ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧ್ವಂಸಕರ ಜಾಡು ಪತ್ತೆಗೆ ಹರಸಾಹಸ

ಬೋಧಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣ: ವಶದಲ್ಲಿದ್ದ ಇಬ್ಬರ ಬಿಡುಗಡೆ
Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೋಧಗಯಾ/ನವದೆಹಲಿ (ಪಿಟಿಐ): ಬೋಧಗಯಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಘಟನೆ ಸಂಬಂಧ ವಶಕ್ಕೆ ತೆಗೆದುಕೊಂಡಿದ್ದ ಇಬ್ಬರು ಸ್ಥಳೀಯರನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವು ವಿಧ್ವಂಸಕರ ಜಾಡು ಹಿಡಿಯಲು ಹರಸಾಹಸ ಮಾಡುತ್ತಿದೆ.

ಭಾನುವಾರ ಸಂಜೆ ವಶಕ್ಕೆ ತೆಗೆದುಕೊಂಡಿದ್ದ ಗಯಾ ಜಿಲ್ಲೆಯ ಬಾರಾಚಟ್ಟಿ ಗ್ರಾಮದ ವಿನೋದ್ ಕುಮಾರ್ ಮಿಸ್ತ್ರಿ ಮತ್ತು ಬುಧವಾರ ವಶಕ್ಕೆ ತೆಗೆದುಕೊಂಡಿದ್ದ ಇದೇ ಗ್ರಾಮದ ದಶರಥ್ ಯಾದವ್ ವಿರುದ್ಧ ಯಾವುದೇ ಪುರಾವೆ ದೊರಕದ ಕಾರಣ ಅವರಿಬ್ಬರ ಹೇಳಿಕೆ ದಾಖಲಿಸಿಕೊಂಡು ಬುಧವಾರ ರಾತ್ರಿಯೇ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯೊಬ್ಬರು ಸೇರಿದಂತೆ ನಾಲ್ವರನ್ನು ಪಟ್ನಾದಲ್ಲಿ ಮಂಗಳವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅವರ ವಿರುದ್ಧವೂ ಯಾವುದೇ ಸಾಕ್ಷ್ಯಗಳು ದೊರಕದ ಕಾರಣ ಬುಧವಾರ ಬಿಡುಗಡೆ ಮಾಡಲಾಗಿತ್ತು.

ತನಿಖಾ ತಂಡವು ಬೋಧಗಯಾ ಪಟ್ಟಣಕ್ಕೆ ಬಂದ ಮತ್ತು ಅಲ್ಲಿಂದ ಹೊರಹೋದ ದೂರವಾಣಿ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ. ಕೆಲವು ಸುಳಿವು ಸಿಕ್ಕಿದ್ದು, ಅನುಮಾನ ವ್ಯಕ್ತವಾದ ಕರೆಗಳ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಶೀಘ್ರ ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಟ್ವಿಟರ್ ಖಾತೆ ರದ್ದು: ಈ ಮಧ್ಯೆ, ತನಿಖಾ ತಂಡದ ಕೋರಿಕೆ ಮೇರೆಗೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ (ಐಎಂ) ಸೇರಿದ್ದು ಎನ್ನಲಾದ ಅಂತರ್ಜಾಲದ handle@IndianMujahidin  `ಟ್ವಿಟರ್' ಖಾತೆಯನ್ನು ನಿರ್ವಹಿಸುವ ಅಮೆರಿಕ ಮೂಲದ ಕಂಪೆನಿ ರದ್ದು ಮಾಡಿದೆ ಎಂದು ಗೃಹ ಸಚಿವಾಲಯದ ಮೂಲಗಳು ನವದೆಹಲಿಯಲ್ಲಿ ತಿಳಿಸಿವೆ.

ಬೋಧಗಯಾ ಸರಣಿ ಬಾಂಬ್ ಸ್ಫೋಟ ನಡೆಸಿದ್ದಾಗಿ `ಐಎಂ'ನ ಈ `ಟ್ವಿಟರ್' ಖಾತೆಯಲ್ಲಿ ಸಂದೇಶಗಳು ರವಾನೆಯಾಗಿತ್ತು.
ಈ ಖಾತೆಯ ಸಾಚಾತನದ ಬಗ್ಗೆ ತನಿಖಾ ತಂಡ ಅನುಮಾನ ವ್ಯಕ್ತಪಡಿಸಿತ್ತು. ಆದರೂ ಅದರ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಟ್ವಿಟರ್‌ನಿರ್ವಹಣೆ ಮಾಡುವ ಅಮೆರಿಕದ ಮೂಲದ ಕಂಪೆನಿಯನ್ನು ಸಂಪರ್ಕಿಸಲಾಗಿತ್ತು. ಇದು ಬಹುಶಃ ನಕಲಿ ಖಾತೆಯಾಗಿದ್ದು, ಇದಕ್ಕೆ ಸಂದೇಶಗಳನ್ನು ಪಾಕಿಸ್ತಾನದ ನೆಲದಿಂದ ತುಂಬಿರಬಹುದು ಎಂಬ ಉತ್ತರ  ಕಂಪೆನಿಯಿಂದ ದೊರಕಿತ್ತು ಎಂದು ಮೂಲಗಳು ಹೇಳಿವೆ.

ಭದ್ರತೆಗೆ ಮತ್ತೆ ಮನವಿ
(ಪಟ್ನಾ ವರದಿ): ಮಹಾಬೋಧಿ ದೇವಾಲಯಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಭದ್ರತೆ ಕಲ್ಪಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರವನ್ನು ಮತ್ತೆ ಕೋರಿದ್ದಾರೆ.

`ಈ ದೇವಾಲಯಕ್ಕೆ ತುರ್ತಾಗಿ ಹೆಚ್ಚಿನ ಭದ್ರತೆ ಕಲ್ಪಿಸಬೇಕಿದೆ. ಆದ್ದರಿಂದ ರಾಜ್ಯದ ಮನವಿಯನ್ನು ಕೇಂದ್ರ ಗೃಹ ಸಚಿವಾಲಯವು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವಾಗಿ `ಸಿಐಎಸ್‌ಎಫ್' ಭದ್ರತೆ ಕಲ್ಪಿಸಬೇಕು' ಎಂದು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ದಿನವೇ  ದೇವಾಲಯಕ್ಕೆ `ಸಿಐಎಸ್‌ಎಫ್' ಭದ್ರತೆಗೆ ನಿತೀಶ್ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT