ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಸಮಾಜದ ಕಡೆಗಣನೆ ಸಲ್ಲದು

Last Updated 23 ಜನವರಿ 2012, 8:50 IST
ಅಕ್ಷರ ಗಾತ್ರ

ದಾವಣಗೆರೆ: ವಿಶ್ವಕರ್ಮ ಮಠಗಳಿಗೆ ಸರ್ಕಾರದ ನೆರವು ಇನ್ನಷ್ಟು ಬೇಕಿದೆ. ಮಠದ ಶಾಖೆ ತೆರೆಯಲು ನಿವೇಶನ ನೀಡಬೇಕು. ಸರ್ಕಾರದ ಮಲತಾಯಿ ಧೊರಣೆ ಸಲ್ಲದು...

- ಇವು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅರೇಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಿವಸುಜ್ಞಾನ ಮೂರ್ತಿ ಸ್ವಾಮೀಜಿ ಅವರ ನುಡಿ.

ನಗರದಲ್ಲಿ ಭಾನುವಾರ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಜಿಲ್ಲಾ ವಿಶ್ವಕರ್ಮ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜದವರು ಒಂದು ರಾಜಕೀಯ ಪಕ್ಷವನ್ನು ಗೆಲ್ಲಿಸುವಷ್ಟು ಸಂಖ್ಯೆಯಲ್ಲಿ ಇಲ್ಲದೇ ಇರಬಹುದು. ಆದರೆ, ಅವರು ಮನಸ್ಸು ಮಾಡಿದರೆ ಬೇರೆ ನಿರ್ಧಾರ ಕೈಗೊಳ್ಳಬಹುದು. ಆದ್ದರಿಂದ ಈ ಸಮಾಜದ ಕಡೆಗಣನೆ ಸಲ್ಲದು ಎಂದು ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದರು.

ಸಮಾಜ ಬಾಂಧವರು ಧಾರ್ಮಿಕ ಕೇಂದ್ರಗಳ ಮೂಲಕ ಸಮಾಜ ಒಗ್ಗೂಡಬೇಕು. ರಾಜಕೀಯ ಪ್ರಾತಿನಿಧ್ಯವೂ ಸಿಗಬೇಕು ಎಂದು ಆಗ್ರಹಿಸಿದ ಅವರು, ಆಧುನಿಕ ಜಗತ್ತು ವೈಜ್ಞಾನಿಕ ಮುನ್ನಡೆ ಸಾಧಿಸಿದಂತೆ ಕುಲಕಸುಬು ಮರೆತ ಸಮಾಜ ನಶಿಸಿಹೋಗುವ ಆತಂಕವಿದೆ. ಅದಕ್ಕಾಗಿ ಸಂಘಟನೆ ಬಲಪಡಿಸಬೇಕು ಎಂದು ಕರೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಮಾಜವು ಕೇವಲ ಸಾಂಪ್ರದಾಯಿಕ ಕಸುಬುಗಳಿಗಷ್ಟೇ ಸೀಮಿತವಾಗದೇ ಆಧುನಿಕ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಸಮಾಜದ ಮಠ ಸ್ಥಾಪನೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಬೇಕು. ತಾವು ಈ ಸಮಾಜದವರ ಬೇಡಿಕೆಗಳಿಗೆ ಸ್ಪಂದಿಸಲು ಬದ್ಧ ಎಂದು ಹೇಳಿದರು.

ವಿಶ್ವಕರ್ಮ ನೌಕರರ ಸಂಘ ಉದ್ಘಾಟಿಸಿದ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಸರ್ಕಾರಿ ಸೇವೆಗೆ ಸೇರಿದ ಬಳಿಕ ಅವರು ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದರು.

ಶಾಸಕರಾದ ಶಾಮನೂರು ಶಿವಶಂಕರಪ್ಪ ಸಮಾಜದ ಯುವಕ ಸಂಘ, ಎಂ. ಬಸವರಾಜ ನಾಯ್ಕ ಅವರು ಚಿನ್ನ ಬೆಳ್ಳಿ ಕೆಲಸಗಾರರ ಸಂಘವನ್ನು ಉದ್ಘಾಟಿಸಿದರು.

ಬಿಜಾಪುರದ ಅಂತರವಳ್ಳಿ ಮೂರುಜಾವಾಧೀಶ್ವರ ಮಠದ ಮೌನೇಶ್ವರ ಸ್ವಾಮೀಜಿ, ಉಡುಪಿ ಜಿಲ್ಲೆ ಕಟಪಾಡಿಯ ಮದಾನೇಗುಂದಿ ಕಾಳಹಸ್ತೇಂದ್ರ ಸ್ವಾಮೀಜಿ, ಹುಲಿಯೂರುದುರ್ಗದ ಕರುಣಾಕರ ಸ್ವಾಮೀಜಿ, ಚನ್ನಗಿರಿಯ ವಡ್ನಾಳು ಮಠದ ಅಭಿನವ ದೇವಣಾಚಾರ್ಯ ಸ್ವಾಮೀಜಿ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ. ಮರಿಯಾಚಾರ್, ಗೌರವಾಧ್ಯಕ್ಷ ಬಸಾಪುರ ನಾಗೇಂದ್ರಾಚಾರ್, ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್, ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪಿ. ಮೌನಾಚಾರ್, ಬಿ. ಉಮೇಶ್, ಎಚ್.ಕೆ. ರಾಮಚಂದ್ರಪ್ಪ, ಮೇಯರ್ ಎಚ್.ಎನ್. ಗುರುನಾಥ್, ಸುಶೀಲಮ್ಮ ಮಂಜುನಾಥ್, ಎಚ್.ಎಸ್. ಶಿವಶಂಕರ್, ಟಿ. ದಾಸಕರಿಯಪ್ಪ ಇತರರು ಉಪಸ್ಥಿತರಿದ್ದರು. ಕಲಿವೀರಪ್ಪ ಸ್ವಾಗತಿಸಿದರು, ಶಿವಾನಂದ ಪ್ರಾಸ್ತಾವಿಕ ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT