ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಚ್ಚ ಹಂಚಿಕೆ ಯೋಜನೆ ಶೀಘ್ರ ಅನುಷ್ಠಾನ: ರೈಲ್ವೆ ಸಚಿವ ದಿನೇಶ್ ತ್ರಿವೇದಿ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉಚಿತ ಭೂಮಿ ನೀಡುವ ಮತ್ತು ರೈಲ್ವೆ ಯೋಜನೆಗೆ ತಗಲುವ ವೆಚ್ಚದಲ್ಲಿ ಅರ್ಧದಷ್ಟು ಭರಿಸುವ ರಾಜ್ಯ ಸರ್ಕಾರದ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಈ ರೀತಿಯ ವೆಚ್ಚ ಹಂಚಿಕೆಯ ಎಲ್ಲ ಯೋಜನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ತ್ವರಿತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಸಂಜೆ ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಇನ್ನು ಮುಂದೆ ಈ ರೀತಿಯ ಎಲ್ಲ ವೆಚ್ಚ ಹಂಚಿಕೆ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಸಂಸದರು ರೈಲ್ವೆ ಯೋಜನೆಗಳ ಜಾರಿಯಲ್ಲಿನ ವಿಳಂಬ ಮತ್ತು ರೈಲ್ವೆ ಅವ್ಯವಸ್ಥೆ ಬಗ್ಗೆ ಸಚಿವರ ಗಮನ ಸೆಳೆದರು. ಈ ಸಂದರ್ಭದಲ್ಲಿ ತ್ರಿವೇದಿ ಮಾತನಾಡಿ, ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

`ದೇಶದ ಯಾವ ರಾಜ್ಯವೂ ರೈಲ್ವೆ ಯೋಜನೆಗಳಿಗೆ ಈ ರೀತಿಯ ಬೆಂಬಲ ನೀಡಿಲ್ಲ. ಹೀಗಾಗಿ ಇನ್ನು ಮುಂದೆ ನಮ್ಮ ಕಡೆಯಿಂದಲೂ ಉತ್ತಮ ಬೆಂಬಲ ಸಿಗಲಿದೆ. ಎಲ್ಲ ಯೋಜನೆಗಳನ್ನೂ ತ್ವರಿತವಾಗಿ ಅನುಷ್ಠಾನಗೊಳಿಸಲು ಈ ತಕ್ಷಣವೇ ಕಾರ್ಯಯೋಜನೆ ರೂಪಿಸಲು ಸೂಚಿಸಲಾಗಿದೆ~ ಎಂದರು.

ತ್ವರಿತ ಅನುಷ್ಠಾನ: ಗದಗ- ವಾಡಿ, ಕೆಂಗೇರಿ- ಕನಕಪುರ- ಮಳವಳ್ಳಿ- ಚಾಮರಾಜನಗರ ಮತ್ತು ಶ್ರೀನಿವಾಸಪುರ- ಮದನಪಲ್ಲಿ ನಡುವಿನ ಹೊಸ ರೈಲ್ವೆ ಮಾರ್ಗಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಕೋಲಾರದಲ್ಲಿ ರೈಲ್ವೆ ಬೋಗಿ ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ನುಡಿದರು.

ಹೊಸ ರೈಲು: ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಹೊಸ ರೈಲುಗಳು ಓಡಾಟಕ್ಕೆ ಸಿದ್ಧ ಇದ್ದು, ಆದಷ್ಟು ಬೇಗ ಅವು ಕಾರ್ಯಾರಂಭ ಮಾಡಲಿವೆ ಎಂದರು. ಗೋರಖ್‌ಪುರ- ಯಶವಂತಪುರ; ಹುಬ್ಬಳ್ಳಿ- ವಿಜಾಪುರ ಪ್ಯಾಸೆಂಜರ್ ರೈಲನ್ನು ಸೊಲ್ಲಾಪುರಕ್ಕೆ ವಿಸ್ತರಣೆ; ಯಶವಂತಪುರ- ಮಂಗಳೂರು ಹಗಲು ವೇಳೆ ರೈಲನ್ನು ಕಾರವಾರಕ್ಕೆ ವಿಸ್ತರಣೆ ಮತ್ತು ಸೊಲ್ಲಾಪುರ- ಗದಗ ರೈಲನ್ನು ಹುಬ್ಬಳ್ಳಿವರೆಗೆ ವಿಸ್ತರಣೆ- ಈ ನಾಲ್ಕು ರೈಲುಗಳು ಸದ್ಯದಲ್ಲೇ ಓಡಾಟ ಆರಂಭಿಸಲಿವೆ. ದಿನಾಂಕ ನೋಡಿಕೊಂಡು ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಹೈಸ್ಪೀಡ್ ರೈಲು: ದೇಶದ ಪ್ರಮುಖ ನಗರಗಳಿಗೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲುಗಳ ಅಗತ್ಯ ಇದ್ದು, ಈ ನಿಟ್ಟಿನಲ್ಲೂ ಗಂಭೀರ ಚಿಂತನೆ ನಡೆದಿದೆ ಎಂದ ಅವರು, ಈ ನಿಟ್ಟಿನಲ್ಲಿ ಜಪಾನ್ ಸೇರಿದಂತೆ ಇತರ ದೇಶಗಳ ಜತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಹೇಳಿದರು.

`ಖಾಸಗಿ ಸಹಭಾಗಿತ್ವದಲ್ಲಿ ಈ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ನನ್ನ ಪ್ರಕಾರ ಬೆಂಗಳೂರು- ಮೈಸೂರು ನಡುವಿನ ಪ್ರಯಾಣದ ಅವಧಿ ಒಂದು ಗಂಟೆಗೆ ಇಳಿಯಬೇಕು. ಹಾಗೆಯೇ ಕೋಲ್ಕತ್ತ- ದೆಹಲಿ ನಡುವಿನ ಪ್ರಯಾಣ ಅವಧಿ ಆರು ಗಂಟೆಗೆ ಇಳಿಯಬೇಕು. ಆಗ ಮಾತ್ರ ಜನರಿಗೆ ಅನುಕೂಲ~ ಎಂದರು.

ದೇಶದ ಎಲ್ಲ ಭಾಗಗಳಿಗೂ ಈ ರೀತಿಯ ಹೈಸ್ಪೀಡ್ ರೈಲುಗಳ ಸಂಪರ್ಕ ಕಲ್ಪಿಸಬೇಕಾಗಿದೆ. ಈ ಕುರಿತು ಕೇಂದ್ರ ಸರ್ಕಾರದ ಯೋಜನೆಗಳು ಏನೇ ಇದ್ದರೂ ರೈಲ್ವೆ ಮಂಡಳಿ ಮಾತ್ರ ಪ್ರತ್ಯೇಕವಾಗಿಯೇ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ವಿವರಿಸಿದರು.

ರೈಲ್ವೆ ಅಧಿಕಾರಿಗಳು ತಮಗೆ ಕನಿಷ್ಠ ಗೌರವವೂ ನೀಡುವುದಿಲ್ಲ; ಕಾರ್ಯಕ್ರಮಗಳಿಗೂ ಆಹ್ವಾನಿಸುವುದಿಲ್ಲ ಎಂದು ಸಂಸದರು ಕೇಂದ್ರ ಸಚಿವರಿಗೆ ದೂರು ನೀಡಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವರು ಜನಪ್ರತಿನಿಧಿಗಳ ಜತೆ ರೈಲ್ವೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಮೇಲಿಂದ ಮೇಲೆ ಅವರ ಸಲಹೆ- ಸೂಚನೆಗಳನ್ನು ಸ್ವೀಕರಿಸಬೇಕು ಎಂದು ಕಟ್ಟಾಜ್ಞೆ ನೀಡಿದರು.

ಭೂಮಿ ಹಸ್ತಾಂತರ: ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈಲ್ವೆಗೆ 1,399 ಎಕರೆ ಜಾಗವನ್ನು ಡಿಸೆಂಬರ್ ವೇಳೆಗೆ ಹಸ್ತಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಕಳೆದ ನಾಲ್ಕು ತಿಂಗಳಲ್ಲಿ 1,093 ಎಕರೆ ಹಸ್ತಾಂತರ ಮಾಡಿದ್ದು, ಯಾವ ಯೋಜನೆಗೂ ಭೂಮಿಯನ್ನು ಬಾಕಿ ಇಟ್ಟುಕೊಳ್ಳುವುದಿಲ್ಲ. ಡಿಸೆಂಬರ್ ವೇಳೆಗೂ ಎಲ್ಲ ಭೂಮಿ ಹಸ್ತಾಂತರ ಮಾಡಲಾಗುವುದು ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಮಿತ್ತಲ್ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

`ಪ್ರಯಾಣ ದರ ಏರಿಕೆ ನಿರ್ಧರಿಸಿಲ್ಲ~
ರೈಲ್ವೆ ಪ್ರಯಾಣ ದರ ಏರಿಕೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದರು.

ರೈಲ್ವೆ ಪ್ರಯಾಣ ದರ ಎಂಟು ವರ್ಷಗಳಿಂದ ಏರಿಕೆ ಮಾಡಿಲ್ಲ. ಆದರೆ, ಆ ಕುರಿತು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಬದಲಿಗೆ, ಆ ಕುರಿತು ಸಾಕಷ್ಟು ಚಿಂತನೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ರೈಲ್ವೆ ಕೇವಲ ಪ್ರಯಾಣ ದರದ ಮೇಲೆ ಅವಲಂಬಿಸದೆ ಇತರ ಆದಾಯದ ಮೂಲಗಳನ್ನು ಹುಡುಕಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದ ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾದರಿಯಲ್ಲೇ ರೈಲ್ವೆ ನಿಲ್ದಾಣ ಪ್ರಾಧಿಕಾರ ರಚಿಸುವ ಉದ್ದೇಶ ಇದೆ. ರೈಲ್ವೆ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣ ಮಾಡಿ, ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಇದೆ. ರೈಲ್ವೆ ನಿಲ್ದಾಣದ ಕೆಳಗೆ ಮತ್ತು ಅದರ ಮೇಲೆ ಕನಿಷ್ಠ 50 ಸಾವಿರ ಜನ ಕೆಲಸ ಮಾಡುವ ಹಾಗೆ ದೊಡ್ಡ ಮಟ್ಟದ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಬೇಕಾಗಿದೆ. ಈ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶ ಇದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT