ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟ್ ಜೊತೆ ರೊಟ್ಟಿ ಕೊಡಿ: ವಿನೂತನ ಪ್ರಚಾರ

Last Updated 20 ಏಪ್ರಿಲ್ 2013, 10:25 IST
ಅಕ್ಷರ ಗಾತ್ರ

ಸಿಂದಗಿ: ಚುನಾವಣೆ ಬಂತೆಂದರೆ ವೋಟ್‌ಗಾಗಿ ನೋಟ್ ಕೊಡುವುದು ಸಾಮಾನ್ಯ. ಆದರೆ ಸಿಂದಗಿಯಲ್ಲಿ ವಿಭಿನ್ನ ಸನ್ನಿವೇಶ ಕಂಡು ಬರುತ್ತಿದೆ.

`ವೋಟ್ ಜೊತೆ ರೊಟ್ಟಿ ಕೊಡಿ' ಎಂಬುದು ಕರ್ನಾಟಕ ರಾಜ್ಯ ರೈತ ಸಂಘದ ಅಭ್ಯರ್ಥಿ ಸಿದ್ದರಾಮಪ್ಪ ರಂಜಣಗಿ ಅವರ ಘೋಷಣೆಯಾಗಿದೆ.

ಶುಕ್ರವಾರ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ರೈತ ಸಂಘದ ಪದಾಧಿಕಾರಿಗಳಿಗೆ ಹೊಟ್ಟೆ ತುಂಬಿಸಿಕೊಳ್ಳಲು ರೊಟ್ಟಿ, ಚಟ್ನಿ ನೀಡಿ ಮತದಾನದ ದಿನ ನನಗೆ ವೋಟ್ ಹಾಕಿದರೆ ಸಾಕು ಎಂದು ಅಭ್ಯರ್ಥಿ ರಂಜಣಗಿ ಮತಯಾಚಿಸಿದರು.

ಈಗಾಗಲೇ ಕನ್ನೊಳ್ಳಿ, ಬೂದಿಹಾಳ, ಬಂದಾಳ ಹೀಗೆ ಹತ್ತು ಹಲವಾರು ಗ್ರಾಮಗಳ ಮಹಿಳೆಯರು ದಿನಾಲೂ ರೊಟ್ಟಿ ಗಂಟು ನೀಡಿ ಬೆನ್ನು ತಟ್ಟುತ್ತಿದ್ದಾರೆ. ನಿನ್ನೆ ದಿನ ಹೆಸರು ಹೇಳದ ಮಹಿಳೆಯೊಬ್ಬಳು ನಮ್ಮ ಪ್ರಚಾರ ಕಾರ್ಯಾಲಯಕ್ಕೆ ಬಂದು 200 ರೊಟ್ಟಿಗಳನ್ನೊಳಗೊಂಡ ಗಂಟು ಇಟ್ಟು ಹೋಗಿದ್ದಾರೆ. ಹೀಗೆ ರೈತ ಮಹಿಳೆಯರಿಂದ ಎಲ್ಲೆಡೆ ವ್ಯಾಪಕ ಬೆಂಬಲ ದೊರಕುತ್ತಿದೆ.

ಇಡೀ ಮತಕ್ಷೇತ್ರದಾದ್ಯಂತ ಹಳ್ಳಿ, ಹಳ್ಳಿಗಳಲ್ಲಿ ಸಂಚರಿಸಲು ಮೂರು ಜೀಪುಗಳ ವ್ಯವಸ್ಥೆಯನ್ನು ರೈತ ಸಂಘದ ಮುಖಂಡರಾದ ಶಿವಶರಣಪ್ಪಗೌಡ ಬಿರಾದಾರ, ಚನ್ನಪ್ಪಗೌಡ ಪಾಟೀಲ, ಬಸನಗೌಡ ಧರ್ಮಗೊಂಡ ಇವರು ಸ್ವಂತ ಖರ್ಚಿನಿಂದ ಮಾಡಿಕೊಟ್ಟಿದ್ದಾರೆ. ಇನ್ನು ಹಣದ ಅಗತ್ಯತೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕರು ವಿಧಾನಸಭೆಗೆ ಪ್ರವೇಶ ಮಾಡಿದರೆ ಏನು ಪ್ರಯೋಜನ. ವಿಧಾನಸೌಧದಲ್ಲಿ ರೈತರ ಸಮಸ್ಯೆ ಹೇಳುವ ನಿಸ್ವಾರ್ಥ ರೈತ ಮುಖಂಡರು ಶಾಸಕರಾದಾಗಲೇ ರೈತರ ಬಾಳು ಹಸನವಾಗಲು ಸಾಧ್ಯ ಎಂದು ಅವರು ಮಾತನಾಡಿದರು.

ಪ್ರಚಾರ ಕಾರ್ಯದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬಸನಗೌಡ ಧರ್ಮಗೊಂಡ,        ಗೊಲ್ಲಾಳಪ್ಪ ಚೌಧರಿ ಕನ್ನೊಳ್ಳಿ, ಕುಮಾರಸ್ವಾಮಿ  ಹಿರೇಮಠ ಬಂದಾಳ, ಗುರಯ್ಯ ಹಿರೇಮಠ ಅಲಹಳ್ಳಿ,  ಬಾಬು ರಾಠೋಡ, ಶಿವಪ್ಪ ಶಹಾಬಾದಿ, ಅಶೋಕ ಅಲ್ಲಾಪೂರ, ರೇವಣಸಿದ್ದ ಬಳೂಂಡಗಿ, ಬಸವರಾಜ ರೆಬಿನಾಳ, ಶಂಕರಪ್ಪ ಗೋಣಿ, ಮಹಾಂತೇಶ, ಕುಮಟಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT