ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಾವೇಶದ ಟಗರು ಕಾಳಗ

Last Updated 7 ಜನವರಿ 2012, 6:35 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಭಾವೈಕ್ಯತೆಗೆ ಹೆಸರುವಾಸಿಯಾದ  ಗಂಗಾಜಲ ಚೌಡೇಶ್ವರಿ ಜಾತ್ರೆ ನಿಮಿತ್ತ ಮೆಡ್ಲೇರಿ ರಸ್ತೆಯ ಸಮೀಪದ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಎನ್. ಪಾಟೀಲ ಅವರ ಬಯಲು ಜಾಗದಲ್ಲಿ ಶುಕ್ರವಾರ ಮಧ್ಯಾಹ್ನ ಟಗರಿನ ಕಾಳಗ ಪಂದ್ಯ ಬಹಳ ವೀರಾವೇಶದಿಂದ ನಡೆಯಿತು.

ಎಲ್ಲಿ ನೋಡಿದರೂ ಯುದ್ಧೋತ್ಸಾಹ, ಕಲಿಗಳಿಬ್ಬರ ರಣರಂಗ ಪ್ರವೇಶ, ಮುಖಾಮುಖಿಗೆ ಟಗರುಗಳು ಅಣಿಯಾಗಿದ್ದವು, ದೂರದಿಂದ ವೇಗವಾಗಿ ಓಡಿ ಬಂದು, ನೆಗೆದು ಡಿಚ್ಚಿ ಹೊಡೆಯುವ ಈ ಕಲಿಗಳಿಗೆ ಕೋಡುಗಳೇ ಆಯುಧಗಳು, ಹೇ....ಹುಡ್ಡಿ....ಡಿಚ್ಚಿ ಎಂದು ಟಗರಿನ ಮಾಲೀಕರು ವೀರಾವೇಶದಿಂದ ಪರಸ್ಪರರ ಮೇಲೆ ಎರಗುವ ಕಲಿಗಳ ನಡುವೆ ಕಾಳಗ ಪ್ರಾರಂಭ.

ಟಗರಿನ ಮೈಯನ್ನು ಚೆನ್ನಾಗಿ ತಿಕ್ಕಿ, ಕೂದಲುಗಳನ್ನು ವಿವಿಧ ನಮೂನೆಯಿಂದ ಕತ್ತರಿಸಿ, ಜೂಲ್ ಹಾಕಿ, ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚಿ ಶೃಂಗರಿಸಿದ್ದರು. ಆಟೋ, ಟಂ ಟಂ ಗಾಡಿಗಳಲಿಲ್ಲಿ ಅವುಗಳನ್ನು ಮಲಗಿಸಿಕೊಂಡು ಬಂದು ಕೇಕೆ ಹಾಕುತ್ತಾ ಕಣಕ್ಕೆ ಟಗರುಗಳನ್ನು ಹುರಿದುಂಬಿಸುತ್ತಾರೆ.

ನೆರೆದ ಸಹಸ್ರಾರು ಜನರಿಂದ ಹರ್ಷದ ಮಾತುಗಳು, ಚೌಡವ್ವ   ಉಧೋ ಉಧೋ.... ಚಾಂಗಮಲೋ....ಕೇಕೆ, ಸಿಳ್ಳೆಗಳು,  ಸಿನಿಮಾ ನಟರಾದ ಸಿದ್ದಲಿಂಗು, ಪಾರಿಜಾತ, ಕಳ್ಳ ಮಳ್ಳ, ಡೆಡ್ಲಿ ಸೋಮ, ಕಿಲಾಡಿ ಕಿಟ್ಟ, ಧುನಿಯಾ, ಕಿಚ್ಚ, ರೆಬೆಲ್‌ಸ್ಟಾರ್, ಚಾಲೆಜಿಂಗ್‌ಸ್ಟಾರ್, ಜಾಜಿ ಮಲ್ಲಿಗೆ, ಹೆಸರುಗಳಿಂದ ಗುರುತಿಸಲಾಗಿದ್ದ ಟಗರುಗಳ ಮುಗಿಲು ಮುಟ್ಟುವಂತಹ ಕೂಗಿನ ಮಧ್ಯೆ, ಟಗರು ಓಡುವ ದೂಳು, ನೆತ್ತಿಯ ಮೇಲಿನ ಸುಡು ಬಿಸಿಲು ಲೆಕ್ಕಿಸದೇ ಟಗರುಗಳ ಕಾಳಗ ನೋಡಲು ಆಗಮಿಸಿದ ಸಹಸ್ರಾರು ಜನರ ಹರ್ಷೊದ್ಗಾರದ ನಡುವೆ ಪಂದ್ಯ ರೋಮಾಂಚನ ಉಂಟು ಮಾಡಿತು.

 ರಾಷ್ಟ್ರಮಟ್ಟದ ಈ ಟಗರಿನ ಕಾಳಗ ಸ್ಪರ್ಧೆಯಲ್ಲಿ ಹಲವು ಅದ್ಭುತ  ಸನ್ನಿವೇಶಗಳು ಕಂಡು ಬಂದವು. ಮರಿ ಕುರಿ, 2 ಹಲ್ಲಿನ ಕುರಿ, 6-8 ಹಲ್ಲಿನ ಕುರಿಗಳು ಭಾಗವಹಿಸಿದ್ದವು. ಜಾತ್ರೆಯ ಒಂದು ವಾರ ಮೊದಲು ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಟಗರುಗಳ ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಹಲ್ಲುಗಳು ಇರಲಾರದು, ಮರಿ ಕುರಿ, 2 ಹಲ್ಲು, 4 ಹಲ್ಲು, 6 ಹಲ್ಲು, 8 ಹಲ್ಲು ಹೀಗೆ 5 ವಿಭಾಗಗಳನ್ನು ಮಾಡಲಾಗುತ್ತದೆ.

ಅಖಾಡದಲ್ಲಿ ಕೊಬ್ಬಿದ ಟಗರು ಎದುರಿನ ಟಗರಿಗೆ ಡಿಕ್ಕಿ ಹೊಡೆದಾಗ ಸೋಲು ಅನುಭವಿಸಿ ಬಾಲ ಮುದುಡಿಕೊಂಡು ನಾಚಿಕೊಂಡು ಪ್ರೇಕ್ಷಕರನ್ನು ದೂಡುತ್ತಾ ಓಡುತ್ತಿದ್ದ ದೃಶ್ಯ ನೆರೆದಿದಿದ್ದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತು.

ಪ್ರೇಕ್ಷಕರು ಸುಡುಬಿಸಿಲಿನ ತಾಪಕ್ಕೆ  ಕಬ್ಬಿನ ಹಾಲು, ಐಸ್ ಕ್ರೀಮ್, ಸೋಡಾ, ಕಲ್ಲಂಗಡಿ ಹಣ್ಣು ತಿಂದು ಬಾಯಾರಿಕೆ ನಿವಾರಿಸಿಕೊಳ್ಳುತ್ತಾರೆ. ಮಿರ್ಚಿ ಮಂಡಕ್ಕಿ,  ಎಗ್ ರೈಸ್ ಅಂಗಡಿಗಳು ಟಗರು ಕಾಳಗದಲ್ಲಿನೋಡುಗರಿಗೆ ವಿಧ ವಿಧ ತಿನಿಸು ನೀಡಿದವು.

ಪ್ರತಿ ವರ್ಷ ಚೌಡೇಶ್ವರಿ ಜಾತ್ರೆ ಅಂಗವಾಗಿ ಟಗರಿನ ಕಾಳಗಕ್ಕೆ ರಾಣೇ ಬೆನ್ನೂರು ಸಜ್ಜಾಗುತ್ತದೆ. ಸಿ.ಟಿ ಟೈಗರ್ ರಾಣೆಬೆನ್ನೂರು ಮಾಜಿ ಕಿಂಗ್, ನಾಯಕ, ಮಹರ್ಷಿ ವಾಲ್ಮೀಕಿ, ನಾಯಕ, ಅಭಿವೃದ್ಧಿ ಸಂಘ ಹಾಗೂ ಗೆಳೆಯರ ಬಳಗ, ನಗರಸಭಾ ಸದಸ್ಯರು, ವಿವಿಧ ರಾಜಕೀಯ ಯುವ ಮುಖಂಡರು ಪಕ್ಷಾತೀತವಾಗಿ ಸೇರಿಕೊಂಡು ಚೌಡೇಶ್ವರಿ ಜಾತ್ರಾ ನಿಮಿತ್ತ ಕಾಳಗ ನಡೆಸುತ್ತಾರೆ. ಕಳೆದ 10 ವರ್ಷಗಳಿಂದ ಈಟಗರಿನ ಕಾಳಗನಡೆಯುತ್ತಿದೆ.

ರೋಮಾಂಚನ: ಒಂದು ವರ್ಷ ಮೊದಲೇ ಚಿಕ್ಕ ಕುರಿ ಮರಿಯನ್ನು ತಂದು ಸಾಕಿ ಕಾಳಗಕ್ಕೆ ಬಿಡುತ್ತಾರೆ. ಟಗರುಗಳ ಕಾಳಗ ಬಹು ರೋಮಾಚಂನಕಾರಿ, ಎರಡರ ನಡುವೆ ನೇರ ಹೋರಾಟ ಇರುತ್ತದೆ. ಕಣಕ್ಕಿಳಿಯುವ ಈ ಟಗರುಗಳನ್ನು ಹತ್ತಿರಕ್ಕೆ ಎಳೆದು ತಂದು ಪರಸ್ಪರ ವಾಸನೆ ತೋರಿಸಲಾಗುತ್ತದೆ. ನಂತರ 25- 30 ಮೀಟರ್ ದೂರ ಹಿಂದೆ ಎದುರು ಬದುರು ನಿಲ್ಲಿಸಿ ಹುರಿದುಂಬಿಸಿ ತ್ತಾರೆ.

ಮಾರುತಿ ಕರೇಭರಮಣ್ಣನವರ, ಭಿಮಣ್ಣ ಯಡಚಿ, ಗಣೇಶ ಪಾಸೀಗಾರ, ಸತ್ಯನಾರಾಯಣ, ಚಂದ್ರು ಜೀರ್ಲಳ್ಳಿ,  ಹನುಮಂತ ಡೊಗ್ಗೊಳ್ಳಿ, ಈಶ್ವರ ಚಿನ್ನಿಕಟ್ಟಿ ಹಾಗೂ ಶ್ರೀನಿವಾಸ ಜಡಮಲಿ  ಹತ್ತು ವರ್ಷಗಳಿಂದ ನಿರ್ಣಾಯಕ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಕೆಲವು ಕಡೆ ಭಾರಿ ಬೆಟ್ಟಿಂಗ್ ನಡೆಯುತ್ತವೆ, ಜಾತ್ಯಾತೀತವಾಗಿ ಯುವ ಪಡೆಯೇ ತುಂಬಿಕೊಂಡಿರುತ್ತದೆ, ಇಲ್ಲಿ ಮನರಂಜನೆಯೇ ಮುಖ್ಯ. ಗೆದ್ದ ಟಗರುಗಳ ಮಾಲೀಕರಿಗೆ ಪ್ರಥಮ ಬಹುಮಾನ (8 ಹಲ್ಲಿನ ಕುರಿಗೆ) 8ಸಾವಿರ ರೂ., ದ್ವಿತೀಯ ಬಹುಮಾನ ಕಲರ್ ಟಿವಿ, 6 ಹಲ್ಲಿನ ಕುರಿಗೆ ಪ್ರಥಮ 6 ಸಾವಿರ ರೂ., ದ್ವಿತೀಯ ಬಹುಮಾನ ಗಾಡ್ರೇಜ್, 4 ಹಲ್ಲಿನ ಕುರಿಗಳಿಗೆ ಪ್ರಥಮ ಬಹುಮಾನ 4 ಸಾವಿರ ರೂ., ದ್ವಿತೀಯ ಬಹುಮಾನ ಡಿವಿಡಿ ಪ್ಲೇಯರ್ ಗಳನ್ನು ದಾನಿಗಳಿಂದ ಕ್ರೀಡಾಸಕ್ತರಿಂದ ದೇಣಿಗೆ ಪಡೆದು ಬಹುಮಾನ ನೀಡುವರು.  

 `ಪ್ರತಿ ವರ್ಷ ಫ್ಯಾನ್, ಟ್ರಜುರಿ, ನೀರಿನ ಟಾಕಿ, ವಾಚು, ಮೊಬೈಲ್, ಟೇಬಲ್ ಫ್ಯಾನ್, ಡಿವಿಡಿ, ಕಲರ್ ಟಿವಿ, ಆಕರ್ಷಕ ಟ್ರೋಪಿ, ಬಂಗಾರ, ಬೆಳ್ಳಿ ಪದಕ ನೀಡಲಾಗುತ್ತದೆ~ ಎನ್ನುತ್ತಾರೆ  ಕಾಳಗದ ಅಧ್ಯಕ್ಷ ಆಂಜನೆಯ ಯಡಚಿ, ಶ್ರೀನಿವಾಸ ಜಡಮಲಿ, ಈಶ್ವರ ಚಿನ್ನಿಕಟ್ಟಿ ಮತ್ತು ಮಾರುತಿ ಕರಭರಮಣ್ಣನವರ.

ಪ್ರತಿ ವರ್ಷ ಕಾಳಗಕ್ಕೆ ಹರಿಹರ, ಹುಬ್ಬಳ್ಳಿ, ಹೊನ್ನಾಳಿ, ಚಿತ್ರದುರ್ಗ, ಕಾರವಾರ, ಗುತ್ತಲ, ಹಾವೇರಿ, ದಾವಣಗೆರೆ, ಹಿರೆಕೆರೂರು, ಶಿಕಾರಿಪುರ, ಶಿರಾಳ ಕೊಪ್ಪ, ಹಾನಗಲ್ಲ, ಶಿವವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಹರಪನಹಳ್ಳಿ, ಹಡಗಲಿ, ಮುಂತಾದ ಕಡೆಗಳಿಂದ ನೂರಾರು ಟಗರುಗಳು ಕಾಳಗದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.

ವಾಲ್ಮೀಕಿ ಸಮಾಜದವರು ಗಂಗಾಜಲ ಚೌಡೇಶ್ವರಿ ದೇವಿಯ ಆರಾಧಕರು. ಈ ಜಾತ್ರೆ ಬಹುದೊಡ್ಡ ಹಬ್ಬವಾಗಿದೆ. ತಮ್ಮ ಮನೆಗಳಲ್ಲಿ ಟಗರಿನ ಬಲಿ ಕೊಡುವುದು ನಾಯಕ, ವಾಲ್ಮೀಕಿ ಸಮಾಜದ ಹಲವಾರು ಕುಟುಂಬಗಳಲ್ಲಿ ಬಂದ ಮೊದಲಿನಿಂದಲೂ ಬಂದ ರೂಢಿ. ಈ ಆಚರಣೆಯ ನಿಮಿತ್ತ ಟಗರು ಕಾಳಗ ಕಳೆದ 10 ವರ್ಷಗಳಿಂದಲೂ ನಡೆಯುತ್ತಿದೆ.

ಹೆದರಿ ಹಿಂದೆ ಓಡಿದರೆ ಸೋತಂತೆ ಲೆಕ್ಕ...
ಜೋರಾಗಿ ಓಡಿ ಬಂದು ಹಾರಿ ಟಗರುಗಳು ಮುಖಾಮುಖಿ ಡಿಚ್ಚಿ ಹೊಡೆಯುತ್ತವೆ, ಇದಕ್ಕೆ ಸೊನ್ನಿ ಎಂದು ಕರೆಯುತ್ತಾರೆ. ಡಿಚ್ಚಿ ಹೊಡೆದ ನಂತರ ಟಗರು ಹಿಂದೆ ಸರಿದು ಪುನಃ ಡಿಚ್ಚಿ ಹೊಡೆಯುತ್ತವೆ. ಈ ಸ್ಪರ್ಧೆಯಲ್ಲಿ ಯಾವುದಾದರೊಂದು ಟಗರು ಮುಖ ತಿರುಗಿಸಿ ಓಡಿತೆಂದರೆ ಅದು ಸೋತಂತೆ. ಈ ಮೂರು ಸುತ್ತುಗಳ ಒಳಗೆ ಫಲಿತಾಂಶ ಬರದಿದ್ದರೆ, ಎರಡೂ ಟಗರುಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ ಎಂದು ನಿರ್ಣಾಯಕ ಹನುಮಂತ ಡೊಗ್ಗಳ್ಳಿ, ಆಂಜನೆಯ, ತಿಪ್ಪಣ್ಣ ಎಡಚಿ ತಿಳಿಸಿದರು.

ಒಬ್ಬ ನಿರ್ಣಾಯಕ ಮತ್ತು ಎರಡೂ ಟಗರುಗಳ ಮಾಲೀಕರನ್ನು ಕಣದಲ್ಲಿ ಬಿಡಲಾಗುತ್ತದೆ, ಕಾಳಗದಲ್ಲಿ ಯಾವುದಾದರೂ ಟಗರು ಬಳಸಿದ್ದರೆ, ಅದನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು. ಟಗರುಗಳ ಸಾವು ನೋವುಗಳ ಏನೇ ವಿವಾದಗಳು ಬಂದರೆ ನಿರ್ಣಾಯಕರೇ ಅಂತಿಮ ತೀರ್ಮಾನ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT