ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದ ಮಾಲಿನ್ಯದ ಅಪಾಯ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರದ ಶಬ್ದಮಾಲಿನ್ಯ ಮಟ್ಟ ಅಪಾಯದ ಮಿತಿ ಮೀರಿದೆಯೇ? ಎಲ್ಲೆಲ್ಲಿ  ಶಬ್ದ ಮಾಲಿನ್ಯ ಹೆಚ್ಚಾಗಿದೆ ಎನ್ನುವ ಕುತೂಹಲವಿರುವವರಿಗೆ ಇಲ್ಲೊಂದು ವರದಿ ನಿಜಕ್ಕೂ ಮಹತ್ವಪೂರ್ಣ ಮಾಹಿತಿ ಒದಗಿಸುತ್ತದೆ.

ಬೆಂಗಳೂರಿನ `ರಾಜನ್ಸ್ ವಾಕ್ ಹಾಗೂ ಶ್ರವಣ ಕೇಂದ್ರ~ ನಡೆಸಿದ ಸಂಶೋಧನೆಯ ಮೂಲಕ ಬೆಂಗಳೂರು ನಗರದ ನಾನಾ ಭಾಗಗಳಲ್ಲಿ ಶಬ್ದ ಮಾಲಿನ್ಯ ಪ್ರಮಾಣವನ್ನು ಪತ್ತೆ ಹಚ್ಚಲಾಗಿದೆ.

ಇವೆಲ್ಲಾ ದಿನದ ದಟ್ಟಣೆ ಅವಧಿಯಲ್ಲಿ ಸಂಗ್ರಹಿಸಿದ ಮಾಹಿತಿಯಾಗಿದೆ. ಸಾಮಾನ್ಯವಾಗಿ 60ರಿಂದ 70 ಡೆಸಿಬಲ್ ಶಬ್ದ ಸಹನೀಯವಾಗಿದ್ದು, ಈ ಕೆಳಗಿನ ತಾಣಗಳಲ್ಲಿ ದಾಖಲಾದ ಪ್ರಮಾಣ ನಿಜಕ್ಕೂ ಅಚ್ಚರಿ ಹಾಗೂ ಆತಂಕ ಮೂಡಿಸುತ್ತದೆ.

 ಸ್ಥಳ- ಶಬ್ದ ಪ್ರಮಾಣ
ಎಂ.ಜಿ. ರಸ್ತೆ-105 ಡೆಸಿಬಲ್;  ಕೆಂಪೇಗೌಡ ಬಸ್ ನಿಲ್ದಾಣ- 110 ಡೆಸಿಬಲ್;
ಮೆಜೆಸ್ಟಿಕ್ ರೈಲು ನಿಲ್ದಾಣ- 100 ಡೆಸಿಬಲ್; ಮಾರತ್‌ಹಳ್ಳಿ ಜಂಕ್ಷನ್- 105 ಡೆಸಿಬಲ್ ; ಪೀಣ್ಯ ಪ್ರವೇಶ ಪ್ರದೇಶ- 100 ಡೆಸಿಬಲ್.  ಇದು ನಗರ ನಾಗರಿಕರ ಹಿತದೃಷ್ಟಿಯಿಂದ ಮಾಡಿದ ವರದಿಯಾಗಿದ್ದು, ಜನರಿಗಾಗಿಯೇ ಶಬ್ದ ಮಾಲಿನ್ಯ ಪ್ರಮಾಣವನ್ನು ದಾಖಲಿಸಿ ನೀಡಲಾಗಿದೆ ಎನ್ನುತ್ತಾರೆ ಆಡಿಯಾಲಜಿಸ್ಟ್ ಹಾಗೂ ರಾಜನ್ಸ್ ವಾಕ್ ಹಾಗೂ ಶ್ರವಣ ಕೇಂದ್ರದ ನಿರ್ದೇಶಕ ಕೃಷ್ಣಕುಮಾರ್

ಆಘಾತಕಾರಿ ಅಂಶವೆಂದರೆ ಎಲ್ಲಾ ಕಡೆ ಶಬ್ದ ಮಾಲಿನ್ಯ ಪ್ರಮಾಣ 100 ಡೆಸಿಬಲ್ ಗಡಿ ಮೀರಿದ್ದು. ಅದೇ ರೀತಿ ಇಳಿಕೆಯಾಗಿದ್ದು ಕೂಡ 80 ಡೆಸಿಬಲ್‌ಗೆ. ಇದು ಕೂಡ ನೇರ ಕೇಳುಗರಿಗೆ ದೊಡ್ಡ ಸಮಸ್ಯೆ ತಂದಿಡಬಲ್ಲದು. ಯಾವುದೇ ವಿಧದ ಶಬ್ದ 85 ಡೆಸಿಬಲ್‌ಗಿಂತ ಹೆಚ್ಚಿದ್ದರೆ ಅದು ಕಿವುಡುತನ ತಂದಿಡಬಲ್ಲದು. ಆದರೆ ದುರಂತವೆಂದರೆ ನಿತ್ಯ ನಗರದ ನಾನಾ ಭಾಗದಲ್ಲಿ  ನಿರಂತರವಾಗಿ ಹೆಚ್ಚು ಶಬ್ದ ಕೇಳಿಸಿಕೊಳ್ಳುತ್ತದೇ ತಮ್ಮ ಕಾರ್ಯದೊತ್ತಡ ಪೂರೈಸಿಕೊಳ್ಳುವ ಅನಿವಾರ್ಯ ಜನರಿಗೆ ಒದಗಿ ಬಂದಿದೆ.

90 ಡೆಸಿಬಲ್ ಶಬ್ದಕ್ಕೆ  ನಿಮ್ಮನ್ನು ನೀವು ದಿನಕ್ಕೆ ಆರು ಗಂಟೆ ಕೇಳಿಸಿಕೊಳ್ಳುತ್ತಿದ್ದರೆ ಶಾಶ್ವತ ಕಿವುಡು ಸಮಸ್ಯೆಗೆ ಒಳಗಾಗಬೇಕಾಗುತ್ತದೆ. 110 ಡೆಸಿಬಲ್ ಶಬ್ಧ ಕೇಳಿಸಿಕೊಂಡರೆ ಕಿವಿಯ ತಮಟೆ(ಡ್ರಮ್)ಗಳಿಗೂ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.

ಅಪಾಯಕಾರಿ
ಇನ್ನೊಂದು ಆಘಾತ ಹಾಗೂ ಆತಂಕಕಾರಿ ಅಂಶವೇನೆಂದರೆ ಸತತ ಮೊಬೈಲ್ ಅಥವಾ ಐಪಾಡ್‌ನ ಹಾಡುಗಳನ್ನು ಹೆಡ್‌ಫೋನ್ ಮೂಲಕ ಕೇಳುವ ಹವ್ಯಾಸ ಹಲವರಿಗೆ ಇರುತ್ತದೆ.

ಇದು ಅಪಾಯಕಾರಿ. ಸ್ಥಿರ ಸ್ಪೀಕರ್‌ಗಳಿಂದ ಕೇಳುವ ಶಬ್ಧಕ್ಕಿಂತ ಹೆಡ್‌ಫೋನ್ ಅಥವಾ ಹಿಯರ್ ಫೋನ್‌ಗಳ ಶಬ್ದಗಳು ಮಾರಕ ಪರಿಣಾಮ ಬೀರುತ್ತವೆ. ಏಕೆಂದರೆ ಇದು ಕೆಲ ಅಡಿ ದೂರದಿಂದ ಕೇಳುಗರ ಕಿವಿಗೆ ಬಡಿಯುತ್ತದೆ. ಆದರೆ ಹೆಡ್‌ಫೋನ್ ಶಬ್ದ ಅತ್ಯಂತ ಸಮೀಪದಿಂದ ಕಿವಿಯ ತಮಟೆಗೆ ಬಡಿಯುತ್ತದೆ. ಇದು ಅಪಾಯವನ್ನು ಆಹ್ವಾನಿಸಿದಂತೆ.

ಇಂದು ಪ್ರತಿಯೊಬ್ಬರೂ ಹೆಡ್‌ಫೋನ್ ಮೂಲಕ ಕೇಳುವ ಹಾಡುಗಳನ್ನು ಅತಿ ದೊಡ್ಡ ಶಬ್ದದೊಂದಿಗೆ ಕೇಳುತ್ತಾರೆ. ಅನ್ಯರಿಗೆ ತಮ್ಮಿಂದ ಸಮಸ್ಯೆ ಆಗದು ಎನ್ನುವುದು ಇವರ ಭಾವನೆ. ಆದರೆ ಆ ಶಬ್ದದಿಂದ ತಮ್ಮ ಕಿವಿಗೆ ಏನು ತೊಂದರೆ ಆಗಬಹುದು ಎನ್ನುವುದು ಅವರಿಗೆ ತಿಳಿದಿಲ್ಲ.

ಹೆಡ್‌ಫೋನ್ ಮೂಲಕ ಬರುವ ಎಲ್ಲಾ ವಿಧದ ಶಬ್ದ ತರಂಗಗಳು ಅಡೆತಡೆ ಇಲ್ಲದೇ ಕಿವಿ ಮೇಲೆ ಅಪ್ಪಳಿಸುತ್ತವೆ. ಅದೂ ಎರಡೂ ಕಿವಿಗಳಿಗೆ ವಿರುದ್ಧ ದಿಕ್ಕುಗಳಲ್ಲಿ ಏಕಕಾಲಕ್ಕೆ. ನಿರಂತರ ಬಳಸುವುದರಿಂದ ದೀರ್ಘಾವಧಿಯಲ್ಲಿ ಇದು ಕಿವುಡುತನ ತಂದಿಡುವ ಆತಂಕ ಇದೆ.
ನಿರಂತರ ಹೆಡ್‌ಫೋನ್ ಮೂಲಕ ಸಂಗೀತ ಆಲಿಸುವವರು ತಮ್ಮ ಶ್ರವಣ ಸಾಮರ್ಥ್ಯವನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾರೆ.

ಸೂಕ್ಷ್ಮ ಶಬ್ದಗಳನ್ನು ಆಲಿಸುವ ಸಾಮರ್ಥ್ಯ ಇದ್ದವರು ಅದನ್ನು ಮೊದಲು ಕಳೆದುಕೊಳ್ಳುತ್ತಾರೆ. ನಿಧಾನವಾಗಿ ಶಬ್ದ ದೊಡ್ಡದಾಗಿರುವುದು ಮಾತ್ರ ಇವರಿಗೆ ಕೇಳಿಸಲು ಆರಂಭಿಸುತ್ತದೆ. ಹೆಡ್‌ಫೋನ್ ಶಬ್ದವನ್ನು ಸಹ ಇದೇ ಕಾರಣಕ್ಕೆ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇದು ಅಪಾಯಕ್ಕೆ ಆಹ್ವಾನ ಇತ್ತಂತೆ.

ವಿರಾಮ ನೀಡುವ ತೊಂದರೆ
ಒಂದು ಸಣ್ಣ ಉದಾಹರಣೆ ಅಂದರೆ ಬೆಂಗಳೂರಿನ ಜಯನಗರದಿಂದ ವೈಟ್‌ಫೀಲ್ಡ್‌ಗೆ ಸಾವಿರಾರು ಮಂದಿ ನಿತ್ಯ ಬಸ್‌ನಲ್ಲಿ  ಸಂಚರಿಸುತ್ತಾರೆ. ಇವರಲ್ಲಿ ಬಹುತೇಕರು ಐಪಾಡ್ ಹಾಗೂ ಮೊಬೈಲ್ ಮೂಲಕ ಸಂಗೀತ ಆಲಿಸುತ್ತಾರೆ. ಕನಿಷ್ಠ ಎರಡು ಗಂಟೆ ಅವಧಿಯ ಪ್ರಯಾಣದಲ್ಲಿ  ನಿಂತರವಾಗಿ ಹಾಡು ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ. ಸಂಚಾರ ದಟ್ಟಣೆ ಸಮಸ್ಯೆ ಎದುರಾದರೆ ಅದು ಇನ್ನಷ್ಟು ಸಮಯ ಪಡೆಯುತ್ತದೆ.

ಈ ಮಾರ್ಗದಲ್ಲಿ  ಸಾಮಾನ್ಯ ಹೊರ ವಾತಾವರಣದಲ್ಲಿಯೇ ಸಾಕಷ್ಟು ಶಬ್ದಮಾಲಿನ್ಯ ಆಗುತ್ತಿರುತ್ತದೆ. ಇದರ ನಡುವೆ ಹಾಡು ಸರಿಯಾಗಿ ಕೇಳದು ಎಂದು ಬಹುತೇಕರು ಹೆಚ್ಚು ವಾಲ್ಯೂಮ್ ಕೊಟ್ಟುಕೊಳ್ಳುತ್ತಾರೆ. ಇದು ಶ್ರವಣ ಶಕ್ತಿ ಕಳೆದುಕೊಳ್ಳುವಲ್ಲಿ  ಮಹತ್ವದ ಪಾತ್ರ ವಹಿಸುತ್ತದೆ.

ದೀರ್ಘ ಪ್ರಯಾಣ ಮಾಡುವಾಗ ಬೇಸರ ಆಗದಿರಲಿ ಎಂದು ಹಾಡು ಕೇಳುವುದು ತಪ್ಪಲ್ಲ. ಆದರೆ ಕನಿಷ್ಠ ಅರ್ಧ ಗಂಟೆಗೆ ಒಮ್ಮೆ ಈ ಶಬ್ದಕ್ಕೆ ವಿರಾಮ ನೀಡಿ ಮುಂದಿನ ಅರ್ಧಗಂಟೆ ನಿರಾಳವಾಗಿ ಕೂರುವುದು ಉತ್ತಮ. ಅಲ್ಲದೇ ಸಹನೀಯ ಪ್ರಮಾಣದಲ್ಲಿ ಶಬ್ದ ಇರಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವ್ಯಾಯಾಮ ಸಂದರ್ಭ ಹೆಡ್‌ಫೋನ್ ಸಲ್ಲ
ಜಿಮ್, ವ್ಯಾಯಾಮ, ಎರೋಬಿಕ್ಸ್ ಸಂದರ್ಭ ಹೆಡ್‌ಫೋನ್ ಧರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ವ್ಯಾಯಾಮ ಹಾಗೂ ಎರೋಬಿಕ್ಸ್ ಸಂದರ್ಭದಲ್ಲಿ ರಕ್ತ ಸಂಚಲನೆ ಕಿವಿಯ ನರದಿಂದ ಕಾಲಿನತ್ತ ಹರಿಯುತ್ತಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಶಬ್ದ ಕಿವಿಯ ತಮಟೆಗೆ ಅಪ್ಪಳಿಸುವುದು ಅಪಾಯಕಾರಿ.

ಇದಲ್ಲದೇ ಸ್ವೀಡನ್‌ನ ಸಂಶೋಧನೆ ಒಂದು ದೃಢಪಡಿಸಿರುವಂತೆ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುವ ವ್ಯಕ್ತಿಗಳಲ್ಲಿ ಸಾಮಾನ್ಯ ಕಾರಣಕ್ಕೆ ಕಳೆದುಕೊಳ್ಳುವುದರ ಎರಡರಷ್ಟು ಹೆಡ್‌ಫೋನ್ ಬಳಸಿ ಎರೊಬಿಕ್ಸ್‌ನಲ್ಲಿ  ಪಾಲ್ಗೊಂಡಾಗ ಕಳೆದು ಕೊಳ್ಳಬೇಕಾಗುತ್ತದೆ ಎಂದಿದೆ. ಇದರಿಂದ ಜಾಗ್ರತೆಯ ವ್ಯಾಯಾಮ ಹಾಗೂ ಸಂಗೀತ ಆಲಿಸುವಿಕೆ ಆರೋಗ್ಯ ಹಾಗೂ ಶ್ರವಣ ಸಾಮರ್ಥ್ಯದ ದೃಷ್ಟಿಯಿಂದ ಅನುಕೂಲಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT