ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ

Last Updated 20 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಸಾಗರ: ವೀರಶೈವ ಜನಾಂಗವನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ತಾಲ್ಲೂಕು ವೀರಶೈವ ಯುವ ವೇದಿಕೆ  ದಶಮಾನೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ  ವೀರಶೈವ ಜನಜಾಗೃತಿ ಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆದಿದೆ. ಇಂತಹ ಸಂದರ್ಭದಲ್ಲಿ ಧರ್ಮದಲ್ಲಿರುವ ಒಳ ಪಂಗಡಗಳನ್ನು ಮರೆತು ಸಂಘಟಿತರಾಗಿ ಇಂತಹ ಹುನ್ನಾರಕ್ಕೆ ಪ್ರತಿರೋಧ ಒಡ್ಡುವ ಅಗತ್ಯವಿದೆ ಎಂದು ಹೇಳಿದರು.

ಸಾಮಾಜಿಕ ಸಾಮರಸ್ಯದ ವಿಶಾಲ ತಳಹದಿಯ ಮೇಲೆ ವೀರಶೈವ ಧರ್ಮ ನಿಂತಿದೆ. ಶಿಕ್ಷಣ, ದಾಸೋಹ, ಅಧಾತ್ಮಿಕ ಕೈಂಕರ್ಯ ಇವೆ ಮೊದಲಾದ ಚಟುವಟಿಕೆಗಳ ಮೂಲಕ ಈ ಧರ್ಮ ಜನಮನ್ನಣೆ ಗಳಿಸಿದೆ ಎಂದರು.

ಇದೇ ಸಂದರ್ಭದಲ್ಲಿ ವೀರಶೈವ ಯುವ ವೇದಿಕೆ ಹೊರ ತಂದಿರುವ ದಶಸೌರಭ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಬಾಳೆಹೊನ್ನೂರು ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ವೀರಶೈವ ಧರ್ಮದ ಸಾರವಾಗಿದ್ದು, ಕಾಯಕ ಸಂಸ್ಕೃತಿಯ ಮೇಲೆ ಈ ಧರ್ಮ ನಿಂತಿದೆ ಎಂದು ಹೇಳಿದರು.

ಎಲ್ಲಾ ರಂಗಗಳಲ್ಲೂ ಮೌಲ್ಯಗಳು ಕುಸಿದಿದ್ದು ಅಧಿಕಾರ ಹಾಗೂ ಹಣದ ಬೆನ್ನು ಹತ್ತಿ ಹೋಗುತ್ತಿರುವ ಸನ್ನಿವೇಶವನ್ನು ನೋಡುತ್ತಿದ್ದೇವೆ. ಇದರಿಂದ ಸತ್ಯಶುದ್ಧ ವಿಚಾರಗಳನ್ನು ಜನರು ಅರಿಯಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಈ ಸನ್ನಿವೇಶವನ್ನು ಬದಲು ಮಾಡುವ ಜವಾಬ್ಧಾರಿ ಯುವ ವೇದಿಕೆಯಂತಹ ಸಂಘಟನೆಯ ಮೇಲೆ ಇದೆ ಎಂದರು.

ಸ್ವಧರ್ಮವನ್ನು ಪ್ರೀತಿಸುವ ಜತೆಗೆ ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯವವಾಗಿದೆ. ಇಂತಹ ಸಮಾವೇಶಗಳ ಮೂಲಕ ಧರ್ಮ ಜಾಗೃತಿ ನಡೆಸಲು ಯುವಜನರು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೀರಶೈವ ಜನಾಂಗದ ಗೌರಮ್ಮ, ಡಾ.ಪುಟ್ಟಪ್ಪ ಬೇತೂರು, ಪ್ರೊ.ವೀರಪ್ಪಗೌಡರು, ಶಶಿಕಲಾ ಶಾಂತಕುಮಾರ್ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ವೀರಶೈವ ಯುವ ವೇದಿಕೆ ಅಧ್ಯಕ್ಷ ರಾಜೇಂದ್ರ ಆವಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕೆ. ಬಸಪ್ಪಗೌಡರು, ಎಂ.ಬಿ. ಪುಟ್ಟಸ್ವಾಮಿ, ಎಚ್.ಟಿ. ಭೋಜರಾಜಪ್ಪ ಗೌಡ, ಕೆ.ಎಚ್. ಜ್ಞಾನೇಶ್ವರಪ್ಪ, ಜ್ಯೋತಿ ಪ್ರಕಾಶ್, ಬಿ.ಎ. ಇಂದೂಧರ  ಇನ್ನಿತರರು ಹಾಜರಿದ್ದರು.

ಉಮಾ ಮಹೇಶ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ಜಿ. ದಿನೇಶ್ ಬರದವಳ್ಳಿ ಸ್ವಾಗತಿಸಿದರು. ಟಿ.ಡಿ. ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪವಿತ್ರ ಮತ್ತು ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT