ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲೀನಕ್ಕೆ ಷರತ್ತು ಹಾಕಿಲ್ಲ

ಯಡಿಯೂರಪ್ಪ ಸ್ಪಷ್ಟನೆ
Last Updated 10 ಡಿಸೆಂಬರ್ 2013, 5:59 IST
ಅಕ್ಷರ ಗಾತ್ರ

ಬೆಂಗಳೂರು: ‘ಇದುವರೆಗೂ ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಒಂದು ಸಲವೂ ದೂರವಾಣಿಯಲ್ಲಿ ಅಥವಾ ನೇರವಾಗಿ ಮಾತುಕತೆ ನಡೆಸಿಲ್ಲ. ರಾಜ್ಯ ನಾಯಕರ ಜತೆಯೂ ಮಾತನಾಡಿಲ್ಲ. ಬಿಜೆಪಿ ಜತೆ ವಿಲೀನಕ್ಕೆ ಷರತ್ತು ಹಾಕಿಲ್ಲ. ಮಾತುಕತೆಯೇ ನಡೆಯದಿರುವಾಗ ಷರತ್ತುಗಳನ್ನು ವಿಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’. ಇದು  ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಸ್ಪಷ್ಟನೆ.

ಕೆಜೆಪಿ ಸಂಸ್ಥಾಪನಾ ಸಮಾವೇಶದ ಮೊದಲ ವರ್ಷಾಚರಣೆ ನಿಮಿತ್ತ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು,  ‘ಎನ್‌ಡಿಎಗೆ ಬೆಂಬಲ ಸೂಚಿಸಿ ಬರೆದಿರುವ ಪತ್ರವನ್ನು ಹೊರತುಪಡಿಸಿದರೆ ಬಿಜೆಪಿ ಜೊತೆ  ಯಾವುದೇ ಸಂಪರ್ಕ ಇಲ್ಲ. ಷರತ್ತು ಹಾಕುವ ಅಗತ್ಯವೂ ನನಗಿಲ್ಲ. ಮುಲಾಜಿಗೆ ಅಥವಾ ಮುಜುಗುರದಿಂದ ಸ್ಥಾನಮಾನ ಕೇಳುವ ಅಗತ್ಯವೂ ಇಲ್ಲ. ಬಿಜೆಪಿ ಮುಖಂಡರು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದರು.

ಬಿಜೆಪಿ ಜತೆ ಕೆಜೆಪಿ ವಿಲೀನದ ಬಗ್ಗೆ ಖಚಿತವಾದ ಹೇಳಿಕೆ ನೀಡದ ಯಡಿಯೂರಪ್ಪ, ‘ದೇಶದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಸಂದರ್ಭದಲ್ಲಿ ಎಚ್ಚರಿಕೆಯಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುವುದು’ ಎಂದರು.

‘ನಮ್ಮ ಪಕ್ಷದಲ್ಲೇ ಗೊಂದಲ, ಷಡ್ಯಂತ್ರ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಯಾರಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಇದೇ 20ರ ನಂತರ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವೆ’ ಎಂದು ತಿಳಿಸಿದರು.

ದಡ ಸೇರಿಸಿಯೇ ಸಿದ್ಧ: ‘45 ವರ್ಷ ನಾನು ಹಿಂತಿರುಗಿ ನೋಡಿಲ್ಲ. ಇನ್ನೊಂದು 10 ವರ್ಷ ಕರ್ನಾಟಕದ ರಾಜಕಾರಣದಲ್ಲಿದ್ದು, ನನ್ನನ್ನು ಬೆಂಬಲಿಸಿದ ಕಾರ್ಯಕರ್ತರನ್ನು ಒಂದು ದಡಕ್ಕೆ ಸೇರಿಸುವವರೆಗೂ ವಿರಮಿಸುವುದಿಲ್ಲ. ಎರಡು ವಿಧಾನಸಭೆ ಚುನಾವಣೆ ಎದುರಿಸುವ ಶಕ್ತಿ ನನಗಿದೆ. ವಿರೋಧ ಪಕ್ಷದವರಿಗೆ ಹೋರಾಟ ಮರೆತು ಹೋಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸ್ಪಂದಿಸಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ.  ಆದ್ದರಿಂದ ಸದೃಢವಾದ ವಿರೋಧ ಪಕ್ಷ ಕಟ್ಟಲು ಈಗ ಸುವರ್ಣ ಕಾಲ’ ಎಂದು ನುಡಿದರು.

‘ಹೋರಾಟಕ್ಕೆ ಬೆಲೆ ಇದೆ ಎನ್ನುವುದನ್ನು ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್‌ ಸಾಬೀತುಪಡಿಸಿದ್ದಾರೆ. ಇಡೀ ದೇಶದ ಗಮನಸೆಳೆದಿರುವ ಕೇಜ್ರಿವಾಲ್‌ ಅವರ ಹೋರಾಟ ನಮಗೆ ಮೇಲ್ಪಂಕ್ತಿಯಾಗಬೇಕು’ ಎಂದು ಶ್ಲಾಘಿಸಿದರು.

ಮಾಜಿ ಸಚಿವರಾದ ಸಿ.ಎಂ. ಉದಾಸಿ, ಹರತಾಳು ಹಾಲಪ್ಪ, ರೇಣುಕಾಚಾರ್ಯ, ಸುನೀಲ್‌ ವಲ್ಯಾಪುರೆ, ಶಾಸಕರಾದ ವಿಶ್ವನಾಥ್‌ ಪಾಟೀಲ್‌, ಗುರು ಪಾಟೀಲ್‌, ಯು.ಬಿ. ಬಣಕಾರ, ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ, ಮೈಕೆಲ್‌ ಫರ್ನಾಂಡಿಸ್‌,   ಮಾಡಾಳು ವಿರೂಪಾಕ್ಷಪ್ಪ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ ಉಪಸ್ಥಿತರಿದ್ದರು. ಶಾಸಕರಾದ ಗುರುಪಾದಪ್ಪ ನಾಗಮಾರಪಲ್ಲಿ, ಬಿ.ಆರ್‌. ಪಾಟೀಲ್‌ ಗೈರು ಹಾಜರಿ ಎದ್ದು ಕಾಣುತ್ತಿತ್ತು.

‘ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧ’
‘ದೇಶದ ರಾಜಕೀಯ ಪರಿಸ್ಥಿತಿ ತಕ್ಕಂತೆ ಪಕ್ಷದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲ ಬದ್ಧ’ ಎನ್ನುವ ನಿರ್ಣಯವನ್ನು ಕೆಜೆಪಿ ಕಾರ್ಯಕಾರಿಣಿ ಸಭೆ ಕೈಗೊಂಡಿತು.

ನಿರ್ಣಯ ಮಂಡಿಸಿದ ಧನಂಜಕುಮಾರ್‌, ‘ನಮ್ಮ ನಾಯಕರ ತೀರ್ಮಾನಕ್ಕೆ ಬದ್ಧ. ಯೋಗ್ಯ ಸಮಯದಲ್ಲಿ ಯೋಗ್ಯ ನಿರ್ಣಯವನ್ನು ನಾಯಕರು ಕೈಗೊಳ್ಳುತ್ತಾರೆ’ ಎಂದು ನುಡಿದರು.

ಎಂಎಲ್‌ಸಿ ಆಗೋಲ್ಲ
‘ಬಿಜೆಪಿ ಕೇಂದ್ರ ನಾಯಕರ ಜತೆ ಇದುವರೆಗೆ ಮಾತುಕತೆ ನಡೆಸಿಲ್ಲ. ಮಾತುಕತೆಗೆ ಆಹ್ವಾನವೂ ಬಂದಿಲ್ಲ. ಚರ್ಚೆಯೇ ನಡೆಯದಿರುವಾದ ನಾನು ಬಿಜೆಪಿಗೆ ತೊಡಕಾಗಲು ಹೇಗೆ ಸಾಧ್ಯ. ಇನ್ನು ಮುಂದೆ ನಾನು ವಿಧಾನಪರಿಷತ್‌ ಸದಸ್ಯೆ ಆಗುವುದಿಲ್ಲ’ ಎಂದು ಮಾಜಿ ಸಚಿವೆ, ಕೆಜೆಪಿ ಕಾರ್ಯಾಧ್ಯಕ್ಷೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

‘ಚುನಾವಣೆ ಎದುರಿಸಿ ಜನರಿಂದ ನೇರವಾಗಿ ಆಯ್ಕೆಯಾಗುತ್ತೇನೆ. ನಾನು ಷರತ್ತುಗಳನ್ನು ವಿಧಿಸುತ್ತಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಬಿಜೆಪಿಯಲ್ಲಿರುವ ಕಾಂಗ್ರೆಸ್‌ ಏಜೆಂಟರು ಈ ರೀತಿ ಸುದ್ದಿ ಹಬ್ಬಿಸುತ್ತಿರಬಹುದು ಅಥವಾ ನಮ್ಮಲ್ಲಿರುವವರೇ ಈ ರೀತಿ ಗೊಂದಲ ಮೂಡಿಸುತ್ತಿರಬಹುದು. ನನ್ನಿಂದಾಗಿ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ.  ಯಡಿಯೂರಪ್ಪ ಅವರು ಕೈಗೊಳ್ಳುವ ನಿರ್ಣಯಕ್ಕೆ ಸದಾ ಬದ್ಧ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT