ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಸಿಬ್ಬಂದಿ ಕೊರತೆ: ರೋಗಿಗಳ ತೊಳಲಾಟ

Last Updated 11 ಫೆಬ್ರುವರಿ 2012, 6:00 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿ ಕೊರತೆ ಇರುವುದರಿಂದ ರೋಗಿಗಳು ಅಧಿಕ ವೆಚ್ಚ ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆಹೋಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಮಕ್ಕಳ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ನೇತ್ರ ತಜ್ಞರು, ವೈದ್ಯಕೀಯ ತಜ್ಞರು(ಫಿಜಿಸಿಯನ್) ಜನರಲ್ ಸರ್ಜನ್, ದಾದಿಯರ ಹುದ್ದೆಗಳು ಖಾಲಿ ಇರುವುದರಿಂದ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳು ಪರದಾಡುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 59 ಸರ್ಕಾರಿ ಆಸ್ಪತ್ರೆಗಳಿವೆ. ನವನಗರದಲ್ಲಿ ಜಿಲ್ಲಾ ಆಸ್ಪತ್ರೆ, ಐದು ತಾಲ್ಲೂಕು ಆಸ್ಪತ್ರೆಗಳು, ಎಂಟು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 44 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, ಇವುಗಳಲ್ಲಿ ಒಟ್ಟು 1531 ವಿವಿಧ ವೈದ್ಯಕೀಯ ಹುದ್ದೆಗಳು ಇವೆ, ಅದರಲ್ಲಿ 379 ಹುದ್ದೆಗಳು ಕಳೆದ ಎರಡು ವರ್ಷದಿಂದ ಖಾಲಿ ಇರುವುದ ರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ, ಈ ನಡುವೆ ಇರುವ ವೈದ್ಯ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ರೋಗಿಗಳು ಸರಿಯಾದ ಚಿಕಿತ್ಸೆ ಸಿಗದೇ ಒಂದೇರಡು ದಿನದಲ್ಲೇ ಖಾಸಗಿ ಆಸ್ಪತ್ರೆಗಳ ಕದ ತಟ್ಟುವಂತಾಗಿದೆ. ಬಾಗಲಕೋಟೆ ನಗರ ಹಾಗೂ ಜಿಲ್ಲೆಯ ತಾಲ್ಲೂಕು ಕೇಂದ್ರದಲ್ಲಿರುವ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರೋಗಿಗಳ ಒತ್ತಡ ಅಧಿಕವಾಗಿದೆ.

ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ಚಿಕಿತ್ಸೆ ನೀಡಿದರೂ ಬಡ ರೋಗಿಗಳಿಗೆ ಭಾರವೆನ್ನುವಷ್ಟು ಶುಲ್ಕವನ್ನು ವಸೂಲಿ ಮಾಡುವುದರಿಂದ ರೋಗಿಗಳು ಕಂಗಾಲಾಗುವಂತಾಗಿದೆ.

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹಾಗೂ ಅಂಗವಿಕಲ ಮಕ್ಕಳ ಸಂಖ್ಯೆ ಅಧಿಕ ಇರುವುದರಿಂದ ಪ್ರತಿನಿತ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಅಧಿಕ, ಇರುವ ಸಿಬ್ಬಂದಿ ಒತ್ತಡದಲ್ಲೇ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಶೀಘ್ರ ಚಿಕಿತ್ಸೆ ಸಿಗದೇ ಪರದಾಡು ತ್ತಿದ್ದಾರೆ.

2011-12ನೇ ಸಾಲಿಗೆ ಸರ್ಕಾರ ಒಟ್ಟು ರೂ. 36.44 ಕೋಟಿ ಅನುದಾನವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದೆ. ಆದರೆ ಇದರಲ್ಲಿ ಕೇವಲ ರೂ. 19.11 ಕೋಟಿ ಮಾತ್ರ ಖರ್ಚಾಗಿದೆ ಎಂಬುದು ಆರೋಗ್ಯ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಆರೋಗ್ಯ ಇಲಾಖೆಯ ಇನ್ನೊಂದು ಸಂಕಷ್ಟದ ಸ್ಥಿತಿ ಎಂದರೆ ತಜ್ಞ ವೈದ್ಯರು ಇಲಾಖೆಗೆ ಸಿಗುತ್ತಿಲ್ಲ. ವೈದ್ಯರಿಗಾಗಿ ಹಲವಾರು ಬಾರಿ ಅರ್ಜಿ ಆಹ್ವಾನಿಸಿದರೂ ಯಾರೂ ಮುಂದೆ ಬರುತ್ತಿಲ್ಲ, ಬಂದರೂ ಗ್ರಾಮೀಣ ಭಾಗ ದಲ್ಲಿ ಕಾರ್ಯನಿರ್ವಹಿಸಲು ಹಿಂಜರಿಕೆ ಮಾಡುತ್ತಿ ದ್ದಾರೆ. ಈ ಎಲ್ಲದರ ನಡುವೆ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳೇ ಹಿತ ಎನ್ನುವಂತ ವಾತಾವರಣ ನಿರ್ಮಾಣವಾಗಿದೆ.

ಶೀಘ್ರದಲ್ಲೇ ಭರ್ತಿ: ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಗುಂಡಪ್ಪ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯ ಸಿಬ್ಬಂದಿ ಭರ್ತಿ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಿದ್ದು, ಶೀಘ್ರದಲ್ಲೇ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ಅವ್ಯವಸ್ಥೆ ಆಗರ:   ಇನ್ನು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ನೋಡಿದರೆ ರೋಗ ವಾಸಿಯಾಗುವ ಬದಲು ಮತ್ತಷ್ಟು ರೋಗ ಅಂಟಿಕೊಳ್ಳುವ ಭೀತಿ ಜನಸಾಮಾನ್ಯರದ್ದಾಗಿದೆ. ಅದರಲ್ಲೂ ಆಸ್ಪತ್ರಗೆ ಬರುವ ರೋಗಿಗಳು ಮತ್ತು ಅವರ ಕುಟುಂಬ ವರ್ಗ ಸ್ವಚ್ಛತೆ ಆದ್ಯತೆ ನೀಡುತ್ತಿಲ್ಲ, ಆಸ್ಪತ್ರೆ ಆವರಣದಲ್ಲಿ ಎಲ್ಲಂದರಲ್ಲಿ ಉಗುಳುವುದು, ಶೌಚಾಲಯದಲ್ಲಿ ಮತ-ಮೂತ್ರ ವಿಸರ್ಜನೆ ಮಾಡಿ ನೀರು ಹಾಕದೇ ಬಿಡುವುದು, ತ್ಯಾಜ್ಯವನ್ನು ಎಲ್ಲಂದರಲ್ಲಿ ಬಿಸಾಡುವುದು ಆಸ್ಪತ್ರೆಯ ನೈರ್ಮಲ್ಯ ಕೆಡಲು ಪ್ರಮುಖ ಕಾರಣವಾಗಿದೆ.

ಹಣ ಪಡೆಯುತ್ತಾರೆ: ಬಾದಾಮಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹಲಕುರ್ಕಿಯ ಮಾರುತಿ ಬಂಡಿಗಣಿ,  ಆಸ್ಪತ್ರೆಯೇ ರೋಗಗ್ರಸ್ಥವಾಗಿದೆ. ಆಸ್ಪತ್ರೆ ಆವರಣ ಹೊಕ್ಕರೆ ಸಾಕು ವಾಸನೆ ಮೂಗಿಗೆ ತಟ್ಟುತ್ತದೆ. ಆವರಣದಲ್ಲಿ ಬಿದ್ದ ಗಲೀಜು ರೋಗಿಗಳನ್ನು ಸ್ವಾಗತಿಸುತ್ತವೆ. ಇನ್ನು ಆರೋಗ್ಯ ಸುಧಾರಣೆಗೆ ಆಸ್ಪತ್ರೆಗೆ ಬಂದರೆ, ಈ ಆಸ್ಪತ್ರೆಯಿಂದಲೇ ರೋಗ ಹಚ್ಚಿಕೊಂಡು ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿಯಿದೆ ಎಂದರು.

ಆಸ್ಪತ್ರೆಗೆ ಹೋದರೆ ತಪಾಸಣೆ ಮಾಡಿದ ವೈದ್ಯರು ಔಷಧ ಬರೆದುಕೊಡುತ್ತಾರೆ. ಚಿಕಿತ್ಸೆ ನೀಡಿದ ಬಳಿಕ ಹಣ ಕೇಳುತ್ತಾರೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT