ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ವಿದ್ಯಾರ್ಥಿನಿಯ ಥ್ರೋಬಾಲ್ ಒಲವು

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಣ್ಣದೊಂದು ಹಿನ್ನಡೆ ದೊಡ್ಡ ಸಾಧನೆಗೆ ಮೆಟ್ಟಿಲು ಆಗಬಹುದು ಎಂಬುದಕ್ಕೆ ಈ ವೈದ್ಯಕೀಯ ವಿದ್ಯಾರ್ಥಿನಿಯ ಸಾಧನೆಯೇ ನಿದರ್ಶನ. ಈ ವೈದ್ಯಕೀಯ ವಿದ್ಯಾರ್ಥಿನಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಥ್ರೋಬಾಲ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆಟಗಾರ್ತಿ.ಇವರು ಆರ್.ಚಂಪಾ. ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಮಿಮ್ಸ್) ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿನಿ. ಮೂಲತಃ ಬೆಂಗಳೂರಿನವರು. ಸ್ಟೆತಸ್‌ಸ್ಕೋಪ್ ಮತ್ತು ಬಿಳಿ ನಿಲುವಂಗಿಯ ಜೊತೆಗೆ ಥ್ರೋಬಾಲ್ ಕ್ರೀಡೆಯೆಡೆಗೂ ಒಲವು ಬೆಳೆಸಿಕೊಂಡಿದ್ದಾರೆ.

ಆರಂಭದಲ್ಲಿ ಟೇಬಲ್ ಟೆನ್ನಿಸ್ ಆಟದಲ್ಲಿ ತೊಡಗಿಕೊಂಡಿದ್ದು, ಸಾಧನೆ ಮಾಡುವ ಲಕ್ಷಣಗಳು ಕಂಡುಬಂದಿದ್ದರೂ ಸಣ್ಣದೊಂದು ಹಿನ್ನಡೆ ಥ್ರೋಬಾಲ್‌ನತ್ತ ಆಸಕ್ತಿ, ಏನಾದರೂ ಸಾಧಿಸಬೇಕು ಎಂಬ ಗುರಿ ಎರಡನ್ನೂ ಕೆರಳಿಸಿತು.ಅದು ಬೆಂಗಳೂರಿನಲ್ಲಿ 8ನೇ ತರಗತಿ ಓದುತ್ತಿದ್ದ ಕಾಲ. ರಾಜ್ಯಮಟ್ಟದ ಕ್ರೀಡೆಗೆ ಶಾಲೆಯ ಥ್ರೋಬಾಲ್ ತಂಡದ ಆಯ್ಕೆ ನಡೆಯುತ್ತಿತ್ತು. ಚಂಪಾಗೆ ಥ್ರೋಬಾಲ್‌ನಲ್ಲಿಯೂ ಆಸಕ್ತಿ ಇದ್ದುದನ್ನು ಗಮನಿಸಿದ ಶಾಲೆಯ ಆಯ್ಕೆದಾರರು ಪರಿಗಣಿಸುವ ಭರವಸೆ ನೀಡಿದ್ದರು.

ಒಂದು ಹಂತದಲ್ಲಿ ಆಡುವ ತಂಡಕ್ಕೆ ಆಯ್ಕೆ ಆಗುವುದಿಲ್ಲ. ಮೀಸಲು ಆಟಗಾರ್ತಿಯಾಗಿ ಪರಿಗಣಿಬಹುದು ಎಂಬ ಸೂಚನೆ ಹೊರಬಿತ್ತು. ಆದರೆ, ಅಂತಿಮವಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿಯೂ ಚಂಪಾ ಹೆಸರಿರಲಿಲ್ಲ. ಇಡೀ ದಿನ ಆವರಿಸಿದ್ದು ಖಿನ್ನತೆ. ತಂದೆ ಬಿಎಸ್‌ಎನ್‌ಎಲ್ ಉದ್ಯೋಗಿ ರಾಮಚಂದ್ರ, ತಾಯಿ ರಮಾ ಸಮಾಧಾನ ಹೇಳಿದರು. ‘ಇದನ್ನೇ ಸಾಧಿಸಲು ಮೆಟ್ಟಿಲಾಗಿಸಿಕೋ’ ಎಂಬ ಭರವಸೆ ತುಂಬಿದರು. ಆತ್ಮವಿಶ್ವಾಸ ಬೆಳಸಿದರು. ಥ್ರೋಬಾಲ್‌ನಲ್ಲೇ ಏನಾದರೂ ಸಾಧಿಸೋಣ ಎಂದು ಆರಂಭಿಸಿದ ಯಾತ್ರೆ ಇಂದು ಅಂತರರಾಷ್ಟ್ರೀಯ ಮಟ್ಟದವ ರೆಗೂ ತಂದು ನಿಲ್ಲಿಸಿದೆ.

2004ರಲ್ಲಿ ದೆಹಲಿಯಲ್ಲಿ ನಡೆದ ಮೊದಲ ಫೆಡರೇಷನ್ ಕಪ್ ಥ್ರೋಬಾಲ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾಗಿದ್ದು, ಈಚೆಗೆ 2010ರಲ್ಲಿ ಮಲೇಷ್ಯಾದಲ್ಲಿ ಏಷ್ಯನ್ ಥ್ರೋಬಾಲ್ ಫೆಡರೇಷನ್ ಆಯೋಜಿಸಿದ್ದ 1ನೇ ಏಷ್ಯನ್ ಯೂತ್ ಥ್ರೋಬಾಲ್ ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಈ ಅವಧಿಯಲ್ಲಿ ಏಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದು, 2006ರಲ್ಲಿ ಬೋಪಾಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುದ್ದನ್ನು ಹೊರತುಪಡಿಸಿದರೆ ಉಳಿದಂತೆ ಇವರು ಗಳಿಸಿದ್ದು ಪ್ರಥಮ ಸ್ಥಾನವೇ ಎಂಬುದು ಗಮನಾರ್ಹ.ಮಲ್ಪೆ, ಹೈದರಾಬಾದ್‌ನಲ್ಲಿ ನಡೆದ ಸಬ್ ಜೂನಿಯರ್ ನ್ಯಾಷನಲ್ಸ್,

ತಮಿಳುನಾಡಿನಲ್ಲಿ ನಡೆದ 29ನೇ ಸೀನಿಯರ್ ನ್ಯಾಷನಲ್ಸ್ ಹೀಗೆ ವಿವಿಧ ರಾಷ್ಟ್ರೀಯ ಸ್ಪರ್ಧೆಗಳೇ ಅಲ್ಲದೆ, ಚೆನ್ನೈನಲ್ಲಿ 2005ರಲ್ಲಿ ನಡೆದ 2ನೇ ಏಷ್ಯನ್ ಥ್ರೋಬಾಲ್ ಚಾಂಪಿಯನ್ ಷಿಪ್, ಕೊಲಂಬೊದಲ್ಲಿ 2006ರಲ್ಲಿ ನಡೆದ ಶ್ರೀಲಂಕಾ-ಇಂಡಿಯಾ ಸ್ಕೂಲ್ ಥ್ರೋಬಾಲ್ ಚಾಂಪಿಯನ್‌ಷಿಪ್ ಹೀಗೆ ಪ್ರಶಸ್ತಿಗಳು  ಅವರ ಖಜಾನೆಯಲ್ಲಿ ಭದ್ರವಾಗಿದೆ.

ತಂದೆ-ತಾಯಿ ಅವರ ಪ್ರೋತ್ಸಾಹವೇ ಅವರ ಇಂದಿನ ಸಾಧನೆಗೆ ಉತ್ತೇಜನ, ಕೋಚ್, ಕಾಲೇಜು ಸಿಬ್ಬಂದಿಯ ಸಹಕಾರವು ಈ ಸಾಧನೆಗೆ ಕಾರಣ. ಬದ್ಧತೆ, ಸಾಧಿಸುವ ಸ್ಪಷ್ಟ ಗುರಿ ಇದ್ದರೆ ಯಾವುದೇ ಸಾಧನೆ ಕಷ್ಟವಲ್ಲ ಎಂಬುದು ಆರ್.ಚಂಪಾ. ಕಿರಿಯ ಆಟಗಾರ್ತಿಯರಿಗೆ ನೀಡುವ ಸಲಹೆ.

ಕ್ರೀಡಾ ಇಲಾಖೆ, ಸರ್ಕಾರದಿಂದ ಪ್ರೋತ್ಸಾಹ ನೆರವು ದೊರೆತಿದೆಯಾ ಎನ್ನುವ ಪ್ರಶ್ನೆಗೆ ನಿರಾಸೆಯೇ ಉತ್ತರ. ಮಾಡಿದ ಮನವಿಗಳಿಗೂ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ. ಆದರೆ, ಕುಟುಂಬದ ಉತ್ತೇಜನ ಇರುವ ಕಾರಣ ಸ್ಟೆತಸ್‌ಸ್ಕೋಪ್  ಜತೆಗೇ ಥ್ರೋಬಾಲ್‌ನೊಂದಿಗೂ ಒಡನಾಟ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT