ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ಭೋಜನ ಸೇವಿಸಿ ಅಸ್ವಸ್ಥ: ಆಸ್ಪತ್ರೆಯಲ್ಲಿ ಜನಜಂಗುಳಿ

Last Updated 2 ಫೆಬ್ರುವರಿ 2011, 10:00 IST
ಅಕ್ಷರ ಗಾತ್ರ

ಸೋಮವಾರಪೇಟೆ: ವಿವಾಹ ಸಮಾರಂಭವೊಂದರಲ್ಲಿ ಭೋಜನ ಮಾಡಿದ ಎರಡು ದಿನಗಳ ಬಳಿಕ ವಧು-ವರ ಸೇರಿದಂತೆ 56 ಮಂದಿ ವಾಂತಿಭೇದಿಯಿಂದ ಅಸ್ವಸ್ಥರಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದ್ದು, ರೋಗಿಗಳ ಆರೋಗ್ಯ ವಿಚಾರಿಸಲು ಅಪಾರ ಸಂಖ್ಯೆಯಲ್ಲಿ ಬಂಧುಗಳು ಆಸ್ಪತ್ರೆಗೆ ಲಗ್ಗೆಯಿಟ್ಟಿದ್ದರಿಂದ ಒಂದು ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮದುವೆ ಮನೆಗೆ ಹೋಗಿ ಬಂದ ಬಳಿಕ ಅಸ್ವಸ್ಥರಾದ ತಮ್ಮ ಬಂಧುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮುಂದೇನಾಗುವುದೋ ಎಂಬ ಆತಂಕದಲ್ಲಿ ಕಾಯುತ್ತಿದ್ದವರ ಸಂಖ್ಯೆಯೇ ಅಧಿಕವಾಗಿತ್ತು. ಇಂತಹವರ ಪೈಕಿ ಗರ್ಭಿಣಿಯೊಬ್ಬಳಿಗೂ ವಾಂತಿ ಭೇದಿ ಅಧಿಕವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ರೋಗದ ತೀವ್ರತೆ ಜಾಸ್ತಿ ಇದ್ದಿದ್ದರಿಂದ ಡ್ರಿಪ್ ಕೂಡ ಹಾಕಲಾಗಿತ್ತು. ಆದರೆ, ಸಂಡಾಸಿಗೆ ಹೋದಾಗಲೇ ನಿಶ್ಯಕ್ತಿಯಿಂದ ಕುಸಿದು ಬಿದ್ದಿದ್ದರಿಂದ ಎಲ್ಲರೂ ಗಾಬರಿಗೊಂಡರು. ಆದರೂ, ಸಕಾಲಿಕ ಚಿಕಿತ್ಸೆಯಿಂದಾಗಿ ಆಕೆ ಚೇತರಿಸಿಕೊಂಡಿದ್ದರಿಂದ ಬಂಧುಗಳು ನಿಟ್ಟುಸಿರು ಬಿಟ್ಟರು.

ಒಮ್ಮೆಲೆ ರೋಗಿಗಳ ಸಂಖ್ಯೆ ಮಿತಿ ಮೀರಿದ್ದರಿಂದ ಅಲ್ಲಿನ ವೈದ್ಯರು ಹಾಗೂ ದಾದಿಯರ ಮೇಲಿನ ಒತ್ತಡ ಅತಿಯಾಗಿ ರಣರಂಗದ ವಾತಾವರಣ ಸೃಷ್ಟಿಯಾಗಿತ್ತು. ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿಯನ್ನು ವಿಚಾರಿಸುವ ಉದ್ದೇಶದಿಂದ ಬಂದ ಬಂಧುಗಳು ಮತ್ತು ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ನೆರೆದು ಅಲ್ಲೊಂದು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.ಆದರೂ, ವೈದ್ಯರು ಮತ್ತು ದಾದಿಯರ ತಂಡ ಸಕಾಲದಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಜನರ ಆತಂಕವನ್ನು ನಿವಾರಿಸಿದರು. ಯಾವುದೇ ಪ್ರಾಣಹಾನಿ ಆಗಲಿಲ್ಲವಾದ್ದರಿಂದ ಜನರ ಶಂಕೆಯು ಶಮನಗೊಳ್ಳಲು ಕಾರಣವಾಯಿತು. ರೋಗಿಗಳಿಗೆ ಉಚಿತವಾಗಿ ಹಾಲು ಮತ್ತು ಬ್ರೆಡ್ ಸರಬರಾಜು ಮಾಡಲಾಯಿತು.

‘ಕಲ್ಯಾಣ ಮಂಟಪದಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಗಮನಹರಿಸಬೇಕು. ಮದುವೆಗೆ ಹೋಗುವ ನಾವು ಅಲ್ಲಿನ ನೈರ್ಮಲ್ಯದ ಬಗ್ಗೆ ಗಮನಹರಿಸಲು ಹೇಗೆ ಸಾಧ್ಯ? ಎಲ್ಲವೂ ಚೆನ್ನಾಗಿದೆ ಎಂದು ಗ್ರಹಿಸಿ ಭೋಜನ ಮಾಡುತ್ತೇವೆ. ಸಂಬಂಧಿಸಿದವರು ಇದರ ಬಗ್ಗೆ ಗಮನ ನೀಡದಿದ್ದರೆ ನಾವು ಈ ರೀತಿ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ರೋಗಿಗಳ ಬಂಧುಗಳು ತಮ್ಮ ಅಳಲನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT