ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಸಂಘಟನೆಯಿಂದ ಪ್ರತಿಭಟನೆ

ನೆಲಗಡಲೆ ಬಿತ್ತನೆ ಬೀಜ ಕೊರತೆ ಆರೋಪ
Last Updated 17 ಜುಲೈ 2013, 10:23 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ರೈತರಿಗೆ ಉಚಿತವಾಗಿ ವಿತರಿಸಬೇಕಾದ ನೆಲಗಡಲೆ ಬಿತ್ತನೆ ಬೀಜವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರೈತ ಸಂಘ-ಹಸಿರು ಸೇನೆ, ಬಿಜೆಪಿ, ದಲಿತಪರ ಸಂಘಟನೆಯವರು ಮಂಗಳವಾರ ತಾಲ್ಲೂಕು ಕೃಷಿ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದರು. 

ಪಟ್ಟಣದ ಕೃಷಿ ಇಲಾಖೆ ಮುಂದೆ ಜಮೆಯಾದ ರೈತರು, ರೈತ-ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಕೃಷಿ ಇಲಾಖೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಹೋಬಳಿವಾರು ಅತಿ ಸಣ್ಣ ಹಾಗೂ ಸಣ್ಣ ರೈತರಿಗೆ ಉಚಿತವಾಗಿ ನೆಲಗಡಲೆ ಬಿತ್ತನೆ ಬೀಜ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಒತ್ತಾಯದ ಪತ್ರ ತರುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಉಚಿತವಾಗಿ ಬಂದಿರುವ ನೆಲಗಡಲೆ ಬಿತ್ತನೆ ಬೀಜವನ್ನು ಅರ್ಹ ರೈತರಿಗೆ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.

ತಾಲ್ಲೂಕಿನ ರೈತರಿಗಾಗಿ ಹೊಸ ತಳಿಯ 200 ಮೂಟೆ ನೆಲಗಡಲೆ ಬಿತ್ತನೆ ಬೀಜವು ಕೇಂದ್ರ ಸರ್ಕಾರದ ಅನುದಾನದಲ್ಲಿ ಬಂದಿದೆ. ಇದರಲ್ಲಿ ಶುಕ್ರವಾರ 80 ಮೂಟೆಗಳು ವಿತರಿಸಲಾಗಿದೆ. ಉಳಿದದ್ದನ್ನು ಪಡೆಯಲು ರೈತರು ಆಗಮಿಸಿದ್ದಾರೆ. ದಾಸ್ತಾನು ಕಡಿಮೆಯಿದ್ದು, ಅಗತ್ಯ ಪ್ರಮಾಣದಲ್ಲಿ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಇಲಾಖೆ ಸಿಬ್ಬಂದಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ಎ.ಪದ್ಮಾ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು. ನಂತರ ಕೃಷಿ ನಿರ್ದೇಶಕರೊಡನೆ ಮಾತನಾಡಿ, ನೆಲಗಡಲೆ ಬಿತ್ತನೆ ಬೀಜದ ದಾಸ್ತಾನಿನ ಬಗ್ಗೆ ಮಾಹಿತಿ ಪಡೆದರು. ನಂತರ ಪ್ರತಿಕ್ರಿಯಿಸಿ, ನೆಲಗಡಲೆ ಬಿತ್ತನೆ ಬೀಜ ಮೂಟೆಗಳು ಕಡಿಮೆ ಇವೆ. ಎಲ್ಲ ರೈತರಿಗೆ ವಿತರಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ದಾಸ್ತಾನು ತರಿಸಲಾಗುವುದು. ಸದ್ಯ ದಾಸ್ತಾನು ಕೇಂದ್ರಕ್ಕೆ ಬೀಗ ಹಾಕುತ್ತೇವೆ ಎಂದು ತಿಳಿಸಿದರು.  

`ಒಂದು ವಾರದಿಂದ ಮಳೆಯಾಗುತ್ತಿದೆ. ಬಿತ್ತನೆ ಮಾಡಲು ಭೂಮಿ ಹದ ಮಾಡಲಾಗಿದೆ. ತಾಲ್ಲೂಕಿನಲ್ಲಿ ರೈತರು ಅತಿ ಹೆಚ್ಚಾಗಿ ನೆಲಗಡಲೆ ಬೆಳೆಯುತ್ತಾರೆ. ನೆಲಗಡಲೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸುವಲ್ಲಿ ಕೃಷಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಉಚಿತವಾಗಿ ವಿತರಸುವ ಬಿತ್ತನೆ ಬೀಜ ಪಡೆಯಲು ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ಸಾಲಿನಲ್ಲಿ ಕಾದು ನಿಂತರೂ ಸಿಕ್ಕಿಲ್ಲ' ಎಂದು ಕೃಷಿಕ ಪುಟ್ಟಪರ್ತಿ ಗ್ರಾಮದ ತಿಪ್ಪಣ್ಣ ಬೇಸರ ವ್ಯಕ್ತಪಡಿಸಿದರು. 

ರೈತ ಸಂಪರ್ಕ ಕೇಂದ್ರದ ಮುಂದೆ ಮಂಗಳವಾರ ತಾಲ್ಲೂಕಿನ 500ಕ್ಕೂ ಹೆಚ್ಚು ಕೃಷಿಕರು ಜಮಾಯಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಗಂಗಿರೆಡ್ಡಿ, ಕಾರ್ಯದರ್ಶಿ ಮರಿಯಪ್ಪ, ಮಹಿಳಾ ಘಟಕದ ಗಂಗರತ್ನಮ್ಮ, ರಾಮರತ್ನಮ್ಮ, ಈಶ್ವರಮ್ಮ, ಫರ್ವೀನಾ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗೂಳೂರು ಲಕ್ಷ್ಮೀನಾರಾಯಣ, ದಲಿತ ಮುಖಂಡರಾದ ಆಂಜಿನಪ್ಪ, ಚಿನ್ನಪೂಜಪ್ಪ, ಜಯಂತ್, ರವಿ, ನರಸಿಂಹಯ್ಯ, ನರಸಿಂಹಪ್ಪ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT