ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಅನುದಾನಕ್ಕೆ ಆಗ್ರಹ: ಪ್ರತಿಭಟನೆ

Last Updated 12 ಡಿಸೆಂಬರ್ 2013, 8:24 IST
ಅಕ್ಷರ ಗಾತ್ರ

ಬಳ್ಳಾರಿ: ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಕುಶಲಕರ್ಮಿಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ವಿಶ್ವಕರ್ಮ ಮಹಾಮಂಡಲ ನೇತೃತ್ವದಲ್ಲಿ ಮಂಗಳವಾರ ಕುಶಲಕರ್ಮಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಮಹಾ ಮಂಡಲದ ರಾಜ್ಯ ಘಟಕದ ಅಧ್ಯಕ್ಷ ಎಲ್. ನಾಗರಾಜಾಚಾರ್ ಅವರು, ‘ಬೆಲೆ ಏರಿಕೆಯಿಂದ ಕುಶಲಕರ್ಮಿಗಳ ಜೀವನ ದುಸ್ತರವಾಗಿದೆ. ಸಾಂಪ್ರದಾಯಿಕ ವೃತ್ತಿ ಕೈಗೊಂಡು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಬಡಗಿ, ಕಮ್ಮಾರಿಕೆ, ಎರಕದ ಕೆಲಸ, ರಥ ಶಿಲ್ಪಿ, ಆಭರಣ ಸಿಲ್ಪಿ, ವಿಗ್ರಹಗಳ ಕೆತ್ತನೆ ಸೇರಿದಂತೆ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ 1,010 ಫಲಾನು­ಭವಿಗಳಿಗೆ ಕುಶಲಕರ್ಮಿಗಳ ವಿಶೇಷ ಅನು­ದಾನದ ಅಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಾಗರಾಜಾಚಾರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಕುಶಲಕರ್ಮಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ ಈವರೆಗೂ ಜಿಲ್ಲಾಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ದೂರಿದರು.

‘ವಿಶ್ವಕರ್ಮ ಸಮುದಾಯವನ್ನು ಹಿಂದುಳಿದ 2ಎ ಪ್ರವರ್ಗದ ಬದಲಾಗಿ ಪ್ರವರ್ಗ 1ಕ್ಕೆ ಸೇರಿಸಬೇಕು. ಜನಾಂಗದ ಮಕ್ಕಳಿಗೆ ಸಂಪೂರ್ಣ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ 1ಎಕರೆ ಸ್ಥಳ ನೀಡಲು ಜಿಲ್ಲಾಕಾರಿಗಳಿಗೆ ಆದೇಶಿಸಿ ಅನುಮೋದನೆ ನೀಡಬೇಕು. ಕುಶಲಕರ್ಮಿಗಳ ಅಭಿವೃದ್ಧಿಗೆ 2013–14ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₨ 50 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಒತ್ತಾಯಹಿಸಿದರು.

ನಂತರ ಜಿಲ್ಲಾಕಾರಿ ಕಚೇರಿ ಸಹಾಯಕ ಪ್ರಾಣೇಶ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಚಂದ್ರಕಾಂತ್ ಸೋನಾರ್, ಕೃಷ್ಣಾನಂದ್, ಚಂದ್ರಶೇಖರ್, ಸೂರ್ಯನಾರಾಯಣ ಆಚಾರ್, ವಸಂತ್ ಕುಮಾರ್, ಕರಿಯಪ್ಪ, ಮಂಜುನಾಥ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT