ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವೇಶ್ವರಯ್ಯ ನಿವಾಸ ನವೀಕರಣ

Last Updated 19 ಮೇ 2012, 9:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಜನಿಸಿದ ಮನೆ ಆವರಣದಲ್ಲಿ ಕಳೆದ ಕೆಲ ದಿನಗಳಿಂದ ಸಂಚಲನ ಕಾಣತೊಡಗಿದೆ. ಸ್ಮಾರಕದಂತಿರುವ ಮನೆ ಆವರಣಕ್ಕೆ ಹೊಸ ಸ್ವರೂಪ ನೀಡುವ ಪ್ರಯತ್ನ ನಡೆಸಲಾಗುತ್ತಿದೆ.

ಮನೆಯ ಮೂಲ ವಿನ್ಯಾಸಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಮಾಡದೇ ಕಟ್ಟಡದ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಇಡೀ ಪರಿಸರವು ವಿಶಿಷ್ಟ ರೀತಿಯಲ್ಲಿ ಕಂಗೊಳಿ ಸಲಿದೆ.ವಿಶ್ವೇಶ್ವರಯ್ಯ ಜನಿಸಿದ ಎಂಬ ಏಕಮೇವ ಕಾರಣದಿಂದ ಪ್ರಸಿದ್ಧಿಗೆ ಪಾತ್ರವಾಗಿರುವ ಮುದ್ದೇನಹಳ್ಳಿಗೆ ಪ್ರತಿ ದಿನ ನೂರಾರು ಪ್ರವಾಸಿಗರು ಬರುತ್ತಾರೆ. ಚಿಕ್ಕಬಳ್ಳಾಪುರ ಅಥವಾ ನಂದಿ ಬೆಟ್ಟದ ಮಾರ್ಗದ ಮೂಲಕ ಹಾದು ಬರುವ ಪ್ರವಾಸಿಗರು ಮೊದಲು ವಿಶ್ವೇಶ್ವರಯ್ಯ ಮನೆಗೆ ಭೇಟಿ ನೀಡುತ್ತಾರೆ. ನಂತರ ಸ್ವಲ್ಪವೇ ದೂರದಲ್ಲಿರುವ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸುತ್ತಾರೆ.

ವಿಶ್ವೇಶ್ವರಯ್ಯ ಮನೆ ಆವರಣದಲ್ಲಿ ಸದ್ಯಕ್ಕೆ ಎಸ್‌ಬಿಎಂ ಶಾಖೆ ಮತ್ತು ವಸ್ತು ಸಂಗ್ರಹಾಲಯವಿದೆ. ಇಡೀ ಸ್ಥಳವು ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ  ಟ್ರಸ್ಟ್ ನ ಪರಭಾರೆಯಲ್ಲಿದ್ದು, ವಸ್ತು ಸಂಗ್ರಹಾಲಯದ ನಿರ್ವಹಣೆಯನ್ನು ಟ್ರಸ್ಟ್ ವಹಿಸಿಕೊಂಡಿದೆ. ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಅವರ ಆಮೂಲ್ಯ ವಸ್ತುಗಳ ಸಂಗ್ರಹಾಲಯವನ್ನು ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕು ಕೆಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಟ್ಟಡ ನೆಲಮಹಡಿ ನವೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಮೇಲಿನ ಮಹಡಿಯ ಕಾಮಗಾರಿ ಪ್ರಗತಿಯಲ್ಲಿದೆ. ಶಿಥಿಲಾವಸ್ಥೆಯಲ್ಲಿ ಗೋಡೆ, ಕಿಟಕಿ, ಮಹಡಿ ದುರಸ್ತಿಗೊಳಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ಇಡೀ ಕಟ್ಟಡವನ್ನು ಸದೃಢಗೊಳಿಸಲಾಗುತ್ತಿದೆ. ಮುಂದಿನ 2-3 ತಿಂಗಳ ಅವಧಿಯಲ್ಲಿ ಕಟ್ಟಡ ನವೀಕರಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. `

ವಿಶ್ವೇಶ್ವರಯ್ಯ ಸ್ಮರಣೆಯಲ್ಲಿರುವ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಹೀಗಾಗಿಯೇ ನವೀಕರಣ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಲಾಗಿದೆ. ರೂ. 60ರಿಂದ 80 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಹಲವಾರು ವರ್ಷಗಳ ಹಿಂದೆ ಕಟ್ಟಲಾಗಿದ್ದ ಕಟ್ಟಡವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸಂಗ್ರಹಾಲಯವನ್ನು ಪುನಃ ಇಲ್ಲೇ ಸ್ಥಾಪಿಸಲಾಗುವುದು~ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖಾ ವ್ಯವಸ್ಥಾಪಕ ವಿ.ಸುನೀಲ್ `ಪ್ರಜಾವಾಣಿ~ಗೆ ತಿಳಿಸಿದರು.

`ವಿಶ್ವೇಶ್ವರಯ್ಯ ಸ್ಥಾಪಿಸಿದ ಎಸ್‌ಬಿಎಂ ಶಾಖೆಯು ಅವರ ಮನೆಯ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ಸಂಗತಿ. ಇಲ್ಲಿ ಭೇಟಿ ನೀಡುವ ಪ್ರವಾಸಿಗರು ಬ್ಯಾಂಕ್‌ಗೂ ಬರುತ್ತಾರೆ. ಬ್ಯಾಂಕ್‌ನ ನಿವೃತ್ತ ಸ್ಬಿಬಂದಿ ಬ್ಯಾಂಕ್‌ನೊಂದಿಗಿನ ನಂಟು ನೆನಪಿಸಿಕೊಳ್ಳುತ್ತಾರೆ. ಇಲ್ಲಿನ ಸುತ್ತಮುತ್ತಲೂ ಗ್ರಾಮಸ್ಥರಿಂದಲೂ ಸಹಕಾರ ದೊರೆಯುತ್ತಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳನ್ನು  ಕೈಗೊಳ್ಳಲು ಇಲ್ಲಿ ವಿಪುಲ ಅವಕಾಶವಿದೆ~     ಎಂದರು.

`ಗ್ರಾಮಸ್ಥರು ಮತ್ತು ಬ್ಯಾಂಕ್ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಬ್ಯಾಂಕ್‌ನ್ನು ಬೇರೆಡೆ ಸ್ಥಳಾಂತರಿಸುವ ಉದ್ದೇಶವಿದೆ. ಇದಕ್ಕಾಗಿಯೇ ಸೂಕ್ತ ಸ್ಥಳದ ಹುಡುಕಾಟ ನಡೆದಿದೆ. ಹೊಸ ಸ್ಥಳ ಸಿಕ್ಕ ನಂತರ ಬ್ಯಾಂಕ್ ಸ್ಥಳಾಂತರಿಸಲಾಗುವುದು~ ಎಂದು ತಿಳಿಸಿದರು. ಸಂಗ್ರಹಾಲಯದಲ್ಲಿ ವಿಶ್ವೇಶ್ವರಯ್ಯ ಅವರಿಗೆ ಸಂಬಂಧಿಸಿದ ವಸ್ತುಗಳಿವೆ.

ಬಳಸುತ್ತಿದ್ದ ಕುರ್ಚಿ, ಪೆನ್, ಉಡುಪು, ಪುಸ್ತಕಗಳ ಜೊತೆ ಪ್ರಶಸ್ತಿಪತ್ರ, ಪ್ರಮಾಣಪತ್ರ, ಪಾಸ್‌ಪೋರ್ಟ್ ಅಮೂಲ್ಯ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿಶ್ವೇಶ್ವರಯ್ಯನವರ ದಿನಚರಿ ಮತ್ತು ಸಮಯ ಪಾಲನೆ ಬಗ್ಗೆಯೂ ಮಾಹಿತಿ ಪಡೆಯಬಹುದು. ಬೆಳಿಗ್ಗೆ 11ರಿಂದ 5ರ ವರೆಗೆ ತೆರೆದಿರುವ ಸಂಗ್ರಹಾಲಯಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ನೂತನ ಯೋಜನೆ
ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರನ್ನು ಸೆಳೆಯಲೆಂದೇ ಪ್ರವಾಸೋದ್ಯಮ ಇಲಾಖೆಯು ನೂತನ ಯೋಜನೆಯೊಂದನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸಿದೆ. ಪ್ರವಾಸಿಗರಿಗೆ ಬಸ್ ಅಥವಾ ಇತರ ವಾಹನ ಸೌಲಭ್ಯದ ಮೂಲಕ ಪ್ರಮುಖ ಸ್ಥಳಗಳಿಗೆ ಭೇಟಿ ಮಾಡಿಸುವ ಹೊಸ ಯೋಜನೆಯೊಂದನ್ನು ಜಾರಿಗೆ ತರಲಿದೆ.

`ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಇತರೆಡೆಯಿಂದ ಬರುವ ಪ್ರವಾಸಿಗರೆಂದೇ ಪ್ರತಿ ದಿನ ಮಿನಿ ಪ್ರವಾಸ ನಡೆಸಲಾಗುವುದು. ನಂದಿ ಗ್ರಾಮದ ಭೋಗಂದೀಶ್ವರ ದೇವಾಲಯ, ನಂದಿಬೆಟ್ಟ, ಮುದ್ದೇನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ಮನೆ ಮತ್ತು ಸಮಾಧಿ ಸ್ಥಳಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಾಗುವುದು. ವಿನೂತನ ಯೋಜನೆಯು ಕೆಲವೇ ದಿನಗಳಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ~ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT