ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಕಾರಣ ನೀಲಿ ಟರ್ಫ್ ಬಳಕೆ: ಕೋಚ್ ಅಸಮಾಧಾನ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಅಂತರರಾಷ್ಟ್ರೀಯ ಮಟ್ಟದ ಹಾಕಿ ಟೂರ್ನಿಗಳಲ್ಲಿ ನೀಲಿ ವರ್ಣದ ಟರ್ಫ್ ಬಳಸುವ ನಿಯಮ ಜಾರಿಗೆ ತಂದಿದ್ದಕ್ಕೆ ಭಾರತ ಹಾಕಿ ತಂಡದ ಕೋಚ್ ಮೈಕಲ್ ನಾಬ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ವಿನಾಕಾರಣ ನೀಲಿ ಟರ್ಫ್ ಬಳಕೆ ನಿಯಮವನ್ನು ಹೇರಲಾಗಿದೆ~ ಎಂದಿರುವ ಅವರು ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಚಾಂಪಿಯನ್‌ಷಿಪ್ ಕೂಡ ಇಂಥದೇ ಅಂಗಳದಲ್ಲಿ ನಡೆಸಲು ಸಂಘಟಕರು ಒಪ್ಪಿಕೊಂಡಿದ್ದನ್ನು ಟೀಕಿಸಿದರು.

`ನೀಲಿ ಟರ್ಫ್‌ನಲ್ಲಿ ಚೆಂಡು ಮಂದಗತಿಯಲ್ಲಿ ಉರುಳುತ್ತದೆ. ಅಷ್ಟೇ ಅಲ್ಲ ಅತಿಯಾಗಿ ಪುಟಿಯುತ್ತದೆ~ ಎಂದು ನಾಬ್ಸ್ ಶುಕ್ರವಾರ ಸುದ್ದಿ ಸಂಸ್ಥೆಗೆ ತಿಳಿಸಿದರು.

`ಸ್ಪೇನ್ ಪ್ರವಾಸ ಕಾಲದಲ್ಲಿ ನೀಲಿ ಟರ್ಫ್ ಇರುವ ಅಂಗಳದಲ್ಲಿಯೇ ಆಡಿದೆವು. ಆಗ ನಾನು ಸೂಕ್ಷ್ಮವಾಗಿ ಗಮನಿಸಿದ ಅಂಶಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಆಗ ಅಲ್ಲಿ ಆಡಿದ್ದ ಯಾವೊಂದು ತಂಡವೂ ಅಧಿಕ ಸಂಖ್ಯೆಯಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲಿಲ್ಲ.

ನಮ್ಮ ತಂಡಕ್ಕೂ ಈ ವಿಭಾಗದಲ್ಲಿ ಹೆಚ್ಚು ನಿರಾಸೆ ಕಾಡಿತು. ಒಟ್ಟು 33 ಪೆನಾಲ್ಟಿ ಕಾರ್ನರ್‌ಗಳಲ್ಲಿ ಬಂದಿದ್ದು ಕೇವಲ ಮೂರು ಗೋಲ್~ ಎಂದು ವಿವರಿಸಿದರು.

`ಅದೇ ಫ್ರಾನ್ಸ್‌ನಲ್ಲಿ ಹಸಿರು ಟರ್ಫ್ ಹಾಸಿದ ಅಂಗಳದಲ್ಲಿ ಆಡಿದೆವು. ಅಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಎನಿಸಲಿಲ್ಲ. ಚೆಂಡು ವೇಗವಾಗಿ ಉರುಳುತಿತ್ತು. ಆದರೆ ನೀಲಿ ಅಂಗಳದಲ್ಲಿ ಖಂಡಿತವಾಗಿ ಹಾಗೆ ಆಗುವುದಿಲ್ಲ~ ಎಂದ ನಾಬ್ಸ್ `ಒಂದೇ ಕಂಪೆನಿಯು ಹಸಿರು ಬದಲಾಗಿ ಬೇರೊಂದು ಬಣ್ಣ(ನೀಲಿ)ದ ಟರ್ಫ್ ತಯಾರಿಸಿರಬಹುದು. ಆದರೆ ಅದರ ಗುಣವೇ ವಿಭಿನ್ನವಾಗಿದೆ. ಪರಿಸರಕ್ಕೆ ತಕ್ಕಂತೆ  ಟರ್ಫ್‌ಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಬಹುದು. ಆ ಬಗ್ಗೆ ಖಂಡಿತ ಆಕ್ಷೇಪವಿಲ್ಲ. ಆದರೆ ಈ ನೀಲಿ ವರ್ಣದ ಟರ್ಫ್‌ನಲ್ಲಿ ಅಚ್ಚರಿಗೊಳ್ಳುವ ರೀತಿಯಲ್ಲಿ ವ್ಯತ್ಯಾಸವಿದೆ~ ಎಂದು ಅಭಿಪ್ರಾಯಪಟ್ಟರು.

ನಾಬ್ಸ್ ಮಾತ್ರವಲ್ಲ ಆಸ್ಟ್ರೇಲಿಯಾ ತಂಡದ ಕೋಚ್ ರಿಕ್ ಚಾರ್ಲ್‌ವರ್ತ್ ಕೂಡ ಹೀಗೆಯೇ ಆಕ್ಷೇಪದ ಧ್ವನಿ ಎತ್ತಿದ್ದಾರೆ. ರಿವರ್‌ಬ್ಯಾಂಕ್ ಅರಿನಾದಲ್ಲಿನ ಹಾಕಿ ಕ್ರೀಡಾಂಗಣದಲ್ಲಿನ ಟರ್ಫ್‌ಗಳಲ್ಲಿ ಚೆಂಡು ವೇಗವಾಗಿ ಉರುಳುವುದಿಲ್ಲವೆಂದು ಅವರೂ ದೂರಿದ್ದಾರೆ. ಆದ್ದರಿಂದ ನಾಬ್ಸ್ ಮಾತಿಗೆ ಬಲ ಬಂದಿದೆ.

ಭಾರತ ತಂಡದ ಪ್ರದರ್ಶನ ಉತ್ತಮವಾಗಿರುತ್ತದೆ ಎಂಬ ವಿಶ್ವಾಸವನ್ನು ನಾಬ್ಸ್ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT