ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗಿಗಳ ಎದುರು ಭಾರತಕ್ಕೆ ಅಗ್ನಿಪರೀಕ್ಷೆ

ಕ್ರಿಕೆಟ್‌: ಇಂದಿನಿಂದ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ ಸರಣಿ, ಸಚಿನ್ ವಿದಾಯದ ಬಳಿಕ ಮೊದಲ ಪಂದ್ಯ
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ‘ಇದು ಮುಂಬೈ ಅಲ್ಲ. ಆ ಪಿಚ್‌ನಲ್ಲಿ ವಿಕೆಟ್‌ಗಳ ಎತ್ತರಕ್ಕಿಂತ ಮೇಲೆ ಚೆಂಡು ಪುಟಿದೇಳುವುದಿಲ್ಲ. ಆದರೆ ವೇಗಿಗಳಿಗೆ ನೆರವು ನೀಡುವ ನಮ್ಮ ದೇಶದ ಪಿಚ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಮುಂದೆ ದೊಡ್ಡ ಸವಾಲಿದೆ’

–ಈ ಹೇಳಿಕೆ ನೀಡಿರುವುದು ಅಮೋಘ ಫಾರ್ಮ್‌ನಲ್ಲಿರುವ ವೇಗಿ ಡೇಲ್‌ ಸ್ಟೇನ್‌. ಸ್ವದೇಶ ದಲ್ಲಿ ಆಡಿದ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಶತಕ ಗಳಿಸಿರುವ ರೋಹಿತ್‌ ಶರ್ಮ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತಿದು.

ಸ್ಟೇನ್‌ ಅವರ ಮಾತು ಏಕದಿನ ಸರಣಿಯಲ್ಲಿ ನಿಜವಾಗಿದೆ. ವೇಗಿಗಳಿಗೆ ಬೆದರಿದ ದೋನಿ ಬಳಗ ಸವಾಲು ನೀಡದೇ ಶರಣಾಗಿತ್ತು. ಆದರೆ ಭಾರತದ ಆಟಗಾರರ ಮುಂದೆ ಈಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಅದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿ. ಸರಣಿಯ ಮೊದಲ ಪಂದ್ಯಕ್ಕೆ ವಾಂಡರರ್ಸ್‌ ಕ್ರೀಡಾಂಗಣ ದಲ್ಲಿ ಬುಧವಾರ ಮುಹೂರ್ತ.

ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ವಿದಾಯದ ಬಳಿಕ ನಡೆಯುತ್ತಿರುವ ಮೊದಲ ಟೆಸ್ಟ್‌ ಸರಣಿ ಇದು. ಯುವ ಹಾಗೂ ಅನನುಭವಿ ಆಟಗಾರರನ್ನೇ ಹೆಚ್ಚಾಗಿ ಒಳಗೊಂಡಿರುವ ಭಾರತ ತಂಡದವರು ವೇಗಿಗಳ ಎದುರು ಯಾವ ರೀತಿ ಆಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ವೆಸ್ಟ್‌ಇಂಡೀಸ್‌ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿಯ ಬಳಿಕ ತೆಂಡೂಲ್ಕರ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಬಳಿಕ ಎದುರಾಗಿರುವ ಮೊದಲ ಪ್ರಶ್ನೆ ಎಂದರೆ ತೆಂಡೂಲ್ಕರ್‌ (ನಾಲ್ಕನೇ ಕ್ರಮಾಂಕ) ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು. ಕೊಹ್ಲಿ ಈ ಸ್ಥಾನದಲ್ಲಿ ಆಡುವುದು ಬಹುತೇಕ ಖಚಿತ. ಐದನೇ ಸ್ಥಾನದಲ್ಲಿ ರೋಹಿತ್‌ ಕಣಕ್ಕಿಳಿಯುವ ಸಂಭವವಿದೆ. ಆರನೇ ಕ್ರಮಾಂಕ ದಲ್ಲಿ ಅಜಿಂಕ್ಯ ರಹಾನೆ ಆಡುವ ನಿರೀಕ್ಷೆ ಇದೆ.

ವೆಸ್ಟ್‌ಇಂಡೀಸ್‌ ಎದುರಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ರೋಹಿತ್‌ ಸತತ ಎರಡು ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿ ಈಗ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಶಿಖರ್‌ ಧವನ್‌ ಹಾಗೂ ಚೇತೇಶ್ವರ ಪೂಜಾರ ಮೇಲೂ ಭರವಸೆ ಇಡಲಾಗಿದೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಜಹೀರ್‌ ಖಾನ್‌, ಮೊಹಮ್ಮದ್‌ ಶಮಿ ಕಣಕ್ಕಿಳಿ ಯುವುದು ಬಹುತೇಕ ಖಚಿತ. ಆದರೆ ಇನ್ನೊಂದು ಸ್ಥಾನಕ್ಕೆ ಭುವನೇಶ್ವರ್‌, ಇಶಾಂತ್‌ ಹಾಗೂ ಉಮೇಶ್‌ ಯಾದವ್‌ ನಡುವೆ ಪೈಪೋಟಿ ಏರ್ಪ ಟ್ಟಿದೆ. ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್ ಅವರನ್ನು ಆಡಿಸುವ ಬಗ್ಗೆ ದೋನಿ ಒಲವು  ಹೊಂದಿದ್ದಾರೆ.

ಭಾರತ ಇದುವರೆಗೆ ಹರಿಣಗಳ ನಾಡಿನಲ್ಲಿ ಟೆಸ್ಟ್‌ ಸರಣಿ ಗೆದ್ದಿಲ್ಲ. ಸಚಿನ್‌, ರಾಹುಲ್‌ ದ್ರಾವಿಡ್‌, ವಿ.ವಿ.ಎಸ್‌.ಲಕ್ಷ್ಮಣ್‌, ವೀರೇಂದ್ರ ಸೆಹ್ವಾಗ್‌, ಸೌರವ್‌ ಗಂಗೂಲಿ ಅವರಂಥ ಬ್ಯಾಟ್ಸ್‌ಮನ್‌ಗಳು ಇದ್ದಾಗಲೂ ಸರಣಿ ಗೆಲುವು ಒಲಿದಿರಲಿಲ್ಲ. ಸರಣಿ ಡ್ರಾ ಮಾಡಿಕೊಳ್ಳಲು ಯಶಸ್ವಿಯಾಗಿದ್ದರು ಅಷ್ಟೆ.

ದಕ್ಷಿಣ ಆಫ್ರಿಕಾ ಸದ್ಯ ಟೆಸ್ಟ್‌ನಲ್ಲಿ ಅಗ್ರ ರ್‍ಯಾಂಕ್‌ನ ತಂಡ. ಡೇಲ್‌ ಸ್ಟೇಯ್ನ್‌, ಮಾರ್ನ್‌ ಮಾರ್ಕೆಲ್‌, ವೇಯ್ನ್‌ ಫಿಲ್ಯಾಂಡರ್‌ ಅವರಂಥ ಪ್ರಚಂಡ ವೇಗಿಗಳಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯದ ಮಟ್ಟಿಗೆ ಅತ್ಯುತ್ತಮ ವೇಗದ ಬೌಲಿಂಗ್‌ ಹೊಂದಿರುವ ತಂಡವಿದು. ಸ್ವದೇಶದಲ್ಲಿ ಈ ತಂಡ ಇತ್ತೀಚಿನ ವರ್ಷಗಳಲ್ಲಿ ಸೋತಿದ್ದೇ ಕಡಿಮೆ. ಹಾಶಿಮ್‌ ಆಮ್ಲಾ, ಎಬಿ ಡಿವಿಲಿಯರ್ಸ್‌, ನಾಯಕ ಗ್ರೇಮ್‌ ಸ್ಮಿತ್‌ ಅವರಂಥ ಬ್ಯಾಟ್ಸ್‌ಮನ್‌ಗಳಿದ್ದಾರೆ. ಹಾಗಾಗಿ ಮತ್ತೊಮ್ಮೆ ಪಾರಮ್ಯ ಮೆರೆಯಲು ಸಜ್ಜಾಗಿದ್ದಾರೆ.

ದೋನಿ ಸಾರಥ್ಯದ ಭಾರತ 2011–12ರಲ್ಲಿ ವಿದೇಶದಲ್ಲಿ ಆಡಿದ ಎಂಟೂ ಟೆಸ್ಟ್‌ಗಳಲ್ಲಿ ಸೋಲು ಕಂಡಿತ್ತು. ಅದಕ್ಕೆ ಕಾರಣ ವೇಗಿಗಳಿಗೆ ನೆರವು ನೀಡುತ್ತಿದ್ದ ಅಲ್ಲಿನ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳ ಆಟ ನಡೆದಿರಲಿಲ್ಲ. ಹಾಗಾಗಿ ಕಾಮನಬಿಲ್ಲಿನ ನಾಡಿನಲ್ಲೂ ದೊಡ್ಡ ಸವಾಲು ಕಾದಿದೆ. ವಾಂಡರರ್ಸ್‌ ಪಿಚ್‌ ವೇಗಗಳಿಗೆ ಹೇಳಿ ಮಾಡಿಸಿದಂತಿದೆ. ಈ ಅಂಶವನ್ನು ಪಿಚ್‌ ಕ್ಯೂರೇಟರ್‌ ಪೆತುಯೆಲ್‌ ಬತೆಲೆಜಿ ಕೂಡ ಒಪ್ಪಿಕೊಂಡಿದ್ದಾರೆ. ಈ ಪಿಚ್‌ನಲ್ಲಿ ವೇಗ, ಬೌನ್ಸ್‌ ಹಾಗೂ ಶಾರ್ಟ್‌ ಪಿಚ್‌ ಎಸೆತಗಳನ್ನು ಹಾಕಿ ಪ್ರವಾಸಿ ತಂಡವನ್ನು ಕಾಡಲು ಆತಿಥೇಯ ವೇಗಿಗಳು ಸಜ್ಜಾಗಿದ್ದಾರೆ. ಅದೇನೇ ಇರಲಿ, ತೆಂಡೂಲ್ಕರ್‌ ವಿದಾಯದ ನಂತರದ ಕ್ರಿಕೆಟ್‌ ಯುಗದ ಪರದೆ ಸರಿಯಲು ವೇದಿಕೆ ಸಜ್ಜಾಗಿದೆ.

ತಂಡಗಳು ಇಂತಿವೆ
ಭಾರತ:
ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ಮುರಳಿ ವಿಜಯ್‌, ಚೇತೇಶ್ವರ ಪೂಜಾರ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಆರ್‌.ಅಶ್ವಿನ್‌, ಜಹೀರ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ, ಇಶಾಂತ್‌ ಶರ್ಮ, ಪ್ರಗ್ಯಾನ್‌ ಓಜಾ, ಉಮೇಶ್‌ ಯಾದವ್‌, ಅಂಬಟಿ ರಾಯುಡು ಹಾಗೂ ವೃದ್ಧಿಮಾನ್‌ ಸಹಾ.

ದಕ್ಷಿಣ ಆಫ್ರಿಕಾ: ಗ್ರೇಮ್‌ ಸ್ಮಿತ್‌ (ನಾಯಕ), ಎಬಿ ಡಿವಿಲಿಯರ್ಸ್‌, ಹಾಶಿಮ್‌ ಆಮ್ಲಾ, ಜೀನ್‌ ಪಾಲ್‌ ಡುಮಿನಿ, ಫಾಫ್‌ ಡು ಪ್ಲೆಸಿಸ್‌, ಡೀನ್‌ ಎಲ್ಗಾರ್‌, ಇಮ್ರಾನ್‌ ತಾಹೀರ್‌, ಜಾಕ್‌ ಕಾಲಿಸ್‌, ರೋರಿ ಕ್ಲೆನ್‌ವೆಲ್ತ್‌, ಮಾರ್ನ್‌ ಮಾರ್ಕೆಲ್‌, ಅಲ್ವಿರೊ ಪೀಟರ್ಸನ್‌, ರಾಬಿನ್‌ ಪೀಟರ್ಸನ್‌, ವೆರ್ನಾನ್‌ ಫಿಲ್ಯಾಂಡರ್‌, ಡೇಲ್‌ ಸ್ಟೇನ್‌ ಹಾಗೂ ತಾಮಿ ಸೊಲೆಕಿಲೆ (ವಿಕೆಟ್‌ಕೀಪರ್‌).
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆಗೆ (ಭಾರತೀಯ ಕಾಲಮಾನ).
ನೇರ ಪ್ರಸಾರ: ಟೆನ್‌ ಕ್ರಿಕೆಟ್‌

ಇನ್ನೊಂದು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT