ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ: ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ

Last Updated 26 ಸೆಪ್ಟೆಂಬರ್ 2013, 8:31 IST
ಅಕ್ಷರ ಗಾತ್ರ

ಮಂಡ್ಯ: ಸಚಿವ ಸಂತೋಷ್‌ ಲಾಡ್‌ ವಜಾ, ಶುಲ್ಕ ವಿನಾಯಿತಿ ಮರುಪಾವತಿ, ಆಸ್ಪತ್ರೆಗೆ ಸೌಕರ್ಯ ಕಲ್ಪಿಸುವಂತೆ, ರಸ್ತೆ ದುರಸ್ತಿಗೆ ಆಗ್ರಹಿಸಿ ಸೆೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ವಿವಿಧ ಬುಧವಾರ ಸರಣಿ ಪ್ರತಿಭಟನೆಗಳು ನಡೆದವು.

ಲಾಡ್‌ ವಜಾಕ್ಕೆ ಆಗ್ರಹ
ಮಂಡ್ಯ: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ನಗರದಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.

ರೈತ ಸಭಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಎಚ್‌.ಸಿ. ಮಂಜುನಾಥ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲೆಯಲ್ಲಿ ಕಾಲು–ಬಾಯಿ ಜ್ವರಕ್ಕೆ ಸಾವಿಗೀಡಗಿರುವ ಜಾನುವಾರುಗಳಿಗೆ ಸೂಕ್ತ ಪರಿಹಾರ ಹಣ ನೀಡಬೇಕು, ಕೆರೆಕಟ್ಟೆಗಳಿಗೆ ತುರ್ತಾಗಿ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಬಿ.ಕೆ. ಕೆಂಪೇಗೌಡ, ಚಲುವರಾಜು, ನವೀನ್‌ಕುಮಾರ್‌ ಇತರರು ಇದ್ದರು.

ಆಸ್ಪತ್ರೆ ಅವ್ಯವಸ್ಥೆಗೆ ಖಂಡನೆ
ಪಾಂಡವಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಪಟ್ಟಣದ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ಕನ್ನಡ ಸೇನೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಸಿಬ್ಬಂದಿ ಕೊರತೆ ಕೂಡ ಇದೆ. ರಾತ್ರಿವೇಳೆ ಕೆಲಸ ನಿರ್ವಹಿಸುವ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಔಷಧಿಗಳು ರೋಗಿಗಳಿಗೆ ಸಮಪರ್ಕವಾಗಿ ವಿತರಣೆಯಾಗದೆ ಕೊರತೆ ಕಾಣುತ್ತಿದೆ. ಆಸ್ಪತ್ರೆಯ ಕೆಲವು ಕೊಠಡಿಗಳನ್ನು ದುರಸ್ಥಿ ಮಾಡಬೇಕಾಗಿದೆ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ ಹಿರಿಯ ವೈದ್ಯಾಧಿಕಾರಿ ಡಾ.ಜಯರಾಮ್‌ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ಇತರೆ ಸಮಸ್ಯೆ ಸರಿಪಡಿಸಲು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಷ್ಟರಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಅಂತ್ಯಗೊಂಡಿತು.

ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ವಿ.ಎಂ. ಸತೀಶ್‌, ಉಪಾಧ್ಯಕ್ಷ ಶೆಲ್ವನಾರಾಯಣ್‌, ನಗರ ಘಟಕ ಅಧ್ಯಕ್ಷ ಸಂತೋಷ್‌ಸಿಂಹ, ಆಟೊ ಕಾಳಪ್ಪ, ಪಾಂಡಿದೊರೈ, ಸಂತೋಷ್‌ ಗುಪ್ತ, ರಾಮಚಂದ್ರು, ಸ್ವಾಮಿಗೌಡ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸೇತುವೆ ದುರಸ್ತಿಗೆ ಆಗ್ರಹ
ಪಾಂಡವಪುರ: ಗ್ರಾಮದಲ್ಲಿರುವ ವಿಶ್ವೇಶ್ವರಯ್ಯ ನಾಲಾ ಸೇತುವೆಯ ತಡೆಗೋಡೆ ಶಿಥಿಲಗೊಂಡು ಮುರಿದುಬಿದ್ದಿರುವುದನ್ನು ಕೂಡಲೇ ದುರಸ್ತಿ­ಗೊಳಿಸಬೇಕೆಂದು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿನ ವಿಶ್ವೇಶ್ವರಯ್ಯ ನಾಲಾ ಸೇತುವೆಯ ತಡೆಗೋಡೆ 4 ವರ್ಷಗಳಿಂದಲೂ ಮುರಿದು ಹೋಗಿದ್ದರೂ ಸಂಬಂಧಪಟ್ಟ ಅಧಿಕಾರಿ­ಗಳು ದುರಸ್ತಿಗೊಳಿಸುವಲ್ಲಿ ನಿರ್ಲಕ್ಷ್ಯ­ವಹಿಸಿದ್ದಾರೆ. ಇದರೊಂದಿಗೆ ಸೇತುವೆಯು ಶಿಥಿಲ ಗೊಳ್ಳುತ್ತಿದೆ. ಇದರಿಂದಾಗಿ ಜನ­ಜಾನುವಾರು­ಗಳ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾ­ಗಿದೆ. ಕೂಡಲೇ ಸೇತುವೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಕಾವೇರಿ ನಿಗಮದ ಎಇಇ ಗುರುಮೂರ್ತಿ, ಸೇತುವೆಗೆ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎನ್‌. ಮಂಜುನಾಥ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಇ.ರವಿಕುಮಾರ್‌, ಷಣ್ಮುಖ, ಕಾಂಗ್ರೆಸ್‌ ಮುಖಂಡ ಚನ್ನೇಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕರವೇ ಪ್ರತಿಭಟನೆ
ಮದ್ದೂರು: ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು­ಗ­ಳೆಂದು ಘೋಷಿಸಲು ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಟಿಬಿ ವೃತ್ತದ ಬಳಿ ಬುಧವಾರ ಹೆದ್ದಾರಿ ತಡೆ ನಡೆಸಿದರು.

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದ ಅವರು, 20 ನಿಮಿಷಗಳಿಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದರು. ನೂರಾರು ವಾಹನಗಳು ಸಾಲುಗಟ್ಟಿ ನಿಂತು ಬೆಂಗಳೂರು–ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತ­ಗೊಂಡಿತು. ಬಳಿಕ ಅವರು ತಹಶೀಲ್ದಾರ್ ಡಾ.ಎಚ್‌.ಎಲ್‌.ನಾಗರಾಜು ಅವರಿಗೆ ಈ ಸಂಬಂಧ ಮನವಿ ಸಲ್ಲಿದರು.

ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಮಾತನಾಡಿ, ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕಿನ ಬಹುತೇಕ ಹೋಬಳಿಗಳಲ್ಲಿ ನಿಗದಿತ ಪ್ರಮಾಣದ ಮಳೆಯಾಗಿಲ್ಲ. ಜನ– ಜಾನುವಾರುಗಳಿಗೆ ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ಬೆಳೆಗಳು ಒಣಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ, ಕೂಡಲೇ ಸರ್ಕಾರ ಈ ಎರಡು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಮಹಿಳಾ ಉಪಾಧ್ಯಕ್ಷೆ ಸೌಭಾಗ್ಯಮಹದೇವು, ತಾಲ್ಲೂಕು ಅಧ್ಯಕ್ಷ ಅಶೋಕ್, ಕಾರ್ಯಾಧ್ಯಕ್ಷ ಕೃಷ್ಣಪ್ಪ, ಮುಖಂಡ­ರಾದ ಸೆಲ್ವಿಮುರುಗೇಶನ್, ವಾಸು, ಮಹದೇವು, ಚಾಮನಹಳ್ಳಿ ಮಂಜು, ಆನಂದ್, ರಮೇಶ್, ನಾಗಪ್ಪ, ಶ್ರೀಕಂಠಸ್ವಾಮಿ, ನವೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

‘ಶುಲ್ಕ ಮರುಪಾವತಿಸಿ’
ಮಳವಳ್ಳಿ: ಪರೀಕ್ಷಾ ಶುಲ್ಕ ವಿನಾಯಿತಿ ಮರುಪಾವತಿಸುವಂತೆ ಆಗ್ರಹಿಸಿ ಹಾಗೂ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಪಟ್ಟಣದ ಶಾಂತಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಹಾಗೂ ಸರ್ಕಾರದ ವಿರೋಧಿ ನೀತಿ ಖಂಡಿಸಿ ಮೆರವಣಿಗೆ ನಡೆಸಿದರು. ಅನಂತರಾಂ ವೃತ್ತದಲ್ಲಿ ಕೆಲ ಕಾಲ ಮಾನವಸರಪಳಿ ರಚಿಸಿ ಪ್ರತಿಭಟಿಸಿ­ದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಕಳೆದ ಸಾಲಿನಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿನಾಯಿತಿ ಶುಲ್ಕ ಮರುಪಾವತಿಸುವುದಾಗಿ ಕಾಲೇಜು ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಆದರೆ, ಇಲ್ಲಿವರೆಗೂ ಮರುಪಾವತಿ ಮಾಡಿಲ್ಲ. ಕೂಡಲೇ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿಯೂ ಶುಲ್ಕ ಹೆಚ್ಚಳ ಮಾಡಿರುವುದನ್ನ ಖಂಡಿಸಿದರು.

ಟವರ್‌ ಏರಿದ ವಿದ್ಯಾರ್ಥಿ: ಪರೀಕ್ಷಾ ಶುಲ್ಕ ವಿನಾಯಿತಿ ಮರುಪಾವತಿಗೆ ಆಗ್ರಹಿಸಿ ಮನವಿ ಸಲ್ಲಿಸಲು ತಹಶೀಲ್ದಾರ್ ಕಚೇರಿ ಬಳಿ ತೆರಳಿದಾಗ ನಂದನ್‌ತಾಳ್ಯ ಎಂಬ ವಿದ್ಯಾರ್ಥಿ ಕಚೇರಿ ಆವರಣದಲ್ಲಿದ್ದ ಟವರ್ ಮೇಲತ್ತಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಸಾಯುವುದಾಗಿ ಬೆದರಿಕೆ ಹಾಕಿದ. ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದ ಕೆಲವು ವಿದ್ಯಾರ್ಥಿ­ಗಳು ಮೇಲತ್ತಿ ಕೆಳಗಿಳಿಸಿದರು.

ಪ್ರತಿಭಟನೆಯಲ್ಲಿ ಶಿವು, ಲೋಕೇಶ್‌, ಶರತ್‌, ಮಹದೇವಸ್ವಾಮಿ, ರಂಜಿತ, ಕಾರ್ತಿಕ್, ಅಭಿಷೇಕ್‌, ಅನಿಲ್‌ ಇತರರು ಪಾಲ್ಗೊಂಡಿದ್ದರು.
ಮದ್ದೂರು ವರದಿ: ಪರೀಕ್ಷಾ ಶುಲ್ಕ ವಿನಾಯಿತಿ ಮರುಪಾವತಿ ಮಾಡದ ಕಾಲೇಜು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನ ವಿದ್ಯಾರ್ಥಿ­ಗಳು ತಾಲ್ಲೂಕು ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಕಾಲೇಜು ಶಿಕ್ಷಣ ಇಲಾಖೆಯ ಬೇಜವಾ ಬ್ದಾರಿತನದ ಬಗ್ಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡರಾದ ಅನೂಪ್, ರಘು, ಲೋಕೇಶ್, ಮಧುಶ್ರೀ, ಮಾನಸ, ಸ್ಮಿತಾ, ಮೋನಿಷಾ, ಶೃತಿ, ದಿವ್ಯಶ್ರೀ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

‘ಟನ್ ಕಬ್ಬಿಗೆ ರೂ 3 ಸಾವಿರ ನಿಗದಿ ಮಾಡಿ’
ಮಳವಳ್ಳಿ: ಟನ್ ಕಬ್ಬಿಗೆ ರೂ 3 ಸಾವಿರ ನಿಗದಿ ಮಾಡಬೇಕು ಹಾಗೂ ಕಾಲುಬಾಯಿ ಜ್ವರಕ್ಕೆ ತುತ್ತಾಗಿರುವ ಜಾನುವಾರು ಮಾಲೀಕರಿಗೆ ರೂ 25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕನ್ನಡಸೇನೆ ಕರ್ನಾಟಕ ಕಾಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್‌ ನಿಲ್ದಾಣದ ಬಳಿಯಿಂದ ಹೊರಟ ಪ್ರತಿಭಟನಾನಿ­ರತರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ಟನ್‌ ಕಬ್ಬಿಗೆ ರೂ 3 ಸಾವಿರ ನಿಗದಿ ಮಾಡಬೇಕು ಹಾಗೂ ಮೈಷುಗರ್ಶ್ ಮತ್ತು ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸ­ಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ಜಾನುವಾರುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿವೆ. ಹೀಗಾಗಿ, ಪಶುಪಾಲಕರಿಗೆ ಸರ್ಕಾರ ರೂ 25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್‌ ಕಚೇರಿಗೆ ಮನವಿಪತ್ರ ಸಲ್ಲಿಸಿದರು.

ಕನ್ನಡಸೇನೆ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್‌, ಕೆ.ಸಿ. ನಾಗೇಗೌಡ, ಮುದ್ದುಮಮಲ್ಲು, ಬಸವರಾಜು, ಪದ್ಮನಾಭ, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ನೀರಿನ ಟ್ಯಾಂಕ್‌ ನಿರ್ಮಿಸಲು ಒತ್ತಾಯಿಸಿ ಪ್ರತಿಭಟನೆ
ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ನ ಅರಳಿಮರ ವೃತ್ತದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕಿರು ನೀರಿನ ಟ್ಯಾಂಕ್‌ ನಿರ್ಮಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಬುಧವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಸಿದ ಗ್ರಾ.ಪಂ. ಸದಸ್ಯರು, ಮಾಜಿ ಸದಸ್ಯರು ಹಾಗೂ ಮುಖಂಡರು ಗ್ರಾಮ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು. ಗ್ರಾಮದ 3ನೇ ವಾರ್ಡ್‌ನ ಅರಳಿಮರ ವೃತ್ತದ ಹೃದಯ ಭಾಗದಲ್ಲಿದ್ದು, ಸ್ಥಳೀಯರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯ ಹಾಗೂ ಬೃಂದಾವನ ವೀಕ್ಷಿಸಲು ಬರುವ ಪ್ರವಾಸಿಗರು ಇಲ್ಲಿ ಕೆಲವೊತ್ತು ತಂಗಿದ್ದ ನಂತರ ಮುನ್ನಡೆಯುತ್ತಾರೆ. ಆದರೆ ಅವರಿಗೆ ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರಾದ ಉಮಾ ಬಸವರಾಜು, ನಾಗೇಂದ್ರಕುಮಾರ್‌ ಇತರರು ಒತ್ತಾಯಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ  ಎಂ.ಬಿ.ಕುಮಾರ್‌, ಅರಳಿಮರ ವೃತ್ತದ ಬಳಿ ಜಾಗದ ಸಮಸ್ಯೆ ಇದೆ. ಖಾಲಿ ಇರುವ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಇದೆ. ಖಾಸಗಿ ವ್ಯಕ್ತಿಯೊಬ್ಬರು ತಕರಾರು ತೆಗೆದಿದ್ದಾರೆ. ಕಿರು ನೀರಿನ ಟ್ಯಾಂಕ್‌ ನಿರ್ಮಿಸಲು ಸಮಸ್ಯೆಯಾಗಿದೆ. ಸೂಕ್ತ ಸ್ಥಳಾವಕಾಶ ಸಿಕ್ಕರೆ ನೀರಿನ ಟ್ಯಾಂಕ್‌ ನಿರ್ಮಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗ್ರಾ.ಪಂ. ಸದಸ್ಯರಾದ ನಾರಾಯಣ, ಹೇಮಂತಕುಮಾರ್‌, ಮಾಜಿ ಸದಸ್ಯರಾದ ಕಲಾ, ಕಾವೇರಿ, ಮುಖಂಡರಾದ ಮಾದೇಗೌಡ, ಜಗದೀಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT