ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಕೋರ್ಟ್ ಸ್ಥಾಪಿಸಲು ಸೂಚನೆ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಯಾವ ಪ್ರಭಾವಕ್ಕೊಳಗಾಗದೆ ಅಥವಾ ಸ್ಥಾನಮಾನ ಲೆಕ್ಕಿಸದೆ 2ಜಿ ತರಂಗಾಂತರ ವ್ಯವಹಾರದಿಂದ ಲಾಭ ಪಡೆದಿರುವ ಕಾರ್ಪೊರೇಟ್ ಸಂಸ್ಥೆಗಳನ್ನು ಕಠಿಣ ತಪಾಸಣೆಗೊಳಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಗುರುವಾರ ಸೂಚಿಸಿದೆ. ಸಿಬಿಐಗೆ ಮುಕ್ತ ಅವಕಾಶ ನೀಡುವ ಮೂಲಕ ತನಿಖೆ ಜಾಲ ವಿಸ್ತರಿಸಿರುವ ಸುಪ್ರೀಂ ಕೋರ್ಟ್, 2ಜಿ ತರಂಗಾಂತರ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತು.

ಹಗರಣದಲ್ಲಿ ಪಾತ್ರ ಹೊಂದಿರಬಹುದಾದ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕರೆದು, ವಿಚಾರಿಸಿ ಕಳುಹಿಸಿದರೆ ಸಾಲದು. ಕಠಿಣ ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದು ನ್ಯಾ. ಜಿ.ಎಸ್. ಸಿಂಘ್ವಿ ಹಾಗೂ ನ್ಯಾ, ಎ.ಕೆ. ಗಂಗೂಲಿ ಅವರನ್ನೊಳಗೊಂಡ ಪೀಠ ತಿಳಿಸಿತು. ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಅದರ ಅಧಿಕಾರಿಗಳ ಹೆಸರನ್ನು ಒಳಗೊಂಡಿರುವ ಸಿಬಿಐ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್. ಕೆಲವರು ತಾವೇ ಕಾನೂನು ಎಂದು ಭಾವಿಸಿದ್ದಾರೆ.

ಕಾನೂನು ಅಂಥವರನ್ನು ಬಿಡಬಾರದು. ಈ ಕೆಲಸ ತೀವ್ರಗತಿಯಲ್ಲಿ ಆಗಬೇಕು. ಯಾರು ಎಷ್ಟು ದೊಡ್ಡವರೆಂಬುದು ಮುಖ್ಯವಾಗಬಾರದು ಎಂದು ಅಭಿಪ್ರಾಯಪಟ್ಟಿತು. ಅರ್ಜಿದಾರ ಎನ್‌ಜಿಒ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್, 2ಜಿ ತರಂಗಾಂತರ ಗುತ್ತಿಗೆ ಮಂಜೂರಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ನಿಯಂತ್ರಣದಲ್ಲಿದ್ದ ‘ಸ್ವಾನ್ ಟೆಕ್ನಾಲಜಿ’ ಒಳಗೊಂಡಂತೆ ಬಹಳಷ್ಟು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರನ್ನು ತನಿಖಾ ಸಂಸ್ಥೆ ವಿಚಾರಣೆಗೊಳಪಡಿಸಿಲ್ಲ ಎಂದು ಪ್ರತಿಪಾದಿಸಿದರು.

ಕಂಪೆನಿಗಳ ಉನ್ನತ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ವಿಚಾರಣೆಗೊಳಪಡಿಲ್ಲ. ಸಿಬಿಐ ಈ ಸಂಬಂಧ ಯಾವ ಕ್ರಮ ಕೈಗೊಂಡಿದೆ ಎಂದು ವಿವರಣೆ ಕೇಳಿತು. ತನಿಖಾ ದಳದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಾರದು. ಟೆಲಿಕಾಂ ಮಾಜಿ ಸಚಿವ ಎ. ರಾಜಾ ಸೇರಿದಂತೆ ಹಗರಣದಲ್ಲಿ ಈಗಾಗಲೇ ಬಂಧಿತರಾಗಿರುವ ನಾಲ್ವರ ಹೊರತುಪಡಿಸಿ ಉಳಿದ ಪಿತೂರಿಗಾರರ ಹೆಸರನ್ನು ಬಹಿರಂಗ ಮಾಡಬೇಕು ಎಂದು ತಾಕೀತು ಮಾಡಿತು.

ಸಿಬಿಐಗೆ ಯಾರನ್ನು ಬೇಕಾದರೂ ವಿಚಾರಣೆಗೊಳಪಡಿಸುವ ಅಧಿಕಾರವಿದೆ. ಮೇಲ್ನೋಟಕ್ಕೆ ನಾಲ್ವರು  ಭಾಗಿಯಾಗಿದ್ದಾರೆಂಬ ತೀರ್ಮಾನಕ್ಕೆ ತನಿಖಾ ಸಂಸ್ಥೆ ಬಂದಿದೆ. ಆದರೆ, ಫಲಾನುಭವಿಗಳ ಬಗ್ಗೆ ಯಾಕೆ ಏನೂ  ಹೇಳಿಲ್ಲ. ಈ ದೊಡ್ಡ ಪಿತೂರಿಯಲ್ಲಿ ಅವರ ಪಾತ್ರವೂ ಇದೆ. ಅವರ ಬಗ್ಗೆ ತಿಳಿಯಬೇಕಾಗಿದೆ. ಆ ಬಗ್ಗೆ ಏನು ಕ್ರಮ  ಕೈಗೊಳ್ಳುವಿರೆಂದು ಸ್ಪಷ್ಟಪಡಿಸಿ ಎಂದು ನ್ಯಾಯಾಲಯ ಕೇಳಿತು.

ಈಗಾಗಲೇ ಬಂಧಿತರಾಗಿರುವ ಆರೋಪಿಗಳನ್ನು ಅಲ್ಪ ಅವಧಿಗೆ ಕಸ್ಟಡಿಗೆ ಪಡೆಯುತ್ತಿರುವುದರ ಹಿಂದಿನ ತರ್ಕವೇನು.ಬಂಧಿತರನ್ನು ಅಲ್ಪ ಅವಧಿಗೆ ಕಸ್ಟಡಿಗೆ ಪಡೆಯುತ್ತಿರುವುದನ್ನು ಗಮನಿಸಿದರೆ ಸಿಬಿಐ ಸ್ವಾತಂತ್ರ್ಯ ಮೊಟಕಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಹಾಗೇನಾದರೂ ಆದರೆ ಇಡೀ ತನಿಖೆ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಹಗರಣಕ್ಕೆ ಸಂಬಂಧಿಸಿದಂತೆ ಬೇರೆ ನ್ಯಾಯಾಲಯಗಳು ಬೇರೆ ಆದೇಶ ಹೊರಡಿಸದಂತೆ ನ್ಯಾಯಾಲಯ ನಿರ್ಬಂಧಿಸಿತು. ಇದು ತನಿಖೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿತು.

ಸಿಬಿಐ ಪರ ಹಾಜರಾದ ವಕೀಲ ಕೆ.ಕೆ. ವೇಣುಗೋಪಾಲ್ ಫಲಾನುಭವಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲು ಸ್ವಲ್ಪ ಕಾಲಾವಕಾಶ ಬೇಕಾಗಲಿದೆ. ತನಿಖೆ ವ್ಯಾಪ್ತಿ ವಿಸ್ತರಿಸಲಾಗಿದೆ. ಒಂದು ತಿಂಗಳು ಕಾಲಾವಕಾಶ ಕೊಡಿ ಫಲಾನುಭವಿಗಳ ವಿವರಗಳನ್ನು ಒದಗಿಸುತ್ತೇವೆ ಎಂದರು. ರಾಜಾ ಅವಧಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮೊದಲ ದೋಷಾರೋಪ ಪಟ್ಟಿಯನ್ನು ಮಾರ್ಚ್ 31ರೊಳಗೆ ಸಲ್ಲಿಸುವುದಾಗಿ ವೇಣುಗೋಪಾಲ್ ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಈ ದೋಷಾರೋಪ ಪಟ್ಟಿಯನ್ನು ಸಂಬಂಧಿಸಿದ ನಿಯೋಜಿತ ನ್ಯಾಯಾಲಯದಲ್ಲಿ ಸಲ್ಲಿಸುವ ಮುನ್ನ ಕರಡು ಪ್ರತಿಯನ್ನು ತನ್ನ ಪರಿಶೀಲನೆಗೊಳಪಡಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ನಿಗದಿತ ಅವಧಿಯೊಳಗೆ ಪ್ರಕರಣದ ವಿಚಾರಣೆ ಮುಗಿಸುವ ದೃಷ್ಟಿಯಿಂದ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು,ಈ ಕುರಿತಂತೆ ಸರ್ಕಾರ ಸೂಕ್ತ ಭರವಸೆ ನೀಡಬೇಕು.

ಇದಕ್ಕೆ ಪರ್ಯಾಯವಾದ ಮತ್ತೊಂದು ಪ್ರಕರಣ ಇಲ್ಲದಿರುವುದರಿಂದ ಆದ್ಯತೆ ಮೇಲೆ ವಿಚಾರಣೆ ಮುಗಿಸಬೇಕು ಎಂದು ತಿಳಿಸಿತು. ಸಂಬಂಧಪಟ್ಟವರ ಜತೆ ಚರ್ಚಿಸಿ ಎರಡು ವಾರದೊಳಗೆ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸುವುದಾಗಿ ಅಟಾರ್ನಿ ಜನರಲ್ ಜಿ. ಇ. ವಹನ್ವತಿ ಆಶ್ವಾಸನೆ ನೀಡಿದರು. 2ಜಿ ಹಗರಣಕ್ಕೆ ಕಾರಣವಾದ 2003ರ ಟ್ರಾಯ್ ತೀರ್ಮಾನ, ಪರವಾನಗಿ ಪಡೆಯುವ ಮೊದಲೇ ಬ್ಯಾಂಕುಗಳು ಸಾಲ ನೀಡಿದ ವೈಖರಿ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯ, ಟ್ರಾಯ್ ಮತ್ತು ಬ್ಯಾಂಕ್ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

ಪರವಾನಗಿ ಪಡೆಯುವ ಮುನ್ನವೇ ಸಾಲ ನೀಡಿರುವ ಪರಿ ಕುರಿತು ವೇಣುಗೋಪಾಲ್ ನ್ಯಾಯಾಲಯದ ಗಮನ ಸೆಳೆದರು.ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸದೆ ಹೇಗೆ ಸಾಲ ಮಂಜೂರು ಮಾಡಲಾಯಿತು ಎಂದು ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT