ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರ ಸಂಶೋಧನೆಯೇ ಬುನಾದಿ

ಗುರುತ್ವಾಕರ್ಷಣೆಯ ಅಲೆ ಆವಿಷ್ಕಾರ: ಬೆಂಗಳೂರಿಗರ ಸಾಧನೆ
Last Updated 13 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುರುತ್ವಾಕರ್ಷಣ ಅಲೆಗಳ ಅನ್ವೇಷಣೆಯಲ್ಲಿ ಬೆಂಗಳೂರಿನ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲಿ ಹಿರಿಯ ವಿಜ್ಞಾನಿ ಪ್ರೊ.ಸಿ.ವಿ. ವಿಶ್ವೇಶ್ವರ ಅವರ ಕೊಡುಗೆ ಮಹತ್ವದ್ದು. ಕಪ್ಪುರಂಧ್ರದ ರಚನೆಯ ಬಗ್ಗೆ ಮೊದಲ ಬಾರಿ ಸಂಶೋಧನೆ ಕೈಗೊಂಡ ವಿಜ್ಞಾನಿಗಳಲ್ಲಿ ವಿಶ್ವೇಶ್ವರ ಅವರೂ ಒಬ್ಬರು. 

ಕಪ್ಪು ರಂಧ್ರಗಳ ಬಗ್ಗೆ ಅವರು 1968ರಲ್ಲಿ ಮೊದಲ ಸಂಶೋಧನೆ ಮಾಡಿದ್ದರು. ಕಪ್ಪು ರಂಧ್ರಗಳ ರಚನೆ, ವಿನ್ಯಾಸದ ಮೇಲೆ ಅವರು ಪ್ರಬಂಧ ಬರೆದಿದ್ದರು. ಕಪ್ಪು ರಂಧ್ರಗಳ ಒಳಗೆ ಬೆಳಕು ಸೇರಿ ಎಲ್ಲ ಪದಾರ್ಥಗಳು ಹೋಗಬಹುದು. ಆದರೆ, ಹಿಂದಕ್ಕೆ ಬರಲು ಸಾಧ್ಯವಿಲ್ಲ ಎಂದು ಬೆಳಕು ಚೆಲ್ಲಿದ್ದರು. ಕಪ್ಪು ರಂಧ್ರದ ಸ್ಥಿರತೆ ಬಗ್ಗೆ ಅವರು 1970ರಲ್ಲಿ ಅವರು ಎರಡನೇ ಪ್ರಬಂಧ ಬರೆದಿದ್ದರು.

ಕಪ್ಪು ರಂಧ್ರಗಳನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಮೂರನೇ ಪ್ರಬಂಧವನ್ನು ಬರೆದಿದ್ದರು. ‘ಈಗಿನ ಆವಿಷ್ಕಾರ ನನ್ನ ಸಂಶೋ ಧನೆಯನ್ನು ಖಚಿತಪಡಿಸಿದೆ’ ಎಂದು ಅವರು ಸಂತೋಷ ವ್ಯಕ್ತಪಡಿ ಸಿದರು.

ವಿಶ್ವೇಶ್ವರ ಅವರ ಸಾಧನೆ:  ಕೊಲಂಬಿಯಾ ವಿಶ್ವವಿದ್ಯಾಲ ಯದಲ್ಲಿ  ಉನ್ನತ ವ್ಯಾಸಂಗ ಮಾಡಿದ ಅವರು ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದ್ದರು. ಹಲವು ವಿವಿಗಳಿಗೆ ಸಂದರ್ಶಕ ಪ್ರಾಧ್ಯಾಪಕರಾ ಗಿದ್ದರು.
ಜವಾಹರ್‌ಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕ ರಾಗಿಯೂ ಸೇವೆ ಸಲ್ಲಿಸಿದ್ದರು.

1989ರಲ್ಲಿ ತಾರಾಲಯ ಸ್ಥಾಪನೆಯಾಯಿತು. ಆಗ ದೇಶದ ನಾನಾ ಭಾಗಗಳಲ್ಲಿ ಸಾಕಷ್ಟು ತಾರಾಲಯಗಳಿದ್ದವು. ಅವುಗಳಿಗಿಂತ ವಿಭಿನ್ನವೂ, ವಿಶಿಷ್ಟವೂ ಆದ ತಾರಾಲಯವನ್ನು ರೂಪಿಸುವ ಹೊಣೆ ವಿಶ್ವೇಶ್ವರ ಅವರ ಹೆಗಲೇರಿತ್ತು. ಅದನ್ನು ಸುಸಜ್ಜಿತ ವಿಜ್ಞಾನ ಕೇಂದ್ರವಾಗಿ ಮಾರ್ಪಡಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

‘ವಿಜ್ಞಾನಿಗಳು ಹೆಚ್ಚಿನ ನಿರೀಕ್ಷೆ ಇಲ್ಲದೆ ಸಂಶೋಧನೆಯಲ್ಲಿ ತೊಡಗುತ್ತಾರೆ. ಬಹು ದೊಡ್ಡ ಫಲ ಸಿಕ್ಕಾಗ ಸಂತಸವಾಗುತ್ತದೆ. ಈಗಿನ ಸಂಶೋಧನೆ ಮಹತ್ವದ ಮೈಲುಗಲ್ಲು’ ಎಂದು ವಿಶ್ವೇಶ್ವರ ಅವರ ಪತ್ನಿ ಸರಸ್ವತಿ ಅಭಿಪ್ರಾಯಪಟ್ಟರು. ಅವರೂ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದರು.

ಟಾಟಾ ಇನ್‌ಸ್ಟಿಟ್ಯೂಟ್‌ ವಿಜ್ಞಾನಿಗಳು ಭಾಗಿ: ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮುಂತಾದ ಸಂಸ್ಥೆಗಳು ಬಹುಕಾಲದಿಂದ ಗುರುತ್ವ ಅಲೆಯ ಪತ್ತೆ ಕಾರ್ಯದಲ್ಲಿ ತೊಡಗಿವೆ. ಅನ್ವೇಷಣಾ ಕಾರ್ಯದಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಫಂಡಮೆಂಟಲ್‌ ರಿಸರ್ಚ್‌ನ ಹಿರಿಯ ವಿಜ್ಞಾನಿ ಪ್ರೊ. ಬಾಲ ಆರ್‌. ಅಯ್ಯರ್‌ ಹಾಗೂ ಅವರ ಸಹೋದ್ಯೋಗಿ ವಿಜ್ಞಾನಿ ಪರಮೇಶ್ವರನ್‌ ಅಜಿತ್‌ ಭಾಗಿಗಳಾಗಿದ್ದರು.

‘ಇದು ಅಂತರರಾಷ್ಟ್ರೀಯ ಮಟ್ಟದ ಪ್ರಯೋಗ. ಸಾವಿರಾರು ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ. ದೇಶದ ಸುಮಾರು 35 ವಿಜ್ಞಾನಿಗಳು ಭಾಗಿಯಾಗಿದ್ದಾರೆ’ ಎಂದು ಪ್ರೊ. ಬಾಲ ಆರ್‌. ಅಯ್ಯರ್‌ ಹೇಳಿದರು. ಅವರು 20 ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದಾರೆ. ‘ಈಗಿನ ಯಶಸ್ಸಿಗೆ ವಿಶ್ವೇಶ್ವರ ಅವರು 1970ರಲ್ಲಿ ಮಂಡಿಸಿದ ಪ್ರಬಂಧವೇ ಬುನಾದಿ’ ಎಂದು ಅವರು ಹೆಮ್ಮೆಯಿಂದ ಹೇಳಿದರು. ಅಯ್ಯರ್‌ ಅವರು ಕೇರಳ ಮೂಲದವರು.

‘ಈ ಅಲೆಯ ಪತ್ತೆಯು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ’ ಎಂದು ಅವರು ಹೇಳಿದರು.
‘2015ರ ಸೆಪ್ಟೆಂಬರ್‌ನಲ್ಲಿ ರಜೆಯಲ್ಲಿ ಕೇರಳಕ್ಕೆ ತೆರಳಿದ್ದೆ. ಆಗ ಸಹೋದ್ಯೋಗಿಯೊಬ್ಬರು ಕರೆ ಮಾಡಿ ಮಹತ್ವದ ಫಲಿತಾಂಶ ಸಿಗುವ ಸಾಧ್ಯತೆಗಳು ನಿಚ್ಚಳ ವಾಗಿದ್ದು, ಕೂಡಲೇ ಕರ್ತವ್ಯಕ್ಕೆ ಹಾಜರಾ ಗುವಂತೆ ವಿನಂತಿಸಿದರು.

ರಜೆಯನ್ನು ರದ್ದುಗೊಳಿಸಿ ಬೆಂಗಳೂರಿಗೆ ಮರಳಿದೆ. ಬಳಿಕ ನಿದ್ರೆಯಿಲ್ಲದ ಮೂರು ವಾರಗ ಳನ್ನು ಕಳೆದೆವು. 10 ದಿನಗಳಲ್ಲಿ ಮೊದಲ ಫಲಿತಾಂಶ ಬಂತು. ಅದು ಮುಂದಿನ ಸಂಶೋಧನೆ ಹಾಗೂ ವಿಶ್ಲೇಷಣೆಗೆ ನೆರವಾಯಿತು’ ಎಂದು ಅಜಿತ್‌ ಅವರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT