ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ಪ್ರದರ್ಶನ: 1.75 ಲಕ್ಷ ಜನರ ನಿರೀಕ್ಷೆ

Last Updated 3 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

 ಬೆಂಗಳೂರು: ನಗರದ ಯಲಹಂಕದ ವಾಯು ನೆಲೆಯಲ್ಲಿ ಫೆ.9-13ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೊ ಇಂಡಿಯಾ-2011’ ವೀಕ್ಷಿಸಲು ಸುಮಾರು 1.75 ಲಕ್ಷ ಜನರು ಭೇಟಿ ಕೊಡುವ ನಿರೀಕ್ಷೆ ಇದೆ. ವೈಮಾನಿಕ ಹಾಗೂ ರಕ್ಷಣಾ ಸಾಮಗ್ರಿಗಳ ಖರೀದಿ-ಮಾರಾಟ ಮೇಳವಲ್ಲದೇ, ಜನರು ವೀಕ್ಷಿಸುವ ವೈಮಾನಿಕ ಹಬ್ಬವಾಗಲಿದೆ’ ಎಂದು ರಕ್ಷಣಾ ಮೇಳದ ಜಂಟಿ ನಿರ್ದೇಶಕ ಎಂ.ಡಿ. ಸಿಂಗ್ ಹೇಳಿದರು.

ವಿಕಾಸ ಸೌಧದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟೊಂದು ಪ್ರಮಾಣದಲ್ಲಿ ಆಗಮಿಸುವ ಜನರ ಸುರಕ್ಷತೆ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.  ‘ಈ ಮೇಳದಲ್ಲಿ ದಾಖಲೆ ಸಂಖ್ಯೆಯಲ್ಲಿ 680 ವಿದೇಶಿ ಕಂಪೆನಿಗಳು ಹಾಗೂ 295 ಸ್ವದೇಶಿ ಕಂಪೆನಿಗಳು ಭಾಗವಹಿಸುತ್ತಿವೆ’ ಎಂದರು.


‘ವೈಮಾನಿಕ ಪ್ರದರ್ಶನದ ವೇಳೆ ವಿಮಾನಗಳು ಅತಿ ಕೆಳಗಿನ ಮಟ್ಟದಲ್ಲಿ ಹಾರಾಟ ಮಾಡುವುದರಿಂದ ಪಕ್ಷಿಗಳ ಜೊತೆ ಡಿಕ್ಕಿಯಾಗುವ ಸಂಭವ ಇರುತ್ತದೆ. ಆದ್ದರಿಂದ ಪಕ್ಷಿಗಳ ಹಾರಾಟವನ್ನು ತಡೆಯಲು ಯಲಹಂಕ ಸುತ್ತಮುತ್ತಲಿನ ಜನರು ಯಾವುದೇ ಮಾಂಸ, ಆಹಾರ ತಿಂಡಿಗಳನ್ನು ಹೊರಗೆ ಎಸೆಯದೆ ಸಹಕರಿಸಬೇಕು. ಈ ಪ್ರದೇಶದಲ್ಲಿರುವ ಕೆರೆಗಳಲ್ಲಿ ಮೀನು ಹಿಡಿಯಲು ಹೋಗಬಾರದು’ ಎಂದು ಅವರು ಹೇಳಿದರು.

ಸಾರಿಗೆ ವ್ಯವಸ್ಥೆ:  ‘ಮೇಳವನ್ನು ವೀಕ್ಷಿಸಲು ಬರುವವರಿಗಾಗಿ ಬಿಎಂಟಿಸಿ ಸಾರಿಗೆ ವ್ಯವಸ್ಥೆಯನ್ನು ಮಾಡಲಿದೆ. ಮೆಜೆಸ್ಟಿಕ್‌ನಿಂದ ನೇರವಾಗಿ ವಾಯು ನೆಲೆಗೆ ಬಸ್‌ಗಳನ್ನು ಹೊರಡಿಸಲಿದೆ’ ಎಂದು ಅವರು ತಿಳಿಸಿದರು.

ವಿಮಾನ ವೇಳಾಪಟ್ಟಿ ಬದಲು:  ‘ವೈಮಾನಿಕ ಪ್ರದರ್ಶನದ ವೇಳೆ ಪ್ರಮುಖ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇದಲ್ಲದೇ ಕೆಲವೊಂದು ವಿಮಾನಗಳ ವೇಳೆಯನ್ನು ಸಹ ಬದಲಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾಧ್ಯವಾದಷ್ಟು ಯಲಹಂಕ ಮಾರ್ಗವನ್ನು ಬಿಟ್ಟು ಪರ್ಯಾಯ ಮಾರ್ಗವನ್ನು ಬಳಸಬೇಕು’ ಎಂದು ಅವರು ಮನವಿ ಮಾಡಿದರು.

ಆಹಾರ ವ್ಯವಸ್ಥೆ: ‘ಮೇಳವನ್ನು ವೀಕ್ಷಿಸಲು ಬರುವವರು ಯಾವುದೇ ಆಹಾರವನ್ನು ತೆಗೆದುಕೊಂಡ ಬರಬಾರದು. ಮೇಳದಲ್ಲಿಯೇ ಪೂರೈಸುವ ವ್ಯವಸ್ಥೆಯನ್ನು ಮಾಡಲಾಗಿದೆ. ದರವು ಕೂಡ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಕಡಿಮೆ ಬೆಲೆಗೆ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಸಿಂಗ್ ಹೇಳಿದರು.

ವೀಕ್ಷಕರಿಗೆ ಟಿಕೆಟ್: ಮೇಳದ ಮೊದಲ ಮೂರು ದಿನ ವೈಮಾನಿಕ ಕಂಪೆನಿಗಳ ಗೋಷ್ಠಿಗಳು, ಖರೀದಿ-ಮಾರಾಟ ಪ್ರಕ್ರಿಯೆಗಳು ನಡೆಯಲಿವೆ. ಸ್ವಲ್ಪಮಟ್ಟಿನ ವೈಮಾನಿಕ ಕಸರತ್ತು ಇರುತ್ತದೆ. ಫೆ.12-13ರಂದು ವೈಮಾನಿಕ ಕಸರತ್ತೇ ಪ್ರಮುಖ ಅಂಶವಾಗಿರುತ್ತದೆ. ಸಾರ್ವಜನಿಕರು ಈ ಎರಡು ದಿನ ಭೇಟಿ ನೀಡುವುದು ಒಳಿತು ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.

 ವೈಮಾನಿಕ ಮೇಳವನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಏರೊ ಇಂಡಿಯಾ ವೆಬ್‌ಸೈಟ್‌ಗೆ (www.aeroindia.in) ಭೇಟಿ ನೀಡಿ ಆನ್‌ಲೈನ್ ಟಿಕೆಟ್ ಪಡೆಯಬಹುದು. ಇಲ್ಲವೇ ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್‌ಬಿಐ) ಶಾಖೆಗಳಲ್ಲಿ ಪಡೆಯಬಹುದು. ಗರುಡಾ ಮಾಲ್, ಫೋರಂ ಮಾಲ್, ಮಂತ್ರಿ ಮಾಲ್‌ನಲ್ಲಿಯೂ ಟಿಕೆಟ್ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಫೆ.9-11ರಂದು ಟಿಕೆಟ್ ದರ ಪ್ರತಿಯೊಬ್ಬರಿಗೆ ರೂ 400. ಫೆ.12-13ರಂದು ರೂ 500 ಇದೆ. ಟಿಕೆಟ್ ಜೊತೆ ಪ್ರತಿಯೊಬ್ಬರು ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ಹೊಂದಿರಲೇಬೇಕು ಎಂದು ಅವರು ಹೇಳಿದರು.

 ಮೇಳದಲ್ಲಿ ರಾಜ್ಯದ ಮಳಿಗೆ
 ಬೆಂಗಳೂರು:‘ಏರೊ ಇಂಡಿಯಾ’ ಮೇಳದಲ್ಲಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಮಳಿಗೆ ಸ್ಥಾಪಿಸಲಿದೆ ಎಂದು ಮೂಲಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಧು ಹೇಳಿದರು.

ರಾಜ್ಯ ಈಗಾಗಲೇ ಏಳು ವೈಮಾನಿಕ ಮೇಳಗಳನ್ನು ಆಯೋಜಿಸಿದ್ದರೂ, ಇದೇ ಮೊದಲ ಬಾರಿಗೆ ಮಳಿಗೆ ಸ್ಥಾಪಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಆಯುಕ್ತ ರಾಜ್ ಕುಮಾರ್ ಖತ್ರಿ ಮಾತನಾಡಿ, ‘ಈ ದಿನಗಳಲ್ಲಿ ನಗರಕ್ಕೆ ಆಗಮಿಸುವ ವೈಮಾನಿಕ ಉದ್ಯಮಿಗಳು ಮುಖ್ಯಮಂತ್ರಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂಡವಾಳ ಹೂಡಿಕೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT