ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಡಿತ: ಜಿಲ್ಲೆಗೇಕೆ ತಾರತಮ್ಯ

Last Updated 22 ಅಕ್ಟೋಬರ್ 2011, 11:10 IST
ಅಕ್ಷರ ಗಾತ್ರ

ತುಮಕೂರು: ಒಂದು ತಿಂಗಳಿಂದ ವಿದ್ಯುತ್ ಸಮಸ್ಯೆ ಕಾಡುತ್ತಿದ್ದರೂ, ಕಳೆದ ಮೂರ‌್ನಾಲ್ಕು ದಿನಗಳಿಂದ ಜಿಲ್ಲೆ ಅಕ್ಷರಸಹ ಗಾಢಾಂಧಕಾರ ದಲ್ಲಿ ಮುಳುಗಿದೆ. ನಗರ ಪ್ರದೇಶದಲ್ಲಿ ಆಗೋಮ್ಮೆ ಈಗೊಮ್ಮೆ ಬಂದು ಹೋಗುತ್ತಿ ದ್ದರೂ, ಹಳ್ಳಿಗಳು ಬೆಳಕು ಕಾಣಲು ಸೂರ್ಯನ ಉದಯಕ್ಕಾಗಿ ಕಾಯಬೇಕಾಗಿದೆ.

ನಗರ ಪ್ರದೇಶದಲ್ಲಿ ಎರಡರಿಂದ ಮೂರು ಗಂಟೆ ಕಾಲ ಮಾತ್ರ ವಿದ್ಯುತ್ ಕಡಿತ ಮಾಡಲಾಗುವುದು ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿ ವಾರವಷ್ಟೇ ಕಳೆದಿದೆ. ಅದಕ್ಕೆ ತದ್ವಿರುದ್ಧ ವಾತಾವರಣ. 24 ಗಂಟೆಗಳಲ್ಲಿ ಆರೇಳು ಗಂಟೆ ವಿದ್ಯುತ್ ನೀಡಿದರೆ ಅದೇ ಹೆಚ್ಚು ಎನ್ನುವಂತಾಗಿದೆ. 12ರಿಂದ 15 ಗಂಟೆಗಳಿಗೂ ಹೆಚ್ಚು ಕಾಲ ನಗರ ಪ್ರದೇಶಗಳಿಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಮೂರ‌್ನಾಲ್ಕು ಗಂಟೆ ವಿದ್ಯುತ್ ಇದ್ದರೆ ಅದೇ ದೊಡ್ಡ ಸಾಧನೆ ಎನ್ನುವಂತಾಗಿದೆ.

ಜಿಲ್ಲೆ ಸಾಕಷ್ಟು ವಿಚಾರಗಳಲ್ಲಿ ಮಲತಾಯಿ ಧೋರಣೆಗೆ ಒಳಗಾಗುತ್ತಲೇ ಬಂದಿದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಇರುವ, ಮುಂದಿನ ಉಪನಗರ ಎಂಬೆಲ್ಲ ಹಣೆಪಟ್ಟಿ ಹೊತ್ತಿರುವ ನಗರಕ್ಕೆ ತಾರತಮ್ಯ ನೀತಿ ಮುಂದು ವರಿದಿದೆ. ಬೆಂಗಳೂರು ಸುತ್ತಮುತ್ತಲಿನ ನಗರಗಳು, ರಾಜ್ಯದ ದಕ್ಷಿಣ ಭಾಗದ ಯಾವ ಭಾಗದಲ್ಲೂ ಇಷ್ಟೊಂದು ವಿದ್ಯುತ್ ಕಡಿತ ಮಾಡುತ್ತಿಲ್ಲ. ಆದರೆ ತುಮಕೂರು ಜಿಲ್ಲೆಗೆ ಮಾತ್ರ ಏಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ.

ನಗರಕ್ಕೆ ಒಂದು ಗಂಟೆ ವಿದ್ಯುತ್ ಕೊಟ್ಟು, ಮತ್ತೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ಕಡಿತ ಮಾಡಲಾಗುತ್ತಿದೆ. ಕೆಲವೊಮ್ಮೆ ಈ ಕಡಿತ ಇನ್ನೂ ಅಧಿಕವಾಗಿರುತ್ತದೆ. ಯಾವಾಗ ಬರುತ್ತೆ, ಯಾವ ಕ್ಷಣದಲ್ಲಿ ಮಾಯವಾಗುತ್ತದೆ ಎಂದು ಹೇಳುವುದು ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿದರೆ ತೀವ್ರ ರೀತಿಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರು ಭಾಗ ಹಾಗೂ ಜಿಲ್ಲೆಗೆ ಹೊಂದಿಕೊಂಡಿರುವ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಕಡಿತ ಮಾಡುತ್ತಿಲ್ಲ. ಹಳೆ ಮೈಸೂರು ಭಾಗಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಹೆಚ್ಚು ಕಡಿತ ಮಾಡಲಾಗುತ್ತಿದೆ. ಇಂತಹ ತಾರತಮ್ಯ ನೀತಿಯನ್ನು ಏಕೆ ಅನುಸರಿಸಲಾಗುತ್ತಿದೆ ಎಂಬ ಸಂಶಯ ಹಲವರನ್ನು ಕಾಡುತ್ತಿದೆ.

ಐಟಿ ನಗರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಮಕೂರು ಸಮೀಪವೇ ಇರುವುದರಿಂದ ಉದ್ಯಮ ಕ್ಷೇತ್ರ ಕೂಡ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಹೊಸ ಕೈಗಾರಿಕೆಗಳು ನಿಧಾನವಾಗಿ ಬಂದು ನೆಲೆಯೂರುತ್ತಿವೆ. ಇತ್ತೀಚಿನ ಸ್ಥಿತಿಯನ್ನು ನೋಡಿದ ಉದ್ಯಮಿಗಳು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಡಾ.ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ ಸಾಕಷ್ಟು ಪ್ರದೇಶಗಳು ಅತ್ಯಂತ ಹಿಂದುಳಿದ ಪಟ್ಟಿಗೆ ಸೇರಿದ್ದು, ಅಭಿವೃದ್ಧಿಯತ್ತ ಪುಟ್ಟ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲೇ ವಿದ್ಯುತ್ ಶಾಕ್ ನೀಡಿದೆ. ಗ್ರಾಮೀಣ ಭಾಗದ ಪರಿಸ್ಥಿತಿಯನ್ನು ವರ್ಣಿಸು ವುದು ಅಸಾಧ್ಯ. ಬರ ಬೇತಾಳನಂತೆ ಬೆನ್ನು ಹತ್ತಿದ್ದು, ವಿದ್ಯುತ್ ಶಾಕ್‌ನಿಂದ ಚೇತರಿಸಿ ಕೊಳ್ಳಲಾಗದೆ ರೈತರು ಬಳಲಿದ್ದಾರೆ. ಬೇಡಿಕೆ- ಪೂರೈಕೆ ನಡುವೆ ಅಗಾಧ ವ್ಯತ್ಯಾಸ ಇರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.

ರಾಜಕೀಯ ಲೆಕ್ಕಾಚಾರ: ರಾಜಕಾರಣ ಬಿಟ್ಟು ಅಭಿವೃದ್ಧಿಯನ್ನಷ್ಟೇ ರಾಜ್ಯ ಸರ್ಕಾರ ಚಿಂತಿಸಿದ್ದರೆ ಜಿಲ್ಲೆಗೆ ಈ ಪ್ರಮಾಣದಲ್ಲಿ ವಿದ್ಯುತ್ ಕಡಿತ ಆಗುತ್ತಿರಲಿಲ್ಲ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಲ್ಲೇ ಅಳೆಯುತ್ತಿರುವುದು ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದೆ. ಜಿಲ್ಲೆಯ ರಾಜಕಾರಣ ಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ರಾಜಕೀಯ ಲೆಕ್ಕಾಚಾರ ಗಮನಿಸಿಯೇ ಜಿಲ್ಲೆಗೆ ನೀಡುವ ವಿದ್ಯುತ್ ಪ್ರಮಾಣವನ್ನು (ಅಲಾಟ್‌ಮೆಂಟ್) ನಿರ್ಧರಿಸಲಾಗುತ್ತಿದೆ. ಇಂತಹ ನಿರ್ಧಾರದಿಂದಾಗಿಯೇ ಜಿಲ್ಲೆ ಕತ್ತಲೆಯತ್ತ ಹೆಜ್ಜೆ ಹಾಕುವಂತಾಗಿದೆ ಎಂಬುದು ರಾಜಕೀಯದ ಒಳಹೊರಗನ್ನೂ ಬಲ್ಲ ಪ್ರಮುಖರೊಬ್ಬರ ಆರೋಪ.

ವಿಧಾನಸಭೆ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್, ಮೂರರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆ. ಬಿಜೆಪಿಯ ಮೂವರು ಶಾಸಕರು ಹಾಗೂ ಸಂಸದರು ಇದ್ದಾರೆ. ರಾಜಕೀಯವಾಗಿ ಆಡಳಿತಾರೂಢ ಬಿಜೆಪಿಗಿಂತ ವಿರೋಧ ಪಕ್ಷಗಳೇ ಪ್ರಬಲವಾಗಿವೆ. ವಿದ್ಯುತ್ ಸಮಸ್ಯೆಗೆ ಶಾಸಕರು ಹಾಗೂ ಅವರ ಪಕ್ಷಗಳನ್ನು ಹೊಣೆಗಾರರನ್ನಾಗಿ ಮಾಡಿದರೆ ಮುಂದಿನ ಚುನಾವಣೆ ವೇಳೆಗೆ ಜನರ ಮನಸ್ಥಿತಿ ಬದಲಾಗಬಹುದು ಎಂಬ ಲೆಕ್ಕಾಚಾರ ನಡೆದಿದೆ ಎಂದು ಶಾಸಕರೊಬ್ಬರು ದೂರುತ್ತಾರೆ. ಒಟ್ಟಾರೆ ವಿದ್ಯುತ್ ಕೊರತೆ ಹಾಗೂ ರಾಜಕಾರಣ ಜಿಲ್ಲೆಯ ಜನರನ್ನು ಹೈರಾಣ ಮಾಡಿದೆ.

`ಈಗಾಗಲೇ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿಮಾಡಿ ಪರಿಸ್ಥಿತಿ ತಿಳಿಸಲಾಗಿದೆ. ಮತ್ತೆ ವಿದ್ಯುತ್ ಕಡಿತ ಅಧಿಕವಾಗಿರುವುದು ಗಮನಕ್ಕೆ ಬಂದಿದೆ. ಸೋಮವಾರ ಸಚಿವರನ್ನು ಭೇಟಿಮಾಡಿ ಸಮಸ್ಯೆ ಮನದಟ್ಟು ಮಾಡಿಕೊಡಲಾಗುವುದು. ಜಿಲ್ಲೆಗೆ ಹೆಚ್ಚು ವಿದ್ಯುತ್ ನೀಡುವಂತೆ ಬೇಡಿಕೆ ಸಲ್ಲಿಸಲಾಗುವುದು~ ಎಂದು ಕೇರಳ ಪ್ರವಾಸದಲ್ಲಿರುವ ಶಾಸಕ ಎಸ್.ಶಿವಣ್ಣ `ಪ್ರಜಾವಾಣಿ~ಗೆ ತಿಳಿಸಿದರು.

ಬೇಡಿಕೆ 530 ಮೆ.ವಾ; ಸರಬರಾಜು 170!

ತುಮಕೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ 6 ಗಂಟೆ ಕಾಲ ಮೂರು ಫೇಸ್, 12 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಲು 530 ಮೆಗಾ ವಾಟ್‌ಗೂ ಹೆಚ್ಚು ವಿದ್ಯುತ್ ಅಗತ್ಯವಿದೆ. ಮಳೆ ಕೈಕೊಟ್ಟಿದ್ದು ಕೃಷಿ ಪಂಪ್‌ಸೆಟ್‌ಗಳು ಸೇರಿದಂತೆ ವಿದ್ಯುತ್ ಬಳಕೆ ಅಧಿಕವಾಗಿದ್ದು, ಬೇಡಿಕೆ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಪ್ರಸ್ತುತ ಬೇಡಿಕೆ ಗಮನಿಸಿದರೆ 600 ಮೆ.ವಾ ವಿದ್ಯುತ್ ಸರಬರಾಜು ಮಾಡಿದರೂ ಸಾಲದಾಗುತ್ತಿದೆ.

ಕನಿಷ್ಠ ಬೇಡಿಕೆಯಾದ 530 ಮೆ.ವಾ.ನಲ್ಲಿ ಜಿಲ್ಲೆಗೆ ಕೇವಲ 170 ಮೆ.ವಾ.ನಷ್ಟು ವಿದ್ಯುತ್ ಸರಬರಾಜು ಆಗುತ್ತಿದೆ. ಅಂದರೆ ಬೇಡಿಕೆಯ ಸುಮಾರು ಶೇ 60ಕ್ಕೂ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕಡಿತ, ಸೋರಿಕೆಯಿಂದ ಉಳಿಯುವ ಶೇ 40ರಷ್ಟು ವಿದ್ಯುತ್ ಅನ್ನೇ ಎಲ್ಲೆಡೆ ವಿತರಣೆ ಮಾಡುವ ಸಾಹಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಜಿಲ್ಲೆಯಲ್ಲಿ 220 ಕೆ.ವಿ. ಸಾಮರ್ಥ್ಯದ ಐದು ವಿದ್ಯುತ್ ಸ್ವೀಕರಣಾ ಕೇಂದ್ರಗಳಿವೆ. ಇಷ್ಟು ಕೇಂದ್ರಗಳಿಗೆ ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ 530 ಮೆ.ವಾ ವಿದ್ಯುತ್ ನೀಡಲಾಗುತಿತ್ತು. ಈಗ 170 ಮೆ.ವಾ.ಗೆ ಇಳಿಸಲಾಗಿದೆ. ಅಂತರಸನಹಳ್ಳಿ ಸ್ವೀಕರಣಾ ಕೇಂದ್ರಕ್ಕೆ 130 ಮೆ.ವಾ. ಬದಲಿಗೆ ಕೇವಲ 40 ಮೆ.ವಾ. ಬರುತ್ತಿದೆ. ಕುಣಿಗಲ್ ತಾಲ್ಲೂಕು ಅಂಚೆಪಾಳ್ಯ ಕೇಂದ್ರಕ್ಕೆ 110ರ ಬದಲು 40 ಮೆ.ವಾ, ಕೆ.ಬಿ.ಕ್ರಾಸ್ ಘಟಕಕ್ಕೆ 80ರ ಬದಲು 30 ಮೆ.ವಾ, ನಿಟ್ಟೂರು ಘಟಕಕ್ಕೆ 80ರ ಬದಲು 20 ಮೆ.ವಾ., ಮಧುಗಿರಿ ಘಟಕಕ್ಕೆ 130ರ ಬದಲು 40 ಮೆಗಾ ವಾಟ್ ವಿದ್ಯುತ್ ಸರಬರಾಜು ಆಗುತ್ತಿದೆ.

ಅಧಿಕಾರಿಗಳ ನಿರ್ದೇಶನ
ಅರ್ಧ, ಒಂದು ಗಂಟೆಗೊಮ್ಮೆ ವಿದ್ಯುತ್ ಪೂರೈಕೆ, ಕಡಿತದ ಬಗ್ಗೆ ಬೆಂಗಳೂರಿನಿಂದ ನಿರ್ದೇಶನ ಬರುತ್ತದೆ. ಅದರಂತೆ ಸರಬರಾಜಿನಲ್ಲಿ ಏರುಪೇರು ಆಗುತ್ತಿದೆ. ಸರಿಯಾಗಿ ವಿದ್ಯುತ್ ಬಾರದೆ ವಿತರಣೆ ಕಷ್ಟಕರವಾಗಿದೆ. ಈಗಿರುವ ಬೇಡಿಕೆಯಲ್ಲಿ ಶೇ 40ರಷ್ಟು ವಿದ್ಯುತ್ ಬರುತ್ತಿದ್ದು, ಅದರಲ್ಲೇ ನಿರ್ವಹಣೆ ಮಾಡಬೇಕಾಗಿದೆ. ಇಷ್ಟರಲ್ಲಿ ಎಲ್ಲಿಗೆ ವಿದ್ಯುತ್ ನೀಡುವುದು ಎನ್ನುತ್ತಾರೆ ಹೆಸರು ಹೇಳದ ಕೆಪಿಟಿಸಿಎಲ್ ಎಂಜಿನಿಯರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT