ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕದ ಬೆಟ್ಟ ಏರಿದ `ಬಾಲಂಗೋಚಿ'!

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದ ರೆಗಿ ಡಫ್ 110 ವರ್ಷಗಳ ಹಿಂದೆ (1902ರ ಜನವರಿ 1) ಮೆಲ್ಬರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದಾಗ ಬಾಂಗ್ಲಾದೇಶದ ಯುವ ಆಟಗಾರ ಅಬುಲ್ ಹಸನ್ ಮಾತ್ರವೇಕೆ; ಅವರ ತಂದೆ ಕೂಡ ಜನಿಸಿರಲಿಲ್ಲ. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಗಳಿಸಿದ `ಬಾಲಂಗೋಚಿ' (ಹತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್) ಎಂಬ ದಾಖಲೆಯನ್ನು ರೆಗಿ ಆಗ ಬರೆದಿದ್ದರು.

ಬಾಂಗ್ಲಾದೇಶದ ಖುಲ್ನಾದಲ್ಲಿ ಈಚೆಗೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಹಸನ್, ಅದೇ ಹತ್ತನೇ ಕ್ರಮಾಂಕದಲ್ಲಿ ಆಡಲಿಳಿದು ಅತ್ಯಾಕರ್ಷಕ ಶತಕ ಬಾರಿಸಿದರು. ಆ ಮೂಲಕ ಶತಮಾನದ ಹಿಂದಿನ ರೆಗಿ ಅವರ ಸಾಧನೆಯನ್ನು ಮತ್ತೆ ನೆನಪು ಮಾಡಿಕೊಟ್ಟರು. 135 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಅಂತಹ ಅಪೂರ್ವ ದಾಖಲೆ ಬರೆದ ಎರಡನೇ ಆಟಗಾರ ಎಂಬ ಹಿರಿಮೆಗೆ ಬಾಂಗ್ಲಾದ ಈ 20 ಹರೆಯದ ಆಟಗಾರ ಒಳಗಾದರು.

ಹಸನ್ ತಂಡಕ್ಕೆ ಆಯ್ಕೆಯಾಗಿದ್ದೆ ಬೌಲರ್‌ನ ಪಾತ್ರವನ್ನು ನಿರ್ವಹಿಸಲು. ಆದರೆ, ಚೆಂಡನ್ನು ಕೈಯಲ್ಲಿ ಹಿಡಿಯುವ ಮುನ್ನವೇ ಈ ಎಡಗೈ ಬ್ಯಾಟ್ಸ್‌ಮನ್ ಕ್ರಿಕೆಟ್ ಜಗತ್ತಿನ ಖ್ಯಾತಿ ಗಳಿಸಿಬಿಟ್ಟರು. ಕ್ರಿಕೆಟ್ ಇತಿಹಾಸಕಾರರು ಬೆರಗಿನ ಕಣ್ಣುಗಳಿಂದ ಬಾಂಗ್ಲಾ ಕಡೆಗೆ ನೋಡುವಂತೆ ಮಾಡಿದರು. ಸೆಹ್ಲೆಟ್ ಭಾಗದ ಪುಟ್ಟ ಪಟ್ಟಣ ಕುಲೌರಾ ಎಂಬಲ್ಲಿ ಜನಿಸಿದ (1992 ಆಗಸ್ಟ್ 5) ಈ ಹುಡುಗ, ಅಲ್ಲಿಯ ವಿವಿಧ ವಯೋಮಾನದ ತಂಡಗಳಲ್ಲಿ ಆಡಿದವರು.

15 ವರ್ಷದೊಳಗಿನ ತಂಡದಲ್ಲಿ ಬ್ಯಾಟ್ಸ್‌ಮನ್ ಆಗಿ ಸ್ಥಾನ ಗಿಟ್ಟಿಸಿದ್ದ ಹಸನ್‌ಗೆ ಬೌಲಿಂಗ್ ದೀಕ್ಷೆ ಕೊಟ್ಟವರು ಬಾಂಗ್ಲಾದೇಶ ತಂಡದ ಮಾಜಿ ನಾಯಕ ಮಿನ್‌ಹಜುಲ್ ಅಬೆದಿನ್. ಮುಂದೆ ಬಾಂಗ್ಲಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅವರು 11 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದರು. ಬಾಂಗ್ಲಾದೇಶ ಕ್ರಿಕೆಟ್ ಅಕಾಡೆಮಿ ಟೂರ್ನಿಗಳಲ್ಲಿ ಬೌಲರ್ ಆಗಿಯೇ ಅವರು ಕಾಣಿಸಿಕೊಂಡರು.

ಈ ವರ್ಷದ ಮಧ್ಯದಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದ ಹಸನ್, ವಿಶ್ವ ಟ್ವೆಂಟಿ-20 ಚಾಂಪಿಯನ್‌ಷಿಪ್‌ನಲ್ಲೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದರು. ಕೊನೆಗೆ ಬಾಂಗ್ಲಾದೇಶದ 65ನೇ ಟೆಸ್ಟ್ ಆಟಗಾರರಾಗಿ ಕ್ಯಾಪ್ ತೊಟ್ಟರು. ಟೆಸ್ಟ್ ಇತಿಹಾಸದಲ್ಲಿ ಹತ್ತನೇ ಕ್ರಮಾಂಕದಲ್ಲಿ ಆಡಲಿಳಿದು ಇದುವರೆಗೆ ಶತಕ ಬಾರಿಸಿದ ಬೌಲರ್‌ಗಳು ಕೇವಲ ನಾಲ್ಕು ಮಂದಿ. ಹಸನ್ ಆ ಸಾಧಕರ ಹೆಮ್ಮೆಯ ಯುವ ಸದಸ್ಯನಾಗಿ ಕಂಗೊಳಿಸುತ್ತಿದ್ದಾರೆ.

ಟೆಸ್ಟ್ ಕ್ಯಾಪ್ ತೊಡುವ ಮುನ್ನ ಕೇವಲ ಆರು ಪ್ರಥಮ ದರ್ಜೆ ಪಂದ್ಯ ಆಡಿದ್ದ ಹಸನ್, 106 ಎಸೆತಗಳಲ್ಲಿ ತಮ್ಮ ಚೊಚ್ಚಲು ಶತಕದ ಸಂಭ್ರಮ ಆಚರಿಸಿಕೊಂಡಿದ್ದರು. 13 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಅದರಲ್ಲಿ ಸೇರಿದ್ದವು. ಡಫ್ ತಮ್ಮ ದ್ವಿತೀಯ ಇನಿಂಗ್ಸ್‌ನಲ್ಲಿ ಆ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅವರು 32 ರನ್ ಬಾರಿಸಿದ್ದರು. ಆದರೆ. ಹಸನ್ ತಮ್ಮ ಮೊದಲ ಇನಿಂಗ್ಸ್‌ನಲ್ಲೇ ಶತಕದ ಸವಿ ಉಣ್ಣುವ ಮೂಲಕ ಸಂಭ್ರಮಪಟ್ಟರು.

ಶತಕ ಪೂರೈಸಿದಾಗ ಹಸನ್ ಸಂಭ್ರಮ ನೋಡಬೇಕಿತ್ತು. ಗಾಳಿಯಲ್ಲಿ ತೇಲಿದ ಅವರು, ಅದಕ್ಕೊಂದು ಗುದ್ದು ನೀಡಿದ್ದಲ್ಲದೆ, ಅಂತಹ ಸಾಧನೆಯನ್ನು ತಂದುಕೊಟ್ಟ ಬ್ಯಾಟಿಗೊಂದು ಪ್ರೀತಿಯ ಮುತ್ತು ನೀಡಿದರು.  ಖುಲ್ನಾದ ಹುಲ್ಲಿನ ಅಂಗಳಕ್ಕೂ ಅವರು ತಲೆಬಾಗಿ ನಮಸ್ಕರಿಸಿದರು.

ಖುಲ್ನಾದ ಆ ಅಂಗಳದಲ್ಲಿ ಹಸನ್ ಸಿಕ್ಕಾಪಟ್ಟೆ ಡಿವಿಜನ್ ಲೀಗ್ ಪಂದ್ಯ ಆಡಿದ್ದಾರೆ. ಶತಕದ ಇಂತಹ ಸಾಧನೆ ಮೂಡಿಬಂದಿರಲಿಲ್ಲ. `ಆತ ಅತ್ಯುತ್ತಮ ಬೌಲರ್ ಆಗಬಹುದು ಎಂಬ ನಿರೀಕ್ಷೆ ನನ್ನಲ್ಲಿತ್ತು. ಒಬ್ಬ ಶ್ರೇಷ್ಠ ಆಲ್‌ರೌಂಡರ್ ಆಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳೂ ಆತನಲ್ಲಿ ಗೋಚರಿಸಿವೆ' ಎಂದು ಮಿನ್‌ಹಜುಲ್ ಹೇಳುತ್ತಾರೆ.

`ಖಂಡಿತವಾಗಿಯೂ ಇಂತಹ ಐತಿಹಾಸಿಕ ಸಾಧನೆ ನನ್ನಿಂದ ಸಾಧ್ಯವಾಗುತ್ತದೆ ಎಂಬ ನಿರೀಕ್ಷೆ ಕನಸು ಮನಸ್ಸಿನಲ್ಲೂ ಇರಲಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಬಂದೊಡನೆ ನನ್ನ ತಂಡದ ಹಿರಿಯ ಆಟಗಾರರು ಆ ಮಾಹಿತಿ ನೀಡುತ್ತಾ ಅಭಿನಂದಿಸಿದಾಗ ರೋಮಾಂಚನಗೊಂಡೆ' ಎಂದು ಹಸನ್ ಪ್ರತಿಕ್ರಿಯಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT