ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬ ನ್ಯಾಯದಿಂದ ಅನ್ಯಾಯ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: `ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಆರೋಪಗಳ ಕುರಿತು ಶೀಘ್ರವೇ ತೀರ್ಪು ಹೊರ ಬೀಳಬೇಕಿದೆ. ಆದರೆ, ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲದ್ದರಿಂದ ಎಲ್ಲವೂ ವಿಳಂಬವಾಗುತ್ತಿದೆ~ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.

ನಗರದ ಸತ್ಯನಾರಾಯಣ ಪೇಟೆಯಲ್ಲಿರುವ ರಾಘವೇಂದ್ರ ಸ್ವಾಮೀಜಿಯವರ ಮಠಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಆರೋಪದಿಂದ ಮುಕ್ತರಾಗುವವರೆಗೆ ಯಾರೇ ಆಗಲಿ ಅಧಿಕಾರದಲ್ಲಿರುವುದು ಸರಿಯಲ್ಲ.
 
ಆದರೆ, ತೀರ್ಪು ಬರುವುದು ತಡವಾದರೆ, ನಿರಪರಾಧಿಗಳಿಗೆ ತೀವ್ರ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಯಾಗ ವ್ಯವಸ್ಥೆಯನ್ನು ಚುರುಕುಗೊಳಿಸಿ, ಶೀಘ್ರ ನ್ಯಾಯ ದೊರಕಿಸುವ ಕ್ರಮ ಜಾರಿಯಾಗಬೇಕಿದೆ~ ಎಂದರು.

`ಯಾರೇ ಆಗಲಿ ತಮ್ಮ ಮೇಲೆ ಆರೋಪಗಳು ಬರದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ಪ್ರಧಾನಿ ಮನಮೋಹನ್‌ಸಿಂಗ್, ಮಾಜಿ ಪ್ರಧಾನಿ ವಾಜಪೇಯಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ತಮ್ಮ ಮೇಲೆ ಭ್ರಷ್ಟಾಚಾರದ ಆರೋಪಗಳೇ ಬರದಂತೆ, ಯಾವುದೇ ರೀತಿಯ ಶಂಕೆ ಮೂಡದಂತೆ ಪಾರದರ್ಶಕ ಆಡಳಿತ ನೀಡಿದ್ದಾರೆ. ಯಡಿಯೂರಪ್ಪ ಸಹ ಅವರಂತೆಯೇ ಎಚ್ಚರಿಕೆ ವಹಿಸಬೇಕಿತ್ತು~ ಎಂದು ಹೇಳಿದರು.

`ನಾನೊಬ್ಬನೇ ತಪ್ಪು ಮಾಡಿಲ್ಲ. ಈ ಹಿಂದೆ ಅನೇಕರು ತಪ್ಪು ಮಾಡಿದ್ದಾರೆ~ ಎಂಬದು ಸಮರ್ಥನೆ ಮಾಡಿಕೊಳ್ಳುವುದನ್ನು ಯಡಿಯೂರಪ್ಪ ಕೈಬಿಡಬೇಕು. ಮೇವು ಹಗರಣದಲ್ಲಿ ಭಾಗಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರ ವಿರುದ್ಧದ ಆರೋಪ ದಶಕಗಳ ಕಾಲ ಇತ್ಯರ್ಥವಾಗಲಿಲ್ಲ. 

ಆದರೂ ಅವರು ಕೇಂದ್ರ ಸಚಿವರಾಗಿದ್ದರು. ಆರೋಪಗಳು ಕೇಳಿ ಬಂದ ಕೂಡಲೇ ಅಧಿಕಾರ ತ್ಯಜಿಸಿದವರು, ಮತ್ತೆ ಅಧಿಕಾರಕ್ಕೆ ಆಸೆಪಡುವುದು ಸರಿಯಲ್ಲ~ ಎಂದು ಅವರು ಸೂಚ್ಯವಾಗಿ ಹೇಳಿದರು.

ಎಲ್ಲ ಪಕ್ಷಗಳಲ್ಲೂ ಒಳಜಗಳಗಳು ಇವೆ. ಆದರೆ, ಬಿಜೆಪಿಯಲ್ಲಿ ತುಸು ಹೆಚ್ಚಾಗಿ ಬಿಂಬಿತವಾಗಿವೆ. ಆದರೆ, ಒಳಜಗಳ, ಅಧಿಕಾರ ಲಾಲಸೆ ಬಿಟ್ಟು ಜನರ ಸೇವೆ ಮಾಡುವುದನ್ನು ಸರ್ಕಾರದಲ್ಲಿ ಇರುವವರು ರೂಢಿಸಿಕೊಳ್ಳಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT