗಿ ಪೂರೈಕೆ ಮಾಡುವುದು ಕಷ್ಟ ಎಂಬ ಉತ್ತರ ನೀಡಿದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಪರಿಹಾರ ಸಿಗದಿರುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರ ದೊಂದಿಗೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷ ಶಂಕರ್, ವರ್ತಕರ ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಪ್ರತಾಪ್, ಸದಸ್ಯರಾದ ಎಚ್.ಇ. ಶಂಕರ್, ಶಾಹಿದ್, ಪರಮೇಶ್, ಸಾದಿಕ್, ಕೆ.ಕೆ.ರವಿ, ಶರತ್, ಲೋಕೇಶ್, ರಾಜು, ಚಂದ್ರು, ಸಾಜಿ, ವಿವೇಕ್, ಸಂಜೀವನ್, ಮಿಥುನ್, ನಾಗರಾಜ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT