ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆಗೆ ಅಪಚಾರ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ ಮಂಡಲಿ ರಾಮಾಯಣ ಕುರಿತ ವಿಶ್ಲೇಷಣಾತ್ಮಕ ಪ್ರಬಂಧವನ್ನು ಪಠ್ಯಕ್ರಮದಿಂದ ತೆಗೆದು ಹಾಕಲು ಕೈಗೊಂಡ ನಿರ್ಧಾರ ಉನ್ನತ ಶಿಕ್ಷಣ ಪರಂಪರೆಯ ವೈಚಾರಿಕತೆಗೆ ಎಸಗಿದ ಅಪಚಾರ. ಕನ್ನಡ ನವ್ಯಸಾಹಿತ್ಯ ಪ್ರಕಾರದಲ್ಲಿ ಪ್ರಯೋಗ ನಡೆಸಿದ ಕಾರಣಕ್ಕೆ ಮಾತ್ರವಲ್ಲದೆ, ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ರಾವಿಡ ಭಾಷೆಗಳಲ್ಲಿನ ಜಾನಪದ ಸಂಪತ್ತು, ಕನ್ನಡದ ವಚನಸಾಹಿತ್ಯದ ದಾರ್ಶನಿಕತೆಯನ್ನು ಪಾಶ್ಚಿಮಾತ್ಯರಿಗೆ ಪಾಂಡಿತ್ಯಪೂರ್ಣವಾಗಿ ಪರಿಚಯಿಸಿದ ಎ.ಕೆ.ರಾಮಾನುಜನ್ ಅವರ ರಾಮಾಯಣ ಕುರಿತ ಅಧ್ಯಯನ ಪ್ರಬಂಧವನ್ನು ಇತಿಹಾಸದ ವಿದ್ಯಾರ್ಥಿಗಳಿಂದ ದೂರ ಇರಿಸಿದ ಕ್ರಮ ಹಾಸ್ಯಾಸ್ಪದವಷ್ಟೇ ಅಲ್ಲ, ಬಾಲಿಶತನದಿಂದಲೂ ಕೂಡಿದೆ. ಇತಿಹಾಸದಲ್ಲಿ ಬಿಎ (ಆನರ್ಸ್) ಓದುವ ವಯೋಮಾನದ ಇಂದಿನ ವಿದ್ಯಾರ್ಥಿಗಳು ರಾಮಾಯಣ ಕುರಿತಾಗಿ ದೇಶದ ವಿವಿಧ ಭಾಷೆಗಳಲ್ಲಿ ಬಂದಿರುವ ಹಲವು ಆವೃತ್ತಿಗಳನ್ನು ಪರಿಚಯಿಸಿಕೊಳ್ಳುವುದರಿಂದ ಭಾವನಾತ್ಮಕವಾಗಿ ಪ್ರಚೋದನೆಗೆ ಒಳಗಾಗುತ್ತಾರೆಂದು ಅನುಮಾನಪಡುವ ಯೋಚನೆಯೇ ಕ್ಷುಲ್ಲಕವಾದದ್ದು. ಅದು ದೆಹಲಿ ವಿಶ್ವವಿದ್ಯಾಲಯದಂತಹ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನೇ ಅವಹೇಳನ ಮಾಡುವಂಥದ್ದು. ವಾಲ್ಮೀಕಿ ರಾಮಾಯಣದ ಮೂಲ ಕಥೆಯನ್ನು ಆಧರಿಸಿ ನೂರಾರು ರಾಮಾಯಣ ಕಥೆಗಳ ಆವೃತ್ತಿಗಳು ಎರಡೂವರೆ ಮೂರು ಶತಮಾನಗಳ ಕಾಲಾವಧಿಯಲ್ಲಿ ಭಾರತೀಯ ಮನಸ್ಸಿನಲ್ಲಿ ರೂಪುಗೊಂಡಿರುವುದನ್ನು ರಾಮಾನುಜನ್ ಸಂಶೋಧಕನ ಚಿಕಿತ್ಸಕ ದೃಷ್ಟಿಯಿಂದ ವಿಶ್ಲೇಷಿಸಿರುವುದನ್ನು ವಿದ್ಯಾರ್ಥಿಗಳು ಪರೀಕ್ಷೆಯ ದೃಷ್ಟಿಯಿಂದಲಾದರೂ ಓದಲಾಗದಂತೆ ಮಾಡಿರುವ ಶಿಕ್ಷಣ ಮಂಡಲಿಯ ನಿರ್ಧಾರ ಅಜ್ಞಾನ ಪ್ರೇರಿತವಾದದ್ದು.

ರಾಮಾಯಣ ಕಾವ್ಯವಾಗಿ ಭಾರತೀಯ ಜನ ಮಾನಸದಲ್ಲಿ ಬೀರಿದ ಪರಿಣಾಮ ಅನ್ಯಾದೃಶವಾದದ್ದು. ಎಲ್ಲಿಯವರೆಗೆ ಗಿರಿವನಗಳು ಭೂಮಂಡಲದಲ್ಲಿ ಇರುತ್ತವೆಯೋ ಅಲ್ಲಿಯವರೆಗೂ ಶ್ರೀರಾಮ ಕಥೆ ಪ್ರಚಲಿತವಿರುತ್ತದೆ ಎಂದು ಸ್ವತಃ ವಾಲ್ಮೀಕಿ ಮಹರ್ಷಿಗಳೇ ಹೇಳಿರುವುದು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಪ್ರಸ್ತುತವಾಗಿದೆ. ಎಲ್ಲ ವರ್ಗದ ಜನತೆಯನ್ನು ಎಲ್ಲ ಕಾಲದಲ್ಲಿಯೂ ಪ್ರಭಾವಿಸಿ ನೂರಾರು ಬಗೆಯ ಕಾವ್ಯ ನಾಟಕಗಳ ರಚನೆಗೆ ಪ್ರೇರಣೆ ನೀಡಿದ ರಾಮಾಯಣ ಮಹಾಕಾವ್ಯದ ಕುರಿತಾಗಿ ವಸ್ತುನಿಷ್ಠವಾಗಿ ಯುವ ವಿದ್ಯಾರ್ಥಿಗಳಿಗೆ ಬೋಧಿಸುವುದು ಹಿಂದೂವಲ್ಲದ ಬೋಧಕರಿಗೆ ಸುಲಭವಲ್ಲ ಎಂಬ ಶಿಕ್ಷಣ ಮಂಡಲಿಯ ನಿಲುವು ಬೋಧಕ ಸಮುದಾಯದ ಶೈಕ್ಷಣಿಕ ಸಾಮರ್ಥ್ಯವನ್ನೇ ಶಂಕಿಸುವಂತೆ ಮಾಡುತ್ತದೆ. ರಾಮಾಯಣ ಮಹಾಕಾವ್ಯವನ್ನು ಸೀಮಿತ ಚೌಕಟ್ಟಿನಲ್ಲಿ ನೋಡುವುದರಿಂದ ಆಗುವ ಪರಿಣಾಮವಿದು. ಭಾರತೀಯ ಪರಂಪರೆ, ಆಧ್ಯಾತ್ಮಿಕತೆ, ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಕೋನಕ್ಕೆ ಸಂಬಂಧಿಸಿ ತಾವು ಭಾವಿಸಿರುವುದೇ ಸರಿಯೆಂದು ವಾದಿಸುವ ಕರ್ಮಠ ಮನಃಸ್ಥಿತಿಯ ಅಸಹಿಷ್ಣುತೆಯೇ ರಾಮಾಯಣ ಕುರಿತಾದ ವಸ್ತುನಿಷ್ಠ ಚಿಂತನೆಗೆ ವಿರೋಧಿ. ಇದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಮೇಲುಗೈ ಪಡೆಯುತ್ತಿರುವುದು ಆತಂಕಕಾರಿ. ಅಷ್ಟಕ್ಕೂ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಭಾರತೀಯ ಜನಸಮುದಾಯವನ್ನು ಹಲವು ಶತಮಾನಗಳ ಕಾಲದಿಂದಲೂ ಪ್ರಭಾವಿಸಿದ ಶ್ರೇಷ್ಠ ಕೃತಿಗಳು. ಅವು ಶತಮಾನಗಳಿಂದಲೂ ಜನಪದದ ಕಾರಯತ್ರಿ ಸಾಮರ್ಥ್ಯವನ್ನು ಬೆಳೆಸಿವೆ. ಅವುಗಳು ಪ್ರತಿಪಾದಿಸಿದ ಜೀವನಮೌಲ್ಯಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಇದನ್ನು ಸಾಂಸ್ಕೃತಿಕ ಪಾಳೆಯಗಾರಿಕೆಯಿಂದ ನಿಯಂತ್ರಿಸಲು ಹೊರಟಂತಿದೆ ದೆಹಲಿ ವಿವಿ ಶಿಕ್ಷಣ ಮಂಡಲಿಯ ಅಶೈಕ್ಷಣಿಕ ನಿರ್ಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT