ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮೀಂ ಬಾನು ಜೈ ಲಿಗೆ

ಗಣಿ ಅಕ್ರಮದಲ್ಲಿ ಬಂಧಿತರಾದ ಮೊದಲ ನಿವೃತ್ತ ಮಹಿಳಾ ಐಎಎಸ್ ಅಧಿಕಾರಿ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿಯ ದೋಣಿಮಲೈ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್) ಗಣಿ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ (ಕೆಎಟಿ) ಹಾಲಿ ಸದಸ್ಯೆ ಶಮೀಂ ಬಾನು ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು.

ಶಮೀಂ ಬಾನು ಅವರು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ರಾಜ್ಯದ ಇತಿಹಾಸದಲ್ಲಿ ಉನ್ನತ ಮಹಿಳಾ ಅಧಿಕಾರಿಯೊಬ್ಬರು ನಿವೃತ್ತಿ ನಂತರ ಜೈಲು ಸೇರುತ್ತಿರುವ ಎರಡನೇ ಪ್ರಕರಣ, ಗಣಿ ಹಗರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ಮೊದಲ ಪ್ರಕರಣ ಇದು.

`ಡಿಎಂಎಸ್ ಕಂಪೆನಿಯು ಬಳ್ಳಾರಿಯ ದೋಣಿಮಲೈ ಪ್ರದೇಶದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಗಣಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ 1999ರಿಂದ 2010ರ ಅವಧಿಯಲ್ಲಿ 60 ಲಕ್ಷ ಟನ್ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿತ್ತು. ಎನ್‌ಎಂಡಿಸಿ ಗಣಿ ಪ್ರದೇಶವನ್ನು ಡಿಎಂಎಸ್ ಗುತ್ತಿಗೆ ಪ್ರದೇಶ ಎಂದು ತೋರಿಸುವ ರೀತಿಯಲ್ಲಿ ತಿರುಚಿದ ನಕ್ಷೆಯನ್ನು ಬಳಸಿಕೊಂಡು ಈ ಕೃತ್ಯ ಎಸಗಲಾಗಿತ್ತು. ಇದರಿಂದ ಎನ್‌ಎಂಡಿಸಿಗೆ 1,200 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ' ಎಂದು ಸಿಬಿಐ ಪೊಲೀಸರು ಜೂನ್ ತಿಂಗಳಲ್ಲಿ ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನ್ಯಾಯಾಲಯ ಶಮೀಂ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಅದರಂತೆ ನ್ಯಾಯಾಲಯದಲ್ಲಿ ಹಾಜರಾದ ಅವರು, ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.

`ಆರೋಪಿಯು ರಾಜ್ಯದ ನಿವೃತ್ತ ಐಎಎಸ್ ಅಧಿಕಾರಿ. ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದು, ಪ್ರಸ್ತುತ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು' ಎಂದು ಶಮೀಂ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ಆದರೆ, ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದ ಸಿಬಿಐ ವಕೀಲರು, `ತನಿಖಾ ತಂಡವು ಈ ಪ್ರಕರಣದಲ್ಲಿ ಈಗಾಗಲೇ ಒಂದು ಆರೋಪಪಟ್ಟಿ ಸಲ್ಲಿಸಿದೆ. ಎನ್‌ಎಂಡಿಸಿಗೆ 1,200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ನಷ್ಟ ಉಂಟು ಮಾಡಿರುವ ಗಂಭೀರ ಪ್ರಕರಣ ಇದು. ಅಕ್ರಮ ಗಣಿಗಾರಿಕೆ ನಡೆಸಿದವರ ಜೊತೆ ಶಮೀಂ ಬಾನು ಶಾಮೀಲಾಗಿದ್ದರು ಎಂಬುದನ್ನು ಸಾಬೀತುಪಡಿಸುವಂತಹ ಪ್ರಬಲ ಸಾಕ್ಷ್ಯಗಳನ್ನು ತನಿಖಾ ಸಂಸ್ಥೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಈ ಹಂತದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡುವುದು ಸರಿಯಲ್ಲ' ಎಂದು ವಾದಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಶ್ರೀಶಾನಂದ ಅವರು, ಶಮೀಂ ಬಾನು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇದೇ 21ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.ಬಳಿಕ ಶಮೀಂ ಅವರನ್ನು ವಶಕ್ಕೆ ಪಡೆದ ಸಿಬಿಐ ಪೊಲೀಸರು, ಪರಪ್ಪನ ಅಗ್ರಹಾರಕ್ಕೆ ಕರೆದೊಯ್ದರು.

ಆರೋಪ ಏನು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕಮ್ಮತೆರವು ಗ್ರಾಮದಲ್ಲಿ ಡಿಎಂಎಸ್ 50 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಹೊಂದಿತ್ತು. ಅದಕ್ಕೆ ಹೊಂದಿಕೊಂಡಿರುವ ಕುಮಾರಸ್ವಾಮಿ ಮತ್ತು ಸುಬ್ಬರಾಯನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಎನ್‌ಎಂಡಿಸಿಯ 1,750 ಎಕರೆ ವಿಸ್ತೀರ್ಣದ ಗಣಿ ಇದೆ.

`1999ರಲ್ಲಿ ತನ್ನ ಗುತ್ತಿಗೆ ಅವಧಿ ಅಂತ್ಯಗೊಂಡ ಬಳಿಕ ನವೀಕರಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಡಿಎಂಎಸ್ ಅರ್ಜಿ ಸಲ್ಲಿಸಿತ್ತು. ಕೇಂದ್ರದ ಪೂರ್ವಾನುಮತಿ ಇಲ್ಲದೇ ಗಣಿ ಗುತ್ತಿಗೆ ನವೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಗುತ್ತಿಗೆಯ ನಕ್ಷೆಯಲ್ಲಿ ಬದಲಾವಣೆ ಮಾಡುವ ಅಧಿಕಾರವೂ ರಾಜ್ಯ ಸರ್ಕಾರದ ಬಳಿ ಇಲ್ಲ.

ಕೇಂದ್ರ ಸರ್ಕಾರ ಮಾತ್ರ ಈ ಕೆಲಸ ಮಾಡಬಹುದು. 1999ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಶ್ವನಾಥನ್ ಅವರು ಡಿಎಂಎಸ್ ಗಣಿ ಗುತ್ತಿಗೆ ಪ್ರದೇಶ ಎನ್‌ಎಂಡಿಸಿ ಗುತ್ತಿಗೆ ಪ್ರದೇಶದಲ್ಲಿದೆ ಎಂಬಂತೆ ನಕ್ಷೆ ಬದಲಿಸಿದ್ದರು. ಆಗ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶಮೀಂ ಬಾನು, ಈ ಕೃತ್ಯದಲ್ಲಿ ಶಾಮೀಲಾಗಿದ್ದರು' ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿತ್ತು. ಅಕ್ರಮವಾಗಿ ಬದಲಿಸಿದ ನಕ್ಷೆಯನ್ನೇ ಆಧಾರವಾಗಿ ಇರಿಸಿಕೊಂಡು, ಕಾನೂನುಬಾಹಿರವಾಗಿ ಗುತ್ತಿಗೆ ನವೀಕರಿಸಲಾಗಿತ್ತು. ಬಳಿಕ ಡಿಎಂಎಸ್ ಕಂಪೆನಿಯು ಎನ್‌ಎಂಡಿಸಿಯ ಗಣಿ ಪ್ರದೇಶದಲ್ಲಿ ಅವ್ಯಾಹತವಾಗಿ ಅದಿರು ಕಳ್ಳತನ ಮಾಡಿತ್ತು.

ಐಎಎಸ್ ಅಧಿಕಾರಿಗಳು ಶಾಮೀಲಾಗಿ ಗಣಿ ಗುತ್ತಿಗೆ ನಕ್ಷೆಯನ್ನು ಬದಲಾವಣೆ ಮಾಡಿದ್ದು, ನಂತರದ ದಿನಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಕಾರಣವಾಯಿತು. ಇಬ್ಬರೂ ಐಎಎಸ್ ಅಧಿಕಾರಿಗಳು ಸಂಪೂರ್ಣವಾಗಿ ಅಕ್ರಮಕ್ಕೆ ಸಹಕಾರ ನೀಡಿದ್ದರು ಎಂದು ಅದು ಆರೋಪಿಸಿತ್ತು.

ಬಂಧನದ ಸರಣಿ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎನ್.ವಿಶ್ವನಾಥನ್, ಡಿಎಂಎಸ್ ಗಣಿ ಕಂಪೆನಿ ಮಾಲೀಕ ರಾಜೇಂದ್ರ ಜೈನ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿತೇಶ್ ಜೈನ್ ಮತ್ತು ಸಂಡೂರಿನ ಹಿಂದಿನ ಪೊಲೀಸ್ ಇನ್‌ಸ್ಪೆಕ್ಟರ್ ರಮಾಕಾಂತ್ ಅವರನ್ನು ಸಿಬಿಐ ಅಧಿಕಾರಿಗಳು ಜೂನ್ 5ರಂದು ಬಂಧಿಸಿದ್ದರು. ಈ ಎಲ್ಲ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೆಎಟಿಗೆ ರಾಜೀನಾಮೆ?
ಸಿಬಿಐ ವಿಶೇಷ ನ್ಯಾಯಾಲಯದ ಸಮನ್ಸ್ ಕೈ ಸೇರುತ್ತಿದ್ದಂತೆ ಶಮೀಂ ಬಾನು ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಇನ್ನೂ ಅಂಗೀಕಾರವಾಗಿಲ್ಲ ಎಂದು ಗೊತ್ತಾಗಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶಮೀಂ ಬಾನು ಅವರು 2012ರ ಆರಂಭದಲ್ಲಿ ನಿವೃತ್ತರಾಗಿದ್ದರು. 2013ರ ಮಾರ್ಚ್ 4ರಂದು ರಾಜ್ಯ ಸರ್ಕಾರ ಅವರನ್ನು ಕೆಎಟಿ ಸದಸ್ಯರನ್ನಾಗಿ ನೇಮಿಸಿತ್ತು. ಅವರ ಅಧಿಕಾರದ ಅವಧಿ 2018ರ ಮಾರ್ಚ್ 4ರವರೆಗೂ ಇದೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರ ಜೊತೆ ಶಾಮೀಲಾದ ಆರೋಪದಲ್ಲಿ ಹಲವು ಐಎಎಸ್, ಐಎಫ್‌ಎಸ್ ಅಧಿಕಾರಿಗಳು ಬಂಧಿತರಾಗಿದ್ದಾರೆ. ಆದರೆ, ಈವರೆಗೂ ಮಹಿಳಾ ಅಧಿಕಾರಿಗಳು ಬಂಧಿತರಾಗಿರಲಿಲ್ಲ. ಶಮೀಂ ಬಾನು ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮೊದಲ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT